ಪ್ರಾತಿನಿಧಿಕ ಚಿತ್ರ
ಇತ್ತೀಚಿನ ದಿನಗಳಲ್ಲಿ ಅಸಮರ್ಪಕ ಆಹಾರ ಪದ್ಧತಿಯ ಕಾರಣದಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಜನರಿಗೆ ಯಕೃತ್‌ಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಆರೋಗ್ಯಯುತ ಆಹಾರ ಸೇವನೆಯಿಂದ ಯಕೃತ್‌ಗೆ ಹಾನಿಯುಂಟಾಗುವುದನ್ನು ಶೇ 50ರಷ್ಟು ತಡೆಯಬಹುದು ಎನ್ನುತ್ತಾರೆ ವೈದ್ಯರು.
ಭಾರತೀಯ ಯಕೃತ್ ಕಸಿ ಸಂಸ್ಥೆಯ ಅಧ್ಯಕ್ಷ ಡಾ.ಸಂಜೀವ್ ಸೈಗಲ್ ಮಾತನಾಡಿ, ‘ಇಂದಿನಿಂದಲೇ ಸರಿಯಾದ ಆಹಾರ, ಜೀವನಕ್ರಮ ಅಳವಡಿಸಿಕೊಂಡರೆ ಕಳಪೆ ಆಹಾರ, ಆಲ್ಕೋಹಾಲ್, ಸಂಸ್ಕರಿತ ಆಹಾರ ಮತ್ತು ಜಡ ಜೀವನಶೈಲಿಯಿಂದಾಗಿ ಹಾನಿಯಾದ ಯಕೃತ್‌ಅನ್ನು ಸರಿಪಡಿಸಿಕೊಳ್ಳಬಹುದು’ ಎನ್ನುತ್ತಾರೆ.
ಪ್ರತಿ ವರ್ಷ ಏ.19ರಂದು ವಿಶ್ವ ಯಕೃತ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ‘ಆಹಾರವೇ ಔಷಧ’ ಎನ್ನುವ ಸಂದೇಶವನ್ನು ತಜ್ಞ ವೈದ್ಯರು ಸಾರುತ್ತಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.
ಹಲವು ವರ್ಷಗಳಿಂದ ಹಾನಿಗೊಳಗಾಗಿದ್ದರೂ ತಾನಾಗಿಯೇ ಸರಿಪಡಿಸಿಕೊಳ್ಳುವ ಶಕ್ತಿ ಯಕೃತ್‌ಗೆ ಇರುತ್ತದೆ. ಅದು ಸರಿಯಾದ ಜೀವನಶೈಲಿಯಿಂದ ಮಾತ್ರ ಸಾಧ್ಯ. ಆಹಾರದಲ್ಲಿ ತಾಜಾ ಹಣ್ಣುಗಳು, ಹಸಿರು ತರಕಾರಿ, ಧಾನ್ಯಗಳು ಮತ್ತು ಪ್ರೋಟನ್‌ಯುಕ್ತ ಆಹಾರಗಳಿಂದ ಯಕೃತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಡಾ.ಸಂಜೀವ್.
ಕೇವಲ ಆಲ್ಕೋಹಾಲ್ ಸೇವನೆಯಿಂದ ಯಕೃತ್‌ಗೆ ಹಾನಿಯಾಗುತ್ತದೆ ಎನ್ನುವ ಕಾಲ ಈಗಿಲ್ಲ. ಅನಾರೋಗ್ಯಕರ ಆಹಾರ ಸೇವನೆ, ಬೊಜ್ಜು, ದೈಹಿಕ ಚಟುವಟಿಕೆಗಳ ಕೊರತೆಯ ಕಾರಣದಿಂದ ಆಲ್ಕೋಹಾಲ್ ಸೇವಿಸದವರಲ್ಲೂ ಯಕೃತ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.