ಅತಿಯಾದ ಆಹಾರ ಸೇವನೆ, ವ್ಯಾಯಾಮ ಇಲ್ಲದ ಜಡಜೀವನ ಫ್ಯಾಟಿ ಲಿವರ್‌ನಂಥ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು. ಯಕೃತ್ತಿನಲ್ಲಿ ಶೇ 5ಕ್ಕಿಂತ ಹೆಚ್ಚಿನ ಕೊಬ್ಬಿನಂಶ ಸೇರಿಕೊಂಡರೆ ಅದನ್ನು ಫ್ಯಾಟಿ ಲಿವರ್ ಎನ್ನಲಾಗುತ್ತದೆ
ಸಂಪೂರ್ಣ ವೈದ್ಯಕೀಯ ತಪಾಸಣೆ, ಹೊಟ್ಟೆನೋವು, ಮುಟ್ಟಿನ ತೊಂದರೆಯಿಂದಾಗುವ ನೋವಿನಂತಹ ಕಾರಣಗಳಿಗೆ ಸ್ಕ್ಯಾನಿಂಗ್ ಮಾಡಿಸುವ ಪ್ರಕರಣಗಳ ಪೈಕಿ
ಶೇ 10ರಿಂದ 20ರಷ್ಟು ಪ್ರಕರಣಗಳಲ್ಲಿ ಫ್ಯಾಟಿ ಲಿವರ್ ಇರುವುದು ಪತ್ತೆಯಾಗುತ್ತಿದೆ. ಫ್ಯಾಟಿ ಲಿವರ್ ಎನ್ನುವುದು ಆಧುನಿಕ ಜೀವನಶೈಲಿಯ ಕೊಡುಗೆಯಾಗಿ ಹಲವು ವರ್ಷಗಳೇ ಕಳೆದಿವೆ.
ಹೆಚ್ಚಿನವರು ‘ನಾವು ಒಂದು ಹನಿ ಮದ್ಯವನ್ನೂ ಕುಡಿಯುವುದಿಲ್ಲ. ಒಂದು ಸಿಗರೇಟೂ ಸೇದಿಲ್ಲ. ಆದರೂ ಲಿವರ್‌ನಲ್ಲಿ ಸಮಸ್ಯೆ ಉಂಟಾಗಿದೆಯಲ್ಲ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ. ಆದರೆ, ‘ಸಿಟ್ಟಿಂಗ್ ಈಸ್ ದಿ ನ್ಯೂ ಸ್ಮೋಕಿಂಗ್’ ಎಂಬುದು ನಿಮಗೆ ತಿಳಿದಿರಲಿ. ಅಂದರೆ, ಚಟುವಟಿಕೆರಹಿತ ಜೀವನಶೈಲಿ ನಿಮ್ಮದಾಗಿದ್ದರೆ ಅದು ಧೂಮಪಾನದಷ್ಟೇ ಅಪಾಯವನ್ನು ತಂದೊಡ್ಡಬಲ್ಲದು ಎಂದರ್ಥ. ಫ್ಯಾಟಿ ಲಿವರ್ ಬಗ್ಗೆ ತಿಳಿಯುವ ಮುನ್ನ ಲಿವರ್ ಅಥವಾ ಯಕೃತ್ತಿನ ಕಾರ್ಯ
ವೈಖರಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳೋಣ.
ಯಕೃತ್ತು ದೇಹದಲ್ಲಿ ಎರಡನೇ ಅತಿ ದೊಡ್ಡ ಅಂಗವಾಗಿದ್ದು, ಪುನರುತ್ಪಾದನಾ ಸಾಮರ್ಥ್ಯವುಳ್ಳ ಹೆಪಟೋಸೈಟ್‌ಗಳಿಂದ ಕೂಡಿದೆ. ಹೃದಯಕ್ಕೆ ಪೂರೈಕೆಯಾಗುವ ರಕ್ತದ ಕಾಲು ಭಾಗದಷ್ಟು ರಕ್ತ ಇದಕ್ಕೆ ಪೂರೈಕೆಯಾಗುತ್ತದೆ. ನಾವು ಸೇವಿಸಿದ ಆಹಾರದಿಂದ ಪಡೆದುಕೊಂಡ ಗ್ಲೂಕೋಸ್ ಅನ್ನು ಎಷ್ಟು ಪ್ರಮಾಣದಲ್ಲಿ ರಕ್ತಕ್ಕೆ ಬಿಡುಗಡೆ ಮಾಡಬೇಕು ಎಂಬುದನ್ನು ಯಕೃತ್ತು ನಿರ್ಧರಿಸುತ್ತದೆ. ಚಯಾಪಚಯ ಕ್ರಿಯೆಯಲ್ಲಿಯೂ ಕೊಬ್ಬಿನ ಹೀರುವಿಕೆ ಹಾಗೂ ಸಂಗ್ರಹ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ವಿಷ ವಸ್ತುಗಳನ್ನು ಹೊರ
ಹಾಕುವುದರಲ್ಲಿ ಯಕೃತ್ತಿನ ಕಾರ್ಯ ದೊಡ್ಡದು. ಹಾಗಾಗಿ, ಮಿದುಳು, ಹೃದಯದ ಆರೋಗ್ಯದ ಕಡೆಗೆ ಗಮನ ಕೊಡುವಂತೆ ಯಕೃತ್ತಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು.
ಫ್ಯಾಟಿ ಲಿವರ್ ಅಂದರೆ...
ಯಕೃತ್ತಿನಲ್ಲಿ ಶೇ 5ಕ್ಕಿಂತ ಹೆಚ್ಚಿನ ಕೊಬ್ಬಿನಂಶ ಸೇರಿಕೊಂಡರೆ ಅದನ್ನು ಫ್ಯಾಟಿ ಲಿವರ್ ಎನ್ನಲಾಗುತ್ತದೆ. ಇದರಲ್ಲಿ ಮೂರು ಹಂತಗಳಿವೆ. ಮೊದಲನೇ ಹಂತದಲ್ಲಿ ಕೇವಲ ಕೊಬ್ಬು ಶೇಖರಣೆಯಾಗುತ್ತದೆ. ಎರಡನೇ ಹಂತದಲ್ಲಿ ಅಂಗಾಂಶ ಹಾನಿ, ಉರಿಯೂತ ಉಂಟಾಗಬಹುದು. ಮೂರನೇ ಹಂತದಲ್ಲಿ ಉರಿಯೂತ ಹಾಗೂ ಫೈಬ್ರೋಸಿಸ್ ಆಗಬಹುದು. ಅದನ್ನು ನಿರ್ಲಕ್ಷಿಸಿದರೆ ಅದು ಸಿರೋಸಿಸ್ ಆಗಿ ಮಾರ್ಪಡುತ್ತದೆ. ಇದು ಯಕೃತ್ತು ಸಂಪೂರ್ಣ ಹಾಳಾದ ಸ್ಥಿತಿಯಾಗಿರುತ್ತದೆ.
ಆರಂಭಿಕ ಹಂತದಲ್ಲಿ ರೋಗಲಕ್ಷಣ
ಗಳು ಕಾಣಿಸಿಕೊಳ್ಳದೇ ಇರಬಹುದು. ಕೆಲವರಿಗೆ ತುಸು ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಹನಿಯಷ್ಟು ಮದ್ಯವನ್ನು ಸಹ ಸೇವಿಸದೇ ಇದ್ದರೂ ಲಿವರ್‌ನಲ್ಲಿ ಕೊಬ್ಬು ಹೆಚ್ಚು ಸೇರಿದಾಗ ಅದನ್ನು ನಾನ್ ಆಲ್ಕೋಹಾಲಿಕ್
ಹೆಪಟೋಸ್ಟಿಯೆಟೋಸಿಸ್ (NASH) ಎನ್ನಲಾಗುತ್ತದೆ. ಈಚೆಗೆ ಮೆಟಬಾಲಿಕ್ ಸಿಂಡ್ರೋಮ್ ಜತೆ ತಳಕು ಹಾಕಿಕೊಂಡಿರುವುದರಿಂದ ಇದನ್ನು ಮೆಟಬಾಲಿಕ್ ಡಿಸ್‌ಫಂಕ್ಷನ್– ಅಸೋಸಿ ಯೇಟೆಡ್ ಫ್ಯಾಟಿ ಲಿವರ್ ಡಿಸೀಸ್ (MAFLD) ಎನ್ನಲಾಗುತ್ತದೆ.
ಪರೀಕ್ಷೆ ಹೀಗಿರುತ್ತದೆ
ಫ್ಯಾಟಿ ಲಿವರ್ ಇದೆ ಎಂದು ಫಲಿತಾಂಶ ಬಂದಾಗ, ಯಕೃತ್ತಿನ ಕಿಣ್ವಗಳನ್ನು ಮೊದಲಿಗೆ ಪರೀಕ್ಷೆ ಮಾಡಿಸಬೇಕು. ಕೌಟುಂಬಿಕ ಹಿನ್ನೆಲೆಯಿದ್ದರೆ ಅದರ ವಿವರ ಪಡೆಯಬೇಕು. ಎರಡು ಅಥವಾ ಮೂರನೇ ಹಂತದಲ್ಲಿದ್ದಾಗ ಫೈಬ್ರೋಸ್ಕ್ಯಾನ್ ಮಾಡಿಸಬೇಕಾ
ಗುತ್ತದೆ. ಮೆಟಬಾಲಿಕ್ ಸಿಂಡ್ರೋಮ್ ಇದ್ದರೆ, ಏರು ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್‌ನಂಥ ಸಮಸ್ಯೆಗಳಿದ್ದರೆ ಅವನ್ನು ಸರಿಪಡಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಯಕೃತ್ತಿನ ಜತೆಗೆ ಹೃದಯದ ರಕ್ತನಾಳ, ಮಿದುಳಿಗೂ ತೊಂದರೆ ಉಂಟಾಗಬಹುದು.
ಪರಿಹಾರವೇನು?
ದೇಹದ ತೂಕವನ್ನು ಶೇ 10ರಷ್ಟು ಕಡಿಮೆ ಮಾಡಿಕೊಂಡರೂ ಲಿವರ್ ಫೈಬ್ರೋಸಿಸ್ ಅನ್ನು ಹಿಮ್ಮೆಟ್ಟಿಸ
ಬಹುದಲ್ಲದೆ, ಮೆಟಬಾಲಿಕ್ ಸಿಂಡ್ರೋಮ್ ಅನ್ನು ತಡೆಗಟ್ಟಬಹುದು. ತಿನ್ನುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಬೇಕು. ನಿವ್ವಳ ಕ್ಯಾಲೊರಿ ಸೇವನೆಯ ಪ್ರಮಾಣವನ್ನು ಕಡಿತಗೊಳಿಸಬೇಕು. ಶೇ 40ರಷ್ಟು ಶರ್ಕರ ಪಿಷ್ಟಗಳನ್ನು ಸೇವಿಸಿದರೆ, ಕೊಬ್ಬಿನ ಸೇವನೆಯನ್ನು ಶೇಕಡ 10ಕ್ಕಿಂತ ಕಡಿಮೆಗೊಳಿಸಬೇಕು. ಪ್ರೊಟೀನ್ ಸೇವನೆ ಉತ್ತಮವಾಗಿರಲಿ. ಸಕ್ಕರೆ, ಮೈದಾ, ಉಪ್ಪಿನ ಸೇವನೆ ಕಡಿಮೆ ಇರಲಿ. ಒಮೆಗಾ ಸಿಕ್ಸ್ ಮತ್ತು ಒಮೆಗಾ ತ್ರೀ ಹೇರಳವಾಗಿರುವ ಬೆರ್‍ರಿ ಹಣ್ಣುಗಳು, ಮೀನು, ಬಾದಾಮಿಯನ್ನು ಸೇವಿಸಿ. ಅತಿಯಾದ ಜಂಕ್‌ಫುಡ್, ಸಕ್ಕರೆ, ಕರಿದ ತಿಂಡಿಗಳ ಸೇವನೆ, ಬೇಕರಿ ತಿನಿಸುಗಳು, ರಾಸಾಯನಿಕ ವನ್ನು ಸಿಂಪಡಿಸಿದ ಹಣ್ಣುಗಳು, ಕೃತಕ ಪಾನೀಯಗಳ ಸೇವನೆ, ಅತಿಯಾದ ಔಷಧ ಸೇವನೆಯಿಂದ ದೂರ ಉಳಿಯಿರಿ. ಯಾವುದೇ ಸೊಪ್ಪು, ತರಕಾರಿ, ಹಣ್ಣುಗಳನ್ನು ಸೇವಿಸುವ ಮೊದಲು ಅರ್ಧ ಗಂಟೆ ಉಪ್ಪಿನ ನೀರಿನಲ್ಲಿ ನೆನೆಸಿಟ್ಟು, ಸ್ವಚ್ಛವಾಗಿ ತೊಳೆದು ಬಳಸಬೇಕು. ಆರರಿಂದ ಎಂಟು ತಾಸು ನಿದ್ರೆ ಅವಶ್ಯಕ. ವಿಟಮಿನ್ ‘ಇ ’ಮತ್ತು ‘ಡಿ’ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಿ. ವಿಟಮಿನ್ ‘ಸಿ’ ಇರುವ ನೆಲ್ಲಿಕಾಯಿ, ನಿಂಬೆಹಣ್ಣು, ಒಣದ್ರಾಕ್ಷಿ, ಕಬ್ಬಿನಹಾಲು, ಹಾಗಲಕಾಯಿ, ಕರಿಬೇವು, ಶುಂಠಿ ಸೇವನೆ ಉತ್ತಮ.
ನಿತ್ಯ ಒಂದು ಗಂಟೆಯಾದರೂ ವ್ಯಾಯಾಮ ಮಾಡಲೇಬೇಕು. ಜಾಗಿಂಗ್, ರನ್ನಿಂಗ್, ಈಜು ಹೀಗೆ ಇಷ್ಟವಾದ ವ್ಯಾಯಾಮವನ್ನು ಆಯ್ದುಕೊಳ್ಳಿ. ಸೂರ್ಯನಮಸ್ಕಾರದಂಥ ಯೋಗಾಸನವು ಕೊಬ್ಬನ್ನು ಕರಗಿಸುತ್ತದೆ. ಮೆಟ್ಟಿಲು ಹತ್ತಿ, ಇಳಿಯುವುದು, ನೆಲ ಒರೆಸುವಂಥ ಚಟುವಟಿಕೆಗಳನ್ನು ರೂಢಿಸಿಕೊಳ್ಳಿ. ವೈದ್ಯರ ಸಲಹೆಯ ಮೇರೆಗೆ ತೂಕ ಕಡಿಮೆ ಮಾಡಿಕೊಳ್ಳಲು ಔಷಧ ಸೇವಿಸಬೇಕೆ ಹೊರತು ಸ್ವಯಂ ಔಷಧ ಮಾಡಿಕೊಳ್ಳಬೇಡಿ.
v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.