
ಆರೋಗ್ಯದ ಕುರಿತಾದ ಸಲಹೆಗಳನ್ನು ನೀಡಲು ನಮಗೆ ವೈದ್ಯರೇ ಆಗಬೇಕೆಂದಿಲ್ಲ! ನಮ್ಮ ದೇಶದಲ್ಲಿ ಹಿಂದಿನ ಕಾಲದಿಂದಲೂ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಸಲಹೆಗಳನ್ನು ನೀಡುವವರೇ!!. ಮಗುವಿನ ಆರೈಕೆಯೇ ಇರಲಿ, ಅಥವಾ ಬಾಣಂತಿಯ ಊಟೋಪಚಾರವೇ ಇರಲಿ, ಮನೆಯ ಹಿರಿಯರು ತಮ್ಮದೇ ಪಾರಂಪರಿಕ ಅನುಭವದ ಆಧಾರದಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ. ಕುಟುಂಬದ ಹಿರಿಯ ಅಜ್ಜಿಯ ಕೊಡುವ ಮನೆಮದ್ದಿನ ಮೇಲೆ ಜನರಿಗೆ ವೈದ್ಯರ ಔಷಧಕ್ಕಿಂತಲೂ ಹೆಚ್ಚು ನಂಬಿಕೆಯಿತ್ತು. ಭಾರತದಲ್ಲಿ ಮೊದಲಿನಿಂದಲೂ ಕಡಿಮೆಯಿದ್ದ ವೈದ್ಯರ ಸಂಖ್ಯೆ ಮತ್ತು ಆರೋಗ್ಯ ವ್ಯವಸ್ಥೆಗಳು ಗ್ರಾಮೀಣ ಭಾಗದಲ್ಲಿ ಕಡಿಮೆಯಿದ್ದದ್ದು ಕೂಡ ಭಾರತೀಯರ ಈ ನಡವಳಿಕೆಗೆ ಕಾರಣವಾಗಿದ್ದಿರಬಹುದು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸರಾಸರಿ ಇಲ್ಲಿ ನಮ್ಮವರ ಜೀವಿತಾವಧಿ ಮೂವತ್ತಮೂರು ವರ್ಷಗಳಷ್ಟು ಇತ್ತು. ಈ ಪ್ರಮಾಣ ನಮ್ಮಲ್ಲಿದ್ದ ವೈದ್ಯರ ಮತ್ತು ಅರೋಗ್ಯ ವ್ಯವಸ್ಥೆಗಳ ಕೊರತೆಯನ್ನು ಸೂಚಿಸುತ್ತದೆ. ಆರೋಗ್ಯ ವ್ಯವಸ್ಥೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿದ್ದಾಗ ಕುಟುಂಬದ ಹಿರಿಯರ ಸಲಹೆ ಮತ್ತು ಅವರಿವರು ಅಭಿಪ್ರಾಯಗಳಿಗೂ ಮನ್ನಣೆಯನ್ನು ಜನಸಾಮಾನ್ಯರು ನೀಡಬೇಕಾಗಿ ಬರುವುದು ಸಹಜವೇ.
ನಮ್ಮ ದೇಶದ ಈಗಿನ ವಾತಾವರಣವು ಬಹಳಷ್ಟು ಬದಲಾಗಿದೆ. ನಮ್ಮಲ್ಲೀಗ ‘ಎಂಬಿಬಿಎಸ್ ವೈದ್ಯರು’ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೋಬಳಿ ಮಟ್ಟದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರಗಳು ಸ್ಥಾಪನೆಯಾಗಿವೆ; ತರಬೇತಿಯನ್ನು ಹೊಂದಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಪ್ರತಿ ಹಳ್ಳಿಯಲ್ಲಿಯೂ ಇದ್ದಾರೆ. ಮನೆ ಮನೆಗೆ ಹೋಗಿ ಪಲ್ಸ್ ಪೋಲಿಯೊ ಮುಂತಾದ ಲಸಿಕೆಯನ್ನು ನೀಡುವಲ್ಲಿಯ ತನಕ ಆರೋಗ್ಯ ಇಲಾಖೆಯ ಬೇರುಗಳು ಭಾರತದ ಮೂಲೆ ಮೂಲೆಗೆ ತಲುಪಿವೆ. ಸಿಡುಬು, ಪೋಲಿಯೊ ಮುಂತಾದ ಕಾಯಿಲೆಗಳನ್ನು ನಿರ್ಮೂಲನೆ ಮಾಡುವಲ್ಲಿಯ ತನಕ ಭಾರತ ಮುಂದುವರಿದಿದೆ. ಕೇರಳ ಮುಂತಾದ ರಾಜ್ಯಗಳ ಆರೋಗ್ಯದ ಅಂಕಿ–ಅಂಶಗಳು ಮುಂದುವರಿದ ದೇಶಗಳ ಸಾಲಿಗೆ ಸೇರಿದ ಸಣ್ಣ ಸಣ್ಣ ದೇಶಗಳಿಗೆ ಸ್ಪರ್ಧೆ ನೀಡುವಂತಿದೆ. ಭಾರತದಲ್ಲಿ ತಜ್ಞವೈದ್ಯರು ಸುಲಭವಾಗಿ ಜನರಿಗೆ ಸಿಗುತ್ತಾರೆ. ವಿದೇಶದಲ್ಲಿ ಇಂದಿಗೂ ತಜ್ಞವೈದ್ಯರನ್ನು ನೇರವಾಗಿ ಭೇಟಿಯಾಗುವಂತಿಲ್ಲ. ಭಾರತದಲ್ಲಿ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುವ ಕಾರಣ ವೈದ್ಯಕೀಯ ಪ್ರವಾಸೋದ್ಯಮದಲ್ಲೂ ಭಾರತ ಮುಂಚೂಣಿಯಲ್ಲಿದೆ. ವಿದೇಶಿಗರೂ ಭಾರತಕ್ಕೆ ಬಂದು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಾರೆ. ಇಷ್ಟೆಲ್ಲ ಬದಲಾವಣೆಗಳು ಆಗಿವೆ. ಹೀಗಿದ್ದರೂ ಭಾರತೀಯರಲ್ಲಿ ಇಂದಿಗೂ ತಜ್ಞವೈದ್ಯರ ಮಾತುಗಳನ್ನು ಗಂಭೀರವಾಗಿ ಪರಿಗಣಿಸದೆ ಕುಟುಂಬದವರು ಮತ್ತು ನೆಂಟರಿಷ್ಟರು ನೀಡುವ ಸಲಹೆಗಳನ್ನು ಕೇಳುವವರ ಸಂಖ್ಯೆಯೇ ಜಾಸ್ತಿಯಿದೆ.
ನಮ್ಮಲ್ಲಿ ತಲೆನೋವಿನಿಂದ ಹಿಡಿದು ಗಂಭೀರವಾದ ಕ್ಯಾನ್ಸರ್ ಕಾಯಿಲೆಗೂ ಮನೆಮದ್ದನ್ನು ಹೇಳುವವರಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ, ಪಟ್ಟಣ–ನಗರಗಳಲ್ಲೂ ಅಂತಹ ಸಲಹೆಗಳನ್ನು ಪಾಲಿಸುವವರೂ ಇದ್ದಾರೆ. ವೈದ್ಯರು ಪ್ರತಿಯೊಂದು ಕಾಯಿಲೆಯನ್ನು ಹಲವು ಪರೀಕ್ಷೆಗಳ ಮೂಲಕ ಪತ್ತೆ ಹಚ್ಚಿ, ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಹಣ ಮತ್ತು ಸಮಯದ ಖರ್ಚು ಬರುತ್ತದೆ. ಇಂತಹ ಸಂದರ್ಭಗಳಲ್ಲಿ ವಿಚಲಿತರಾಗುವ ಜನರು ಅವರಿವರು ಕೊಡುವ ಸಲಹೆಗಳನ್ನು ಪಾಲಿಸುತ್ತಾರೆ; ಕಾಯಿಲೆ ಗುಣವಾಗಬಹುದೆಂಬ ಭ್ರಮೆಯಲ್ಲೂ ಇರುತ್ತಾರೆ. ವೈದ್ಯರು ಚಿಕಿತ್ಸೆಯನ್ನು ರೋಗಿಗೆ ನೀಡುವ ಸಂದರ್ಭದಲ್ಲಿ ಭಾರತದಂತಹ ದೇಶದಲ್ಲಿ ಇಡೀ ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿರುತ್ತದೆ. ಪಾರ್ಶ್ವವಾಯು ಬಂದ ರೋಗಿಯನ್ನು ನರರೋಗತಜ್ಞರ ಬಳಿಗೆ ಕಳುಹಿಸದೆಯೇ ಎಣ್ಣೆ ಮಸಾಜ್ ಅನ್ನು ಮಾಡಿಸಿದರೆ ಗುಣವಾಗುತ್ತದೆ ಎಂದು ಹೇಳುವ ಆಪ್ತರು ಬಹಳಷ್ಟು ಸಂಖ್ಯೆಯಲ್ಲಿ ನಮಗೆ ಸಿಗುತ್ತಾರೆ.
ಅಸಲಿಗೆ ಪಾರ್ಶ್ವವಾಯು ಕಾಯಿಲೆಯಿಂದ ಪೆಟ್ಟು ತಿಂದ ಮಿದುಳು ತಾನೇ ಸ್ವತಃ ಕ್ರಮೇಣ ಚೇತರಿಸಿಕೊಳ್ಳುವ ಕಾರಣ, ಆ ರೋಗಿಗಳು ಸಹಜವಾಗಿಯೇ ಚೇತರಿಸಿಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ನರರೋಗತಜ್ಞರು ತಮ್ಮ ಚಿಕಿತ್ಸೆಯನ್ನು ನೀಡಿದ ನಂತರ ಕುಟುಂಬದವರು ತಮ್ಮ ಸಂತೃಪ್ತಿಗಾಗಿ ಎಣ್ಣೆ ಮಸಾಜನ್ನು ಮಾಡುವುದಾದರೆ ಮಾಡಲಿ ಎಂಬ ನಿಲುವನ್ನು ತಾಳುವುದು ಸೂಕ್ತ.
ಇತ್ತೀಚಿನ ವರ್ಷಗಳಲ್ಲಿ ಕುಟುಂಬದ ಹಿರಿಯರು ನೀಡುವ ಸಲಹೆಗಳಿಗಿಂತ ಹೆಚ್ಚು ಮಾಹಿತಿ ಮತ್ತು ಸಲಹೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇತರರೇ ನೀಡುತ್ತಿದ್ದಾರೆ. ಅದರಲ್ಲಿ ಹೆಚ್ಚಿನವರು ಆರೋಗ್ಯತಜ್ಞರು ಅಥವಾ ವೈದ್ಯರೇನೂ ಆಗಿರುವುದಿಲ್ಲ. ‘ಒಂದು ತಿಂಗಳಲ್ಲಿ ಹತ್ತು ಕೆ.ಜಿ. ತೂಕವನ್ನು ಇಳಿಸುವುದು ಹೇಗೆ’ – ಎಂಬುದರಿಂದ ಹಿಡಿದು, ‘ನಿಂಬೆಹಣ್ಣಿನ ರಸವನ್ನು ಖಾಲಿಹೊಟ್ಟೆಯಲ್ಲಿ ಕುಡಿದರೆ ಕ್ಯಾನ್ಸರ್ ಮಾಯ’ ಎನ್ನುವಲ್ಲಿಯ ತನಕ ಸಾಮಾಜಿಕ ಜಾಲತಾಣದ ಸ್ವಘೋಷಿತ ‘ತಜ್ಞರು’ ಮಾತನಾಡುತ್ತಿರುತ್ತಾರೆ.
ತಜ್ಞವೈದ್ಯರಿಗೆ ಆಹಾರದ ಬಗ್ಗೆ ತಿಳಿಸಿಕೊಡುವಷ್ಟು ಸಮಯವೇ ಸಿಗುತ್ತಿಲ್ಲ; ಇವರು ಎಲ್ಲರಿಗೂ ಸುಲಭವಾಗಿ ಸಿಗುವಂತೆಯೂ ಇಲ್ಲ. ಹೀಗಾಗಿ ‘ಯಾವ ಆಹಾರ ದೇಹಕ್ಕೆ ಉತ್ತಮ’ ಎಂದು ಆಹಾರತಜ್ಞರಿಗಿಂತಲೂ ಹೆಚ್ಚು ಮಾಹಿತಿಯನ್ನು ಹಂಚುವ ಸಾಮಾಜಿಕ ಜಾಲತಾಣದ ‘ಪ್ರಭಾವಿ’ಗಳಿಗೆ (Influencers) ಹೆಚ್ಚಿನ ಬೇಡಿಕೆ ಇದೆ! ತಜ್ಞರಲ್ಲದ ಇಂಥವರ ಮಾತುಗಳನ್ನು ಗಂಭೀರವಾಗಿ ನಾವು ಸ್ವೀಕರಿಸಿ, ಅದರಂತೆ ನಡೆದುಕೊಂಡರೆ ಅದರಿಂದ ನಮಗೆ ಹಲವು ಸಮಸ್ಯೆಗಳು ಉಂಟಾಗಬಹುದು. ಅವೈಜ್ಞಾನಿಕ ಸಲಹೆಗಳನ್ನು ಪಾಲಿಸಿ ಜೀವಕ್ಕೆ ಗಂಡಾಂತರ ತಂದುಕೊಂಡ ಹಲವರು ನಮ್ಮ ಸುತ್ತಮುತ್ತ ಕಾಣಸಿಗುತ್ತಿರುತ್ತಾರೆ.
ಭಾರತದಂತಹ ದೇಶದಲ್ಲಿ ಈಗ ಗ್ರಾಮೀಣ ಭಾಗದಲ್ಲಿಯೂ ವೈದ್ಯರು ದೊರೆಯುತ್ತಿರುವಾಗ, ನಮ್ಮ ಅನಾರೋಗ್ಯಕ್ಕೆ ವೈದ್ಯರಿಂದ ಸೂಕ್ತ ಸಲಹೆಯನ್ನು ಪಡೆದು, ಅದನ್ನು ಶಿಸ್ತಿನಿಂದ ಪಾಲಿಸುವುದೇ ನಮ್ಮ ಆರೋಗ್ಯದ ಮೊದಲ ಸೂತ್ರವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.