ADVERTISEMENT

ಹೈ ಹೀಲ್ಸ್ ಧರಿಸುವಾಗ ಇರಲಿ ಎಚ್ಚರ: ದೀರ್ಘಕಾಲದ ಬೆನ್ನು ನೋವಿಗೆ ಕಾರಣವಾಗಬಹುದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2026, 8:02 IST
Last Updated 30 ಜನವರಿ 2026, 8:02 IST
<div class="paragraphs"><p>ಹೈ ಹೀಲ್ಸ್ </p></div>

ಹೈ ಹೀಲ್ಸ್

   

ಗೆಟ್ಟಿ ಚಿತ್ರ

ಹೈ ಹೀಲ್ಸ್ ನೋಡಲು ಆಕರ್ಷಕವಾಗಿರುತ್ತದೆ. ಈ ಚಪ್ಪಲಿ ಧರಿಸುವುದು ರೂಪವೈಭವವನ್ನು ಹೆಚ್ಚಿಸಬಹುದು. ಆದರೆ ನಿಮಗೆ ಗೊತ್ತಾ..? ಹೈ ಹೀಲ್ಸ್ ನಮ್ಮ ಬೆನ್ನುಮೂಳೆಯ ಆರೋಗ್ಯದ ಮೇಲೆ ಭಾರಿ ಪರಿಣಾಮ ಬಿರುತ್ತದೆ ಎಂದು..

ADVERTISEMENT

ಬೆನ್ನುಮೂಳೆಯ ನೋವು ಆರಂಭವಾಗುವವರೆಗೂ ಅದಕ್ಕೆ ಕಾರಣ ಹೈ ಹೀಲ್ಸ್‌ ಎಂದು ಬಹುಪಾಲು ಜನರು ಗಮನಿಸುವುದಿಲ್ಲ. ಹೈ ಹೀಲ್ಸ್ ಅನ್ನು ನಿಯಮಿತವಾಗಿ ಧರಿಸುವುದರಿಂದ ಉಂಟಾಗುವ ನಿರಂತರ ಬೆನ್ನುನೋವು ಒಂದು ಸಾಮಾನ್ಯ ಸಮಸ್ಯೆಯಾಗಿದೆ.

ಸಂಶೋಧನೆಗಳ ಪ್ರಕಾರ, ದೀರ್ಘಕಾಲ ಮತ್ತು ಪದೇಪದೇ ಹೈ ಹೀಲ್ಸ್ ಧರಿಸುವುದು ಬೆನ್ನುನೋವಿಗೆ ಪ್ರಮುಖ ಕಾರಣವಾಗಿದೆ. ಹೈ ಹೀಲ್ಸ್, ದೇಹವನ್ನು ಮುಂದೆ ವಾಲುವಂತೆ ಮಾಡುತ್ತವೆ. ದೇಹದ ತೂಕ ಪಾದಗಳ ಮುಂಭಾಗಕ್ಕೆ ಬೀಳುತ್ತದೆ. ಜತೆಗೆ ಲಂಬಾರ್ ಬೆನ್ನುಮೂಳೆಗೆ ಮತ್ತು ಸ್ನಾಯುಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಇದರ ಪರಿಣಾಮವಾಗಿ ಕಾಲಕ್ರಮೇಣ ದೀರ್ಘಕಾಲೀನ ನೋವು ಉಂಟಾಗಬಹುದು. ಜತೆಗೆ ವ್ಯಕ್ತಿಯ ನಡಿಗೆಯ ಶೈಲಿಯಲ್ಲೂ ಬದಲಾವಣೆ ಕಾಣಿಸಿಕೊಳ್ಳುತ್ತದೆ.

ಹೈ ಹೀಲ್ಸ್

ನಡೆಯುವಾಗ ದೇಹದ ಸರಿಯಾದ ಭಂಗಿ ಎಂದರೆ ನೇರವಾಗಿ ನಿಂತ ಸ್ಥಿತಿ, ಸಡಿಲವಾದ ಭುಜಗಳು, ನೇರವಾದ ಬೆನ್ನುಮೂಳೆ ಮತ್ತು ಹಿಂಬದಿ ಪಾದದ ತುದಿವರೆಗೆ ಸಮಾನ ತೂಕ ಹಂಚಿಕೆ. ಸರಿಯಾದ ಭಂಗಿಯನ್ನು ಕಾಪಾಡುವುದರಿಂದ ಕೆಳಬೆನ್ನಿನ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ ಮತ್ತು ಒಟ್ಟಾರೆ ಬೆನ್ನುಮೂಳೆಯ ಸಮತೋಲನವನ್ನು ಬೆಂಬಲಿಸುತ್ತದೆ. ಹೈ ಹೀಲ್ಸ್‌ನಿಂದ ಉಂಟಾಗುವ ಬದಲಾದ ನಡೆ ಶೈಲಿ ಚಿಕ್ಕ ಹೆಜ್ಜೆಗಳು ಹಾಗೂ ಬಿಗಿಯಾದ ನಡಿಗೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಹಿಪ್ಸ್ ಮತ್ತು ಕೆಳಬೆನ್ನಿನ ಮೇಲೆ ಹೆಚ್ಚುವರಿ ಒತ್ತಡ ಬೀರುತ್ತದೆ.

ಈ ಸಮಸ್ಯೆಗೆ ಚಿಕಿತ್ಸೆಯಾಗಿ, ಭಂಗಿ ತಿದ್ದುಪಡಿ, ಫಿಸಿಯೋಥೆರಪಿ ಮತ್ತು ಸ್ನಾಯು ಬಲವರ್ಧಕ ವ್ಯಾಯಾಮಗಳು ನೋವು ಕಡಿಮೆ ಮಾಡಬಲ್ಲದು.

ಆಯುರ್ವೇದವು ಉರಿಯೂತವನ್ನು ಕಡಿಮೆ ಮಾಡಿ ದುರ್ಬಲಗೊಂಡ ಸ್ನಾಯುಗಳು ಮತ್ತು ಎಲುಬುಗಳನ್ನು ಬಲಪಡಿಸುವ ಸಮಗ್ರ ಹಾಗೂ ಸಹಾಯಕ ಚಿಕಿತ್ಸಾ ವಿಧಾನಗಳನ್ನು ಒದಗಿಸುತ್ತದೆ. ಅಭ್ಯಂಗ (ಔಷಧೀಯ ತೈಲ ಮಸಾಜ್), ಕಟಿ ಬಸ್ತಿ (ಕೆಳಬೆನ್ನಿಗೆ ಬಿಸಿ ತೈಲ ಚಿಕಿತ್ಸೆ) ಮತ್ತು ಶಲ್ಲಕಿ, ಅಶ್ವಗಂಧ, ಗುಗ್ಗುಲು, ದಶಮೂಲ ಮುಂತಾದ ಔಷಧಗಳನ್ನು ಒಳಗೊಂಡ ಆಂತರಿಕ ಚಿಕಿತ್ಸೆಗಳು ಈ ಸಮಸ್ಯೆಯನ್ನು ಹಿಮ್ಮೆಟ್ಟಿಸಲು ನೆರವಾಗುತ್ತವೆ. ಪಂಚಕರ್ಮ ಚಿಕಿತ್ಸೆಗಳು ಬೆನ್ನುಮೂಳೆಯ ಧಾತುಗಳನ್ನು ಪೋಷಿಸುತ್ತದೆ. ಆಯುರ್ವೇದದಲ್ಲಿ ಪತ್ರ ಪಿಂಡ ಸ್ವೇದ ಚಿಕಿತ್ಸೆಯು ಸ್ನಾಯು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೈ ಹೀಲ್ಸ್

ಸರಿಯಾದ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯೊಂದಿಗೆ ಯೋಗಾಭ್ಯಾಸ ಮತ್ತು ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡುವುದರಿಂದ ಬೆನ್ನುಮೂಳೆಯ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಹೀಲ್ಸ್ ಧರಿಸುವುದನ್ನು ನಿಯಂತ್ರಿಸುವುದು ಕೂಡ ಅಗತ್ಯವಾಗಿದೆ.

ನಿಜವಾದ ಸೌಂದರ್ಯವು ನೋವಿಲ್ಲದ ದೇಹದಿಂದಲೇ ಆರಂಭವಾಗುತ್ತದೆ. ಫ್ಯಾಷನ್ ಮತ್ತು ಆರೋಗ್ಯದ ನಡುವೆ ಸಮತೋಲನವನ್ನು ಕಾಪಾಡುವುದರಿಂದ ದೀರ್ಘಕಾಲ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬೆನ್ನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಗಟ್ಟಬಹುದು.

(ಲೇಖಕರು: ಡಾ. ಆರ್ಯಾ ಸುಭಾಷ್. ಸಹಾಯಕ ಪ್ರಾಧ್ಯಾಪಕಿ, ಅಗದ ತಂತ್ರ ವಿಭಾಗ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನ, ಕರ್ನಾಟಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.