ADVERTISEMENT

ಬಿಡದ ಬೆನ್ನು ನೋವಿಗೆ ಸರಳ ಪರಿಹಾರ

ಮನಸ್ವಿ
Published 7 ಮೇ 2021, 19:30 IST
Last Updated 7 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್‌ ಕಾರಣದಿಂದ ಕಳೆದೊಂದು ವರ್ಷದಿಂದ ಬಹುತೇಕರು ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿರಬಹುದು. ಇದರಿಂದಾಗಿ ಕೆಲಸದ ಸಮಯವೂ ಏರುಪೇರಾಗಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಿರ್ದಿಷ್ಟ ಸಮಯ ಎಂಬುದಿತ್ತು. ಆದರೆ ಈಗ ಹಾಗಿಲ್ಲ. ಬೆಳಗಿನಿಂದ ರಾತ್ರಿಯವರೆಗೆ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳಬೇಕಾಗಿದೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಕಚೇರಿ ಕೆಲಸ, ಮನೆಗೆಲಸದೊಂದಿಗೆ ಮಕ್ಕಳನ್ನು ನೋಡಿಕೊಳ್ಳುವ ಹೊಣೆಯೂ ಸೇರಿದೆ. ಈ ರೀತಿ ಬಿಡುವಿಲ್ಲದೇ ನಿರಂತರವಾಗಿ ಸಿಸ್ಟಂ ಮುಂದೆ ಕುಳಿತು ಕೆಲಸ ಮಾಡುವುದು ಬೆನ್ನು ನೋವಿಗೆ ಕಾರಣವಾಗಿದೆ.

‘ವರ್ಕ್ ಫ್ರಂ ಹೋಮ್‌’ ಆರಂಭವಾದಾಗಿನಿಂದಲೂ ಬೆನ್ನುನೋವಿನ ಸಮಸ್ಯೆ ಹೆಚ್ಚಾಗಿದೆ ಎಂಬುದು ಹಲವು ಹೆಣ್ಣುಮಕ್ಕಳ ಅಳಲು. ಇದಕ್ಕೆ ಕಾರಣಗಳು ಹಲವಿರಬಹುದು. ನೆಲದ ಮೇಲೆ, ಸೋಫಾ ಮೇಲೆ ಕುಳಿತು ಕೆಲಸ ಮಾಡುವುದು, ಹಾಸಿಗೆ ಅಥವಾ ಮಂಚದ ಮೇಲೆ ಮಲಗಿ ಕೆಲಸ ಮಾಡುವುದು, ಕುರ್ಚಿಯಲ್ಲಿ ಸರಿಯಾದ ಕ್ರಮದಲ್ಲಿ ಕುಳಿತುಕೊಳ್ಳದೇ ಇರುವುದು.. ಈ ಎಲ್ಲವೂ ಬೆನ್ನು ನೋವಿನ ಸಮಸ್ಯೆ ಹೆಚ್ಚಲು ಕಾರಣಗಳು. ಆದರೆ ಕುಳಿತುಕೊಳ್ಳುವ ರೀತಿಯಲ್ಲಿ ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಖಂಡಿತ ಪರಿಹಾರ ಕಂಡುಕೊಳ್ಳಬಹುದು.

ಬೆನ್ನಿನ ಕೆಳಭಾಗಕ್ಕೆ ಆಧಾರ ನೀಡಿ

ADVERTISEMENT

ಕುರ್ಚಿಯಲ್ಲಿ, ಹಾಸಿಗೆ ಮೇಲೆ ಅಥವಾ ನೆಲದ ಮೇಲೆ ಕುಳಿತು ಕೆಲಸ ಮಾಡುವ ಮುನ್ನ ಬೆನ್ನಿನ ಕೆಳಭಾಗಕ್ಕೆ ಟವಲ್‌ನಿಂದ ಸುತ್ತಿಕೊಳ್ಳಿ. ಕುರ್ಚಿ ಅಥವಾ ನೆಲ ಯಾವುದೇ ಆಗಿರಲಿ, ಕೆಳಬೆನ್ನಿಗೆ ಆಧಾರ ನೀಡುವಂತೆ ಚೌಕಾಕಾರದ ದಿಂಬು ಇರಿಸಿಕೊಳ್ಳಿ. ಇದರಿಂದ ಬೆನ್ನಿನ ಕೆಳಭಾಗದಲ್ಲಿ ನೋವು ಉಂಟಾಗುವುದನ್ನು ಕಡಿಮೆ ಮಾಡಬಹುದು. ಜೊತೆಗೆ ಆದಷ್ಟು ನೇರವಾಗಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಡೆಸ್ಕ್‌ಟಾಪ್‌ ಸರಿಯಾಗಿ ಸೆಟ್‌ಮಾಡಿ

ಕೆಲಸ ಮಾಡುವ ಮುನ್ನ ಡೆಸ್ಕ್‌ಟಾಪ್‌ ಅನ್ನು ಸರಿಯಾಗಿ ಸೆಟ್‌ ಮಾಡಿಕೊಳ್ಳುವುದು ಅವಶ್ಯ. ಇದರಿಂದ ಕತ್ತು ಹಾಗೂ ಬೆನ್ನು ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕಚೇರಿಯಲ್ಲಿ ಇರುವಂತೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಸಾಧ್ಯವಾಗುವ ರೀತಿಯಲ್ಲಿ ಹೊಂದಿಸಿಕೊಳ್ಳಿ.

ಕಂಪ್ಯೂಟರ್ ಸ್ಕ್ರೀನ್‌ ನಿಮ್ಮ ತೋಳಿನ ಉದ್ದಕ್ಕೆ ಸಮವಾಗಿರಬೇಕು.

ಕಂಪ್ಯೂಟರ್‌ನ ಮೇಲಿನ ತುದಿಯು ನಿಮ್ಮ ಕಣ್ಣಿನ ದೃಷ್ಟಿಗೆ ಸಮವಾಗಿರಬೇಕು

ಗಂಟೆಗೊಮ್ಮೆ ಎದ್ದು ತಿರುಗಾಡಿ

ಕೆಲಸ ಮಾಡುವಾಗ ಆಗಾಗ ಕುಳಿತುಕೊಳ್ಳುವುದು, ಎದ್ದು ನಿಲ್ಲುವುದು ಮಾಡಬೇಕು. ಅದರೊಂದಿಗೆ ಗಂಟೆಗೊಮ್ಮೆ ಎದ್ದು ತಿರುಗಾಡುವುದು ಅಗತ್ಯ. ಒಂದೇ ಭಂಗಿಯಲ್ಲಿ ಬಹಳ ಹೊತ್ತು ಒಂದೇ ಕಡೆ ಕುಳಿತುಕೊಳ್ಳುವುದರಿಂದ ಕೂಡ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಮನೆಯ ಒಳಗೆ ಅಥವಾ ಟೆರೇಸ್‌ ಮೇಲೆ 5 ನಿಮಿಷ ತಿರುಗಾಡಿದ ನಂತರ ಮತ್ತೆ ಕೆಲಸ ಆರಂಭಿಸಿ.

ಸರಿಯಾದ ಕ್ರಮದಲ್ಲಿ ಉಸಿರಾಟ

ಸರಿಯಾದ ಕ್ರಮದಲ್ಲಿ ಉಸಿರಾಟ ನಡೆಸುವುದರಿಂದಲೂ ದೇಹಕ್ಕೆ ಆರಾಮ ಸಿಗುತ್ತದೆ. ಅಲ್ಲದೇ ಇದರಿಂದ ಮಧ್ಯ ಹಾಗೂ ಕೆಳ ಬೆನ್ನಿನ ಭಾಗದ ಸ್ನಾಯುಗಳಿಗೂ ಆರಾಮ ಎನ್ನಿಸುತ್ತದೆ. ಉಸಿರಾಟಕ್ಕೆ ಸಂಬಂಧಿಸಿದ ಕೆಲವೊಂದು ವ್ಯಾಯಾಮಗಳು ಕೆಳ ಬೆನ್ನು ನೋವಿನ ಸಮಸ್ಯೆಗೆ ಪರಿಹಾರ ಒದಗಿಸುತ್ತವೆ.

ಕುಳಿತುಕೊಳ್ಳುವ ರೀತಿ ಬದಲಿಸಿ

ನಿಮಗೆ ಪದೇ ಪದೇ ಬೆನ್ನುನೋವು ಕಾಣಿಸಿಕೊಳ್ಳುತ್ತಿದೆ ಎನ್ನಿಸಿದರೆ ನೀವು ಕುಳಿತುಕೊಳ್ಳುವ ರೀತಿ ಸರಿಯಿಲ್ಲ ಎಂದು ಅರ್ಥ. ಆ ಕಾರಣಕ್ಕೆ ಕುಳಿತುಕೊಳ್ಳುವ ರೀತಿಯನ್ನು ಬದಲಿಸಿ ನೋಡಿ. ದೀರ್ಘಕಾಲದವರೆಗೆ ಒಂದೇ ರೀತಿ ಕುಳಿತುಕೊಳ್ಳುವುದು ಹಾಗೂ ಮುಂದಕ್ಕೆ ಬಾಗಿ ಕುಳಿತುಕೊಳ್ಳುವುದರಿಂದ ಬೆನ್ನು ನೋವು ಕಾಣಿಸಬಹುದು. ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ಮೊಣಕಾಲನ್ನು 90 ಡಿಗ್ರಿಗೆ ಬಗ್ಗಿಸಿ ನೆಲಕ್ಕೆ ಪಾದಗಳನ್ನು ಒರಗಿಸಿ ಇರಿಸಿಕೊಳ್ಳಬೇಕು.

ಹಾಸಿಗೆ ಮೇಲೆ ಮಲಗಿ ಕೆಲಸ ಮಾಡುವ ಅಭ್ಯಾಸ ಬೇಡ

ಹಾಸಿಗೆ ಮೇಲೆ ಮಲಗಿಕೊಂಡು ಕೆಲಸ ಮಾಡುವುದು ನಿಮಗೆ ಆರಾಮ ಎನ್ನಿಸಬಹುದು. ಆದರೆ ಮಲಗಿಕೊಂಡು ಕೆಲಸ ಮಾಡುವುದು ಕುಳಿತುಕೊಂಡು ಕೆಲಸ ಮಾಡುವುದಕ್ಕಿಂತಲೂ ಅಪಾಯಕಾರಿ. ಹೀಗಾಗಿ ಆದಷ್ಟು ಹಾಸಿಗೆ ಮೇಲೆ ಕೆಲಸ ಮಾಡುವುದಕ್ಕೆ ಕಡಿವಾಣ ಹಾಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.