
ತುಟಿಗಳ ಆರೈಕೆ
inarik
ತುಟಿಗಳು ಮುಖದ ಸೌಂದರ್ಯಕ್ಕೆ ಮಾತ್ರವಲ್ಲದೆ ಆರೋಗ್ಯದ ಸೂಚಕವಾಗಿಯೂ ಕಾರ್ಯನಿರ್ವಹಿಸುತ್ತವೆ. ಆದರೆ ಚಳಿ ಅಥವಾ ಬಿಸಿಲಿನ ಸಮಯದಲ್ಲಿ ತುಟಿಗಳು ಒಣಗುವುದು, ಒರಟಾಗುವುದು ಹಾಗೂ ಬಿರುಕು ಬೀಳುವುದು ಬಹಳ ಸಾಮಾನ್ಯ ಸಮಸ್ಯೆ. ಇದನ್ನು ಅನೇಕರು ಸಣ್ಣ ಸಮಸ್ಯೆ ಎಂದು ಕಡೆಗಣಿಸಿದರೂ, ದೀರ್ಘಕಾಲ ಗಮನಿಸದಿದ್ದರೆ ನೋವು, ಉರಿ ಮತ್ತು ಕೆಲವೊಮ್ಮೆ ರಕ್ತಸ್ರಾವಕ್ಕೂ ಕಾರಣವಾಗಬಹುದು.
ತುಟಿಗಳ ಚರ್ಮ ಬಹಳ ನಾಜೂಕಾಗಿದ್ದು, ದೇಹದ ಇತರ ಭಾಗಗಳಂತೆ ತೈಲ ಗ್ರಂಥಿಗಳು (ಸೆಬಾಸಿಯಸ್ ಗ್ಲಾಂಡ್ಸ್) ಇಲ್ಲ. ಹೀಗಾಗಿ ಹವಾಮಾನದ ಬದಲಾವಣೆಗೆ ಇದು ಶೀಘ್ರವಾಗಿ ಪ್ರತಿಕ್ರಿಯಿಸುತ್ತದೆ. ಚಳಿಗಾಲದಲ್ಲಿ ಗಾಳಿಯಲ್ಲಿರುವ ತೇವಾಂಶ ಕಡಿಮೆಯಾಗುವುದರಿಂದ ತುಟಿಗಳಲ್ಲಿರುವ ನೈಸರ್ಗಿಕ ತೇವಾಂಶ ನಷ್ಟವಾಗುತ್ತದೆ. ಹಾಗೆಯೇ ಬಿಸಿಲಿನ ಕಾಲದಲ್ಲೂ ಹೆಚ್ಚಿದ ಉಷ್ಣತೆ ಮತ್ತು ನೀರಿನ ಕೊರತೆಯಿಂದ ತುಟಿಗಳು ಒಣಗುತ್ತವೆ.
ತುಟಿಗಳ ಆರೈಕೆ
ದೇಹಕ್ಕೆ ಸಾಕಷ್ಟು ನೀರು ದೊರಕದಿದ್ದರೆ, ಮೊದಲಿಗೆ ಅದರ ಪರಿಣಾಮ ತುಟಿಗಳ ಮೇಲೆ ಕಾಣಿಸುತ್ತದೆ. ಜೊತೆಗೆ ವಿಟಮಿನ್ ಬಿ-ಕಾಂಪ್ಲೆಕ್ಸ್ ಹಾಗೂ ಐರನ್ ಕೊರತೆಯಿದ್ದರೂ ತುಟಿಗಳ ಒಣತನ ಮತ್ತು ಬಿರುಕು ಹೆಚ್ಚಾಗುತ್ತದೆ. ಕೆಲವರಿಗೆ ಲಿಪ್‌ಸ್ಟಿಕ್, ಟೂತ್‌ಪೇಸ್ಟ್ ಅಥವಾ ಇತರ ಸೌಂದರ್ಯ ವಸ್ತುಗಳಿಂದ ಅಲರ್ಜಿ ಉಂಟಾಗಿ ತುಟಿಗಳು ಒರಟಾಗುತ್ತವೆ. ಬಾಯಿಯಿಂದ ಉಸಿರಾಡುವ ಅಭ್ಯಾಸವೂ ತುಟಿಗಳ ತೇವಾಂಶವನ್ನು ಕಡಿಮೆ ಮಾಡುವ ಪ್ರಮುಖ ಕಾರಣವಾಗಿದೆ.
ಈ ಸಮಸ್ಯೆಯನ್ನು ತಪ್ಪಿಸಲು ಸರಿಯಾದ ಆರೈಕೆ ಬಹಳ ಮುಖ್ಯ. ದಿನಕ್ಕೆ ಕನಿಷ್ಠ 8ರಿಂದ 10 ಗ್ಲಾಸ್ ನೀರು ಕುಡಿಯುವುದರಿಂದ ದೇಹ ಮತ್ತು ತುಟಿಗಳಿಗೆ ಅಗತ್ಯವಾದ ತೇವಾಂಶ ದೊರೆಯುತ್ತದೆ. ತುಟಿಗಳನ್ನು ನೆಕ್ಕುವ ಅಭ್ಯಾಸವನ್ನು ತಪ್ಪಿಸಬೇಕು. ಏಕೆಂದರೆ ಇದು ತಾತ್ಕಾಲಿಕ ತೇವ ನೀಡಿದರೂ ನಂತರ ಹೆಚ್ಚು ಒಣತನ ಉಂಟುಮಾಡುತ್ತದೆ. ನೈಸರ್ಗಿಕ ಲಿಪ್ ಬಾಮ್, ಬೆಣ್ಣೆ, ತುಪ್ಪ ಅಥವಾ ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಬಳಸುವುದು ಉಪಯುಕ್ತ. ಆಹಾರದಲ್ಲಿ ಹಣ್ಣು, ತರಕಾರಿ ಹಾಗೂ ಹಸಿರು ಸೊಪ್ಪುಗಳನ್ನು ಸೇರಿಸುವುದು ದೇಹದ ಪೋಷಕಾಂಶ ಸಮತೋಲನಕ್ಕೆ ಸಹಕಾರಿ. ರಾತ್ರಿ ಮಲಗುವ ಮುನ್ನ ತುಪ್ಪ ಅಥವಾ ಜೇನುತುಪ್ಪ ಹಚ್ಚುವುದರಿಂದ ತುಟಿಗಳಿಗೆ ಉತ್ತಮ ಪೋಷಣೆ ಸಿಗುತ್ತದೆ.
ತುಟಿಗಳ ಆರೈಕೆ
ಆದರೂ ತುಟಿಗಳಲ್ಲಿ ಹೆಚ್ಚು ಬಿರುಕು, ತೀವ್ರ ನೋವು ಅಥವಾ ರಕ್ತಸ್ರಾವ ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಅಗತ್ಯ. ತುಟಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಟ್ಟಾರೆ ದೇಹಾರೋಗ್ಯದ ಭಾಗವಾಗಿದೆ. ದಿನನಿತ್ಯದ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಸರಿಯಾದ ಆರೈಕೆ ಕೈಗೊಳ್ಳುವುದರಿಂದ ತುಟಿ ಹೊರತಾಗುವ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು. ಪ್ರಾರಂಭಿಕ ಹಂತದಲ್ಲೇ ಗಮನ ಹರಿಸಿದರೆ ಗಂಭೀರ ತೊಂದರೆಗಳು ಉಂಟಾಗುವುದನ್ನು ತಡೆಯಬಹುದು.
(ಡಾ. ಬಿ.ಸಿ. ಧೀರಜ್, ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು, ಶಾಲಾಕ್ಯ ತಂತ್ರ ವಿಭಾಗ, ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.