ADVERTISEMENT

ಏನಾದ್ರೂ ಕೇಳ್ಬೋದು: ಸಲಿಂಗಕಾಮ- ಆತ್ಮಸಮ್ಮಾನ

ನಡಹಳ್ಳಿ ವಂಸತ್‌
Published 5 ಮಾರ್ಚ್ 2021, 19:30 IST
Last Updated 5 ಮಾರ್ಚ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

*26ರ ಎಂ.ಎಸ್‌ಸಿ, ಬಿ.ಎಡ್‌ ಓದಿರುವ ಯುವಕ. ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದೇನೆ. ಓದಲು ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ನೀಲಿಚಿತ್ರಗಳನ್ನು ನೋಡುವ ಗೀಳಿದೆ. ಹುಡುಗರ ಬಗ್ಗೆ ಹೆಚ್ಚಿನ ಆಕರ್ಷಣೆಯಿದೆ. ಅವರೊಡನೆ ಸೇರುವ ಬಯಕೆಯುಂಟಾಗದಿದ್ದರೂ ಬೆತ್ತಲಾಗಿ ನೋಡುವುದು ರೋಚಕವೆನ್ನಿಸುತ್ತದೆ. ಹುಡುಗಿಯರನ್ನು ನೋಡಿದರೆ ಉದ್ರೇಕವಾಗುವುದಿಲ್ಲ. ಇದರಿಂದ ಹೊರಬರಲಾಗದೆ ಹಿಂಸೆಯಾಗುತ್ತಿದೆ. ನನ್ನ ಸ್ನೇಹಿತರೆಲ್ಲಾ ಉದ್ಯೋಗ, ಮದುವೆ ಎಂದೆಲ್ಲ ಆರಾಮವಾಗಿದ್ದಾರೆ. ನಾನು ಹಳ್ಳಿಯಲ್ಲಿದ್ದು ಸಮಯ ಕಳೆಯುತ್ತಿದ್ದೇನೆ. ಪ್ರೀತಿಸುವ ತಂದೆ–ತಾಯಿಗೆ ಮೋಸ ಮಾಡುತ್ತಿದ್ದೇನೆ ಎನ್ನಿಸುತ್ತಿದೆ. ಹಿಂದಿನದರ ಕುರಿತು ಯೋಚಿಸುತ್ತಾ ನಾನು ಸ್ಪರ್ಧಾತ್ಮಕ ಜಗತ್ತಿಗೆ ಯೋಗ್ಯನಲ್ಲವೇನೋ ಎನ್ನಿಸುತ್ತದೆ. ಇವೆಲ್ಲವುಗಳಿಂದ ಹೊರಬರುವುದು ಹೇಗೆ?

ಹೆಸರು ಬರೆದಿಲ್ಲ, ಬಳ್ಳಾರಿ.

-ದೀರ್ಘವಾದ ಪತ್ರದಲ್ಲಿ ನಿಮ್ಮ ಮಾನಸಿಕ ನೋವುಗಳನ್ನು ಹಿಂಜರಿಕೆಯಿಲ್ಲದೆ ಹೇಳಿಕೊಂಡಿದ್ದೀರಿ. ನಿಮ್ಮ ಸದ್ಯದ ಸಮಸ್ಯೆಗಳನ್ನು ಎರಡು ಕೋನಗಳಿಂದ ನೋಡೋಣ. ಮೊದಲನೆಯದು ನಿಮ್ಮ ಲೈಂಗಿಕತೆ. ನೀವು ಸಲಿಂಗಕಾಮಿಯೋ ಅಥವಾ ಗಂಡುಹೆಣ್ಣುಗಳಿಬ್ಬರಲ್ಲಿಯೂ ಆಸಕ್ತಿ ಇರುವವರೋ ಎನ್ನುವುದನ್ನು ತಿಳಿಯಲು ಹೆಚ್ಚಿನ ಮಾಹಿತಿಯ ಅಗತ್ಯವಿದೆ. ಸಲಿಂಗಕಾಮ ಸಾಮಾಜಿಕ ಕಳಂಕವೆನ್ನಿಸಿದರೂ ಕಾಯಿಲೆಯಂತೂ ಅಲ್ಲ. ಇದರಿಂದ ಹೊರಬರುವ ಪ್ರಯತ್ನ ನಿಮ್ಮ ಹತಾಶೆಯನ್ನು ಹೆಚ್ಚಿಸುತ್ತದೆ. ನಿಮ್ಮ ಲೈಂಗಿಕ ಆಕರ್ಷಣೆಗಳನ್ನು ಸಹಜವೆಂದು ಒಪ್ಪಿಕೊಂಡು ಆನಂದಿಸಿ. ಮದುವೆಯಾಗುವ ಕುರಿತು ಯೋಚಿಸುವ ಮೊದಲು ತಜ್ಞ ಲೈಂಗಿಕ ಚಿಕಿತ್ಸಕರೊಡನೆ ಸಮಾಲೋಚನೆ ನಡೆಸಿ. ಲೈಂಗಿಕ ಆಯ್ಕೆಗಳ ಗೊಂದಲ, ಹಿಂಜರಿಕೆಗಳು ನಿಮ್ಮ ಅತ್ಮಗೌರವವನ್ನು ಹೇಗೆ ನಾಶಮಾಡಿವೆ ಎಂದು ಗುರುತಿಸಿದ್ದೀರಾ? ಲೈಂಗಿಕ ಆಸಕ್ತಿಗಳು ಖಾಸಗಿಯಾದದ್ದು. ಅದರ ಹೊರತಾಗಿ ನಿಮ್ಮೊಳಗೆ ನೂರಾರು ಉತ್ತಮ ಅಂಶಗಳಿಲ್ಲವೇ? ಸಲಿಂಗಕಾಮಿಯಾಗಿದ್ದೂ ನೀವೊಬ್ಬ ಉತ್ತಮ ಅಧ್ಯಾಪಕ, ಉದ್ಯೋಗಿ, ಕೃಷಿಕ, ಮಗ, ಅಣ್ಣ, ತಮ್ಮ, ಸ್ನೇಹಿತ, ಪ್ರಜೆ ಹೀಗೆ ಏನೆಲ್ಲಾ ಆಗಬಹುದಲ್ಲವೇ? ಲೈಂಗಿಕತೆಯ ಕುರಿತು ಮಾತ್ರ ಯೋಚಿಸುತ್ತಾ ಇವುಗಳನ್ನು ಕಡೆಗಣಿಸಿದ್ದೀರಲ್ಲವೇ? ನಿಮ್ಮ ಕಣ್ಣಿನಲ್ಲಿ ನೀವೇ ಕೀಳಾಗಿರುವುದರಿಂದಾಗಿ ಅನುಭವಿಸುವ ನೋವನ್ನು ಮರೆಯಲು ನೀಲಿಚಿತ್ರಗಳಿಗೆ ಅಂಟಿಕೊಂಡಿದ್ದೀರಿ. ಸದ್ಯಕ್ಕೆ ಉದ್ಯೋಗವನ್ನು ಪಡೆದು ಜೀವನ ರೂಪಿಸಿಕೊಳ್ಳುವ ಕುರಿತು ಮಾತ್ರ ಯೋಚಿಸಿ. ನಿಮ್ಮ ಸೀಮಿತ ಜಗತ್ತಿನಿಂದ ಹೊರಬಂದರೆ ಏನೆಲ್ಲಾ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.

ADVERTISEMENT

* 22ರ ಯುವಕ. ವಾರಕ್ಕೆರೆಡು ಬಾರಿ ಹಸ್ತಮೈಥುನ ಮಾಡುತ್ತೇನೆ. ಆಗ ಶಿಶ್ನದಲ್ಲಿ ನೋವಾಗುತ್ತದೆ ಮತ್ತು ಶೀಘ್ರಸ್ಖಲನವಾಗುತ್ತದೆ. ಕಾರಣವೇನಿರಬಹುದು?

ಹೆಸರಿಲ್ಲ, ಬೆಂಗಳೂರು.

-ಹಸ್ತಮೈಥುನದ ಸಮಯದಲ್ಲಿನ ಘರ್ಷಣೆಯ ಒತ್ತಡದಿಂದಾಗಿ ನೋವಾಗುವ ಸಾಧ್ಯತೆಗಳಿವೆ. ಇದಕ್ಕಾಗಿ ಜಾರುಕಗಳನ್ನು (ಲ್ಯುಬ್ರಿಕೇಶನ್‌) ಬಳಸಿ. ನಿಮ್ಮದೇ ಜೊಲ್ಲುರಸ ಅತ್ಯುತ್ತಮವಾದ ಆರೋಗ್ಯಕರವಾದ ಜಾರುಕ. ಶೀಘ್ರಸ್ಖಲನದ ಕುರಿತು ಬಹಳ ತಪ್ಪುತಿಳಿವಳಿಕೆಗಳಿವೆ. ಮದುವೆಯಾದ ಮೇಲೆ ಪತ್ನಿಯ ಜೊತೆ ಲೈಂಗಿಕ ಸುಖವನ್ನು ಹಂಚಿಕೊಳ್ಳಲಾಗದಿದ್ದರೆ ಮಾತ್ರ ಲೈಂಗಿಕ ಚಿಕಿತ್ಸಕರನ್ನು ಸಂಪರ್ಕಿಸಿ. ಸದ್ಯಕ್ಕೆ ವಿದ್ಯಾಭ್ಯಾಸ, ಉದ್ಯೋಗದ ಕಡೆ ಹೆಚ್ಚು ಗಮನವಿಡಿ.

*ಸ್ನಾತಕೋತ್ತರ ಪದವೀಧರ. ಪದವಿ ಪರೀಕ್ಷೆಯ ನಂತರ ಬೆಂಗಳೂರಿನಲ್ಲಿ 3-4 ವರ್ಷ ಉದ್ಯೋಗವನ್ನು ಮಾಡಿದೆ. ನಂತರ ವ್ಯಾಪಾರದಲ್ಲಿ ಮೋಸಹೋಗಿ ಸ್ನಾತಕೋತ್ತರ ಪದವಿ ಪಡೆದು ಮೂರ್ನಾಲ್ಕು ವರ್ಷಗಳಾಗಿದೆ. ರೈತಾಪಿ ಕುಟುಂಬದವನಾಗಿದ್ದು ಕೃಷಿಯಲ್ಲಿ ಆಸಕ್ತಿಯಿದ್ದರೂ ಅಪ್ಪನಿಂದ ಸ್ವಾತಂತ್ರ್ಯವಿಲ್ಲ. ಸರ್ಕಾರಿ ನೌಕರಿ ಪಡೆಯಬೇಕಾಗಿದೆ. ಅಪ್ಪನ ಮೇಲಿನ ಅವಲಂಬನೆ ಮತ್ತು ವಯಸ್ಸಿನ ಒತ್ತಡಕ್ಕೆ ಸಿಲುಕಿದ್ದೇನೆ. ಪರಿಹಾರವೇನು?

ಹೆಸರು, ಊರು ಇಲ್ಲ.

ಏನಾದರೂ ಸಾಧಿಸಬೇಕು ಎನ್ನುವ ನಿಮ್ಮ ಉದ್ದೇಶ ಪ್ರಾಮಾಣಿಕವಾದದ್ದಲ್ಲವೇ? ಅದನ್ನು ಹುಡುಕುವ ದಾರಿಯಲ್ಲಿ ಕೆಲವು ತಪ್ಪು ನಿರ್ಧಾರಗಳಾಗಿರಬಹುದಲ್ಲವೇ? ತಕ್ಷಣಕ್ಕೆ ಎಲ್ಲವನ್ನೂ ಸರಿಪಡಿಸುವ ಒತ್ತಡದಲ್ಲಿ ಹೆಚ್ಚಿನ ನೋವನ್ನು ಅನುಭವಿಸುತ್ತಿದ್ದೀರಲ್ಲವೇ? ಹಳೆಯ ತಪ್ಪು ನಿರ್ಧಾರಗಳ ಭಯದಿಂದ ತಂದೆಯವರು ನಿಮಗೆ ಸ್ವಾತಂತ್ರ್ಯ ಕೊಡಲು ಹಿಂಜರಿಯುತ್ತಿರಬಹುದು. ತಪ್ಪನ್ನು ಕಲಿಕೆಯ ಭಾಗ ಎಂದು ಒಪ್ಪಿಕೊಂಡು ಅವರೊಡನೆ ಚರ್ಚೆಮಾಡಿ. ಕನಿಷ್ಠ ಎರಡು ವರ್ಷಗಳ ಯೋಜನೆಯನ್ನು ಹಾಕಿಕೊಂಡು ಹಂತಹಂತವಾಗಿ ಮುಂದುವರೆಯಿರಿ.

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ.
bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.