ADVERTISEMENT

ಚಿಕ್ಕ ಮಕ್ಕಳಿಗೆ ಮುಖಗವಸು ಅಗತ್ಯವೆ?

ಎಂ.ಡಿ.ಸೂರ್ಯಕಾಂತ
Published 12 ಜೂನ್ 2020, 19:30 IST
Last Updated 12 ಜೂನ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ನಮ್ಮ ಯಜಮಾನರು ಆಫೀಸ್‌ಗೆ ಹೋದ ಮೇಲೆ ಒಂದು ವರ್ಷದ ಮಗುವನ್ನು ನನ್ನ ಜೊತೆ ಶಾಪಿಂಗ್‌ಗೆ ಕರೆದುಕೊಂಡು ಹೋಗುವ ಅನಿವಾರ್ಯತೆ ಇದೆ. ಮಗುವಿಗೆ ಯಾವ ಮುಖಗವಸು ಉತ್ತಮ ಡಾಕ್ಟ್ರೇ?’

‘ಮಗುವಿಗೆ ವ್ಯಾಕ್ಸಿನ್ ಹಾಕಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಮಗುಮುಖಗವಸು ಹಾಕಿಕೊಳ್ಳಲು ರಂಪ ಮಾಡುತ್ತಿದೆ...’

‘ಮಗುವಿನ ಜೊತೆ ಬಸ್‌ನಲ್ಲಿ ನಮ್ಮೂರಿಗೆ ಹೋಗಬೇಕಾಗಿದೆ. ಮಗುವಿನ ರಕ್ಷಣೆಗೆ ಏನು ಮಾಡಬೇಕು?’

ADVERTISEMENT

‘ಶಾಲೆಗೆ ಹೋಗುವ ಮಕ್ಕಳಿಗೆ ಯಾವಮುಖಗವಸು ಉತ್ತಮ?’

ಇವೇ ಹತ್ತು ಹಲವಾರು ಅನುಮಾನಗಳು, ಪ್ರಶ್ನೆಗಳು ಈಗ ಪೋಷಕರನ್ನು ಕಾಡುವುದು ಸಾಮಾನ್ಯ.

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಹಾಗೂ ಪ್ರಿವೆನ್ಶನ್(ಸಿ.ಡಿ.ಸಿ.) ಪ್ರಕಾರ ಎರಡು ವರ್ಷಗಳೊಳಗಿನ ಮಕ್ಕಳಿಗೆ ಮುಖಗವಸು ಬೇಡ. ತೊಡಿಸಿದರೂ ಚಿಕ್ಕ ಮಕ್ಕಳು ಇಟ್ಟುಕೊಳ್ಳುವುದಿಲ್ಲ, ಕಿತ್ತು ಹಾಕುತ್ತವೆ. ಸರಳ ಉಸಿರಾಟಕ್ಕೆ ತೊಂದರೆಯಾಗುತ್ತದೆ ಮತ್ತು ಎಳೆಯ ಮಕ್ಕಳು ಮುಖಗವಸು ಬೇಡವೆಂದಾಗ ತಮ್ಮಷ್ಟಕ್ಕೆ ತಾವೇ ಬಿಚ್ಚಿಕೊಳ್ಳಲು ಅಸಮರ್ಥರು.

ಇದಲ್ಲದೆ ಈ ಮಕ್ಕಳಿಗೆ ಮುಖಗವಸು ಧರಿಸುವ ಮಹತ್ವದ ಬಗ್ಗೆ ತಿಳಿಸಿ ಹೇಳಿದರೆ ಅರ್ಥವಾಗುವುದೂ ಇಲ್ಲ. ಬೆರಳನ್ನು ಮುಖಗವಸು ಒಳಗೆ ತೂರಿಸಿ, ಅದೆ ಬೆರಳಿನಿಂದ ಕಣ್ಣು, ಬಾಯಿ ಮುಟ್ಟಿಕೊಳ್ಳುತ್ತವೆ. ಅಡಚಣೆಯಿಂದಾಗಿ ಅಳು, ಕಿರಿಕಿರಿ ಸಾಮಾನ್ಯ. ಮುಖಗವಸಿನ ಮುಂದಿನ ಭಾಗ ಮುಟ್ಟಿಕೊಳ್ಳುತ್ತವೆ.

ಇನ್ನು ಕೆಲವು ಮಕ್ಕಳು ಮುಖಗವಸು ಹಾಕಿಕೊಂಡವರನ್ನು ಕಂಡು ಭಯಗೊಂಡು ಅಳಬಹುದು. ಈ ಕಾರಣದಿಂದಲೂ ಮಕ್ಕಳು ಮುಖಗವಸು ಧರಿಸಲು ಹಿಂದೆಟು ಹಾಕುತ್ತಾರೆ.

ಮುಂಜಾಗ್ರತೆ

ಮಗು ಹೀಗೆ ಮಾಡುತ್ತದೆಂದು ಮುಂಜಾಗ್ರತೆ ತೆಗೆದುಕೊಳ್ಳದಿರುವುದು ತಪ್ಪು. ಜನಜಂಗುಳಿ ಸ್ಥಳದಲ್ಲಿರುವಾಗ ಮಗು ಕನಿಷ್ಠ ಆರು ಅಡಿ ದೂರದಲ್ಲಿರಲಿ. ಶುದ್ಧ ಬಟ್ಟೆಯಿಂದ ಮಗುವಿನ ಬಾಯಿ ಮತ್ತು ಮೂಗನ್ನು ಉಸಿರಾಟಕ್ಕೆ ತೊಂದರೆ ಆಗದಂತೆ ಆಗಾಗ ಮೆತ್ತಗೆ ಮುಚ್ಚುತ್ತಾ ಇರಿ. ಎರಡು ವರ್ಷದೊಳಗಿನ ಮಕ್ಕಳು ಜೋರಾಗಿ ಕೆಮ್ಮುವುದು, ಸೀನುವುದು ಕಡಿಮೆ. ಹೀಗಾಗಿ ಈ ಎಳೆಯ ಮಕ್ಕಳಿಂದ ಸೋಂಕು ಹರಡುವ ಸಂಭವ ಕಡಿಮೆ.

ಎರಡು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಬಟ್ಟೆಯ ಮುಖಗವಸು ಉತ್ತಮ. ಇದನ್ನು ಟಿ-ಶರ್ಟ್ ಅಥವಾ ಬಂದನ್(ತಲೆಗೆ ಕಟ್ಟುವ ಸ್ಕಾರ್ಫ್‌) ಬಟ್ಟೆ ಬಳಸಿ ಮನೆಯಲ್ಲಿಯೇ ತಯಾರಿಸಬಹುದು. ಇದು ಮೂರು ಪದರಿನದಾಗಿರಲಿ. ಇದನ್ನು ಸ್ವಚ್ಛಗೊಳಿಸಿ ಮತ್ತೆ ಬಳಸಬಹುದು. ಈಗ ಆನ್‌ಲೈನ್‌ನಲ್ಲಿ ಮಕ್ಕಳಿಗೆ ವಿಶೇಷವಾದ, ಮರುಬಳಸಬಹುದಾದ ಮುಖಗವಸು ಲಭ್ಯ.

ಮುಖಗವಸು ತೊಡಲು ನಿರಾಕರಿಸಿದರೆ..

ಮೂರು ವರ್ಷ ಮೇಲ್ಪಟ್ಟ ಮಗುವಿಗೆ ನಾವು ಹೇಳಿದ್ದು ಅರ್ಥವಾಗುತ್ತದೆ. ಇಂತಹ ಮಗುವಿಗೆ ಕೋವಿಡ್–19 ಹರಡುವ ಬಗ್ಗೆ, ಮುಖಗವಸು ಮಹತ್ವದ ಬಗ್ಗೆ ಅರ್ಥವಾಗುವ ಹಾಗೆ, ಸರಳವಾಗಿ ತಿಳಿಸಿ ಹೇಳಿ. ಅವರ ಎಲ್ಲ ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸಿ. ಬಣ್ಣ ಬಣ್ಣದ, ಆಕರ್ಷಕ ಚಿತ್ರವಿರುವ, ವಿವಿಧ ವಿನ್ಯಾಸದ ಮುಖಗವಸು ಲಭ್ಯ. ಈಗಾಗಲೇ ಇದನ್ನು ಬಳಸುವ ಸ್ನೇಹಿತರನ್ನು ಉದಾಹರಿಸಿ, ತೊಡಲು ಪ್ರೋತ್ಸಾಹಿಸಿ.

ಐದು ವರ್ಷದೊಳಗಿನ ಮಗುವಿಗೆ ಚಿಕ್ಕ, 5–9 ವರ್ಷದವರಿಗೆ ಸ್ವಲ್ಪ ದೊಡ್ಡದಾದ, 9 ವರ್ಷದ ನಂತರದ ಮಗುವಿಗೆ ಪ್ರೌಢರ ಸೈಜ್‌ನ ಮುಖಗವಸು ಸೂಕ್ತ.

(ಲೇಖಕ: ಮಕ್ಕಳ ತಜ್ಞರು, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.