ADVERTISEMENT

ಆರೋಗ್ಯ: ಸರ್ಪಸುತ್ತಾಗಿರುವ ‘ಹರ್ಪಿಸ್‌ ಜೋಸ್ಟರ್‌’

ಡಾ.ವಿನಯ ಶ್ರೀನಿವಾಸ್
Published 3 ಫೆಬ್ರುವರಿ 2025, 23:30 IST
Last Updated 3 ಫೆಬ್ರುವರಿ 2025, 23:30 IST
   

ಕುಟುಂಬದ ಸ್ನೇಹಿತೆಯೊಬ್ಬರು ‘ಸೊಂಟದ ಭಾಗದಲ್ಲಿ ವಿಪರೀತ ನೋವು, ಉರಿ ಮತ್ತು ಸ್ಪರ್ಶಜ್ಞಾನದಲ್ಲಿಯೂ ವ್ಯತ್ಯಾಸ ಎನ್ನಿಸುತ್ತಿದೆ, ಏನಾದರೂ ಮಾತ್ರೆ ಹೇಳ್ತೀಯಾ’ ಎಂದು ಕರೆ ಮಾಡಿದ್ದರು. ನಾನು ನೋವುನಿವಾರಕ ಮಾತ್ರೆಯೊಂದನ್ನು ಸೂಚಿಸಿದ್ದೆ. ಎರಡು ದಿನಗಳ ನಂತರ ಆಕೆ ಮತ್ತೆ ಕರೆ ಮಾಡಿ ಆ ಭಾಗದಲ್ಲಿ ಸಣ್ಣ ಸಣ್ಣ ಗುಳ್ಳೆಗಳಾದಂತಿದೆ ಎಂದರು. ಅವರ ಆ ಮಾತನ್ನು ಕೇಳುತ್ತಲೇ ಇದು ಬಹುಶಃ ಹರ್ಪಿಸ್‌ ಜೋಸ್ಟರ್‌ ಇರಬಹುದು ಎಂದು ಯೋಚಿಸಿ, ಕೂಡಲೇ ಹತ್ತಿರದ ಚರ್ಮರೋಗತಜ್ಞರಲ್ಲಿ ಸಲಹೆ ಪಡೆಯಲು ತಿಳಿಸಿದ್ದೆ.

‘ವ್ಯಾಯಾಮ ಮಾಡುವಾಗ ಕುತ್ತಿಗೆಯ ಸ್ನಾಯುಗಳು ಉಳುಕಿವೆ’ ಎಂದು ಒಂದು ವಾರದಿಂದ ಮುಲಾಮನ್ನು ಹಚ್ಚಿಕೊಳ್ಳುತ್ತಿದ್ದ ಮತ್ತೊಬ್ಬ ಆತ್ಮೀಯರಿಗೂ ಆ ಭಾಗದಲ್ಲಿ ಕೆಂಪನೆಯ ಕೀವು ತುಂಬಿದ ಗುಳ್ಳೆಗಳು ಕಾಣಿಸಿದ್ದು ನಾಲ್ಕಾರು ದಿನಗಳ ನಂತರವೇ. ಹೌದು, ಈ ದಿನಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಹರ್ಪಿಸ್‌ ಜೋಸ್ಟರ್‌ ಬಗ್ಗೆ ಪ್ರತಿಯೊಬ್ಬರೂ ತಿಳಿದಿರುವುದು ಸೂಕ್ತ. ಇದು ಒಂದು ವೈರಾಣುವಿನಿಂದ ಉಂಟಾಗುವ ಸಮಸ್ಯೆ. ಸೂಕ್ತ ಔಷಧೋಪಚಾರದಿಂದ ಇದನ್ನು ಸಂಪೂರ್ಣ ಗುಣಪಡಿಸುವುದು ಸಾಧ್ಯ. ಬಾಲ್ಯದಲ್ಲಿ ಚಿಕನ್‌ ಪಾಕ್ಸ್‌ (ಅಮ್ಮ, ದಡಾರ), ವಯಸ್ಕರಲ್ಲಿ ಹರ್ಪಿಸ್‌ ಜೋಸ್ಟರ್‌ ಕಾರಣ ‘ವ್ಯಾರಿಸೆಲ್ಲಾ ಜೋಸ್ಟರ್‌’ ಎಂಬ ವೈರಾಣು. ರೋಗಿಯು ಕೆಮ್ಮಿದಾಗ, ಸೀನಿದಾಗ ಬಾಯಿ ಹಾಗೂ ಮೂಗಿನಿಂದ ಹೊರಬರುವ ಸ್ರವಿಕೆಯಲ್ಲಿ ಈ ವೈರಾಣುಗಳಿದ್ದು ಸಂಪರ್ಕದಲ್ಲಿರುವವರನ್ನು ಉಸಿರಿನ ಮೂಲಕ ತಲುಪಬಲ್ಲವು. ಹಾಗಾಗಿಯೇ ಚಿಕನ್‌ ಪಾಕ್ಸ್‌ನಿಂದ ಬಳಲುವ ರೋಗಿಯನ್ನು ಮೊದಲ ಏಳರಿಂದ ಹತ್ತು ದಿನಗಳವರೆಗೆ ಪ್ರತ್ಯೇಕವಾಗಿರಿಸುವುದು ಸೂಕ್ತ. ಕಾಯಿಲೆಯಿಂದ ಬಳಲುವವರಲ್ಲಿ ಹೊಟ್ಟೆ, ಬೆನ್ನು, ಕೈ, ಕಾಲುಗಳ ಮೇಲೆ ನೀರಿನಂತಹ ಸ್ರವಿಕೆ ಮತ್ತು ಕೀವು ತುಂಬಿದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಈ ಗುಳ್ಳೆಗಳ ಸುತ್ತಲೂ ಕೆಂಪಗಿನ ಉರಿಯೂತದ ಚಿಹ್ನೆ ಇರುವುದಷ್ಟೇ ಅಲ್ಲದೆ, ವಿಪರೀತ ನೋವಿನಿಂದಲೂ ಕೂಡಿರುತ್ತದೆ. ಸಾಮಾನ್ಯವಾಗಿ ಯಾವುದೇ ಅಪಾಯಕರ ಪರಿಣಾಮಗಳಿಗೆ ಎಡೆಮಾಡಿಕೊಡದ ಈ ಸಮಸ್ಯೆ ಹೆಚ್ಚಿನ ಸಂದರ್ಭಗಳಲ್ಲಿ ಸ್ವಯಂ ನಿಯಂತ್ರಣಕ್ಕೆ ಬರುತ್ತದೆ. ಒಮ್ಮೆ ಚಿಕನ್‌ ಪಾಕ್ಸ್‌ನಿಂದ ಬಳಲಿದ ವ್ಯಕ್ತಿ ಜೀವಿತಾವಧಿಯವರೆಗೂ ಅದರ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೊಂದುತ್ತಾನೆ. ಆದರೆ, ಈ ವೈರಾಣುಗಳು ಶರೀರದ ವಿವಿಧ ನರಗಳಲ್ಲಿ ಸುಪ್ತವಾಗಿದ್ದು, ನಿಷ್ಕ್ರಿಯವಾಗಿರುತ್ತವೆ. ಮುಂದೆ ವಯಸ್ಸಾದಾಗ ಹಲವು ಕಾರಣಗಳಿಂದಾಗಿ ಈ ವೈರಾಣುಗಳು ಮತ್ತೆ ಕ್ರಿಯಾಶೀಲ ಗೊಳ್ಳುತ್ತವೆ. ವಯೋಸಹಜ ರೋಗನಿರೋಧಕ ಶಕ್ತಿಯ ಕ್ಷೀಣಿಸುವಿಕೆ, ರೋಗನಿರೋಧಕ ವ್ಯವಸ್ಥೆಯನ್ನು ಮಾರ್ಪಾಡು ಮಾಡುವ ಔಷಧಗಳ ಬಳಕೆ, ಇತರ ಸಮಸ್ಯೆಗಳಿಗಾಗಿ ಸ್ಟಿರಾಯ್ಡ್‌ ಬಳಕೆ, ವ್ಯಕ್ತಿ ಕ್ಯಾನ್ಸರ್‌ ಅಥವಾ ಕ್ಷಯರೋಗದಿಂದ ಬಳಲಿದಾಗ ಈ ಸ್ತಬ್ದಗೊಂಡ ವೈರಾಣುಗಳು ಮತ್ತೆ ಮೊದಲಿನಂತೆ ಚುರುಕಾಗಿ ನರಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ. ಈ ಸಮಸ್ಯೆಯನ್ನೇ ‘ಹರ್ಪಿಸ್‌ ಜೋಸ್ಟರ್‌’ ಅಥವಾ ಸಾಮಾನ್ಯ ಭಾಷೆಯಲ್ಲಿ ‘ಸರ್ಪಸುತ್ತು’ ಎಂದು ಕರೆಯುತ್ತಾರೆ.

ADVERTISEMENT

ಲಕ್ಷಣಗಳೇನು?

ಈ ಬಾರಿ ಗುಳ್ಳೆಗಳು ಉದ್ದನೆಯ ನರಗಳು ಚಾಚಿದಲ್ಲೆಲ್ಲಾ ಕಾಣಿಸಿಕೊಳ್ಳುತ್ತವೆ. ಗುಂಪುಗುಂಪಾಗಿ ಕಂಡುಬರುವ ಈ ಗುಳ್ಳೆಗಳಲ್ಲಿ ನೀರಿನಂತಹ ಅಥವಾ ಕೀವಿನಂತಹ ಸ್ರಾವ ತುಂಬಿದ್ದು ಸುತ್ತಲಿನ ಚರ್ಮ ಕೆಂಬಣ್ಣವನ್ನು ಹೊಂದಿರುತ್ತದೆ. ಯಾವ ನರದಲ್ಲಿನ ವೈರಾಣುಗಳು ಕ್ರಿಯಾಶೀಲವಾಗಿರುತ್ತವೆಯೋ ಆ ನರದ ಪೂರೈಕೆ ಇರುವ ದೇಹದ ಭಾಗದಲ್ಲೆಲ್ಲಾ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಎದೆ, ಬೆನ್ನು, ಹೊಟ್ಟೆ, ಸೊಂಟದ ಭಾಗಗಳ ನರಗಳು ಉರಿಯೂತಕ್ಕೊಳಗಾಗಿ ಅಲ್ಲಿಯೇ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಈ ಗುಳ್ಳೆಗಳು ವಿಪರೀತ ನೋವು, ಉರಿಯಿಂದ ಕೂಡಿರುವುದಲ್ಲದೆ, ಆ ಭಾಗದ ಸ್ನಾಯುಗಳ ಚಲನೆಯೂ ಯಾತನೆಯನ್ನು ತರುತ್ತದೆ. ಒಮ್ಮೊಮ್ಮೆ ಕಣ್ಣುಗಳ ಮತ್ತು ಮುಖದ ನರಗಳೂ ಸಮಸ್ಯೆಗೆ ಗುರಿಯಾಗಬಹುದು. ಕೂಡಲೇ ಚಿಕಿತ್ಸೆ ಮಾಡದಿದ್ದರೆ ಅಪಾಯವಾಗಬಹುದು.

ಚಿಕಿತ್ಸೆ

ಉರಿ ಅಥವಾ ಗುಳ್ಳೆಗಳು ಕಾಣಿಸಿಕೊಂಡ ಆರಂಭದ ಹಂತದಲ್ಲಿಯೇ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ. ವೈರಾಣುಗಳನ್ನು ಕೊಲ್ಲಲು ‘ವೈರಿಸೈಡಲ್‌’ ಔಷಧಗಳ ಬಳಕೆ ಉತ್ತಮ. ಜೊತೆಯಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ನೋವನ್ನು ನಿಯಂತ್ರಿಸಲು ಔಷಧಗಳು ಬೇಕಾಗಬಹುದು. ಸಾಮಾನ್ಯವಾಗಿ ಏಳರಿಂದ ಹತ್ತು ದಿನಗಳ ಒಳಗಾಗಿ ಗುಳ್ಳೆಗಳು ಕಂದುಬಣ್ಣಕ್ಕೆ ತಿರುಗಿ ಒಣಗಲು ತೊಡಗುತ್ತವೆ. ಹರ್ಪಿಸ್‌ ಜೋಸ್ಟರ್‌ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಂಭವ ಕಡಿಮೆ. ಆದರೆ ವಿಪರೀತ ಉರಿ ಮತ್ತು ನೋವಿನಿಂದ ಕೂಡಿರುತ್ತದೆ. ಜನಸಾಮಾನ್ಯರಲ್ಲಿರುವ ಮೂಢನಂಬಿಕೆಗಳಿಂದಾಗಿ ಚಿಕಿತ್ಸೆ ಪಡೆಯುವಲ್ಲಿ ವಿಳಂಬ ಮಾಡುವುದರಿಂದಲೂ ಯಾತನೆ ಹೆಚ್ಚಾಗುತ್ತದೆ.

ಗುಣಲಕ್ಷಣಗಳನ್ನು ಗುರುತಿಸಿ, ಆರಂಭದಲ್ಲಿಯೇ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆಯದೇ ಇದ್ದವರಲ್ಲಿ ಗುಳ್ಳೆಗಳು ಗುಣವಾದ ಬಳಿಕವೂ ತೀವ್ರತರವಾದ ನೋವು ಮತ್ತು ಉರಿ ಉಳಿದುಕೊಳ್ಳಬಹುದು. ಇದನ್ನು ‘ಪೋಸ್ಟ್‌ ಹರ್ಪಿಟಿಕ್‌ ನ್ಯೂರಾಲ್ಜಿಯ’ ಎಂದು ಗುರುತಿಸುತ್ತೇವೆ. ಇಂತಹ ಸಂಭವನೀಯ ಅಪಾಯಗಳಿಂದ ಪಾರಾಗಲು ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತ್ಯಗತ್ಯ.

ಲಸಿಕೆಯನ್ನು ಪಡೆಯಿರಿ
ಮಕ್ಕಳಿಗೆ ಒಂದು ವರ್ಷ ತುಂಬುವಾಗ ಮಕ್ಕಳತಜ್ಞರ ಸಲಹೆಯ ಮೇರೆಗೆ ಚಿಕನ್‌ ಪಾಕ್ಸ್‌ ಕಾಯಿಲೆಗೆ ಲಸಿಕೆಯನ್ನು ಕೊಡಿಸಬೇಕು. ಅಂತೆಯೇ ಐವತ್ತು ತುಂಬಿದ ವಯಸ್ಕರಿಗೂ ಹರ್ಪಿಸ್‌ ಜೋಸ್ಟರ್‌ ಲಸಿಕೆ ಲಭ್ಯವಿದ್ದು, ವೈದ್ಯರ ಸಲಹೆಯನ್ನು ಪಡೆದು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಪೌಷ್ಟಿಕ ಆಹಾರಸೇವನೆಯಿಂದ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಸದೃಢಗೊಳಿಸಿಕೊಳ್ಳುವುದೂ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.