ADVERTISEMENT

ಅಂತರಂಗ: ಕತ್ತಲಿನ ಭಯಕ್ಕೆ ಪರಿಹಾರವೇನು?

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 22:30 IST
Last Updated 9 ಜನವರಿ 2026, 22:30 IST
   
ನನಗೆ ಕತ್ತಲೆಂದರೆ ವಿಪರೀತ ಭಯ. ಸದಾ ಬೆಳಕಿನಲ್ಲಿಯೇ ಇರಬೇಕು ಎನಿಸುತ್ತದೆ. ಕತ್ತಲು ನೋಡಿದ ತಕ್ಷಣ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ರಾತ್ರಿ ಹೊತ್ತು ಲೈಟ್ ಹಾಕಿಕೊಂಡೇ ನಿದ್ರೆ ಮಾಡುವಂತಾಗಿದೆ.‌ಈ‌ ಕಾರಣಕ್ಕೆ ನನಗೂ ನನ್ನ ಹೆಂಡತಿಗೂ ಜಗಳ, ಮನಸ್ತಾಪ. ‘ಕತ್ತಲು ನೋಡಿ ಹೆದರಿಕೊಳ್ಳುವ ಹೆದರುಪುಕ್ಕಲ. ನೀನು ಗಂಡಸೇ ಅಲ್ಲ’ ಎಂದು ಛೇಡಿಸುತ್ತಾಳೆ.‌ ಈ ಕಾರಣಕ್ಕಾಗಿಯೇ ಮನೆಯಲ್ಲಿ ನಿತ್ಯವೂ ಗಲಾಟೆ ಆಗುತ್ತಿತ್ತು. ಇದು ವಿಪರೀತಗೊಂಡು ಮದುವೆ ಮುರಿದುಬಿದ್ದಿದೆ. ಕತ್ತಲಿನ ಈ ಭಯಕ್ಕೆ ಪರಿಹಾರವೇನು ತಿಳಿಸಿಕೊಡಿ ಸರ್.

ಕತ್ತಲಿನ ಕುರಿತು ಭಯಪಡುವುದು ಮಕ್ಕಳಲ್ಲಿ ಸಾಧಾರಣವಾಗಿ ಕಂಡುಬರುತ್ತದೆ. ಆದರೆ, ದೊಡ್ಡವರಾದ ಮೇಲೂ ಅದು ಉಳಿದುಕೊಂಡಿರುವುದಕ್ಕೆ ಏನು ಕಾರಣ ಎಂಬುದನ್ನು ಮೊದಲಿಗೆ ಹುಡುಕಬೇಕು.

ಕತ್ತಲೆ ಅನ್ನುವುದು ಮಕ್ಕಳಿಗೆ ಸಹಜವಾಗಿ ಭಯವನ್ನು ಉಂಟುಮಾಡುತ್ತದೆ. ಯಾಕೆಂದರೆ, ಕತ್ತಲಿನಲ್ಲಿ ಅನಿರ್ದಿಷ್ಟತೆ ಇರುತ್ತದೆ. ಅದರ ಜೊತೆಗೆ, ಯಾರಾದರೂ ಭೂತ - ಪ್ರೇತಗಳ ಕಥೆಗಳನ್ನೂ ಹೇಳಿರುತ್ತಾರೆ. ಅದರ ಜೊತೆಗೆ, ಕತ್ತಲಿನ ಗಾಢ ಮೌನವು ಭಯವನ್ನು ಸೃಷ್ಟಿಸುತ್ತದೆ. ಎಲ್ಲಾದರೂ ಸಣ್ಣ ಸದ್ದಾದರೂ ದೊಡ್ಡದಾಗಿ ಭಾಸವಾಗುತ್ತದೆ. ಇಂತಹ ಭಯವನ್ನು ತೆಗೆಯುವುದಕ್ಕೆ ಸುಲಭ ಉಪಾಯಗಳಿವೆ. ಉದಾಹರಣೆಗೆ, ಕತ್ತಲಿನ ಕೋಣೆಯೊಳಗೆ ನಿಧಾನವಾಗಿ ಕರೆದುಕೊಂಡು ಹೋಗುವುದು, ಆಮೇಲೆ ಒಬ್ಬೊಬ್ಬರನ್ನೇ ಹೋಗುವುದಕ್ಕೆ ಪ್ರೇರೇಪಿಸುವುದು, ಕತ್ತಲಿನಲ್ಲಿ ಹೊರಗೆ ಹೋಗುವುದಕ್ಕೆ ಅಭ್ಯಾಸ ಮಾಡಿಸುವುದು... ಹೀಗೆ ಕತ್ತಲಿನ ಕುರಿತು ಇರುವ ಭಯವನ್ನು ನಿಧಾನವಾಗಿ ನಿವಾರಿಸಬಹುದು.

ಆದರೆ, ದೊಡ್ಡವರಾದ ಮೇಲೂ ಆ ರೀತಿಯ ಭಯ ಇದೆ ಅಂತಾದರೆ, ಅದಕ್ಕೆ ಏನಾದರೂ ಬಲವಾದ ಕಾರಣ ಇರುವ ಸಾಧ್ಯತೆಗಳಿರುತ್ತವೆ. ಬೌದ್ಧಿಕವಾಗಿ ಭಯಪಡಬೇಕಾದ ಅಗತ್ಯವಿಲ್ಲ ಅಂತ ತಿಳಿದಿದ್ದರೂ, ಆ ಸಮಯಕ್ಕೆ ಹಠಾತ್ ಆಗಿ ಭಯ ಉಮ್ಮಳಿಸಿ ಬರುತ್ತದೆ. ಆಗ ಉದ್ವೇಗಕ್ಕೆ ಒಳಗಾಗಿ ಉಸಿರಾಟದ ಸಮಸ್ಯೆಯೂ ಉಂಟಾಗಬಹುದು. ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು ಭಯದ ಆ ಮೂಲವನ್ನು ಹುಡುಕಿ ಅದಕ್ಕೆ ಚಿಕಿತ್ಸೆ ಮಾಡುವ ಅಗತ್ಯವಿದೆ.

ADVERTISEMENT

ಇನ್ನು ಗಂಡಸೇ ಅಲ್ಲ ಅನ್ನುವ ಮಾತು ಸಾಮಾಜಿಕ ಗ್ರಹಿಕೆಯಿಂದ ಬರುವಂಥದ್ದು. ಗಂಡಸರಿಗೆ ಹೆದರಿಕೆ ಆಗಬಾರದು, ಗಂಡಸರು ಅಳಬಾರದು, ಗಂಡಸರು ದುರ್ಬಲರಾಗಿ ಇರಬಾರದು, ಯಾವತ್ತೂ ಜಗಳಕ್ಕೆ ತಯಾರಾಗಿ, ಕ್ರೋಧಿತರಾಗಿ ಇರಬೇಕೆಂಬ ಪರಿಕಲ್ಪನೆ ಸಮಾಜದಲ್ಲಿದೆ. ಗಂಡಸುತನವನ್ನು ಸಿಡುಕುತನದಿಂದ ಅಳೆಯುವುದು ತಪ್ಪು. ನಿಮ್ಮ ಪತ್ನಿಯ ಆ ರೀತಿಯ ಮಾತುಗಳು ಅವರೊಳಗಿರುವ ಹತಾಶೆ ಅಥವಾ ನಿರಾಶೆಯ ಕಾರಣದಿಂದಲೂ ಬರುತ್ತಿರಬಹುದು.

ನಿಮ್ಮ ಪ್ರಶ್ನೆಯ ಆಧಾರದ ಮೇಲೆ ಹೇಳುವುದಾದರೆ, ಅದೇ ನಿಮ್ಮ ಸಂಬಂಧದಲ್ಲಿ ತೊಂದರೆ ಕೊಟ್ಟಿರುವ ಮುಖ್ಯ ಕಾರಣ. ಮೊದಲು ಮನಃಶಾಸ್ತ್ರಜ್ಞರ ಬಳಿ ಹೋಗಿ ನಿಮ್ಮ ಭಯವನ್ನು ನಿವಾರಿಸಿಕೊಳ್ಳಿ. ಆಮೇಲೆ ಮುರಿದು ಹೋಗಿರುವ ಸಂಬಂಧವನ್ನು ಕಟ್ಟುವುದಕ್ಕೆ ತೊಡಗಿ. ಯಾಕೆಂದರೆ, ಈ ಸಮಸ್ಯೆ ಪರಿಹಾರವಾಗದ ವಿನಾ ನಿಮ್ಮ ಮಡದಿಯನ್ನು ಒಪ್ಪಿಸುವುದಕ್ಕೆ ಸಾಧ್ಯವಿಲ್ಲ.