
ನಾಯಿ ಕಡಿತದಿಂದ ಗಂಭೀರ ಪರಿಣಾಮಗಳನ್ನು ಎದುರಿಸುವ ಸನ್ನಿವೇಶಗಳು ಎದುರಾಗುತ್ತಿವೆ. ಅದರಲ್ಲೂ ಧನುರ್ವಾಯು, ನರಗಳ ಹಾನಿ ಅಥವಾ ರೇಬಿಸ್ ಕಾಯಿಲೆಗಳಿಗೆ ಕಾರಣವಾಗುವ ಸಂಭವ ಹೆಚ್ಚಿದೆ. ರೇಬಿಸ್ ರೋಗಲಕ್ಷಣಗಳು ಕಾಣಿಸಿಕೊಂಡರೆ ರೋಗಿ ಮರಣ ಹೊಂದುವ ಸಾಧ್ಯತೆಯೇ ಹೆಚ್ಚು. ನಾಯಿ ಕಚ್ಚಿದ ತಕ್ಷಣ ತೆಗೆದುಕೊಳ್ಳುವ ನಿರ್ಣಯಗಳು ರೋಗದ ಮೇಲೆ ಪ್ರಮುಖ ಪಾತ್ರ ವಹಿಸುತ್ತವೆ.
ಶಾಂತವಾಗಿರಿ ಮತ್ತು ನಾಯಿಯಿಂದ ದೂರಕ್ಕೆ ಹೋಗಿ:
ನಾಯಿ ಕಡಿದ ತಕ್ಷಣ ಅವುಗಳ ಬಳಿಯೇ ನಿಲ್ಲದೆ, ದೂರ ಸರಿಯಿರಿ. ಗಾಬರಿಯಾಗಬೇಡಿ. ಕೂಗಬೇಡಿ ಅಥವಾ ನಾಯಿಯನ್ನು ಹೊಡೆಯಲು ಹೋಗಬೇಡಿ. ಇದು ಪರಿಸ್ಥಿತಿಯನ್ನು ಹದಗೆಡಿಸಬಹುದು. ನಾಯಿ ಯಾರದ್ದು ಎಂಬುದು ತಿಳಿದಿದ್ದರೆ, ನಾಯಿಗೆ ಲಸಿಕೆ ಹಾಕಿಸಲಾಗಿದೆಯೇ ಎಂಬುದನ್ನು ಮಾಲೀಕರಿಂದ ತಿಳಿದುಕೊಳ್ಳಿ.
ಗಾಯವನ್ನು ತಕ್ಷಣ ತೊಳೆಯಿರಿ (ಅತ್ಯಂತ ಮುಖ್ಯವಾದ ಹಂತ)
ನಾಯಿ ಕಚ್ಚಿದ ಜಾಗವನ್ನು ಸಾಧ್ಯವಾದಷ್ಟು ಬೇಗ ಶುದ್ಧ ನೀರಿನಿಂದ ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ಸೋಪ್ ಬಳಸಿ ಸ್ವಚ್ಛಗೊಳಿಸಿ. ಈ ಹಂತವು ರೇಬಿಸ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
ರಕ್ತಸ್ರಾವವನ್ನು ಸುರಕ್ಷಿತವಾಗಿ ನಿಯಂತ್ರಿಸಿ:
ಕಡಿತದಿಂದ ರಕ್ತಸ್ರಾವವಾಗುತ್ತಿದ್ದರೆ, ಅದನ್ನು ಸ್ವಚ್ಛಗೊಳಿಸುವಿಕೆಯಿಂದ ಕಡಿಮೆ ಮಾಡಬಹುದು. ರಕ್ತಸ್ರಾವ ನಿಂತ ನಂತರ, ಶುದ್ಧ ಬಟ್ಟೆ ಅಥವಾ ಬ್ಯಾಂಡೇಜ್ ಹಾಕಿ. ಆದರೆ ಬಿಗಿಯಾಗಿ ಬ್ಯಾಂಡೇಜ್ ಕಟ್ಟಬೇಡಿ. ಇದು ಅಂಗಾಂಶದ ಹಾನಿಗೆ ಕಾರಣವಾಗಬಹುದು.
ತೊಳೆದ ನಂತರ ನಂಜು ನಿರೋಧಕವನ್ನು ಹಚ್ಚಿ
ಗಾಯವನ್ನು ಸ್ವಚ್ಛಗೊಳಿಸಿದ ನಂತರ ಪೊವಿಡೋನ್ ಅಯೋಡಿನ್ ಅಥವಾ ಕ್ಲೋರ್ಹೆಕ್ಸಿಡಿನ್‌ನಂತಹ ವೈದ್ಯಕೀಯ ನಂಜು ನಿರೋಧಕಗಳನ್ನು ಹಚ್ಚಬೇಕು. ಇದು ಉಳಿದ ಸೂಕ್ಷ್ಮಜೀವಿಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ. ಅರಿಶಿನ, ಬೂದಿ, ಮೆಣಸಿನಕಾಯಿ ಪುಡಿ, ಸುಣ್ಣ, ಎಣ್ಣೆ ಅಥವಾ ಹಲ್ಲುಪುಡಿಯಂತಹ ಸಾಂಪ್ರದಾಯಿಕ ಅಥವಾ ಇತರೆ ಮನೆಮದ್ದು ಬಳಸುವುದನ್ನು ತಪ್ಪಿಸಿ. ಇವು ಗಾಯವನ್ನು ಕಲುಷಿತಗೊಳಿಸಬಹುದು ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು.
ವಿಳಂಬ ಮಾಡದೆ ವೈದ್ಯಕೀಯ ಆರೈಕೆ
ಗಾಯ ಚಿಕ್ಕದಾಗಿದೆ ಅಥವಾ ನೋವು ರಹಿತವಾಗಿದೆ ಎಂದು ಅಸಡ್ಡೆ ತೊರಬೇಡಿ. ನಾಯಿ ಕಚ್ಚಿದ ದಿನವೇ ವೈದ್ಯಕೀಯ ಪರೀಕ್ಷೆ ಅಗತ್ಯ.
ರೇಬಿಸ್ ತಡೆಗಟ್ಟುವಿಕೆ ಹೇಗೆ?
ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ರೇಬಿಸ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ವಿಶೇಷವಾಗಿ ಹೆಚ್ಚು ಆಳವಾದ ಹಾಗೂ ರಕ್ತಸ್ರಾವವಾಗುವಂತೆ ಕಡಿತವಾದಗ ಗಾಯಗಳಿಗೆ ರೇಬಿಸ್ ವಿರೋಧಿ ಲಸಿಕೆ ಅಥವಾ ರೇಬಿಸ್ ಇಮ್ಯುನೊಗ್ಲೋಬುಲಿನ್ ಅಗತ್ಯವಿದೆಯೇ ಎಂದು ವೈದ್ಯರು ನಿರ್ಧರಿಸುತ್ತಾರೆ.
ಚಿಕಿತ್ಸೆಯ ಗಾಯವನ್ನು ಆಗಾಗ ಗಮನಿಸಿ:
ಮುಂದಿನ ಕೆಲವು ದಿನಗಳಲ್ಲಿ ಕಚ್ಚಿದ ಭಾಗವನ್ನು ಗಮನಿಸಿ. ನೋವು, ಕೆಂಪು, ಊತ, ಬೆಚ್ಚಗಾಗುವಿಕೆ, ಕೀವು, ಜ್ವರ ಹಾಗೂ ಮರಗಟ್ಟುವಿಕೆಯ ಲಕ್ಷಣ ಕಂಡುಬಂದರೆ, ತಕ್ಷಣ ವೈದ್ಯರ ಗಮನಕ್ಕೆ ತನ್ನಿ.
ನೀವು ಏನು ಮಾಡಬಾರದು
ನಾಯಿಯ ಸಣ್ಣ ಕಚ್ಚುವಿಕೆ ಅಥವಾ ಗೀರುಗಳನ್ನೂ ಕೂಡ ನಿರ್ಲಕ್ಷಿಸಬೇಡಿ.
ಮನೆಮದ್ದುಗಳ ಮೇಲೆ ಅವಲಂಬಿಸಬೇಡಿ.
ವೈದ್ಯಕೀಯ ಆರೈಕೆ ಅಥವಾ ಲಸಿಕೆಗಳನ್ನು ವಿಳಂಬಗೊಳಿಸಬೇಡಿ.
ಮನೆಯಲ್ಲಿ ಸಾಕಿದ ನಾಯಿಯಿಂದ ಸೋಂಕು ಅಥವಾ ರೇಬಿಸ್ ಹರಡಲು ಸಾಧ್ಯವಿಲ್ಲ ಎಂದು ಎಂದಿಗೂ ಭಾವಿಸಬೇಡಿ.
ಸಕಾಲಕ್ಕೆ ವೈದ್ಯರ ಸಲಹೆ ಪಾಲಿಸಿ
ಡಾ. ಎಸ್.ಎನ್. ಅರವಿಂದ್, ಪ್ರಮುಖ ಸಲಹೆಗಾರರು, ಆಂತರಿಕ ಔಷಧ, ಆಸ್ಟರ್ ಆರ್‌ವಿ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.