ADVERTISEMENT

ಆಹಾರದ ಕೋಮಾ!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 19:30 IST
Last Updated 15 ಫೆಬ್ರುವರಿ 2020, 19:30 IST
   
""

ಫುಡ್‌ ಕೋಮಾ ಎಂಬುದೊಂದು ಇದೆ. ಅತಿಯಾಗಿ ಆಹಾರ ಸೇವಿಸಿದ್ದರ ಪರಿಣಾಮವಾಗಿ ನಿದ್ರೆ ಬಂದಂತೆ ಅಥವಾ ಆಲಸ್ಯ ಮೂಡಿದಂತೆ ಆಗುತ್ತದೆಯಲ್ಲ? ಇದನ್ನು ಫುಡ್ ಕೋಮಾ ಎಂದು ಕರೆಯುತ್ತಾರೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಪೋಸ್ಟ್‌ಪ್ರಾಂಡಿಯಲ್ ಸೊಮ್ನೊಲೆನ್ಸ್ ಎಂದು ಕರೆಯುತ್ತಾರೆ.

ದೇಹ ಈ ಸ್ಥಿತಿ ತಲುಪುವುದು ಏಕೆ ಎಂಬ ಬಗ್ಗೆ ವಿಜ್ಞಾನಿಗಳು ಹಲವು ವಿವರಣೆಗಳನ್ನು ನೀಡುತ್ತಾರೆ. ಇದರಲ್ಲಿ ಅತ್ಯಂತ ಹೆಚ್ಚಾಗಿ ಉಲ್ಲೇಖವಾಗುವ ವಿವರಣೆಯೊಂದು ಇದೆ. ನಾವು ಸಿಕ್ಕಾಪಟ್ಟೆ ಆಹಾರ ಸೇವಿಸಿದಾಗ, ನಮ್ಮ ದೇಹದ ಅತಿಹೆಚ್ಚಿನ ಪ್ರಮಾಣದ ರಕ್ತವು ಜೀರ್ಣಕ್ರಿಯೆಯ ಕೆಲಸಗಳಿಗೆ ಬೇಕಾಗುತ್ತದೆ. ಇದರ ಪರಿಣಾಮವಾಗಿ ದೇಹದ ಇತರ ಭಾಗಗಳಿಗೆ ರಕ್ತದ ಪೂರೈಕೆ ಕಡಿಮೆ ಆಗುತ್ತದೆ. ಆಗ ನಮಗೆ ಸುಸ್ತು ಆದಂತೆ ಅನಿಸುತ್ತದೆ.

ಫುಡ್ ಕೋಮಾ ಕುರಿತು ಇನ್ನೊಂದು ವಿವರಣೆ ಇದೆ. ಕೆಲವು ಮಾಂಸ ಹಾಗೂ ಹಾಲಿನ ಉತ್ಪನ್ನಗಳಲ್ಲಿ ಟ್ರಿಪ್ಟೊಫಾನ್‌ ಎನ್ನುವ ಅಮೈನೊ ಆಮ್ಲ ಇರುತ್ತದೆ. ಇಂತಹ ಮಾಂಸ ಹಾಗೂ ಹಾಲಿನ ಉತ್ಪನ್ನಗಳನ್ನು ನಾವು, ರಕ್ತಕ್ಕೆ ಸಕ್ಕರೆಯ ಅಂಶವನ್ನು ಬೇಗನೆ ಬಿಡುಗಡೆ ಮಾಡುವ ಶರ್ಕರಪಿಷ್ಟಗಳು ಹೆಚ್ಚಿರುವ ಆಹಾರದ ಜೊತೆ ಸೇವಿಸಿದಾಗ, ಮಿದುಳಿನಲ್ಲಿ ಸೆರೊಟೊನಿನ್ ಎನ್ನುವ ರಾಸಾಯನಿಕ ಉತ್ಪಾದನೆ ಆಗುತ್ತದೆ. ಸೆರೊಟೊನಿನ್‌ ಉತ್ಪಾದನೆಯಿಂದಾಗಿ ಆಲಸ್ಯ ಉಂಟಾಗುತ್ತದೆ.

ADVERTISEMENT

ಅದೇ ರೀತಿ, ಸಂಜೆಯ ಹೊತ್ತಿನಲ್ಲಿ ನಾವು ಆಕಳ ಹಾಲನ್ನು ತುಸು ಬಿಸಿ ಮಾಡಿ ಕುಡಿದರೆ ನಿದ್ದೆ ಬಂದಂತೆ ಆಗುತ್ತದೆ. ಇದಕ್ಕೆ ಕಾರಣ ಮೆಲಾಟೊನಿನ್. ಪ್ರೊಟೀನ್‌, ಶರ್ಕರಪಿಷ್ಟಗಳು ಹಾಗೂ ಆರೋಗ್ಯಕರ ಕೊಬ್ಬಿನ ಅಂಶ ಸೂಕ್ತ ಪ್ರಮಾಣದಲ್ಲಿ ಇರುವ ಆಹಾರವನ್ನು ಸೇವಿಸುವ ಮೂಲಕ ನಾವು ‘ಫುಡ್ ಕೋಮಾ’ದಿಂದ ತಪ್ಪಿಸಿಕೊಳ್ಳಬಹುದು. ಊಟವನ್ನು ಮಿತವಾಗಿ ಮಾಡಿ, ದ್ರವಾಹಾರವನ್ನು ತುಸು ಹೆಚ್ಚು ಸೇವಿಸಬಹುದು. ಜಾಸ್ತಿ ಊಟ ಮಾಡಿದರೆ, ನಂತರ ಒಂದಿಷ್ಟು ದೂರ ನಡೆಯುವುದರಿಂದ ಕೂಡ ಫುಡ್ ಕೋಮಾ ಅವಸ್ಥೆಯಿಂದ ತಪ್ಪಿಸಿಕೊಳ್ಳಬಹುದು.

ಹರಳುಗಿಡದ ಸ್ಟ್ರಾ!

ಹರಳು ಗಿಡದ (ಉತ್ತರ ಕರ್ನಾಟಕ ಭಾಗದಲ್ಲಿ ಇದನ್ನು ಔಡಲ ಗಿಡ ಎನ್ನುತ್ತಾರೆ) ಕಾಂಡವನ್ನು ಪ್ಲಾಸ್ಟಿಕ್ಕಿನ ಸ್ಟ್ರಾಗಳಿಗೆ ಪರ್ಯಾಯವಾಗಿ ಬಳಕೆ ಮಾಡಬಹುದು, ಗೊತ್ತೇ?! ಇದನ್ನು ಬೆಂಗಳೂರಿನ ಕೆಲವು ವ್ಯಾಪಾರಿಗಳು ಪ್ಲಾಸ್ಟಿಕ್ ಸ್ಟ್ರಾಗಳಿಗೆ ಕಡಿಮೆ ವೆಚ್ಚದ ಪರ್ಯಾಯವಾಗಿ, ಪರಿಸ್ನೇಹಿ ಕೂಡ ಆಗಿ ಬಳಕೆ ಮಾಡುತ್ತಿದ್ದಾರೆ.

ಇದನ್ನು ಹೀಗೆ ಬಳಕೆ ಮಾಡುವ ಆಲೋಚನೆ ಮೊದಲು ಬಂದಿದ್ದು ಶಿವ ಮಂಜೇಶ್ ಎಂಬುವವರಿಗೆ. ಹರಳು ಗಿಡದ ಕಾಂಡವನ್ನು ಕತ್ತರಿಸಿ, ಫ್ರಿಜ್‌ನಲ್ಲಿ ಇಟ್ಟುಕೊಂಡರೆ ಅದನ್ನು ಕನಿಷ್ಠ ಹತ್ತು ಬಾರಿ ಮರುಬಳಕೆ ಮಾಡಬಹುದು. ಅದೇ ಕಾಂಡವನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಂಡರೆ ಆರು ತಿಂಗಳುಗಳವರೆಗೆ ಮತ್ತೆ ಮತ್ತೆ ಬಳಕೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.