ನಾಲ್ಕು ವರ್ಷಗಳ ಹಿಂದಿನ ಘಟನೆ: ಜಗತ್ತೇ ತಲ್ಲಣಿಸಿದ್ದ ಕೋವಿಡ್–19 ಕಾಲವದು. ಊರಿಗೆ ಊರೇ ‘ಲಾಕ್‌ಡೌನ್’ ಎಂಬ ಗಾಢ ಮೌನದಲ್ಲಿ ಮುಳುಗಿತ್ತು. ಅವರೊಬ್ಬ ಲೆಕ್ಕಪರಿಶೋಧಕರು; ಮನೆಯ ಜಗುಲಿಯಲ್ಲಿ ಸೋಫಾಕ್ಕೆ ಒರಗಿ ಕುಳಿತಿದ್ದ ಅವರು, ಧಾವಂತದಲ್ಲಿ ಎದ್ದವರೇ, ಕಾರನ್ನು ಹೊರತೆಗೆದು ರಸ್ತೆಯಲ್ಲಿ ಹೊರಟೇ ಬಿಟ್ಟಿದ್ದರು. ನಿಃಶಬ್ದವಾಗಿದ್ದ ರಸ್ತೆಯಲ್ಲಿ ಬಂದ ಕಾರನ್ನು ಪೊಲೀಸರು ತಡೆದರು. ಪರಸ್ಪರ ವಾಗ್ವಾದಗಳು ನಡೆದು, ನಿಯಮ ಉಲ್ಲಂಘಿಸಿದ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಯಿತು. ನಂತರ ಈ ಪ್ರಕರಣ ನ್ಯಾಯಾಲಯದ ಕಟಕಟೆಗೆ ಬಂದು ನಿಂತಿತು...
ಮರೆವಿನ ಕಾಯಿಲೆಯಿಂದ (Dementia, Alzheimer) ಬಳಲುತ್ತಿರುವ ಪತಿ ಲಾಕ್‌ಡೌನ್ ಅರಿವಿಲ್ಲದೆ ಹೊರಟಿದ್ದು, ಅವರ ಮೇಲೆ ವಿನಾ ಕಾರಣ ಪ್ರಕರಣ ದಾಖಲಾಗಿದ್ದನ್ನು ತಿಳಿದ ಪತ್ನಿ ಆಘಾತಗೊಂಡರು. ಪ್ರಕರಣ ಹಿಂಪಡೆಯುವಂತೆ ನಿವೇದಿಸಿಕೊಂಡರೂ ಸ್ಪಂದನೆ ಸಿಗಲಿಲ್ಲ. 2–3 ವರ್ಷ ಕೋರ್ಟ್‌ಗೆ ಅಲೆದಾಡಿದರು, ಪತಿಯ ಕಾಯಿಲೆಯ ಬಗ್ಗೆ ವೈದ್ಯರಿಂದ ಪ್ರಮಾಣಪತ್ರ ಪಡೆದು ನ್ಯಾಯಾಲಯದ ಮುಂದೆ ಸಲ್ಲಿಸಿದರು, ಪ್ರಕರಣ ಇತ್ಯರ್ಥ ಕಾಣಲಿಲ್ಲ. ಆ ಲೆಕ್ಕಪರಿಶೋಧಕರು ಇಹಲೋಕ ತ್ಯಜಿಸುವವರೆಗೂ ಪ್ರಕರಣ ಮುಂದುವರಿದಿತ್ತು. ಮಂಗಳೂರಿನಲ್ಲಿ ನೆಲೆಸಿದ್ದ ಆ ಲೆಕ್ಕಪರಿಶೋಧಕರ ಕುಟುಂಬದವರು ಎದುರಿಸಿದ ಸಂಕಟ ಹೇಳತೀರದು.
ಇದೊಂದು ಉದಾಹರಣೆಯಷ್ಟೆ. ಮರೆವಿನ ಕಾಯಿಲೆಯಿಂದ ಬಳಲುತ್ತಿರುವವರು, ಅವರ ಕುಟುಂಬದ ಸದಸ್ಯರು ಅನುಭವಿಸುವ ಕಷ್ಟಗಳು ಅಷ್ಟಿಷ್ಟಲ್ಲ.
ಮರೆವಿನ ಕಾಯಿಲೆಯಿಂದ ಬಳಲುವ ವ್ಯಕ್ತಿ ಮೇಲ್ನೋಟಕ್ಕೆ ಆರೋಗ್ಯವಂತರಾಗಿ ಕಾಣುತ್ತಾರೆ. ಆದರೆ, ಸ್ಮರಣಶಕ್ತಿ ಕಳೆದುಕೊಳ್ಳುವ ಅವರಿಗೆ ಜಗತ್ತಿನ ಆಗುಹೋಗುಗಳ ಪರಿವೆ ಇರುವುದಿಲ್ಲ. ಈ ಕಾಯಿಲೆ ಬರಲು ವಯಸ್ಸಾಗುವಿಕೆಯೇ ಮುಖ್ಯ ಕಾರಣ. ಆರೇಳು ದಶಕಗಳ ಹಿಂದೆ ಮನುಷ್ಯನ ಸರಾಸರಿ ಆಯುಸ್ಸು 37 ಇತ್ತು, ಈಗ ಅದು 74 ಆಗಿದೆ. ಆಧುನಿಕ ತಂತ್ರಜ್ಞಾನವು ‘ನಿರಾಯಾಸ’ದ ಜೀವನಶೈಲಿಗೆ ನಮ್ಮನ್ನು ಒಗ್ಗಿಸಿದೆ.
ದೇಹವನ್ನು ದಂಡಿಸಿ ದುಡಿಯುತ್ತಿದ್ದ ಶ್ರಮಜೀವನ ಮರೆಯಾಗಿದೆ. ಸೌಲಭ್ಯಗಳು ಕೆಲಸವನ್ನು ಸುಲಭವಾಗಿಸಿವೆ. ಮೊಬೈಲ್ ಎಂಬ ಮಾಯಾಲೋಕವು ಪರಸ್ಪರ ಭೇಟಿ, ಸ್ನೇಹದ ತಂತುವನ್ನೇ ತುಂಡರಿಸಿದೆ. ಪರಿಣಾಮವಾಗಿ, ಒಂಟಿತನ, ಸಾಮಾಜಿಕ ಸಂಪರ್ಕ ಕಡಿಮೆಯಾಗಿ ಆಲೋಚನಾಶಕ್ತಿ ದುರ್ಬಲಗೊಳ್ಳುತ್ತಿದೆ. ಇತ್ತೀಚೆಗೆ ಜನರನ್ನು ಹೆಚ್ಚು ಕಾಡುವ ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳು ಮರೆವಿನ ಕಾಯಿಲೆ ಪ್ರಮಾಣ ಹೆಚ್ಚಲು ಕಾರಣವಾಗುತ್ತಿವೆ. ಪರಿಸರಮಾಲಿನ್ಯ, ಶುದ್ಧ ಗಾಳಿಯ ಕೊರತೆಯೂ ಇದರೊಂದಿಗೆ ಸೇರಿಕೊಂಡಿದೆ.
ಗ್ಯಾಜೆಟ್‌ಗಳಿಗೆ ಅಂಟಿಕೊಂಡ ಪರಿಣಾಮ ರಾತ್ರಿಯ ಗಾಢನಿದ್ರೆಯ ಕೊರತೆಯಿಂದ ಮಿದುಳಿನ ಕಣಗಳಿಗೆ ವಿಶ್ರಾಂತಿ ಸಿಗುತ್ತಿಲ್ಲ. ‘ಅಲ್ಝೈಮರ್’ ಎಂಬ ನಿಧಾನ ವಿಷ ಮಿದುಳಿನ ಯೋಚನಾ ಸಾಮರ್ಥ್ಯವನ್ನು ಕೊಲ್ಲುತ್ತಿದೆ. 2015ರಲ್ಲಿ ದೇಶದಲ್ಲಿ ನಡೆದ ಸರ್ವೆ ಪ್ರಕಾರ 60 ವರ್ಷ ಮೇಲ್ಪಟ್ಟ ಶೇ 3.7ರಷ್ಟು ಜನರಲ್ಲಿ ಮರೆವಿನ ಕಾಯಿಲೆ ಪತ್ತೆಯಾಗಿತ್ತು, ಪ್ರಸ್ತುತ ಈ ಪ್ರಮಾಣ ಶೇ 7.2ಕ್ಕೆ ಏರಿಕೆಯಾಗಿದೆ.
ದೇಹದೊಳಗೆ ಹಕ್ಕು ಸ್ಥಾಪಿಸಿರುವ ಅಧಿಕ ರಕ್ತದೊತ್ತಡ,ಮಧುಮೇಹ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳ ಬೇಕು. ರಾತ್ರಿ ಬೇಗ ಮಲಗಿ, ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದನ್ನು ರೂಢಿಸಿಕೊಳ್ಳಬೇಕು. ಮುಂಜಾನೆಯ ಸೂರ್ಯಕಿರಣಗಳು ಮಿದುಳಿಗೆ ಬೇಕಾಗುವ ಆಹಾರವನ್ನು ಒದಗಿಸುತ್ತವೆ. ಪ್ರತಿನಿತ್ಯ ಕನಿಷ್ಠ ಐದು ಕಿಲೋ ಮೀಟರ್ ವಾಕಿಂಗ್, ವ್ಯಾಯಾಮ ಮಾಡುವುದು ಅತಿ ಮುಖ್ಯ. ತರಕಾರಿ, ಹಣ್ಣು ಜೊತೆಗೆ, ದಿನಕ್ಕೆ ಎರಡು ಗ್ಲಾಸ್ ಹಾಲು ಸೇವನೆ, ಆರೋಗ್ಯಕರ ಆಹಾರ, ಉತ್ತಮ ಜೀವನಶೈಲಿಯನ್ನು ಪಾಲಿಸಿದರೆ, ಕಾಯಿಲೆ ಬರುವುದನ್ನು ತಡೆಗಟ್ಟಬಹುದು. ಎಣ್ಣೆಯಲ್ಲಿ ಕರಿದ ತಿನಿಸು, ಸಿಹಿ ಪದಾರ್ಥಗಳನ್ನು ತ್ಯಜಿಸುವುದು ಹಿತ.
ವಯಸ್ಸು ಹಿಮ್ಮುಖವಾಗಿ ಚಲಿಸಲಾರದು. ಆದರೆ, ಬದುಕಿಗೊಂದು ಶಿಸ್ತು ರೂಢಿಸಿಕೊಂಡರೆ ಕಾಯಿಲೆಗೆ ತುತ್ತಾದವರು, ಅದರ ತೀವ್ರತೆಯನ್ನು ಶೇ 50ರಷ್ಟು ಹಿಂದಕ್ಕೋಡಿಸಲು ಸಾಧ್ಯವಿದೆ.
50 ವರ್ಷ ದಾಟಿದ ಮೇಲೆ ಸಹಜವಾಗಿರುವ ವ್ಯಕ್ತಿಗೆ ಸ್ಮರಣಶಕ್ತಿ ಕುಂಠಿತವಾಗುತ್ತಿರುವುದು ಅನುಭವಕ್ಕೆ ಬಂದರೆ, ನಿದ್ದೆಯ ಕ್ರಮ ಅಸಹಜವಾದರೆ, ವೈದ್ಯರನ್ನು ಭೇಟಿ ಮಾಡಬೇಕು. ಮಧುಮೇಹ ಇರುವವರು ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿದರೆ ಹೆಚ್ಚು ಸುರಕ್ಷಿತ. ಈ ಕಾಯಿಲೆಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ದೊರೆತರೆ, ರೋಗಿಯ ಆರೋಗ್ಯ ಸುಧಾರಣೆಯ ಸಾಧ್ಯತೆ ಹೆಚ್ಚಿರುತ್ತದೆ. ಕಾಯಿಲೆಯನ್ನು ಹತೋಟಿಯಲ್ಲಿ ಇಡಬಹುದು. ಮಧ್ಯಮ ಹಂತಕ್ಕೆ ತಲುಪಿದಾಗ ನೆನಪಿನ ಶಕ್ತಿ ಕಳೆದು ಹೋಗಲು ಪ್ರಾರಂಭವಾಗಿ, ನಂತರ ತಾವೇ ಯಾರೆಂಬುದನ್ನೂ ಮರೆಯುವ ಸ್ಥಿತಿ ಎದುರಾಗಬಹುದು. ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದರೆ, ಕಾಯಿಲೆಗೆ ತುತ್ತಾದ ವ್ಯಕ್ತಿ, ಕುಟುಂಬಕ್ಕೆ ಭಾರವಾಗುವ ಅಪಾಯವೂ ಇರುತ್ತದೆ.
ಆನುವಂಶಿಕ ಹಿನ್ನೆಲೆ ಇರುವವರು 40ರಿಂದ 60 ವಯೋಮಾನದ ನಡುವಿನಲ್ಲಿ ಈ ಕಾಯಿಲೆಗೆ ತುತ್ತಾಗಬಹುದು. ಕಾಯಿಲೆಯ ಲಕ್ಷಣ ಕಾಣಿಸಿಕೊಂಡರೆ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು. ಮನೋರೋಗ ತಜ್ಞರು, ನರರೋಗ ತಜ್ಞರು, ಜೆರಿಯಾಟ್ರಿಕ್ ತಜ್ಞರ ಬಳಿ ತಪಾಸಣೆ ಮಾಡಿಸಿಕೊಳ್ಳಬಹುದು.
ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ‘ಬ್ರೇನ್ ಹೆಲ್ತ್ ಕ್ಲಿನಿಕ್’ ವಿಭಾಗ ಇದ್ದು, ಇಲ್ಲಿನ ವೈದ್ಯರೂ ತಪಾಸಣೆ ಮಾಡುತ್ತಾರೆ. ನೇರವಾಗಿ ವೈದ್ಯರ ಬಳಿ ಹೋಗಲು ಮುಜುಗರವೆನ್ನಿಸಿದರೆ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲೂ ತಪಾಸಣೆ ಲಭ್ಯವಿದೆ.
ನಿರೂಪಣೆ: ಸಂಧ್ಯಾ ಹೆಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.