ADVERTISEMENT

Hair Care in Summer: ಬೇಸಿಗೆಯಲ್ಲಿ ಕೂದಲ ಆರೈಕೆ ಹೀಗಿರಲಿ...

​ಪ್ರಜಾವಾಣಿ ವಾರ್ತೆ
Published 9 ಮೇ 2025, 23:45 IST
Last Updated 9 ಮೇ 2025, 23:45 IST
   

ಬೇಸಿಗೆ ಕಾಲದಲ್ಲಿ ಸೂರ್ಯನ ತಾಪದಿಂದ ಪಾರಾಗದವರೇ ವಿರಳ. ಹೊರಗೆ ಕಾಲಿಟ್ಟರೆ ಸಾಕು ಮೈಯಷ್ಟೇ ಅಲ್ಲ ನೆತ್ತಿಯೂ ಸುಡುವಂಥ ಬಿಸಿಲು. ಮೈಬೆವರ ವಾಸನೆಯ ಜತೆಗೆ ತಲೆಕೂದಲ ಬುಡದಲ್ಲೂ ಬೆವರ ಸಿಂಚನ.

ಬೇಸಿಗೆ ಚರ್ಮವಷ್ಟೇ ಅಲ್ಲ, ಕೂದಲ ಆರೋಗ್ಯದ ಮೇಲೂ ಪರಿಣಾಮ ಬೀರಬಲ್ಲದು. ಬಿಸಿಲ ತಾಪಕ್ಕೆ ನೆತ್ತಿಯಲ್ಲಿನ ನೈಸರ್ಗಿಕ ಎಣ್ಣೆಯಂಶ ಕಡಿಮೆಯಾಗಿ ಕೂದಲು ಹೊಳಪು ಕಳೆದುಕೊಂಡು ನಿಸ್ತೇಜವಾಗುತ್ತದೆ. ಜತೆಗೆ ಕೂದಲಿಗೆ ಬೇಕಾದ ತೇವಾಂಶದ ಕೊರತೆಯೂ ಆಗಿ ಕೂದಲು ಒಣಗಿ ಸತ್ವಹೀನವಾದಂತೆ ಕಾಣುತ್ತದೆ.

ಬಿಸಿಲು ಮತ್ತು ದೂಳಿಗೆ ಕೂದಲನ್ನು ದೀರ್ಘ ಕಾಲ ಒಡ್ಡುವುದರಿಂದ ನೆತ್ತಿ ಮತ್ತು ಕೂದಲ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಕೂದಲಬುಡದಲ್ಲಿ ತುರಿಕೆ, ತಲೆಹೊಟ್ಟು, ಕೂದಲು ಸೀಳು ಬಿಡುವಂಥ ಸಮಸ್ಯೆಗಳು ಬೇಸಿಗೆಯಲ್ಲಿ ಸಾಮಾನ್ಯ. ಇದು ಕೂದಲು ಉದುರುವಿಕೆಗೂ ಕಾರಣವಾಗಲ್ಲದು. ತುಸು ಕಾಳಜಿ ವಹಿಸಿದರೆ ಬೇಸಿಗೆಯಲ್ಲೂ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ADVERTISEMENT

ಬೆವರನ್ನು ನಿರ್ಲಕ್ಷಿಸದಿರಿ

ಬಿಸಿಲಿಗೆ ಕೂದಲು ಒದ್ದೆಯಾದಾಗ ಅದನ್ನು ನಿರ್ಲಕ್ಷಿಸುವವರೇ ಹೆಚ್ಚು. ಕೆಲವರು ಫ್ಯಾನ್ ಗಾಳಿಗೆ ಕೂದಲು ಒಣಗಿಸಿಕೊಳ್ಳುತ್ತಾರೆ. ಆದರೆ, ಬೆವರಿನಿಂದ ಒದ್ದೆಯಾದ ಕೂದಲು ತಲೆಹೊಟ್ಟು ಮತ್ತು ಫಂಗಲ್ ಸೋಂಕಿಗೆ ಕಾರಣವಾಗಬಹುದು. ಹಾಗಾಗಿ, ಬೆವರಿನಿಂದ ತಲೆಕೂದಲು ಒದ್ದೆಯಾದಾಗ ತಲೆಸ್ನಾನ ಮಾಡುವುದು ಉತ್ತಮ. ಇದರಿಂದ ದೂಳು ಮತ್ತಿತರ ಮಾಲಿನ್ಯದಿಂದ ಜಡ್ಡುಗಟ್ಟಿದ ಕೂದಲು ಸ್ವಚ್ಛಗೊಂಡು, ಕೂದಲ ಬಡಕ್ಕೂ ಹಿತವೆನಿಸುತ್ತದೆ. ವಾರಕ್ಕೆ ಎರಡು–ಮೂರು ಬಾರಿಯಾದರೂ ತಲೆಸ್ನಾನ ಮಾಡುವುದು ಉತ್ತಮ.


ಎಣ್ಣೆ ಮಸಾಜ್

ನೆತ್ತಿಯ ಆರೋಗ್ಯ ಚೆನ್ನಾಗಿರಬೇಕೆಂದು ಈ ಹಿಂದೆ ಹಿರಿಯರು ತಲೆಕೂದಲು ಹಾಗೂ ನೆತ್ತಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುತ್ತಿದ್ದರು. ವಾರಕ್ಕೊಮ್ಮೆಯಾದರೂ ಕೊಬ್ಬರಿಎಣ್ಣೆ ಇಲ್ಲವೇ ಬಾದಾಮಿ ಎಣ್ಣೆ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿದರೆ ಕೂದಲ ಬುಡದಲ್ಲಿ ರಕ್ತ ಪರಿಚಲನೆ ಸುಗಮವಾಗುತ್ತದೆ. ತಲೆಹೊಟ್ಟು, ಶೀಲಿಂಧ್ರದ ಸೋಂಕನ್ನೂ ತಡೆಯಬಹುದು.

ಸೂಕ್ತ ಶ್ಯಾಂಪೂ, ಕಂಡೀಷನರ್ ಅಗತ್ಯ

ಬಿಸಿಲಿಗೆ ಬೆವರು ಮತ್ತು ಕೊಳೆ ಬೇಗ ಸಂಗ್ರಹವಾಗುವುದಿಂದ ಕೂದಲ ಆರೈಕೆಗೆ ಸೂಕ್ತವಾದ, ಹೆಚ್ಚು ರಾಸಾಯನಿಕ ಇಲ್ಲದ ಶ್ಯಾಂಪೂ ಹಾಗೂ ಕಂಡೀಷನರ್ ಬಳಸುವುದು ಅಗತ್ಯ. ಶ್ಯಾಂಪೂ ಕೂದಲಿನ ಕೊಳೆಯನ್ನು ಸ್ವಚ್ಛಗೊಳಿಸಿದರೆ, ಕಂಡೀಷನರ್ ಕೂದಲಿನ ನೈಸರ್ಗಿಕ ತೇವಾಂಶ ಉಳಿಕೆಗೆ ಸಹಕಾರಿಯಾಗುತ್ತದೆ. ಕೂದಲು ಹೆಚ್ಚು ಒಣಗಿದ್ದು, ಒರಟಾಗಿದ್ದರೆ ಆಲೊವೆರಾ, ತೆಂಗಿನ ಹಾಲಿನ ಅಂಶವುಳ್ಳ ಹೆಚ್ಚು ತೇವಾಂಶ ಕಾಪಾಡುವಂಥ ಶ್ಯಾಂಪೂ ಬಳಸುವುದು ಉತ್ತಮ.

ಹೇರ್ ಡ್ರೈಯರ್ ಬಳಸದಿರಿ

ಕೆಲವರು ಕೂದಲು ಬೇಗ ಒಣಗಬೇಕೆಂಬ ತರಾತುರಿಗೆ ಹೇರ್ ಡ್ರೈಯರ್ ಬಳಸುತ್ತಾರೆ. ಆದರೆ, ಬೇಸಿಗೆಯಲ್ಲಿ ಹೇರ್ ಡ್ರೈಯರ್ ಬಳಸದಿರುವುದೇ ಕ್ಷೇಮಕರ ಎನ್ನುತ್ತಾರೆ ಕೂದಲ ಆರೋಗ್ಯ ತಜ್ಞರು. ಮೊದಲೇ ಒಣಗಿ, ನೈಸರ್ಗಿಕ ಎಣ್ಣೆಯಂಶ ಕಡಿಮೆಯಾದ ಕೂದಲನ್ನು ಶಾಖಕ್ಕೆ ಒಡ್ಡುವುದರಿಂದ ಕೂದಲು ಮತ್ತಷ್ಟು ಒಣಗಿ, ಮುರುಟಿದಂತಾಗುತ್ತದೆ. ಅಂತೆಯೇ ಬ್ಲೋ ಡ್ರೈಯರ್, ಕರ್ಲಿಂಗ್ ಮಾಡುವಂಥದ್ದನ್ನೂ ತಪ್ಪಿಸಿ.

ನೇರ ಸೂರ್ಯ ಬೆಳಕಿಗೆ ಒಡ್ಡದಿರಿ

ಬೇಸಿಗೆಯಲ್ಲಿ ಹೊರಗೆ ಹೋಗಲೇಬೇಕಾದ ಅನಿವಾರ್ಯತೆ ಇದ್ದಾಗ ಆದಷ್ಟು ತಲೆಯನ್ನು ಕಾಟನ್ ಬಟ್ಟೆಯಿಂದ ಮುಚ್ಚಿಕೊಳ್ಳುವುದು ಉತ್ತಮ. ಇಲ್ಲವೇ ಟೋಪಿಯನ್ನು ಬಳಸಬಹುದು. ಮುಖ್ಯವಾಗಿ ಬಿರು ಬಿಸಿಲಿನಲ್ಲಿ ಅಲ್ಟ್ರಾವೈಲೆಟ್ ಕಿರಣಗಳ ಪ್ರಭಾವ ಪ್ರಖರವಾಗಿರುವುದರಿಂದ ಕೂದಲಿನ ನೈಸರ್ಗಿಕ ಬಣ್ಣಕ್ಕೂ ಧಕ್ಕೆಯಾಗಬಹುದು.

ಪೌಷ್ಟಿಕಾಂಶ ಆಹಾರ ಸೇವಿಸಿ

ಬೇಸಿಗೆಯಲ್ಲಿ ದೇಹವಷ್ಟೇ ನಿರ್ಜಲೀಕರಣವಾಗುವುದಿಲ್ಲ. ಕೂದಲೂ ಕೂಡಾ ನಿರ್ಜಲೀಕರಣದ ಸ್ಥಿತಿ ಎದುರಿಸುತ್ತದೆ. ಹಾಗಾಗಿ, ನಿಮ್ಮ ದೇಹವನ್ನು ಸುಸ್ಥಿತಿಯಲ್ಲಿಡುವಂಥ ಆಹಾರ ಸೇವನೆ ಅಗತ್ಯ. ಹೆಚ್ಚು ನೀರು ಸೇವನೆ, ಒಮೆಗಾ–3 ಕೊಬ್ಬಿನಾಂಶ, ಕಬ್ಬಿಣ, ಸತುವಿನ ಅಂಶಗಳುಳ್ಳ ಆಹಾರ ಸೇವಿಸುವುದು ಉತ್ತಮ. ಇದು ದೇಹದ ಆರೋಗ್ಯವಷ್ಟೇ ಅಲ್ಲ, ಕೂದಲ ಆರೋಗ್ಯಕ್ಕೂ ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.