ADVERTISEMENT

ಕಿರಿಯರಲ್ಲಿ ಹೃದಯಾಘಾತ: ಜೀವನಶೈಲಿ ಬದಲಾಯಿಸಿಕೊಳ್ಳಿ

ಡಾ.ಪ್ರವೀಣ್‌ಕುಮಾರ್‌ ಎ.ವಿ.
Published 13 ಜೂನ್ 2020, 6:03 IST
Last Updated 13 ಜೂನ್ 2020, 6:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೃದಯಾಘಾತ ಎನ್ನುವುದು ನಿಜಕ್ಕೂ ಭಯ ಬೀಳಿಸುವ ವಿಷಯವೇ ಸರಿ. ಕಾರಣ ಇದು ಮಾರಣಾಂತಿಕ ಸಮಸ್ಯೆ. ತಕ್ಷಣ ಚಿಕಿತ್ಸೆ ದೊರೆಯದಿದ್ದಲ್ಲಿ ಶೇ 30 ರಷ್ಟು ಜನ ಕೆಲವು ನಿಮಿಷಗಳಲ್ಲಿ ಹಾಗೂ ಶೇ 16ರಷ್ಟು ಮಂದಿ ಕೆಲವು ಗಂಟೆಗಳಲ್ಲಿ ಸಾವನ್ನಪ್ಪುತ್ತಾರೆ. ತಕ್ಷಣದಲ್ಲಿ ಸೌಲಭ್ಯವಿರುವ ಆಸ್ಪತ್ರೆ ತಲುಪಿದಲ್ಲಿ ಬಹಳಷ್ಟು ರೋಗಿಗಳು ಗುಣಮುಖರಾಗುತ್ತಾರೆ.

ಸಾಮಾನ್ಯವಾಗಿ ಹೃದಯಾಘಾತ 60–70 ವರ್ಷಗಳ ನಂತರ ಆಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಿರಿಯ ವಯಸ್ಸಿನಲ್ಲಿ ಅಂದರೆ 40 ವರ್ಷದ ಕೆಳಗೆ ಇರುವ ವಯಸ್ಕರಲ್ಲಿ ಸಂಭವಿಸುತ್ತಿದೆ. ಶೇ 20 ರಷ್ಟು (ಉದಾ: ಪ್ರತಿ 5 ರೋಗಿಗಳಲ್ಲಿ ಒಬ್ಬರು) ಹೃದಯಾಘಾತ ಕಿರಿಯರಲ್ಲಿ ಸಂಭವಿಸುತ್ತಿದೆ. ಭಾರತ ದೇಶದಲ್ಲಿ ಪಾಶ್ಚಾತ್ಯರಿಗಿಂತ 10 –20 ವರ್ಷ ಮುಂಚೆಯೇ ಹೃದಯಾಘಾತ ಸಂಭವಿಸುತ್ತದೆ. ಇದೊಂದು ಆಘಾತಕಾರಿ ಬೆಳವಣಿಗೆ.

ಹಾಗಾದರೆ ಹೃದಯಾಘಾತವೇನೆಂಬುದನ್ನು ಅವಲೋಕಿಸೋಣ. ಹೃದಯ ಒಂದು ಸದಾ ಮಿಡಿಯುತ್ತಿರುವ ಶರೀರದ ಎಲ್ಲಾ ಅಂಗಾಂಗಗಳಿಗೂ ರಕ್ತ ಸಂಚಲನೆಯನ್ನು ಪೂರೈಸುವ ಸ್ನಾಯು ಅಥವಾ ಮಾಂಸಖಂಡದಿಂದ ಮಾಡಲ್ಪಟ್ಟಿರುವ ಒಂದು ತಳ್ಳುವ ಯಂತ್ರ ಅಥವಾ ಪಂಪ್‌. ಹೃದಯ ಸ್ನಾಯುವಿಗೆ ಮುಖ್ಯವಾಗಿ 3 ರಕ್ತನಾಳಗಳು ಇರುತ್ತವೆ. (ಎಡದಲ್ಲಿ 2 ಹಾಗೂ ಬಲದಲ್ಲಿ 1 ). ಇವುಗಳಿಗೆ ಕೊರೊನರಿ ಆರ್ಟರಿ ಎಂದು ಹೇಳುತ್ತಾರೆ. ಯಾವುದೇ ರಕ್ತನಾಳದಲ್ಲಿ ತಡೆಯುಂಟಾದಾಗ ಆ ಭಾಗದ ಸ್ನಾಯುವಿಗೆ ರಕ್ತಸಂಚಾರ ನಿಲುಗಡೆಯಾಗಿ ಆಮ್ಲಜನಕ ಪೂರೈಕೆಯಾಗುವುದಿಲ್ಲ. ಇದರಿಂದ ಆ ಭಾಗದ ಸ್ನಾಯು ನಿರ್ಜೀವವಾಗುತ್ತದೆ. (necrosis). ಇದನ್ನು ಹೃದಯಾಘಾತ (ಹಾರ್ಟ್‌ ಅಟ್ಯಾಕ್‌) ಎನ್ನುತ್ತಾರೆ.

ADVERTISEMENT

ಹೃದಯಾಘಾತ ಉಂಟಾಗಲು ಕಾರಣಗಳೇನು?

ಇವುಗಳಿಗೆ ಅಪಾಯಕಾರಿ ಅಂಶಗಳು (ರಿಸ್ಕ್‌ ಫ್ಯಾಕ್ಟರ್ಸ್‌) ಎನ್ನುತ್ತಾರೆ. ಮುಖ್ಯವಾಗಿ ಬದಲಾದ ಜೀವನಶೈಲಿ ಹಾಗೂ ಅದರಿಂದ ಉಂಟಾಗುವ ದುಷ್ಪರಿಣಾಮಗಳು

1. ಅಧಿಕ ರಕ್ತದೊತ್ತಡ, 2. ಮಧುಮೇಹ, 3. ರಕ್ತದಲ್ಲಿ ಹೆಚ್ಚಿದ ಕೊಬ್ಬಿನಾಂಶ, 4. ಸ್ಥೂಲಕಾಯತ್ವ, 5. ಧೂಮಪಾನ, 6. ಮದ್ಯಪಾನ
7. ಮಾದಕ ವಸ್ತು ಸೇವನೆ, 8. ಒತ್ತಡದ ಜೀವನ, 9. ವಾಯುಮಾಲಿನ್ಯ 10. ಅನುವಂಶೀಯತೆ

ಒಟ್ಟಿನಲ್ಲಿ ಹೇಳುವುದಾದರೆ ಆಹಾರ ಪದ್ಥತಿ, ದೈಹಿಕ ಚಟುವಟಿಕೆ ಕೊರತೆಯಿಂದ ಜಡತ್ವಜೀವನ ಹಾಗೂ ದುಶ್ವಟಗಳು.

ಅತಿಯಾದ ಕಾರ್ಬೊಹೈಡ್ರೇಟ್‌ಗಳುಳ್ಳ ತಿನಿಸು, ಸಂಸ್ಕರಿಸಿದ ಮಾಂಸದಿಂದ ತಯಾರಿಸಿದ ಪದಾರ್ಥಗಳು, ಜಂಕ್ ಫಾಸ್ಟ್‌ ಫುಡ್‌, ಹೆಚ್ಚು ಲವಣಾಂಶ ಇರುವ ಪದಾರ್ಥ ಸೇವನೆ, ದೀರ್ಘಕಾಲ ಮೊಬೈಲ್ ಫೋನ್ ಹಾಗೂ ಟಿವಿ ವೀಕ್ಷಣೆಯಿಂದ ಕಾಲ ಕಳೆಯುವುದು ಇತ್ಯಾದಿಗಳಿಂದ ಶರೀರ ಸ್ಥೂಲವಾಗುತ್ತದೆ. ಇದರಿಂದ ರಕ್ತದ ಒತ್ತಡ, ಮಧುಮೇಹ ಪ್ರಾರಂಭವಾಗಿ, ರಕ್ತದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತದೆ. ಹೃದಯದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್‌ ಪ್ಲೇಕ್ಸ್‌ನಿಂದ ರಕ್ತನಾಳಗಳು ಕಿರಿದಾಗುತ್ತವೆ. ಕೆಲವೊಮ್ಮೆ ಈ ಪ್ಲೇಕ್ಸ್‌ನಿಂದ ರಕ್ತನಾಳಗಳು ಸಂಪೂರ್ಣವಾಗಿ ಬಂದ್‌ ಆಗುತ್ತವೆ. ಆಗ ರಕ್ತ ಸಂಚಾರವಿಲ್ಲದೆ ಹೃದಯಾಘಾತ ಸಂಭವಿಸುತ್ತದೆ.

ಲಕ್ಷಣಗಳು

ಎದೆಯ ಮಧ್ಯಭಾಗದಲ್ಲಿ ಅತಿಯಾದ ನೋವು, ಕೆಲವೊಮ್ಮೆ ಎದೆ ಉರಿ, ಸಾಮಾನ್ಯವಾಗಿ ಎಡಭುಜ, ತೋಳಿನ ನೋವು, ಗಂಟಲುನೋವು, ಸುಸ್ತು, ಅತಿಯಾಗಿ ಬೆವರುವುದು, ಉಸಿರಾಟದ ತೊಂದರೆ, ತಲೆಸುತ್ತುವಿಕೆ ಹಾಗೂ ಜ್ಞಾನ ತಪ್ಪುವುದು. ತಕ್ಷಣದಲ್ಲಿ ಚಿಕಿತ್ಸೆ ದೊರೆಯದೆ ಇದ್ದರೆ ಸಾವು ಸಂಭವಿಸುತ್ತದೆ.

ಮುನ್ನೆಚ್ಚರಿಕೆಯ ಮಾರ್ಗಗಳು

ಮುಖ್ಯವಾಗಿ ಜೀವನಶೈಲಿಯಲ್ಲಿ ಬದಲಾವಣೆ

*ಆಹಾರ ಸೇವನೆಯಲ್ಲಿ ಇತಿಮಿತಿ ಇರಬೇಕು: ಕಡಿಮೆ ಪ್ರಮಾಣದ ಕಾರ್ಬೊಹೈಡ್ರೇಟ್‌, ಕಡಿಮೆ ಲವಣಾಂಶದಿಂದ ಕೂಡಿದ ಪದಾರ್ಥಗಳ ಸೇವನೆ, ಕರಿದ ಹಾಗೂ ಜಂಕ್‌ ಆಹಾರ ಸೇವನೆಯಿಂದ ದೂರವಿರುವುದು/ ಮಿತಿ ಇಟ್ಟುಕೊಳ್ಳುವುದು. ಹೆಚ್ಚಿನ ಪ್ರಮಾಣದ ತರಕಾರಿ/ ತಾಜಾ ಹಣ್ಣುಗಳ ಸೇವನೆ

*ದೈಹಿಕ ಚಟುವಟಿಕೆ– ನಿತ್ಯ ಕನಿಷ್ಠ 45 ನಿಮಿಷಗಳ ನಡಿಗೆ, ವ್ಯಾಯಾಮ, ಯೋಗ ಅಭ್ಯಾಸ, ಇಷ್ಟವಾದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಶರೀರ ದಢೂತಿಯಾಗದಂತೆ ನೋಡಿಕೊಳ್ಳಬೇಕು. ಸಾಕಷ್ಟು ನಿದ್ರೆ ಮತ್ತು ಧ್ಯಾನ ಮಾಡಿ. ಒತ್ತಡ ಕಡಿಮೆ ಮಾಡುವ ವಾತಾವರಣ/ ಶಿಸ್ತುಬದ್ಧ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು.

*ರಕ್ತದ ಒತ್ತಡ ಹಾಗೂ ಮಧುಮೇಹದ ಕಾಯಿಲೆ ಇದ್ದರೆ ವೈದ್ಯರ ಸಲಹೆ ಮೇರೆಗೆ ನಿಗದಿತ ಪ್ರಮಾಣದಲ್ಲಿ ಹತೋಟಿಯಲ್ಲಿಡಬೇಕು.

*ಧೂಮಪಾನ, ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು.

*ಯುವಕ– ಯುವತಿಯರು ಅರಿವು, ಎಚ್ಚರಿಕೆ, ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕು.

(ಲೇಖಕ: ಕನ್ಸಲ್ಟೆಂಟ್‌ ಕಾರ್ಡಿಯೊಲಾಜಿಸ್ಟ್‌, ವಿಕ್ರಂ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.