ಅವಳಿಗೆ ಮಲಗಲು ಅದೇ ಹಾಸಿಗೆಯೇ ಆಗಬೇಕು. ಆ ದಿಂಬಿನ ಮೇಲೆ ಹಾಯಾಗಿ ಮೈಚಾಚಿದರಷ್ಟೇ ಗಾಢ ನಿದ್ದೆ ಬರುವುದು. ಆದರೆ ಅಜ್ಜನಿಗೆ ಅವಳು ತಮ್ಮ ಹಾಸಿಗೆಯ ಮೇಲೆ ಹತ್ತಿದ್ದು ಕಂಡರೆ ಕಡುಕೋಪ. ಅವಳು ಆ ಮನೆಯ ಎಲ್ಲರ ಮುದ್ದಿನ ಬೆಕ್ಕು ಪಲ್ಲು. ಅಜ್ಜನಿಗೆ ಮಾತ್ರ ಅದನ್ನು ಕಂಡರೆ ಆಗದು. ಆದರೂ ಅದು ರಾತ್ರಿ ಮಲಗುವುದು ಅವರ ಹಾಸಿಗೆಯ ಮೇಲೆಯೇ. ಅವರ ಹಿಂದೆ–ಮುಂದೆ ಸುತ್ತಿ ಮಾಲಿಷ್ ಮಾಡಿಸಿಕೊಂಡಾಗಲೇ ಅದಕ್ಕೆ ಸಮಾಧಾನ.
ಅವರ ಮನೆಯ ನಾಯಿ ಟೈಗರ್. ಅದು ಮನೆಯವರು ಯಾರು ಕಂಡರೂ ಅವರ ಮುಂದೆ ಬೆನ್ನು ಚಾಚಿ ಮಲಗುವುದು. ಅವರು ಬೆನ್ನು ತಡವಿ ಮುದ್ದು ಮಾಡುವವರೆಗೂ ಅದು ಅಲ್ಲಿಂದ ಕದಲುವುದಿಲ್ಲ. ಅದೇ ಪಕ್ಕದ ಮನೆಯ ಶ್ವಾನಕ್ಕೆ ಮಾವಿನ ಹಣ್ಣು ಎಂದರೆ ಬಲು ಇಷ್ಟ. ಬೆಂಗಳೂರಿನ ಮನೆಯೊಂದರಲ್ಲಿರುವ ನಾಯಿಯ ಹೆಸರು ರಾಕಿ. ಮನೆಯವರ ಕೈಯಿಂದ ತರಕಾರಿ ಏನಾದರೂ ನೆಲಕ್ಕೆ ಬಿತ್ತೆಂದರೆ ಅದು ಸೀದಾ ಅದರ ಹೊಟ್ಟೆಗೇ. ಅದೇ ತರಕಾರಿಯನ್ನು ಕಾಗದದ ಮೇಲೆ ಇಟ್ಟು ಕೊಟ್ಟರೆ ಅದನ್ನು ಅದು ಮುಟ್ಟದು.
ಕುಂದಾಪುರದ ಮನೆಯೊಂದರಲ್ಲಿ ಇದ್ದ ಹಸು ಭವಿಯ ಸ್ಪೆಷಾಲಿಟಿ ಏನೆಂದರೆ ಅದು ಸಮಯ ಸಮಯಕ್ಕೆ ಸರಿಯಾಗಿ ಮನೆಯವರನ್ನು ಕೂಗಿ ಕರೆಯುವುದು. ಬೆಳಿಗ್ಗೆ ಹಾಲು ಕರೆಯಲು, ಹುಲ್ಲು ಹಾಕಲು, ಕೊಟ್ಟಿಗೆಯಿಂದ ಹೊರಗೆ ಕರೆದೊಯ್ದು ಕಟ್ಟಿ ಎಂದು, ಪಶುಆಹಾರ ನೀಡುವ ಸಮಯವಾಯಿತು... ಹೀಗೆ ನಿತ್ಯದ ಕಾಯಕಕ್ಕಾಗಿ ಮನೆಯವರು ಗಡಿಯಾರ ನೋಡುವ ಕೆಲಸವೇ ಇಲ್ಲ. ಕೊಟ್ಟಿಗೆಯಿಂದ ಭವಿಯ ಹೂಂಕಾರ ಬಂತೆಂದರೆ ಕೆಲಸಕ್ಕೆ ಸಿದ್ಧರಾಗಿ ಎಂದೇ ಅರ್ಥ.
ಹೀಗೆ ನಾಯಿ–ಬೆಕ್ಕು–ಹಸು ಸಾಕಿರುವ ಯಾರನ್ನೇ ಕೇಳಿದರೂ ಇಂಥ ಹಲವು ಗಮ್ಮತ್ತಿನ ಘಟನೆಗಳನ್ನು, ತಮ್ಮ ಸಾಕುಪ್ರಾಣಿಗಳ ವೈಶಿಷ್ಟ್ಯಗಳನ್ನು ಹೇಳಿಕೊಂಡು ಖುಷಿ ಪಡುತ್ತಾರೆ. ಪ್ರಾಣಿಗಳು ಅವರ ಜೀವನೋತ್ಸಾಹವನ್ನು ಹೆಚ್ಚಿಸಿರುವುದು ಅವರ ಮಾತಿನಲ್ಲೇ ಅರಿವಾಗುತ್ತದೆ. ಹಳ್ಳಿಗಳಲ್ಲಿ ದನ ಸಾಕಿರುವವರು ಮನೆಗೆ ಎಂದೂ ಬೀಗ ಹಾಕುವುದಿಲ್ಲ. ಅವುಗಳಿಗಾಗಿ ಮನೆಯಲ್ಲಿ ಯಾರಾದರೂ ಇರಬೇಕು ಅಥವಾ ಅವುಗಳನ್ನು ನೋಡಿಕೊಳ್ಳಲು ಯಾರನ್ನಾದರೂ ನೇಮಿಸಿಯೇ ಹೊರ ಹೊರಡಬೇಕು. ಸಾಕುಪ್ರಾಣಿಗಳು ಹೆಚ್ಚಾಗಿ ಮನೆಯ ಸದಸ್ಯರಷ್ಟೇ ಮುಖ್ಯವಾಗಿರುತ್ತವೆ. ಅವುಗಳೊಂದಿಗಿನ ಒಡನಾಟ ಅವುಗಳ ಮಾಲೀಕರನ್ನು ಸ್ನೇಹಮಯಿಯನ್ನಾಗಿ ಮಾಡಿರುತ್ತದೆ.
ಮನೆಯಲ್ಲಿ ಯಾರೂ ಇಲ್ಲದಾಗಲೂ ಸಾಕುಪ್ರಾಣಿಗಳೊಂದಿಗೆ ಮಾತನಾಡುತ್ತ ಸಮಯ ಕಳೆಯುವ ಎಷ್ಟೋ ಜನ ಇದ್ದಾರೆ. ಅವುಗಳೊಂದಿಗಿನ ಒಡನಾಟವೇ ಮನಸ್ಸಿಗೆ ನೆಮ್ಮದಿ ತರುತ್ತದೆ. ತುಂಬಾ ಬೇಸರದಲ್ಲಿದ್ದಾಗ ಎದುರಿಗೆ ಬೆಕ್ಕಿನ ಮರಿಗಳ ಚಿನ್ನಾಟ, ನಾಯಿಯ ತುಂಟಾಟ ಕಂಡು ಬಂದರೆ ತಕ್ಷಣ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಹೀಗಾಗಿಯೇ ಮಕ್ಕಳಿಗೂ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಮಕ್ಕಳ ಕಾರ್ಟೂನ್‌ಗಳಲ್ಲೂ ಬೆಕ್ಕು, ನಾಯಿಗಳ ಕಾರುಬಾರೇ ಜಾಸ್ತಿ.
ಪ್ರಾಣಿಗಳು ಮಾನವನಿಗೆ ರಕ್ಷಣೆ ಮತ್ತು ಸೇವೆ ನೀಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರಾಣಿಗಳು ಮಾತನಾಡದಿದ್ದರೂ ಮನುಷ್ಯನಿಗೆ ಭಾವನಾತ್ಮಕ ಬೆಂಬಲ ನೀಡುವುದನ್ನು ಕಂಡುಕೊಳ್ಳಲಾಗಿದೆ. ಒಂಟಿತನದಿಂದ ಉಂಟಾಗುವ ಖಿನ್ನತೆಯನ್ನು ಹೋಗಲಾಡಿಸಲೂ ಸಾಕುಪ್ರಾಣಿಗಳು ಔಷಧವಾಗಬಲ್ಲವು ಎಂಬುದನ್ನು ಸಂಶೋಧನೆಗಳು ಸಾಬೀತು ಮಾಡಿವೆ. 2003ರಲ್ಲಿ ಜೆ.ಎಸ್.ಜೆ ಒಡೆಂಡಲ್ ಅವರು ನಡೆಸಿದ ಅಧ್ಯಯನದಲ್ಲಿ ಸಾಕುಪ್ರಾಣಿಗಳೊಂದಿಗೆ ಇರುವ ಮಾನವನಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುವುದು ಕಂಡುಬಂತು. ಸಂತಸ, ಆತ್ಮೀಯತೆ, ನೆಮ್ಮದಿ ಉಂಟಾಗಲು ಈ ಹಾರ್ಮೋನ್ ಕಾರಣ ಎಂದು ಅವರ ಈ ಅಧ್ಯಯನ ತೋರಿಸಿತು.
ಶೇ 68ರಷ್ಟು ಅಮೆರಿಕನ್ನರು ಪ್ರಾಣಿಗಳನ್ನು ಸಾಕುತ್ತಾರೆ. ಇವುಗಳಲ್ಲಿ ನಾಯಿ ಹಾಗೂ ಬೆಕ್ಕುಗಳು ನೆಚ್ಚಿನವು ಎಂಬ ಸಂಗತಿ ಅಮೆರಿಕನ್ ಪೆಟ್ ಪ್ರಾಡಕ್ಟ್ಸ್ ಅಸೋಸಿಯೇಷನ್ ನಡೆಸಿದ ಅಮೆರಿಕ ರಾಷ್ಟ್ರೀಯ ಸಾಕುಪ್ರಾಣಿಗಳ ಮಾಲೀಕರ ಸರ್ವೆಯಲ್ಲಿ ಕಂಡುಬಂದಿದೆ. ಸ್ಟಾಟಿಸ್ಟಾ ಡಾಟ್ ಕಾಮ್ ಪ್ರಕಾರ ಭಾರತದಲ್ಲಿ 2019ರಲ್ಲಿ 1.95 ಕೋಟಿ ಸಾಕುನಾಯಿಗಳು, 18.4 ಲಕ್ಷ ಬೆಕ್ಕುಗಳು ಇದ್ದವು.
ಮಾನವ ಮತ್ತು ಪ್ರಾಣಿಗಳ ಒಡನಾಟ 15,000 ವರ್ಷಗಳಿಂದ ಇದೆ ಎನ್ನಲಾಗಿದೆ. ಬೋರಿಸ್ ಲೆವಿನ್‌ಸನ್ ಎಂಬಾತ ಮಾನವ ಹಾಗೂ ನಾಯಿಗಳ ಭಾವನಾತ್ಮಕ ಒಡನಾಟವನ್ನು ಪ್ರಥಮ ಬಾರಿಗೆ ಗುರುತಿಸಿದ. ಪೆಟ್ ಥೆರಪಿಯ ಪ್ರಯೋಜನಗಳನ್ನು ವಿವರಿಸಿದ. ಮುಂದೆ ಸ್ಯಾಮ್ ಹಾಗೂ ಎಲಿಜಬೆತ್ ಕೊರ್ಸನ್ ಈ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ನಡೆಸಿದರು. 1980ರಲ್ಲಿ ಲಿಯೊ ಕೆ. ಬಸ್ಟಡ್ ‘ಹ್ಯೂಮನ್ ಅನಿಮಲ್ ಬಾಂಡ್’ ಎಂಬ ಶಬ್ದವನ್ನು ಬಳಕೆಗೆ ತಂದರು.
ಮಾನವ ಹಾಗೂ ಸಾಕುಪ್ರಾಣಿಗಳ ಭಾವನಾತ್ಮಕ ಸಂಬಂಧಗಳ ಮೇಲೆಯೇ ನೂರಾರು ಚಲನಚಿತ್ರಗಳೂ ನಿರ್ಮಾಣವಾಗಿ ಜನರ ಮನಸ್ಸಿನಲ್ಲಿ ಅಚ್ಚೊತ್ತಿವೆ. ಅವುಗಳಲ್ಲಿ ಪ್ರಮುಖವಾದವು: ಅಂಬೆರ್ಟೊ ಡಿ (1952), ಓಲ್ಡ್ ಯೆಲ್ಲರ್ (1957), ದಿ ಜಂಗಲ್ ಬುಕ್ (1967), ಕೆಸ್ (1969), ಡುಮಾ (2005), ಎಯ್ಟ್ ಬಿಲೊ (2006), ಹಾಚಿ: ಎ ಡಾಗ್ಸ್ ಟೇಲ್ (2009), ವಾರ್ ಹಾರ್ಸ್ (2011), ಕೆಡಿ (2016), ಎ ಸ್ಟ್ರೀಟ್ ಕ್ಯಾಟ್ ನೇಮ್ಡ್ ಬಾಬ್ (2016).
ಕನ್ನಡ ಸಿನಿಮಾಗಳಲ್ಲೂ ಪ್ರಾಣಿಪ್ರೀತಿಗೆ ಅನೇಕ ಉದಾಹರಣೆಗಳಿವೆ. ‘ರಾಮ ಲಕ್ಷ್ಮಣ’ ಸಿನಿಮಾದಲ್ಲಿ ‘ಹೇಳಿದ್ದು ಸುಳ್ಳಾಗಬಹುದು... ನೋಡಿದ್ದು ಸುಳ್ಳಾಗಬಹುದು’ ನೀತಿಪಾಠದ ಹಾಡಿನಲ್ಲಿ ಹಾವು–ಮುಂಗುಸಿ ಎರಡೂ ಇದ್ದವು. ‘ನಾನು ಮತ್ತು ಗುಂಡ’ ಎಂಬ ಭಾವನಾತ್ಮಕ ಸಿನಿಮಾ ಇತ್ತೀಚೆಗೆ ಜನಮನ ಗೆದ್ದಿತ್ತು. ‘ಪೊಲೀಸ್ ಡಾಗ್’ ಹೆಸರಿನ ಸಾಹಸಪ್ರಧಾನ ಚಿತ್ರವೂ ಬಂದಿತ್ತು. ‘ಹಾಲಿವುಡ್’ ಸಿನಿಮಾದಲ್ಲಿ ಉಪೇಂದ್ರ ಕಾಲೆಳೆಯಲು ಕೋತಿ ಬಳಕೆಯಾಗಿತ್ತು, ಅಂಬರೀಷ್ ಅಭಿನಯದ ‘ಮೃಗಾಲಯ’ ಕಾಡುಪ್ರಾಣಿಗಳ ಇನ್ನೊಂದು ಜಗತ್ತನ್ನೇ ಅನಾವರಣಗೊಳಿಸಿತ್ತು.
ಹಿಂದಿಯಲ್ಲೂ ಹಾಥಿ ಮೇರೇ ಸಾಥಿ (1971), ನಾಗಿನ್ (1976), ತೇರಿ ಮೆಹರ್‌ಬಾನಿಯಾ (1985), ಪರಿವಾರ್ (1987), ಮೈನೆ ಪ್ಯಾರ್ ಕಿಯಾ (1989), ಆಂಖೇ (1993), ಹಮ್ ಆಪ್ ಕೇ ಹೈ ಕೌನ್ (1994), ಚಿಲ್ಲರ್ ಪಾರ್ಟಿ (2011), ಎಂಟರ್‌ಟೈನ್‌ಮೆಂಟ್ (2014), ದಿಲ್ ಧಡಕ್‌ನೇ ದೋ (2015) ಮುಂತಾದ ಚಲನಚಿತ್ರಗಳಲ್ಲಿ ನಾಯಿ, ಮಂಗ, ಆನೆ ಮುಂತಾದ ಪ್ರಾಣಿಗಳೊಂದಿಗಿನ ಒಡನಾಟ ಪ್ರಮುಖ ಪಾತ್ರ ವಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.