ಹುಟ್ಟಿನಿಂದ ಸಾವಿನವರೆಗೆ ಸತತವಾಗಿ ಕಾರ್ಯನಿರತವಾಗಿರುವ ನಮ್ಮ ಮಿದುಳಿನ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಅತಿ ಅವಶ್ಯಕ. ತಲೆಯ ಗಾಯದ ಪ್ರಮುಖ ಕಾರಣಗಳಲ್ಲಿ ಒಂದು ರಸ್ತೆ ಅಪಘಾತ. ರಸ್ತೆ ಅಪಘಾತಗಳಲ್ಲಿ ಬಲಿಪಶುಗಳಾಗುವವರಲ್ಲಿ ಮುಖ್ಯವಾಗಿ ಪಾದಚಾರಿಗಳು, ದ್ವಿಚಕ್ರ ವಾಹನಸವಾರರು, ಹಿಂಬದಿ ಸವಾರರು, ಸೈಕಲ್ ಚಲಾಯಿಸುವವರು. ‘ಟ್ರಾಮಾಟಿಕ್ ಬ್ರೈನ್ ಇಂಜುರಿ’ ಎಂದು ಕರೆಯಲಾಗುವ ಮಿದುಳಿನ ಆಘಾತಕಾರಿ ಗಾಯವು ಪ್ರಪಂಚದಲ್ಲಿ ಬಹಳಷ್ಟು ಯುವಜನರ ಸಾವಿಗೂ ಮುಖ್ಯ ಕಾರಣವಾಗಿದೆ.
ಭಾರತವೊಂದರಲ್ಲೇ ತಲೆ ಗಾಯದಿಂದ ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. 1.5 ಕೋಟಿಯಷ್ಟು ಜನರು ಆಸ್ಪತ್ರೆಗೆ ದಾಖಲಾಗುತ್ತಾರೆ. ಇದರಲ್ಲಿ ಬಹಳಷ್ಟು ಜನರು ಕುಟುಂಬದ ಆಧಾರ ಸ್ತಂಭವಾಗಿರುವ ಯುವಕರೇ ಹೆಚ್ಚಾಗಿರುವುದು ಆಘಾತಕಾರಿ ಸಂಗತಿ. ಇನ್ನು ತಲೆಗಾಯದಿಂದ ಬದುಕುಳಿದವರು ದೈಹಿಕ ಅಸಮರ್ಥತೆ, ಅರಿವು, ಸ್ಮರಣೆ ಹಾಗೂ ಮಾತಿನ ತೊಂದರೆಯಿಂದ ಬಳಲುವ ಸಾಧ್ಯತೆಯೂ ಇದೆ.
ತಲೆಯ ಅಂಗರಚನಾ ಶಾಸ್ತ್ರವನ್ನು ನೋಡಿದರೆ ಮಿದುಳನ್ನು ದಪ್ಪವಾದ ತಲೆಬುರುಡೆಯಲ್ಲಿ ಚೆನ್ನಾಗಿ ರಕ್ಷಿಸಲಾಗಿದೆ. ತಲೆಬುರುಡೆಯಡಿ ಡ್ಯೂರಾ ಮ್ಯಾಟರ್, ಅರೆಕ್ನಾಯ್ಡ್ ಮ್ಯಾಟರ್ ಹಾಗೂ ಪೈಯ ಮ್ಯಾಟರ್ ಎನ್ನುವ ಮೂರು ಪದರುಗಳ ಹೊದಿಕೆಯಿದ್ದು ಇವು ತಾಯಿಯಂತೆ ಮಿದುಳನ್ನು ರಕ್ಷಿಸುತ್ತವೆ. ಹೀಗಾಗಿ ಮಿದುಳಿಗೆ ಗಾಯವಾಗಬೇಕಿದ್ದಲ್ಲಿ ತಲೆಗೆ ತೀವ್ರ ಪೆಟ್ಟು ಬೀಳಬೇಕಾಗುತ್ತದೆ. ತಲೆಗೆ ಬಲವಾದ ಪೆಟ್ಟು ಬಿದ್ದಾಗ ಮಿದುಳಿನಲ್ಲಿ ವಿವಿಧ ಘಟನೆಗಳ ಪ್ರಕ್ರಿಯೆ ನಡೆದು ಹೋಗುತ್ತವೆ.
ಮಿದುಳಿನಲ್ಲಿ ಎರಡು ವಿಧದ ಗಾಯಗಳಾಗುತ್ತವೆ. ಪ್ರಾಥಮಿಕ ಗಾಯದ ಪ್ರಮಾಣಕ್ಕೆ ಅನುಗುಣವಾಗಿ ಮಿದುಳಿನ ಜೀವಕೋಶಗಳಿಗೆ ನೇರವಾದ ಪೆಟ್ಟುಬಿದ್ದು, ಕೆಲವೊಮ್ಮೆ ಸರಿಪಡಿಸಲಾಗದ ಗಾಯವಾಗಬಹುದು. ಎರಡನೇ ವಿಧದಲ್ಲಿ ತಲೆಯ ಜೀವಕೋಶಗಳಿಗೆ ಊತವಾಗಿ ಆಮ್ಲಜನಕದ ಪೂರೈಕೆ ಕಡಿಮೆ ಆಗಿ ವಿವಿಧ ತೊಂದರೆಗಳು ಉಂಟಾಗಬಹುದು. ಎಲ್ಲಾ ತಲೆಗಾಯದ ನಿರ್ವಹಣೆಯ ತಂತ್ರಗಳು ಈ ಎರಡನೇ ವಿಧದ ಗಾಯವನ್ನು ಕಡಿಮೆ ಮಾಡುವ ಕಡೆಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.
‘ಗೋಲ್ಡನ್ ಅವರ್’ ನಲ್ಲಿ ಕರೆತನ್ನಿರಿ:
ಅಪಘಾತದ ನಂತರದ ಮೊದಲ ಒಂದರಿಂದ ಎರಡು ಗಂಟೆಗಳನ್ನು ‘ಗೋಲ್ಡನ್ ಅವರ್’ ಎನ್ನಲಾಗುತ್ತದೆ. ಇದು ರೋಗಿಯ ಮೇಲಿನ ದೀರ್ಘಕಾಲೀನ ಪರಿಣಾಮವನ್ನು ನಿರ್ಧರಿಸುವ ನಿರ್ಣಾಯಕ ಘಟ್ಟ. ಹೀಗಾಗಿ ಹೆಚ್ಚು ಸಮಯ ವ್ಯರ್ಥವಾಗದಂತೆ ತಲೆಗೆ ಏಟು ಬಿದ್ದ ರೋಗಿಯನ್ನು ತುರ್ತಾಗಿ ನರಶಸ್ತ್ರಚಿಕಿತ್ಸಕರಿರುವ ಆಸ್ಪತ್ರೆಗೆ ದಾಖಲು ಮಾಡುವುದು ಅತಿ ಅವಶ್ಯಕ. ಅಪಘಾತವಲಯದಲ್ಲಿ ರೋಗಿಗೆ ಉಸಿರಾಟ ಸರಾಗವಾಗುವಂತೆ ಗಾಳಿಬರುವಂತೆ ನೋಡಿಕೊಳ್ಳಬೇಕು. ಇದು ತೀವ್ರತರ ತಲೆಗಾಯವಾದಲ್ಲಿ ಆಗುವ ಅಸ್ವಸ್ಥತೆ ಹಾಗೂ ಸಾವಿನ ಪ್ರಮಾಣವನ್ನು ತಗ್ಗಿಸುತ್ತದೆ.
ಬಾಯಿ ಮತ್ತು ಮೂಗಿನಿಂದ ಉಸಿರಾಡುವಂತೆ ಮಾಡುವುದು, ಬ್ಯಾಗ್ ಮಾಸ್ಕ್ ವೆಂಟಿಲೇಷನ್, ಹೃದಯ ಹಾಗೂ ಶ್ವಾಸಕೋಶದ ಪ್ರಚೋದನೆ, ದೇಹದ ಗಾಯದಿಂದ ರಕ್ತ ಹರಿದು ಹೋಗುವುದನ್ನು ನಿಯಂತ್ರಿಸುವುದು ಮುಖ್ಯ. ರೋಗಿಯನ್ನು ಅಪಘಾತ ವಲಯದಿಂದ ಆಸ್ಪತ್ರೆಗೆ ಸ್ಥಳಾಂತರಿಸುವಾಗ ಮೂಳೆ ಮುರಿತ ಹಾಗೂ ಬೆನ್ನು ಹುರಿಯ ಆರೈಕೆ ಬಹುಮುಖ್ಯವಾಗಿದ್ದು ರೋಗಿಗೆ ಕುತ್ತಿಗೆ ಮತ್ತು ಬೆನ್ನು ಮೂಳೆಗಳ ಪಟ್ಟಿ ಹಾಕಿ ಸ್ಥಳಾoತರಿಸಬೇಕು. ಸಂಚಾರ ನಿಯಂತ್ರಿಸುವ ಪೊಲೀಸರಿಗೆ ಹಾಗೂ ನಿರ್ವಾಹಕರಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಸಂಪೂರ್ಣ ತರಬೇತಿ ನೀಡಿರಬೇಕು. ಹೀಗೆ ಮಾಡಿದರೆ ರೋಗಿಯ ಜೀವ ಉಳಿಸುವುದಲ್ಲದೆ ಗಾಯದ ತೀವ್ರತೆಯನ್ನು ಗಣನೀಯವಾಗಿ ತಗ್ಗಿಸಬಹುದು. ಆದ್ದರಿಂದ ಪ್ಯಾರಾಮೆಡಿಕಲ್ ಸಿಬ್ಬಂದಿ, ಆಂಬುಲೆನ್ಸ್ ಸಿಬ್ಬಂದಿ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಇಂಥ ಜೀವಾಧಾರ ಸೇವೆಗಳ ತರಬೇತಿ ನೀಡುವುದು ಬಲು ಅವಶ್ಯಕ.
ತಲೆಗೆ ಗಾಯವಾದ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್‌ನಲ್ಲಿ ಸೂಕ್ತವಾದ ಆರೈಕೆ ಮಾಡಬೇಕು ಹಾಗೂ ನೇರವಾಗಿ ‘ನ್ಯೂರೋ ಟ್ರಾಮಾ’ ಆಸ್ಪತ್ರೆಗೆ ವರ್ಗಾಯಿಸಬೇಕು. ಇದು ರೋಗಿಯ ಜೀವ ಉಳಿಸುವುದರಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಮೆದುಳಿನ ಗಾಯ ಗುರುತಿಸುವ ‘ಟ್ರಾಮಾ ಸೆಂಟರ್’ ಹಾಗೂ ಆಂಬುಲೆನ್ಸ್‌ಗಳಲ್ಲಿ ತರಬೇತಿ ಪಡೆದ ಸಿಬ್ಬಂದಿಯೊಂದಿಗೆ ಸಂವಹನ ನಡೆಸುವುದು ಬಹಳ ಅವಶ್ಯಕ. ಇದರಿಂದ ಅನಗತ್ಯವಾಗಿ ಸ್ಥಳೀಯ ಆಸ್ಪತ್ರೆಗಳಿಗೆ ರೋಗಿಯನ್ನು ಸಾಗಿಸುವುದು ಮತ್ತು ಅದಕ್ಕೆ ತಾಗುವ ಅಮೂಲ್ಯ ಸಮಯವನ್ನು ಉಳಿಸುತ್ತದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ
‘ನ್ಯೂರೋ ಟ್ರಾಮಾ’ ಆಸ್ಪತ್ರೆಯಲ್ಲಿ ನರಶಸ್ತ್ರಚಿಕಿತ್ಸಕರು (ನ್ಯೂರೊ ಸರ್ಜನ್) ಹಾಗೂ ನ್ಯೂರೊಇಂಟೆನ್ಸಿವಿಸ್ಟ್ ಗಳ ತಂಡದೊಂದಿಗೆ ತುರ್ತಾಗಿ ಹಾಗೂ ಸರಿಯಾಗಿ ಚಿಕಿತ್ಸೆ ಆರಂಭಿಸಬಹುದು. ರೋಗಿಯ ಸಮಸ್ಯೆಯನ್ನು ಆಧರಿಸಿ ನಿಖರವಾದ ಚಿಕಿತ್ಸೆಯನ್ನು ಸರಿಯಾದ ಸಮಯದಲ್ಲಿ ಕೊಟ್ಟಲ್ಲಿ ಸಾಕಷ್ಟು ಜೀವಗಳನ್ನು ಉಳಿಸಬಹುದು.
ಪ್ರಸ್ತುತ ನಮ್ಮ ದೇಶವು ನುರಿತ ಸಿಬ್ಬಂದಿ ಹಾಗೂ ಅತ್ಯುತ್ತಮ ಮೂಲಸೌಕರ್ಯಗಳನ್ನು ಹೊಂದಿರುವ ಕೆಲವೇ ಕೆಲವು ಟ್ರಾಮಾ ಸೆಂಟರ್‌ಗಳನ್ನು ಹೊಂದಿದೆ. ಆದಾಗ್ಯೂ ಹಿಂದಿನ ದಶಕಗಳೇ ಹೋಲಿಸಿದರೆ ಈಗ ನುರಿತ ತಜ್ಞರು ಹೆಚ್ಚು ಲಭ್ಯವಿದ್ದು ರೋಗಿಗಳ ಮರಣ ಪ್ರಮಾಣವನ್ನು ಶೇಕಡಾ 50ರಷ್ಟು ತಗ್ಗಿಸಲು ಕಾರಣವಾಗಿದೆ.
ಮಿದುಳಿನ ಗಾಯ ಜೀವಕ್ಕೆ ಅಪಾಯಕಾರಿ. ದೇಹ ಮತ್ತು ಮನಸ್ಸಿನ ಶಾಶ್ವತ ದುರ್ಬಲತೆಗೆ ಕಾರಣವಾಗುತ್ತದೆ. ಮಿದುಳಿನ ಗಾಯದಿಂದ ಪ್ರತಿವರ್ಷ 1.50 ಲಕ್ಷ ರೋಗಿಗಳಿಗೆ ಪುನರ್ವಸತಿ ಕಲ್ಪಿಸುವ ಅಗತ್ಯವಿರುತ್ತದೆ. ಅರಿವು, ದೃಷ್ಟಿ, ಮಾತು ಮತ್ತು ಭಾಷಾ ನಡುವಳಿಕೆಗಳ ಬಗ್ಗೆ ಸರಿಯಾದ ಮೌಲ್ಯಮಾಪನ ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ಇದರಲ್ಲಿ ನಮ್ಮ ನರರೋಗ ತಜ್ಞರ ಪಾತ್ರ ನಿರ್ಣಾಯಕ. ಭೌಗೋಳಿಕವಾಗಿ ಅಪಘಾತವಲಯಗಳನ್ನಾಧರಿಸಿ ಹೆಚ್ಚೆಚ್ಚು ‘ನ್ಯೂರೋ ಟ್ರಾಮಾ ಸೆಂಟರ್ ಗಳನ್ನು ಸ್ಥಾಪಿಸುವುದು ಅಗತ್ಯ. ಜೊತೆಗೆ ವೈಜ್ಞಾನಿಕವಾಗಿ ದೃಢೀಕರಿಸಲಾದ ತಲೆ ಗಾಯದ ಚಿಕಿತ್ಸಾ ವಿಧಾನಗಳ ಮಾರ್ಗಸೂಚಿಗಳನ್ನು ಪಾಲಿಸಿದಲ್ಲಿ ಸಾಕಷ್ಟು ಜೀವಗಳನ್ನು ಉಳಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.