ADVERTISEMENT

Live In The Moment: ಈ ಕ್ಷಣದಲ್ಲಿ ಬದುಕುವ ಕೌಶಲಕ್ಕೆ ಬೇಕು ಈ ಎರಡು ಸಾಮರ್ಥ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 0:30 IST
Last Updated 2 ಡಿಸೆಂಬರ್ 2025, 0:30 IST
   

ಈ ಕ್ಷಣದಲ್ಲಿ ಬದುಕುವ ಕೌಶಲವನ್ನು ಆಧುನಿಕ ಮನೋವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರ ಎರವಲು ತೆಗೆದುಕೊಂಡದ್ದು ಹಿಂದೂ ಮತ್ತು ಬೌದ್ಧ ತತ್ತ್ವಗಳಿಂದಲೇ. ಕ್ರಮೇಣ ವೈಜ್ಞಾನಿಕ ಅಧ್ಯಯನಗಳಿಂದ ಅದನ್ನು ಹಲವು ವಿಧದ ಮನೋಚಿಕಿತ್ಸೆಗಳ ಭಾಗವಾಗಿ, ಇದೀಗ ಅದೊಂದು ಗುಣಮಟ್ಟದ ಜೀವನದ ಕೌಶಲವಾಗಿದೆ. ಈ ಕ್ಷಣದಲ್ಲಿ ಬದುಕುವ ಕೌಶಲಕ್ಕೆ ಎರಡು ಮುಖ್ಯ ಸಾಮರ್ಥ್ಯಗಳು ಬೇಕು. ಮೊದಲನೆಯದು ನಮ್ಮೊಳಗೆ ನಡೆಯುತ್ತಿರುವ ಮಾನಸಿಕ-ಭಾವನಾತ್ಮಕ ಪ್ರಕ್ರಿಯೆಗಳ ಅನುಭವಗಳ ಬಗೆಗಿನ ಅರಿವು. ಎರಡನೆಯದು ಇವುಗಳನ್ನು ಅವಲೋಕಿಸುತ್ತಲೇ ಅದನ್ನು ಒಪ್ಪಿಕೊಳ್ಳುವುದು.

ನಾವು ‘ಈ ಕ್ಷಣದಲ್ಲಿ ಬದುಕದಿರುವುದಕ್ಕೆ’ ದಿನನಿತ್ಯದ ಬದುಕಿನ ಜಂಜಡಗಳಿಂದ ನೂರಾರು ಉದಾಹರಣೆಗಳನ್ನು ಕೊಡಬಹುದು. ಅವುಗಳಲ್ಲಿ ಕೆಲವು ಬೇರೆಯವರಿಗೆ ಕಿರಿಕಿರಿಯಾಗುವಂತದ್ದಾದರೆ, ಮತ್ತೆ ಕೆಲವು ನಮಗೇ ಅಚ್ಚರಿ-ಸಮಸ್ಯೆ ಮೂಡಿಸಬಹುದಾದಂತಹವು. ಸ್ನಾನಕ್ಕೆ ಹೋಗಿ ತಲೆಸ್ನಾನಯನ್ನು ಮಾಡಿ ಹೊರ ಬಂದಾಗಿದೆ; ಶ್ಯಾಂಪೂ ಹಾಕಿದ ಮೇಲೆ ಕಂಡೀಷನರ್ ಹಾಕಿದ್ದೇವೆಯೆ? ನೆನಪೇ ಆಗುತ್ತಿಲ್ಲ. ಯಾರೊಡನೆಯೋ ಕಳೆದ ಹತ್ತು ನಿಮಿಷದಿಂದ ಮಾತನಾಡುತ್ತಿದ್ದೇವೆ; ಅವರು ಆ ಕಡೆಗೆ ತಿರುಗಿದ ಮೇಲೆ ‘ಇವರೊಡನೆ ಮಾತನಾಡಿದ ವಿಷಯ’ ನೆನೆಸಿಕೊಳ್ಳಲುಹೋದರೆ ನೆನಪೇ ಆಗುತ್ತಿಲ್ಲ! ಕೋಣೆಯಲ್ಲಿ ದೀಪ ಆರಿಸದೇ ಬಿಡುವುದು, ಗೀಸರ್ ಹಾಗೇ ಹಾಕಿಟ್ಟು ಹೊರಬರುವುದು – ಇವೆಲ್ಲವೂ ಬೇರೆಯರಿಗೂ ಕಿರಿಕಿರಿಯುಂಟು ಮಾಡುವಂಥವೇ. ಇವು ‘ಅಶಿಸ್ತು’ ಎಂದು ಗುರುತಿಸಲ್ಪಡುವುದು ಸಾಮಾನ್ಯವಾದರೂ, ನಿಜವಾಗಿ ನೋಡಿದರೆ ಈ ಅಶಿಸ್ತಿನ ಮೂಲ ಅಲೆದಾಡುವ ಮನಸ್ಸು ಅಥವಾ ಅನ್ಯಮನಸ್ಕತೆಗಳಲ್ಲಿಯೇ ಇರುತ್ತದೆ.

ಆ ಕ್ಷಣದಲ್ಲಿ ಬದುಕದಿರುವುದು, ಅನ್ಯಮನಸ್ಕರಾಗಿ ಕೆಲಸಗಳನ್ನು ಮಾಡುವುದು ತರುವ ಸಮಸ್ಯೆಗಳನ್ನು ನಾವು ಅಧ್ಯಯನಗಳನ್ನು ಗಮನಿಸಿಯೇ ತಿಳಿಯಬೇಕೆಂದಿಲ್ಲ. ನಮ್ಮ ಅನುಭವವೇ ಅದಕ್ಕೆ ಆಧಾರ! ಸಮಯವನ್ನು ಹಾಳು ಮಾಡುವುದು, ಶಕ್ತಿಯ ಖರ್ಚು, ತಪ್ಪುಗಳಾಗಿ ಕೆಲಸಗಳನ್ನು ಮತ್ತೆ ಮತ್ತೆ ಮಾಡಬೇಕಾಗುವುದು, ಮರೆಯುವುದು, ಮಾಡುವ ಕೆಲಸದಲ್ಲಿ ಸಂತಸ-ಉತ್ಸಾಹಗಳು ಕಡಿಮೆಯಾಗುವುದು, ಮತ್ತೊಬ್ಬರೊಂದಿಗಿನ ಸಂವಹನದಲ್ಲಿ ತಪ್ಪು-ಅಪಾರ್ಥ ನುಸುಳುವುದು, ಹೊಸತನ್ನು ಕಲಿಯುವುದು ನಿಧಾನವಾಗುವುದು ಇವೆಲ್ಲವೂ ಒಟ್ಟುಗೂಡಿ ಒತ್ತಡ ಹೆಚ್ಚುವುದು, ದೈಹಿಕ-ಮಾನಸಿಕ ಅನಾರೋಗ್ಯದ ಸಾಧ್ಯತೆಯನ್ನು ಹೆಚ್ಚಿಸುವುದು – ಇವು ಅನ್ಯಮನಸ್ಕತೆ, ಆ ಕ್ಷಣದಲ್ಲಿ ಬದುಕುವ ಕೌಶಲದ ಕೊರತೆ ತರಬಹುದಾದ ಸಮಸ್ಯೆಗಳು.

ADVERTISEMENT

ಅನ್ಯಮನಸ್ಕತೆಯಲ್ಲಿ ನಮ್ಮ ಮಿದುಳು-ಮನಸ್ಸುಗಳು ‘ಆಟೋ ಪೈಲಟ್’ ಮೋಡ್‍ಗೆ ಹೋಗಿಬಿಡುತ್ತವೆ! ಎಂದರೆ ನಮ್ಮೆದುರು ಏನು ನಡೆಯುತ್ತದೆಯೋ ಅದರಿಂದ ಮನಸ್ಸು ಪೂರ್ತಿ ಕಳಚಿಕೊಂಡು ತನ್ನದೇ ಲೋಕದಲ್ಲಿ ಮುಳುಗಿಬಿಡುತ್ತದೆ. ಹಿಂದಿನದನ್ನು ಮೆಲುಕು ಹಾಕುವುದು, ಚಿಂತೆಯ ಚಕ್ರದಲ್ಲಿ ಸಿಲುಕುವುದು ಅಥವಾ ಮುಂದಿನದನ್ನು ನೆನೆದು ಆತಂಕ ಪಡುತ್ತಿರುವುದು. ಇತ್ತ ದೇಹ ಮಾತ್ರ ಇಂದಿನಲ್ಲಿದ್ದು, ಮನಸ್ಸಿನ ಸಹಕಾರವಿಲ್ಲದೆ ಹೇಗೋ ಪರಿಸ್ಥಿತಿಯನ್ನು ನಿಭಾಯಿಸಬೇಕು! ಹೇಗಿದೆ ಚಿತ್ರ ಊಹಿಸಿಕೊಳ್ಳಿ!

ಅಭ್ಯಾಸವಿರುವ, ‘Procedural memory’ ಪ್ರಕ್ರಿಯೆಯ ನೆನಪುಗಳಂತಹ ಈಜು, ವಾಹನಚಾಲನೆ, ಮೊದಲಾದವನ್ನು ಸರಿಯಾಗಿಯೇ ಈ ‘ಆಟೋ ಪೈಲಟ್’ ಮೋಡ್‍ನಲ್ಲಿ ನಾವು ಮಾಡಬಹುದು. ಆದರೆ ಉಳಿದಂತೆ ವ್ಯವಹಾರಗಳು, ಕಲಿಕೆ, ಊಟ ಇವುಗಳಲ್ಲಿ ಸೂಕ್ಷ್ಮತೆಯಾಗಲಿ, ಗುಣಮಟ್ಟವಾಗಲಿ ಮಾಯವಾಗುತ್ತದೆ. ವ್ಯವಹಾರದಲ್ಲಂತೂ ಹಲವು ಅಂಶಗಳು ಕಣ್ಣಿಂದ ಮರೆಯಾಗದೆಯೂ, ಬುದ್ಧಿಗೆ ‘ಅಗೋಚರ’ವಾಗುವ ಅಪಾಯಗಳು ಅನ್ಯಮನಸ್ಕತೆಯಿಂದ ಎದುರಾಗುತ್ತದೆ.

ಜನರು ಅಷ್ಟಾಗಿ ಗಮನಿಸದಿರುವ, ಆಧುನಿಕ ವೈಜ್ಞಾನಿಕ ಅಧ್ಯಯನಗಳು ಬಲವಾಗಿ ತೋರಿಸಿರುವ ಸಂಗತಿಯೆಂದರೆ ಅನ್ಯಮನಸ್ಕತೆಯನ್ನು ದೂರವಿರಿಸಿ, ಆ ಕ್ಷಣದಲ್ಲಿ ಮನಸ್ಸನ್ನಿರಿಸುವುದು ಮಿದುಳಿನಲ್ಲಿ ನಿಜವಾಗಿ ರಾಸಾಯನಿಕ ಬದಲಾವಣೆಗಳನ್ನು ತರುತ್ತದೆ ಎಂಬುದು. ಆನಂದ-ಉತ್ಸಾಹಗಳ ರಾಸಾಯನಿಕಗಳಾದ ‘ಡೋಪಮೀನ್’ ಮತ್ತು ‘ಸೆರಟೋನಿನ್‍’ಗಳನ್ನೂ, ಮನಸ್ಸನ್ನು ಶಾಂತವಾಗಿರಿಸಬಲ್ಲ ‘ಗಾಬಾ’ ಎಂಬ ರಾಸಾಯನಿಕವನ್ನೂ ಆ ಕ್ಷಣದಲ್ಲಿ ಮುಳುಗುವ ಮನಃಸ್ಥಿತಿ ಹೆಚ್ಚಿಸುತ್ತದೆ. ಧ್ಯಾನ, ಆಟ, ನೃತ್ಯ, ಸಂಗೀತ ಇತ್ಯಾದಿ ಹವ್ಯಾಸಗಳ ಮೂಲಕ ಮನಸ್ಸಿನ ಈ ಸಾಮರ್ಥ್ಯವನ್ನು ಹೆಚ್ಚಿಸುವ ಅಭ್ಯಾಸ ಮಿದುಳಿನ ಹಲವು ಭಾಗಗಳ ರಚನೆಯ ಅಂಶಗಳಲ್ಲಿ ಬದಲಾವಣೆ ತರಬಲ್ಲದು. ಎಂದರೆ ಯಾವುದೇ ಶಬ್ದ-ಸ್ಪರ್ಶ-ವಾಸನೆ-ರುಚಿ-ನೋಟಗಳ ಪ್ರಚೋದನೆಗೆ ಮೊದಲು ಪ್ರತಿಕ್ರಿಯಿಸುವುದು ಮಿದುಳಿನ ‘ಅಮಿಗ್ಡಲಾ’ ಎಂಬ ಭಾಗ. ವಾತಾವರಣದ ಯಾವುದೇ ಇಂತಹ ಪ್ರಚೋದನೆಯನ್ನೂ ಈ ಭಾಗ ಗ್ರಹಿಸುವುದು ‘ಬೆದರಿಕೆ’ ಎಂದೇ. ಬೆದರಿಕೆಗೆ ದೇಹ ಹೆದರುವಂತೆ, ಹೋರಾಡುವಂತೆ ಮಾಡುವಂತೆ ಅಮಿಗ್ಡಲಾ ಮಾಡುವುದೇ ನಮ್ಮಲ್ಲಿ ಆತಂಕ-ಭಯಗಳನ್ನು ಸೃಷ್ಟಿಸುತ್ತದೆ. ಧ್ಯಾನ ಮತ್ತು ಧ್ಯಾನದಂತಹ ಸ್ಥಿತಿಗಳನ್ನು ನಿರ್ಮಿಸುವ ಆಟ-ಕಲೆ-ಓದು-ಹವ್ಯಾಸಗಳನ್ನು ನಾವು ಸತತವಾಗಿ ಮಾಡಿದ್ದೇ ಆದರೆ ಅಮಿಗ್ಡಲಾದ ಗಾತ್ರ ಕಡಿಮೆಯಾಗುತ್ತದೆ; ಭಯ-ಆತಂಕಗಳ ಸ್ಥಿತಿಯಲ್ಲಿಯೂ ಹತೋಟಿ ಸುಲಭವಾಗುತ್ತದೆ. ನೆನಪುಗಳ ಕೇಂದ್ರ ‘ಹಿಪ್ಪೋಕ್ಯಾಂಪಸ್‍’ನ ಗಾತ್ರ ಹೆಚ್ಚುತ್ತದೆ; ಮರೆವು ಕಡಿಮೆಯಾಗುತ್ತದೆ.

ಹೀಗೆಂದಾಕ್ಷಣ ಬಹುಜನ ಕೇಳುವ ಪ್ರಶ್ನೆ ಹಾಗಿದ್ದರೆ ಆತಂಕ-ಭಯ-ಖಿನ್ನತೆಗಳ ಮನಃಸ್ಥಿತಿಗೆ ಮಾತ್ರೆಯ ಚಿಕಿತ್ಸೆ ಅವಶ್ಯವಿಲ್ಲವೆ? ಮನಸ್ಸಿನ ಈ ಸ್ಥಿತಿಗಳು ಕಾಯಿಲೆಯ ಹಂತ ತಲುಪಿದಾಗ, ಇಂತಹ ‘ಕ್ಷಣದಲ್ಲಿ ಬದುಕುವ ಸಾಮರ್ಥ್ಯ’ ಮಾಯವಾಗಿಬಿಟ್ಟಿರುತ್ತದೆ. ಆಗ ಧ್ಯಾನ-ಹವ್ಯಾಸಗಳಲ್ಲಿ ಏಕಾಗ್ರತೆ ಮೂಡುವುದು ಕಷ್ಟದ ಮಾತು. ಈ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ವೈದ್ಯರ ಸಲಹೆಯೊಂದಿಗೆ ಬೇಕೇ ಬೇಕು. ಆದರೆ ಈ ಹಂತಕ್ಕೆ ಹೋಗುವ ಮುನ್ನವೇ ಒಂದು ಕೌಶಲವಾಗಿ ದೈನಂದಿನ ದಿನಚರಿಯಲ್ಲಿ ‘ಆ ಕ್ಷಣದಲ್ಲಿ ಬದುಕುವ’ ಸಾಮರ್ಥ್ಯವನ್ನು ರೂಢಿಸಿಕೊಳ್ಳುವುದು ಉಪಯುಕ್ತ. ಹಾಗೆಯೇ ಆತಂಕ-ಭಯ-ಖಿನ್ನತೆಯ ಕಾಯಿಲೆಗಳ ಸ್ಥಿತಿಯಿಂದ ಹೊರ ಬಂದ ಮೇಲೆ ಮತ್ತೆ ಮರುಕಳಿಸದಿರಲು ಈ ಕೌಶಲವನ್ನು ಕಲಿತು ಬದುಕಿನ ಭಾಗವಾಗಿ ಅಳವಡಿಸಿಕೊಳ್ಳುವುದು ಸೂಕ್ತ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.