ADVERTISEMENT

ಏನಾದ್ರೂ ಕೇಳ್ಬೋದು: ಲಿಂಗತ್ವ ಅಲ್ಪಸಂಖ್ಯಾತರಿಗೆ ಆತ್ಮಗೌರವದ ಬದುಕು ಸಾಧ್ಯವೇ?

ನಡಹಳ್ಳಿ ವಂಸತ್‌
Published 18 ಫೆಬ್ರುವರಿ 2022, 19:30 IST
Last Updated 18 ಫೆಬ್ರುವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಿಇ ಓದಿರುವ 25ರ ಯುವಕ. ನನಗೆ ಬಾಲ್ಯದಿಂದಲೂ ಹುಡುಗಿಯಾಗುವ ಬಯಕೆಯಿದೆ. ಹುಡುಗಿಯರಂತೆ ಬಟ್ಟೆ ಧರಿಸುವ ಆಟವಾಡುವ ವರ್ತಿಸುವ ಬಯಕೆಯಾಗುತ್ತಿತ್ತು. ಈಗ ಆಕರ್ಷಕ ಹುಡುಗಿಯಾಗಿ ಪ್ರೀತಿಸುವ ಹುಡುಗನೊಬ್ಬನ ಜೊತೆ ಬಾಳುವ ಕನಸನ್ನು ಕಾಣುತ್ತಿರುತ್ತೇನೆ. ದೈಹಿಕವಾಗಿಯೂ ಹೆಣ್ಣಾಗಿ ಬದುಕಬೇಕೆಂದು ಬಯಕೆಯಾಗುತ್ತದೆ. ಆದರೆ ಸಮಾಜವನ್ನು ಎದುರಿಸುವ ಕುರಿತಾಗಿ ಭಯ ಹಿಂಜರಿಕೆಗಳಿವೆ. ನನ್ನೊಳಗೆ ಹೆಣ್ಣಿನ ಮಿದುಳು ಇರುವುದಕ್ಕೆ ಹೀಗಾಗುತ್ತಿದೆಯೇ? ನಾನು ಏನು ಮಾಡಬಹುದು?

ಹೆಸರು, ಊರು ತಿಳಿಸಿಲ್ಲ.

ತಂದೆ–ತಾಯಂದಿರ ವಂಶವಾಹಿಗಳು ಸೇರುವಾಗ ಮಗುವಿನ ಲಿಂಗ ನಿರ್ಧಾರವಾಗಿ ಅದರಂತೆ ದೇಹರಚನೆಯಾಗುತ್ತದೆ. ಗಂಡು ಹೆಣ್ಣುಗಳ ಮಿದುಳಿನ ರಚನೆಯಲ್ಲಿ ವ್ಯತ್ಯಾಸವಿರುವುದಿಲ್ಲ. ಮಗು ಬೆಳೆಯುತ್ತಾ ಬಂದಂತೆ ಲೈಂಗಿಕತೆಯನ್ನು ಗುರುತಿಸಿಕೊಳ್ಳುತ್ತಾ ಹೋಗುತ್ತದೆ. ಕೆಲವೊಮ್ಮೆ ದೇಹರಚನೆ ಲೈಂಗಿಕತೆಗೆ ಹೊಂದಿಕೆಯಾಗದೆ ಹೋಗಬಹುದು. ಜನಸಂಖ್ಯೆಯ ಹೆಚ್ಚಿನ ಭಾಗ ಭಿನ್ನಲಿಂಗದವರೊಡನೆ ಲೈಂಗಿಕ ಆಕರ್ಷಣೆಗೆ ಒಳಗಾಗುತ್ತಾರೆ. ಕೆಲವರು ತಮ್ಮದೇ ಲಿಂಗದ ವ್ಯಕ್ತಿಗಳಿಗೆ ಆಕರ್ಷಿತರಾಗುತ್ತಾರೆ. ಇವರನ್ನು ಸಲಿಂಗಕಾಮಿಗಳೆಂದು ಹೇಳುತ್ತಾರೆ. ಇವರು ತಮ್ಮ ದೇಹರಚನೆಯನ್ನು ಒಪ್ಪಿಕೊಂಡಿರುತ್ತಾರೆ. ಇನ್ನೂ ಕೆಲವರಲ್ಲಿ ದೇಹರಚನೆಯನ್ನೇ ಬದಲಾಯಿಸಿಕೊಳ್ಳುವ ಬಯಕೆಯಾಗುತ್ತದೆ. ಇಂತವರನ್ನು ಲಿಂಗತ್ವ ಅಲ್ಪಸಂಖ್ಯಾತರು(ಟ್ರಾನ್ಸ್‌ಜೆಂಡರ್ಸ್‌) ಎನ್ನುತ್ತಾರೆ. ಇಂತಹ ಆಸಕ್ತಿ ಮೂಡುವುದಕ್ಕೆ ಸ್ಪಷ್ಟವಾದ ಕಾರಣಗಳು ತಿಳಿದಿಲ್ಲ. ಸಲಿಂಗಕಾಮಿಗಳ ಉಡುಪು ವರ್ತನೆಗಳು ಅವರ ಜನ್ಮಲಿಂಗದಂತೆಯೇ ಇರುವುದರಿಂದ ಇಂತವರು ಸಮಾಜದ ಕಣ್ಣಿಗೆ ಬೀಳುವುದಿಲ್ಲ. ಆದರೆ ಲಿಂಗತ್ವ ಅಲ್ಪಸಂಖ್ಯಾತರ ಉಡುಪು ವರ್ತನೆಗಳು ಜನ್ಮಲಿಂಗಕ್ಕೆ ವಿರುದ್ಧವಾಗಿರುವುದರಿಂದ ಸಾಮಾಜಿಕವಾಗಿ ಒಪ್ಪಿತವಾದುದಲ್ಲ ಎನ್ನುವುದು ಶತಶತಮಾನಗಳಿಂದ ಬಂದಿರುವ ನಂಬಿಕೆ. ಹಾಗಾಗಿ ಸಮಾಜ ಇವರನ್ನು ಕೀಳಾಗಿ ನೋಡುತ್ತಾ ಬಂದಿದೆ. ಆದರೆ ಕಳೆದ ಹಲವಾರು ದಶಕಗಳಿಂದ ಪ್ರಪಂಚದ ಎಲ್ಲಾ ಕಡೆಯಂತೆ ಭಾರತದಲ್ಲಿಯೂ ನಿಧಾನವಾಗಿಯಾದರೂ ಬದಲಾವಣೆಗಳಾಗುತ್ತಿವೆ. ನಿಮ್ಮ ಲೈಂಗಿಕತೆ ಬಹುಸಂಖ್ಯಾತರಿಗಿಂತ ಭಿನ್ನವಾಗಿರುವುದರಿಂದ ಭಯ ಹಿಂಜರಿಕೆಗಳು ಸಹಜವಾದದ್ದು. ಆದರೆ ಇದು ಕಾಯಿಲೆಯಲ್ಲ ಅಥವಾ ಕೊರತೆಯಲ್ಲ. ಮೊದಲು ಉದ್ಯೋಗವನ್ನು ಹುಡುಕಿಕೊಂಡು ಆರ್ಥಿಕವಾಗಿ ಸ್ವತಂತ್ರರಾಗಿ. ನಂತರ ನಿಮ್ಮ ಲೈಂಗಿಕತೆಯನ್ನು ಆಯ್ದುಕೊಳ್ಳಲು ಎರಡು ದಾರಿಗಳಿವೆ. 1. ದೇಹರಚನೆಯನ್ನು ಬದಲಾಯಿಸಿಕೊಳ್ಳದೆ ಉಡುಗೆ ಅಲಂಕಾರಗಳಿಂದ ಹೆಣ್ಣಾಗಿ ಬಾಳುವುದು. 2. ವೈದ್ಯರ ಸಹಾಯದಿಂದ ಶಸ್ತ್ರಚಿಕಿತ್ಸೆಯ ಮೂಲಕ ದೇಹರಚನೆಯನ್ನು ಬದಲಾಯಿಸಿಕೊಂಡು ಹೆಣ್ಣಾಗುವುದು. ಈ ಎರಡೂ ಆಯ್ಕೆಗಳಲ್ಲಿಯೂ ನಿಮಗೆ ಇಷ್ಟವಾಗುವ ಲೈಂಗಿಕ ಸಂಗಾತಿಯನ್ನು ಆಯ್ದುಕೊಳ್ಳಬಹುದು. ಆದರೆ ಒಬ್ಬರಿಗಿಂತ ಹೆಚ್ಚು ಜನರ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಾಗ ಲೈಂಗಿಕ ಕಾಯಿಲೆಗಳ ಬಗೆಗೆ ಸಂಪೂರ್ಣ ಎಚ್ಚರವಹಿಸಬೇಕು.

ADVERTISEMENT

25ರ ಪುರುಷ. ಖಾಸಗಿ ಕಂಪನಿಯ ಉದ್ಯೋಗಿ. ನಾನು ಪುರುಷ ಮತ್ತು ಸ್ತ್ರೀಯರಿಬ್ಬರಿಂದಲೂ ಲೈಂಗಿಕವಾಗಿ ಆಕರ್ಷಿತನಾಗುತ್ತೇನೆ. ಈಗ ಮುಂದಿನ ಜೀವನದ ಬಗೆಗೆ ಚಿಂತಿಸುತ್ತಿದ್ದೇನೆ. ತಪ್ಪಿತಸ್ಥ ಭಾವನೆಗಳು ಮೂಡುತ್ತಿವೆ. ಪರಿಹಾರವೇನು?

ಹೆಸರು ಊರು ತಿಳಿಸಿಲ್ಲ.

ನಿಮ್ಮ ಲೈಂಗಿಕ ಆಕರ್ಷಣೆ ಬಹುಸಂಖ್ಯಾತರಿಗಿಂತ ಭಿನ್ನವಾಗಿರುವುದರಿಂದ ಸಾಮಾಜಿಕವಾಗಿ ಒಪ್ಪಿತವಾಗಿಲ್ಲ. ಹಾಗಾಗಿ ಭಯ ತಪ್ಪಿತಸ್ಥ ಭಾವನೆಗಳು ಮೂಡುವುದು ಸಹಜ. ಉಭಯಲಿಂಗ ಪ್ರೇಮಿಗಳಾಗಿರುವುದು ಪ್ರಕೃತಿಯ ಆಯ್ಕೆಯೇ ಹೊರತು ಕಾಯಿಲೆ ಅಥವಾ ಕೊರತೆಯಲ್ಲ. ನಿಮ್ಮ ಲೈಂಗಿಕ ಆಯ್ಕೆಗಳನ್ನು ಮಾಡಿಕೊಳ್ಳಲು ನಿಮಗೆ ಸ್ವಾತಂತ್ರವಿದೆ. ಆದರೆ ಲೈಂಗಿಕ ರೋಗಗಳ ಕುರಿತಾಗಿ ವೈದ್ಯರಿಂದ ಮಾಹಿತಿ ಪಡೆದು ಸಂಪೂರ್ಣ ಎಚ್ಚರ ವಹಿಸಿ. ಭವಿಷ್ಯದಲ್ಲಿ ಮದುವೆಯಾಗುವ ಇಚ್ಚೆಯಿದ್ದರೆ ನಿಮ್ಮ ಲೈಂಗಿಕ ಆಯ್ಕೆಗಳ ಬಗೆಗೆ ನಿಮ್ಮೊಳಗೆ ಸ್ಪಷ್ಟತೆ ಇರಬೇಕು. ಒಂದೇ ಸಂಗಾತಿಯೊಡನೆ ಲೈಂಗಿಕ ಆಕರ್ಷಣೆ ಉಳಿಸಿಕೊಳ್ಳವುದು ನಿಮಗೆ ಕಷ್ಟವಾಗಬಹುದು ಎನ್ನಿಸಿದರೆ ಲೈಂಗಿಕ ಮನೋಚಿಕಿತ್ಸಕರನ್ನು ಸಂಪರ್ಕಿಸಿ. ಒತ್ತಾಯಕ್ಕೆ ಮಣಿದು ಮುಂದೆಲ್ಲಾ ಸರಿಯಾಗುತ್ತದೆ ಎಂದು ಆತುರದ ನಿರ್ಧಾರಗಳನ್ನು ಮಾಡದಿದ್ದರೆ ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.