ADVERTISEMENT

ಆರೋಗ್ಯ | ದಿನವೂ ಬಾದಾಮಿ ಸೇವಿಸಿದರೆ ತಗ್ಗಲಿದೆ ರಕ್ತದಲ್ಲಿನ ಸಕ್ಕರೆ ಪ್ರಮಾಣ

ಇದು ಏಷ್ಯಾದ ಭಾರತೀಯರಿಗೆ ಮಾತ್ರ–ಸಂಶೋಧನೆಯಲ್ಲಿ ಉಲ್ಲೇಖ

ಪಿಟಿಐ
Published 17 ಏಪ್ರಿಲ್ 2025, 14:37 IST
Last Updated 17 ಏಪ್ರಿಲ್ 2025, 14:37 IST
ಬಾದಾಮಿ
ಬಾದಾಮಿ   

ನವದೆಹಲಿ: ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದೆ ಎಂದು ಚಿಂತೆ ಮಾಡಬೇಡಿ.. ದಿನಕ್ಕೊಂದು ಬಾದಾಮಿ ಸೇವಿಸಿ. ಆಗ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಆಗುತ್ತದೆ. ಇದು ಏಷ್ಯಾದ ಭಾರತೀಯರಿಗೆ ಮಾತ್ರ ಅನ್ವಯಿಸಲಿದೆ–ಇಂಥದ್ದೊಂದು ಮಾಹಿತಿಯನ್ನು ಸಂಶೋಧನೆಯೊಂದು ಹೊರಹಾಕಿದೆ.

ಅಂತರರಾಷ್ಟ್ರೀಯ ಸಂಶೋಧಕರು ಮತ್ತು ವೈದ್ಯರ ತಂಡವೊಂದು ‘ಬಾದಾಮಿ ಮತ್ತು ಮಧುಮೇಹ ಸಂಬಂಧಿ ಹೃದಯ ಆರೋಗ್ಯ ಸಮಸ್ಯೆಗಳು’ ಕುರಿತಂತೆ ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟಿಸಿರುವ ಲೇಖನದಲ್ಲಿ ಈ ಅಂಶ ಇದೆ. ಪ್ರತಿ ದಿನ 50 ಗ್ರಾಂ ಬಾದಾಮಿ ಸೇವಿಸಿದರೆ ವಿಪರೀತದ ಬೊಜ್ಜು ನಿಯಂತ್ರಣ ಮತ್ತು ದೇಹಕ್ಕೆ ಪೂರಕವಾದ ಸೂಕ್ಷ್ಮ ಜೀವಾಣುಗಳು ಹೆಚ್ಚಲಿವೆ ಎಂದು ಸಂಶೋಧನೆ ಹೇಳಿದೆ.

ಏಷ್ಯಾದ ಭಾರತೀಯರಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ರೋಗಗಳು ಆತಂಕಕ್ಕೆ ಕಾರಣವಾಗಿವೆ. ಬಾದಾಮಿ ಇವರಿಗೆ ಹೇಗೆಲ್ಲಾ ಸಹಕಾರಿ ಆಗಬಲ್ಲದು. ಆರೋಗ್ಯಕರ ಹೃದಯ, ತೂಕಸ್ನೇಹಿ ಮತ್ತು ಜೀವಾಣು ಸಂವರ್ಧನಾ ಆಹಾರವಾಗಿ ಬಾದಾಮಿ ಹೇಗೆ ಕೆಲಸ ಮಾಡುತ್ತದೆ ಎಂಬುದು ಸಂಶೋಧನೆಯಲ್ಲಿ ಗೊತ್ತಾಗಿದೆ ಎಂದು ಫೋರ್ಟಿಸ್ ಸೆಂಟರ್ ಫಾರ್ ಡಯಾಬಿಟಿಸ್, ಒಬೆಸಿಟಿ ಮತ್ತು ಕೊಲೆಸ್ಟಿರಾಲ್‌ನ ಮುಖ್ಯಸ್ಥ ಡಾ.ಅನೂಪ್ ಮಿಶ್ರಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಡಾ.ಮಿಶ್ರಾ ಅವರು ಡಯಾಬಿಟಿಸ್ ಒಬೆಸಿಟಿ ಮತ್ತು ಕೊಲೆಸ್ಟಿರಾಲ್ ಫೌಂಡೇಷನ್‌ನ ಮುಖ್ಯಸ್ಥರೂ ಆಗಿದ್ದಾರೆ.

ADVERTISEMENT

ಮಧುಮೇಹ ಕಾಣಿಸಿಕೊಳ್ಳುವ ಮುನ್ನ ಪ್ರತಿದಿನ ಬಾದಾಮಿ ಸೇವಿಸಿದರೆ ರಕ್ತದಲ್ಲಿ ಗ್ಲೂಕೋಸ್‌ ಪ್ರಮಾಣ ವೇಗವಾಗಿ ಏರುವುದನ್ನು ಕಡಿಮೆ ಮಾಡಬಹುದು ಮತ್ತು ಹೆಚ್‌ಬಿಎ1ಸಿ ಪ್ರಮಾಣ ತಗ್ಗಿಸಬಹುದು ಎಂದು ಸಂಶೋಧನೆ ತಿಳಿಸಿದೆ.

ತೂಕ ಕಳೆದುಕೊಳ್ಳುವುದನ್ನು ತಡೆದು ದೇಹದ ಶಕ್ತಿಯನ್ನು ಸ್ಥಿರವಾಗಿಡಲು ಮತ್ತು ಹಸಿವಿನ ಏರಿಳಿತ ತಗ್ಗಿಸಲೂ ಇದರಿಂದ ಸಾಧ್ಯ. ದಿನವೂ 50 ಗ್ರಾಂ ಮೇಲ್ಪಟ್ಟು ಬಾದಾಮಿ ಸೇವಿಸಿದರೆ ದೇಹದ ತೂಕ ಕಡಿಮೆ ಆಗಲಿದೆ. ಬಾದಾಮಿ ಸೇವಿಸಿದರೆ ದೇಹದ ತೂಕ ಹೆಚ್ಚಾಗುತ್ತದೆ ಎನ್ನುವ ಮಿಥ್ಯೆ ಕೆಲವರಲ್ಲಿದೆ.

ಬಾದಾಮಿಯಲ್ಲಿರುವ ಪ್ರೊಟೀನ್, ಫೈಬರ್ ಮತ್ತು ಆರೋಗ್ಯಕಾರಿ ಕೊಬ್ಬಿನ ಪ್ರಮಾಣ ದೀರ್ಘಕಾಲದವರೆಗೆ ಆರಾಮವಾಗಿರುವಂತೆ ಮಾಡುತ್ತದೆ. ದೇಹ ಸೇರುವ ಕ್ಯಾಲೊರಿ ಪ್ರಮಾಣವನ್ನೂ ತಗ್ಗಿಸುತ್ತದೆ ಎಂದು ಡಾ.ಮಿಶ್ರಾ ತಿಳಿಸಿದ್ದಾರೆ.

ಸಮತೋಲಿತ ಆಹಾರ ಸೇವನೆಯಲ್ಲಿ ಬಾದಾಮಿ ಪ್ರಮುಖ ಪಾತ್ರ ವಹಿಸುತ್ತದೆ. ಮೆಗ್ನೀಷಿಯಂ, ಪೊಟ್ಯಾಷಿಯಂ ಮತ್ತು ವಿಟಮಿನ್– ಇ ನಂತಹ ಅಗತ್ಯ ಪೋಷಕಾಂಶಗಳು ಇದರಿಂದ ಸಿಗುತ್ತವೆ. ಕುರುಕು ತಿಂಡಿಗಳು, ಸಲಾಡ್‌ಗಳಲ್ಲಿ, ಉಪಾಹಾರ ಮತ್ತು ಊಟದಲ್ಲೂ ಬಾದಾಮಿ ಬಳಸಬಹುದು. ಬೆಳಗಿನ ಮತ್ತು ಮಧ್ಯಾಹ್ನದ ವೇಳೆ ಬಾದಾಮಿ ಸೇವಿಸಿದರೆ ಉತ್ತಮ ಎಂದು ಡಾ.ಮಿಶ್ರಾ ತಿಳಿಸಿದರು.

ವ್ಯಾಯಾಮದ ನಂತರ ಮಾಂಸಖಂಡಗಳ ಚೈತನ್ಯಕ್ಕೆ ಬಾದಾಮಿ ಸಹಕಾರಿಯಾಗಲಿದೆ. ನಿಮ್ಮ ಕೈಚೀಲಗಳು, ಕಾರುಗಳಲ್ಲಿ ಬಾದಾಮಿಯನ್ನು ಸದಾ ಇಟ್ಟುಕೊಂಡಿರಿ. ಕುರುಕು ತಿಂಡಿ ರೂಪದಲ್ಲಿ ಸೇವಿಸಿದರೆ ಸದಾ ಚೇತೋಹಾರಿಯಾಗಿ ಇಡುತ್ತದೆ ಎಂದು ಮಿಶ್ರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.