ADVERTISEMENT

ತರಕಾರಿ, ಹಣ್ಣನ್ನು ತೊಳೆಯುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 19:30 IST
Last Updated 5 ಜುಲೈ 2020, 19:30 IST
ತರಕಾರಿ
ತರಕಾರಿ   

ಈ ಕೊರೊನ ಸಂಕಷ್ಟದಲ್ಲಿ ವ್ಯಕ್ತಿಗಳಷ್ಟೇ ಅಲ್ಲ, ಮನೆಗೆ ತರುವ ದಿನಸಿ, ತರಕಾರಿ, ಹಣ್ಣಿನಂತಹ ಆಹಾರ ಪದಾರ್ಥಗಳನ್ನೂ ಸಂಶಯದಿಂದ ನೋಡುವಂತಾಗಿದೆ.

ಈಗೀಗಂತೂ, ನೆಂಟರಿಷ್ಟರು, ಆಪ್ತೇಷ್ಟರೊಂದಿಗೆ ಉಭಯಕುಶಲೋಪರಿ ಮಾತನಾಡುವಾ, ನಡುವೆ ‘ನೀವು ಹಣ್ಣು–ತರಕಾರಿಯನ್ನು ಉಪ್ಪುನೀರಲ್ಲಿ ತೊಳೆಯುತ್ತಿದ್ದೀರಾ, ತಾನೆ‘ ಎಂಬ ಪ್ರಶ್ನೆಯಂತೂ ಕಡ್ಡಾಯವಾಗಿ ತೂರಿ ಬರುತ್ತಿದೆ.

ನಿಜ, ಮನೆಗೆ ತರಕಾರಿ, ಹಣ್ಣು– ಹಂಪಲು, ಹಾಲು ಹೀಗೆ ಮನೆಗೆ ಬೇಕಾದ ಅಗತ್ಯ ಸಾಮಾನುಗಳನ್ನು ತರುವಾಗ ಮುಂಜಾಗ್ರತೆ ವಹಿಸುವುದು ಅನಿವಾರ್ಯ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌‌ಎಐ) ಮನೆಗೆ ತಂದ ಬಳಿಕ ತರಕಾರಿ, ಹಣ್ಣುಗಳನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂದು ಕೆಲವು ಸಲಹೆಗಳನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ADVERTISEMENT

ಹಣ್ಣು ಹಾಗೂ ತರಕಾರಿಯಿಂದ ಇಲ್ಲಿಯವರೆಗೂ ಕೊರೊನಾ ಸೋಂಕು ಹರಡಿದೆ ಎಂಬುದು ಎಲ್ಲೂ ಸಾಬೀತಾಗಿಲ್ಲ. ಆದರೂ ಹೊರಗಿನಿಂದ ತಂದ ವಸ್ತುಗಳನ್ನು ಚೆನ್ನಾಗಿ ತೊಳೆದು, ಬಳಕೆ ಮಾಡುವುದು ಉತ್ತಮ ಎಂಬುದು ಆಹಾರ ತಜ್ಞರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಐನ ಕೆಲ ಸಲಹೆಗಳು ಇಲ್ಲಿವೆ.

* ಮಾರುಕಟ್ಟೆಯಿಂದ ಬಂದ ನಂತರ ತರಕಾರಿ, ಹಣ್ಣಿನ ಚೀಲವನ್ನು ಯಾರೂ ಮುಟ್ಟದ ಜಾಗದಲ್ಲಿಡಿ. ನಂತರ ಸೋಪ್‌ನಿಂದ ಕೈ ಚೆನ್ನಾಗಿ ತೊಳೆದುಕೊಳ್ಳಬೇಕು.

* ಬ್ಯಾಗ್‌ನಿಂದ ತರಕಾರಿ ಹಣ್ಣುಗಳನ್ನು ತೆಗೆದಿಟ್ಟು ತಣ್ಣೀರಲ್ಲಿ ಚೆನ್ನಾಗಿ ತೊಳೆಯಬೇಕು. ಇಲ್ಲದಿದ್ದರೆ ಬಿಸಿ ನೀರಿಗೆ ಸ್ವಲ್ಪ ಕ್ಲೋರಿನ್‌ ಹಾಕಿ ಅದರಲ್ಲಿ ಮುಳುಗಿಸಡಬೇಕು. ಅದರಿಂದ ತೆಗೆದು ಕುಡಿಯುವ ನೀರಿನಲ್ಲಿ ತೊಳೆಯಬೇಕು. ತರಕಾರಿ ತಂದ ಬ್ಯಾಗ್‌ ಅನ್ನು ಸೋಪ್‌ನಲ್ಲಿ ತೊಳೆದು ಬಿಸಿಲಿಗೆ ಒಣಗಿಸಬೇಕು.

* ಹಣ್ಣು ಮತ್ತು ತರಕಾರಿಗಳನ್ನು ತೊಳೆಯಲು ರಾಸಾಯನಿಕ ದ್ರಾವಣ, ವೈಪ್ಸ್‌ ಅಥವಾ ಸೋಪ್‌ ಬಳಸಬಾರದು.

* ಮನೆಯಿಂದ ಹೊರಗೆ ಕಾರ್‌ ಅಥವಾ ಶೆಡ್‌ನಲ್ಲಿ ತರಕಾರಿ, ಹಣ್ಣುಗಳನ್ನು ಇಡಬೇಡಿ. ಇದರಿಂದ ಅವುಗಳೊಳಗೆ ಕೀಟಗಳು ಸೇರಬಹುದು

* ತರಕಾರಿ ತೊಳೆದ ಸಿಂಕ್‌ ಅಥವಾ ಜಾಗವನ್ನು ಚೆನ್ನಾಗಿ ಸ್ವಚ್ಛ ಮಾಡಬೇಕು. ತರಕಾರಿ ತೊಳೆಯುವಾಗ ನೆಲದ ಮೇಲೆ ತರಕಾರಿ ಹಣ್ಣು ಬೀಳದಂತೆ ಎಚ್ಚರವಹಿಸಿ. ಒಂದು ವೇಳೆ ಬಿದ್ದರೆ ರಾಸಾಯನಿಕ ದ್ರಾವಣ ಸಿಂಪಡಿಸಿ ಒರೆಸಬೇಕು.

* ಒಂದು ವೇಳೆ ಅಂಗಡಿಯಿಂದ ಪ್ಯಾಕೆಟ್‌ ಸಾಮಾಗ್ರಿ ತಂದಿದ್ದರೆ ಅದನ್ನು ಅಲ್ಕೋಹಾಲ್‌ ಸೊಲ್ಯುಷನ್‌ ದ್ರಾವಣ ಅಥವಾ ಸೋಪ್‌ನೀರಿನಿಂದ ತೊಳೆಯಬೇಕು.

* ಪದಾರ್ಥಗಳನ್ನು ತೊಳೆಯುವ ಕೆಲಸ ಮುಗಿದ ನಂತರ ಮತ್ತೊಮ್ಮೆ ಕೈಯನ್ನು ಚೆನ್ನಾಗಿ ಸೋಪ್‌ನಿಂದ ತೊಳೆದುಕೊಳ್ಳಬೇಕು.

ಶಾಪಿಂಗ್‌ ವೇಳೆ ತೆಗೆದುಕೊಳ್ಳುವ ಎಚ್ಚರಿಕೆ

* ಸ್ಟೋರ್‌ ಅಥವಾ ಮಾರ್ಕೆಟ್‌ಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಬಳಸಿ.

* ಯಾವಾಗಲೂ ಬ್ಯಾಗಿನಲ್ಲಿ ಸಣ್ಣ ಅಲ್ಕೊಹಾಲ್ ಮಿಶ್ರಿತ ಹ್ಯಾಂಡ್‌ ಸ್ಯಾನಿಟೈಸರ್‌ ಸಣ್ಣ ಬಾಟಲಿ ಇರಲಿ. ನೀವು ಯಾವುದೇ ಸ್ಥಳವನ್ನು ಮುಟ್ಟಿದರೂ, ತಕ್ಷಣ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಿ.

* ಅವಧಿ ಮುಗಿದಿದ್ದ ಉತ್ಪನ್ನಗಳನ್ನು ಖರೀದಿಸಲೇಬೇಡಿ

* ಉತ್ಪನ್ನಗಳನ್ನು ಖರೀದಿಸುವ ಮುನ್ನ ಪ್ಯಾಕೆಟ್‌ಗಳು ತೆರೆಯಲಾಗಿದೆಯೇ, ಹರಿದಿದೆಯೇ ಎಂದು ಪರೀಕ್ಷಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.