ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಗರ್ಭಿಣಿಯರಿಗೆ ಲಸಿಕೆ ಎಷ್ಟು ಸುರಕ್ಷಿತ?

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 19:32 IST
Last Updated 29 ಡಿಸೆಂಬರ್ 2020, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮೆರಿಕ, ಬ್ರಿಟನ್‌ ಮೊದಲಾದ ಕಡೆ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರಿಯುತ್ತಿದ್ದು, ಭಾರತದಲ್ಲೂ ಲಸಿಕೆ ಅಭಿಯಾನಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಆದರೆ ಈ ಹಂತದಲ್ಲಿ ಗರ್ಭಿಣಿಯರಿಗೆ ಅಥವಾ ಹೆರಿಗೆಯಾಗಿ ಸ್ತನ್ಯಪಾನ ಮಾಡಿಸುತ್ತಿರುವ ಮಹಿಳೆಯರಿಗೆ ಲಸಿಕೆ ನೀಡಬೇಕೆ ಎಂಬುದರ ಬಗ್ಗೆ ಸಂದೇಹಗಳು ಹುಟ್ಟಿಕೊಂಡಿವೆ.

ಗರ್ಭಿಣಿಯರು ಅಥವಾ ಬಾಣಂತಿಯರು ಲಸಿಕೆ ಹಾಕಿಸಿಕೊಂಡರೆ ತೊಂದರೆಗಳಾಗುತ್ತವೆಯೇ ಎಂಬುದನ್ನು ವೈದ್ಯರ ಬಳಿ ಮಾತನಾಡಿ ಪರಿಹರಿಸಿಕೊಳ್ಳಬೇಕು. ಕೋವಿಡ್‌–19ನಿಂದಾಗುವ ಅಪಾಯಗಳ ಬಗ್ಗೆ ಈಗಾಗಲೇ ಎಲ್ಲರಿಗೂ ಅರಿವಿದೆ. ಆದರೆ ಲಸಿಕೆಯಿಂದ ಅಡ್ಡ ಪರಿಣಾಮಗಳಾದರೆ ಎಂಬ ಭೀತಿಯೂ ಇಲ್ಲದಿಲ್ಲ ಎಂದು ಗರ್ಭಿಣಿಯರು ಮತ್ತು ಸ್ತನ್ಯಪಾನ ಮಾಡಿಸುತ್ತಿರುವ ತಾಯಂದಿರಿಗೆ ಕೋವಿಡ್‌–19 ವಿರುದ್ಧ ಲಸಿಕೆ ಹಾಕುವ ಕುರಿತಂತೆ ಅಧ್ಯಯನ ನಡೆಸಿರುವ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಪ್ರಾಧ್ಯಾಪಕಿ ಲಿಂಡಾ ಒ’ನೀಲ್‌ ವರದಿಯಲ್ಲಿ ತಿಳಿಸಿದ್ದಾರೆ.

ಅಮೆರಿಕದ ಸಿಡಿಸಿ (ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌) ಪ್ರಕಾರ ಗರ್ಭಿಣಿಯರಿಗೆ ಕೋವಿಡ್‌–19 ಬಂದರೆ ಅಪಾಯದ ಸಾಧ್ಯತೆ ಜಾಸ್ತಿ. ಅಂಥವರಿಗೆ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ನೀಡಬೇಕಾಗುತ್ತದೆ, ಮೆಕ್ಯಾನಿಕಲ್‌ ವೆಂಟಿಲೇಶನ್‌ (ಇಸಿಎಂಒ) ಅಗತ್ಯವೂ ಬೀಳಬಹುದು ಹಾಗೂ ಮರಣದ ಸಾಧ್ಯತೆಯೂ ಹೆಚ್ಚು ಎಂದು ಈಗಾಗಲೇ ಹಲವು ಅಧ್ಯಯನಗಳು ದೃಢಪಡಿಸಿವೆ ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಬೊಜ್ಜು ಹಾಗೂ ಮಧುಮೇಹವಿರುವ ಗರ್ಭಿಣಿಯರಿಗೆ ಕೊರೊನಾ ಸೋಂಕು ತಗಲಿದರೆ ಅಪಾಯ ಹೆಚ್ಚು. ಅವಧಿಗಿಂತ ಮೊದಲೇ ಹೆರಿಗೆ ನೋವು ಕಾಣಿಸಿಕೊಳ್ಳಬಹುದು ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಗರ್ಭಿಣಿಯರು ಹಾಗೂ ನವಜಾತ ಶಿಶುಗಳಲ್ಲಿ ಸಹಜವಾಗಿಯೇ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಇಂತಹ ಅಪಾಯ ಸಾಮಾನ್ಯ.

ಹೀಗಾಗಿ ಅಪಾಯಗಳನ್ನು ಲೆಕ್ಕಿಸಿದರೆ ಲಸಿಕೆ ತೆಗೆದುಕೊಳ್ಳುವುದು ಉತ್ತಮ. ಆದರೆ ಲಸಿಕೆಯ ಕ್ಲಿನಿಕಲ್‌ ಪ್ರಯೋಗದಲ್ಲಿ ಗರ್ಭಿಣಿಯರನ್ನು ಸೇರಿಸಿಕೊಂಡಿರಲಿಲ್ಲ. ಇದಕ್ಕಿರುವ ಕಾನೂನು ನಿರ್ಬಂಧಗಳ ಜೊತೆಗೆ ಗರ್ಭಿಣಿ ಹಾಗೂ ಭ್ರೂಣಕ್ಕೆ ಅಪಾಯ ಸಂಭವಿಸಬಹುದು ಎಂಬುದು ಕೂಡ ಕಾರಣ ಎಂದು ಅವರು ವರದಿಯಲ್ಲಿ ವಿಶ್ಲೇಷಿಸಿದ್ದಾರೆ.

ಅಮೆರಿಕದಲ್ಲಿ ಫೈಝರ್‌ ಲಸಿಕೆಯನ್ನು ಗರ್ಭ ಧರಿಸಿದ ಇಲಿಗಳ ಮೇಲೆ ಪ್ರಯೋಗಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಫಲಿತಾಂಶ ಇನ್ನೂ ಬರಬೇಕಾಗಿದೆ. ಈ ಮಧ್ಯೆ ಕ್ಲಿನಿಕಲ್‌ ಪ್ರಯೋಗದಲ್ಲಿ ಲಸಿಕೆ ಪಡೆದ ಕೆಲವು ಮಹಿಳೆಯರು ಈಗ ಗರ್ಭ ಧರಿಸಿದ್ದು, ಇದುವರೆಗೂ ಅಡ್ಡ ಪರಿಣಾಮಗಳು ಗೋಚರಿಸಿಲ್ಲ ಎಂದು ಫೈಝರ್‌ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

ಹೀಗಾಗಿ ಸ್ಥಳೀಯವಾಗಿ ಕೊರೊನಾ ಸೋಂಕು ಜಾಸ್ತಿ ಇದ್ದರೆ, ಉದ್ಯೋಗದ ಸ್ಥಳದಲ್ಲಿ ಅಪಾಯ ಹೆಚ್ಚಿದ್ದರೆ ಅಥವಾ ಆರೋಗ್ಯ ಕಾರ್ಯಕರ್ತೆಯಾಗಿದ್ದರೆ, ಇತರ ವೈದ್ಯಕೀಯ ಸಮಸ್ಯೆಗಳು ಇದ್ದರೆ, ಗರ್ಭ ಧರಿಸುವುದಕ್ಕಿಂತ ಮುಂಚೆ ಇತರ ಲಸಿಕೆಯಿಂದ ಅಡ್ಡ ಪರಿಣಾಮ ಸಂಭವಿಸಿರದಿದ್ದರೆ, ಯಾವುದೇ ಅಲರ್ಜಿ ಇಲ್ಲದಿದ್ದರೆ ಗರ್ಭಿಣಿಯರು ಹಾಗೂ ಬಾಣಂತಿಯರು ತಮ್ಮ ವೈದ್ಯರ ಬಳಿ ಚರ್ಚಿಸಿ ಲಸಿಕೆ ಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಪ್ರೊ. ಲಿಂಡಾ ಅವರು ಅಧ್ಯಯನದ ವರದಿಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.