ADVERTISEMENT

PV Web Exclusive | ವೈದ್ಯನಾದರೆ ಏನು ಪ್ರಿಯೆ ಲೇಖನ ಬರೆಯುವೆ...

ರವೀಂದ್ರ ಭಟ್ಟ
Published 22 ನವೆಂಬರ್ 2020, 9:21 IST
Last Updated 22 ನವೆಂಬರ್ 2020, 9:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   
""
""
""

ಆಚಾರ್ಯ ರಜನೀಶ್ ತಮ್ಮ ಭಾಷಣದಲ್ಲಿ ಒಮ್ಮೆ ಹೇಳಿದ್ದರು. ‘ಆರೋಗ್ಯ ಎಂದರೆ ಏನು?’ ಎಂದು ನೀವು ಯಾವುದೇ ವೈದ್ಯರನ್ನು ಕೇಳಿ. ಅವರಿಗೆ ಆರೋಗ್ಯ ಎಂದರೆ ಏನು ಎನ್ನುವುದು ಗೊತ್ತಿರುವುದಿಲ್ಲ. ಅವರು ಅನಾರೋಗ್ಯ ಎಂದರೆ ಏನು ಎಂದು ವಿವರಿಸುತ್ತಾರೆ ಎಂದು ಹೇಳಿದ್ದರು. ಅನಾರೋಗ್ಯವೇ ಭಾಗ್ಯ ಎಂಬ ವೈದ್ಯರೂ ಇದ್ದಾರೆ. ನಾವು ಇಲ್ಲಿ ಮಾತನಾಡುತ್ತಿರುವುದು ಅವರ ಬಗ್ಗೆ ಅಲ್ಲ. ಕೇವಲ ವೈದ್ಯಕೀಯ ಕಾರ್ಯವನ್ನು ಮಾಡುವುದಲ್ಲದೆ ಜನರ ಮಾನಸಿಕ ಆರೋಗ್ಯದ ಕಡೆಗೂ ಗಮನ ನೀಡುವ ಸಾಕಷ್ಟು ಮಂದಿ ವೈದ್ಯರು ನಮ್ಮ ನಡುವೆ ಇದ್ದಾರೆ. ಕನ್ನಡದಲ್ಲಿ ವೈದ್ಯ ಸಾಹಿತ್ಯ ಶ್ರೀಮಂತವಾಗಿಯೇ ಇದೆ.

ಕ್ರಿ.ಶ. 1360ರಲ್ಲಿಯೇ ಮಂಗರಾಜ ‘ಮರ, ಗಾಳಿ, ಸೂಳೆ, ಬೇಟೆ ಮುಂತಾದವುಗಳನ್ನು ಹೊಗಳಿ ಕಾವ್ಯ ಬರೆಯುವುದಕ್ಕಿಂತ ಸರ್ವಜನೋಪಕಾರಿಯಾದ ವೈದ್ಯಶಾಸ್ತ್ರವನ್ನು ಜನರಿಗೆ ಹೇಳುವುದು ಹೆಚ್ಚು ಉಪಕಾರಿ. ರೋಗಿಯೊಬ್ಬನಿಗೆ ನೀವು ಚಿಕಿತ್ಸೆ ನೀಡಿದರೆ ಅವನಿಗಷ್ಟೇ ಉಪಯೋಗ. ಚಿಕಿತ್ಸೆ ಬಗ್ಗೆ ಬರೆದರೆ ಎಲ್ಲರಿಗೂ ಉಪಯೋಗ’ ಹೇಳಿದ್ದ. ಈ ಮಾತನ್ನು ಕನ್ನಡದ ವೈದ್ಯರು ಅನಾದಿ ಕಾಲದಿಂದಲೂ ಪಾಲಿಸಿಕೊಂಡೇ ಬಂದಿದ್ದಾರೆ.

ಪಾರಂಪರಿಕ ವೈದ್ಯ ಪದ್ಧತಿ

ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಔಷಧ ವಿಧಾನವನ್ನು ಹೇಳುವ ಕ್ರಮ ಕಡಿಮೆ. ಔಷಧಿಯನ್ನು ಗುಟ್ಟು ಮಾಡುತ್ತಿದ್ದರು. ಎಲ್ಲರಿಗೂ ಹೇಳುತ್ತಿರಲಿಲ್ಲ. ಆದರೂ ಧನ್ವಂತರಿ, ಚರಕ, ಶುಶ್ರುತ ಗ್ರಂಥಗಳು ಕನ್ನಡದಲ್ಲಿ ಬಂದಿದ್ದವು. ಕ್ರಿ.ಶ. 1100ರಲ್ಲಿ ಕೀರ್ತಿರಾಮನ ‘ಗೋವೈದ್ಯ’, ಕ್ರಿ.ಶ. 1500ರಲ್ಲಿ ಶ್ರೀಧರ ದೇವನ ವೈದ್ಯಾಮೃತ, 1750ರಲ್ಲಿ ತಿಮ್ಮರಾಜನ ಸ್ತ್ರೀ ವೈದ್ಯ, ಬಾಲ ವೈದ್ಯ, ವ್ರಣ ವೈದ್ಯ ಮುಂತಾದ ಕೃತಿಗಳು ಕನ್ನಡದಲ್ಲಿ ಬಂದಿದ್ದವು. ಅಂದರೆ ವೈದ್ಯಕೀಯ ಸಾಹಿತ್ಯಕ್ಕೆ ಕನ್ನಡದಲ್ಲಿ ಬಹಳ ದೊಡ್ಡ ಇತಿಹಾಸವೇ ಇದೆ.

ADVERTISEMENT

ಭಾರತದಲ್ಲಿ ಆಧುನಿಕ ವೈದ್ಯ ಪದ್ಧತಿ ಜನಪ್ರಿಯವಾದ ನಂತರ ಆ ಕುರಿತ ಕೃತಿಗಳೂ ಬರತೊಡಗಿದವು. 1904ರಲ್ಲಿ ಎಂ.ಗುರುರಾವ್ ಅವರು ‘ಆಂಗ್ಲೇಯ ವೈದ್ಯ’ ಎಂಬ ಕೃತಿ ರಚಿಸಿದರು. 1928ರಲ್ಲಿ ಮೈಸೂರಿನ ಡಿ.ಕೆ.ಭಾರಧ್ವಾಜ್ ಅವರು ದಾಂಪತ್ಯ ವಿಜ್ಞಾನ, ಸಂತಾನ ವಿಜ್ಞಾನ, ಜನನ ನಿಯಂತ್ರಣ, ಆಹಾರ ವಿಜ್ಞಾನ ಮುಂತಾದ ಗ್ರಂಥಗಳನ್ನು ರಚಿಸಿದ್ದರು. ಧಾರವಾಡದ ಡಾ.ಎಂ.ಗೋಪಾಲಕೃಷ್ಣ ರಾಯರು ಪ್ರೇಮಕಲಾ, ಪೌರುಷ, ಗರ್ಭ ನಿರೋಧ, ಕಾಮದ ಗುಟ್ಟು ಮುಂತಾದ ಕೃತಿಗಳನ್ನು ರಚಿಸಿದ್ದರು.

1950ರ ನಂತರ ಬಹಳ ದೊಡ್ಡಸಂಖ್ಯೆಯ ವೈದ್ಯರು ಕನ್ನಡದಲ್ಲಿ ಪುಸ್ತಕ ಬರೆದಿದ್ದಾರೆ. ಡಾ.ಎಂ.ಶಿವರಾಂ, ದೊಡ್ಡೇರಿ ವೆಂಕಟಗಿರಿರಾವ್, ತ್ರಿವೇಣಿ, ಅನುಪಮಾ ನಿರಂಜನ, ಡಾ.ಸ.ಜ.ನಾ, ಡಾ.ಅಶೋಕ ಪೈ, ಡಾ.ಗಿರಿಜಮ್ಮ, ಡಾ.ಕರವೀರಪ್ರಭು ಕ್ಯಾಲಕೊಂಡ, ಡಾ.ನಾ.ಮೊಗಸಾಲೆ ಮುಂತಾದ ವೈದ್ಯರು ವೈದ್ಯಕೀಯ ಕ್ಷೇತ್ರಕ್ಕಿಂತಲೂ ಸಾಹಿತ್ಯ ಕ್ಷೇತ್ರದಲ್ಲಿಯೇ ಖ್ಯಾತರಾದವರು. ವೈದ್ಯಕೀಯ ವಿಷಯಗಳ ಕುರಿತಂತೆ ಬರೆಯುವುದಕ್ಕಿಂತ ಹೆಚ್ಚಾಗಿ ಕತೆ, ಕವಿತೆ, ಕಾದಂಬರಿಗಳನ್ನು ಬರೆದು ಖ್ಯಾತರಾಗಿದ್ದಾರೆ. ಸಾಹಿತ್ಯ ಬರವಣಿಗೆಗಾಗಿ ಅತ್ಯುನ್ನತ ಪ್ರಶಸ್ತಿಗಳನ್ನೂ ಗಳಿಸಿದ್ದಾರೆ. ಡಾ.ಡಿ.ಎಸ್.ಶಿವಪ್ಪ ವೈದ್ಯಪದಕೋಶ ರಚಿಸಿದ್ದಾರೆ.

ಡಾ.ಸಿ.ಆರ್.ಚಂದ್ರಶೇಖರ್, ಡಾ.ಪಿ.ಎಸ್.ಶಂಕರ್, ಡಾ.ಸಂಜೀವ ಕುಲಕರ್ಣಿ, ಡಾ.ವಸುಂಧರಾ ಭೂಪತಿ ಸೇರಿದಂತೆ ನೂರಾರು ವೈದ್ಯರು ಈಗ ಲೇಖನಗಳನ್ನು ಬರೆಯುತ್ತಿದ್ದಾರೆ. ವೈದ್ಯ ಸಾಹಿತ್ಯ ಪರಿಷತ್, ವೈದ್ಯಬರಹಗಾರರ ಕೂಟಗಳು ಸಕ್ರಿಯವಾಗಿವೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಈಗ ವೈದ್ಯ ಸಾಹಿತಿಗಳು ಸಾಕಷ್ಟು ಉತ್ತಮ ಕೃಷಿ ಮಾಡುತ್ತಿದ್ದಾರೆ. ಕೊರೊನಾ ಕಾಲದಲ್ಲಿಯಂತೂ ಇನ್ನಷ್ಟು ಮಂದಿ ವೈದ್ಯರು ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದಾರೆ.

ಡಾ.ಸಿ.ಆರ್.ಚಂದ್ರಶೇಖರ್ ಮತ್ತು ಡಾ.ಗಿರಿಜಮ್ಮ

ಜನ ಸಾಮಾನ್ಯರಲ್ಲಿಯೂ ಈಗ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿದೆ. ಚಿಕಿತ್ಸೆ ಪಡೆಯುದಕ್ಕಿಂತ ರೋಗ ಬರದಂತೆ ತಡೆಯುವುದು ಒಳ್ಳೆಯದು ಎಂಬ ಭಾವನೆ ಮೂಡಿದೆ. ರಾಜ್ಯದಲ್ಲಿ ಬಹಳಷ್ಟು ವೈದ್ಯರು ತಮ್ಮ ಕರ್ಯಕ್ಷಮತೆಯಿಂದ, ಜನೋಪಕಾರಿ ಕ್ರಮಗಳಿಂದ ಜನಪ್ರಿಯರಾಗಿದ್ದಾರೆ. ಗೋಕಾಕ್ ನಲ್ಲಿ ಡಾ.ಎಂ.ಕೆ.ವೈದ್ಯ ಎಂಬ ಡಾಕ್ಟರ್ ಒಬ್ಬರು ಇದ್ದರು. ಕರ್ನಾಟಕ ಆರೋಗ್ಯ ಸಂಸ್ಥೆಯಲ್ಲಿ ಅವರು 1948ರಿಂದ 1993ರವರೆಗೂ ಅವರು ಸೇವೆ ಸಲ್ಲಿಸಿದ್ದರು. ಅಪರೂಪದ ಚಿಕಿತ್ಸೆ ನೀಡುತ್ತಿದ್ದರು. ಅವರು ಒಂದು ಸಂಪ್ರದಾಯವನ್ನು ಹುಟ್ಟು ಹಾಕಿದ್ದರು. ಅವರ ಆಸ್ಪತ್ರೆಯಲ್ಲಿ ಯಾರಾದರೂ ನಿಧನರಾದರೆ ಪಾರ್ಥಿವ ಶರೀರದ ಮೇಲೆ ಹೂಮಾಲೆ ಇಟ್ಟು ‘ನಾವು ಪ್ರಾಮಾಣಿಕವಾಗಿ ಚಿಕಿತ್ಸೆ ನೀಡಿದ್ದೇವೆ. ಆದರೂ ನಿಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅರಿತೋ ಅರಿಯದೆಯೋ ತಪ್ಪಾಗಿದ್ದರೆ ಕ್ಷಮಿಸಿ’ ಎಂದು ಕೇಳಿಕೊಳ್ಳುತ್ತಿದ್ದರಂತೆ.

ವೈದ್ಯರು ಹೇಗಿರಬೇಕು ಎನ್ನುವುದಕ್ಕೆ ಒಂದು ಕತೆ ಇದೆ. ಒಮ್ಮೆ ಶ್ರೀಕೃಷ್ಣನಿಗೆ ತಲೆ ನೋವು ಬಂತಂತೆ. ವಿಪರೀತ ತಲೆ ನೋವು. ನೋವು ತಡೆಯಲಾರದೆ ಕೃಷ್ಣ ನೆಲದ ಮೇಲೆ ಉರುಳಾಡಿದನಂತೆ. ಒಂದೆಡೆ ರುಕ್ಮಿಣಿ, ಇನ್ನೊಂದೆಡೆ ಸತ್ಯಭಾಮೆ ಏನೆಲ್ಲಾ ಔಷಧಿ ಮಾಡಿದರೂ ತಲೆನೋವು ಕಡಿಮೆಯಾಗಲಿಲ್ಲ. ಆ ರಾತ್ರಿ ಕೃಷ್ಣನಿಗೆ ನಿದ್ದೆಯೂ ಬರಲಿಲ್ಲ. ಬೆಳಿಗ್ಗೆ ಹಾಸಿಗೆಯಿಂದ ಎದ್ದ ಕೃಷ್ಣ ‘ತಲೆ ನೋವು ಕಡಿಮೆ ಮಾಡುವ ಔಷಧಿ ನನಗೆ ಗೊತ್ತಾಯ್ತು’ ಎಂದನಂತೆ. ‘ಹೌದೇ, ಏನು ಔಷಧಿ’ ಎಂದು ಪತ್ನಿಯರು ಕೇಳಿದರಂತೆ. ಅದಕ್ಕೆ ಕೃಷ್ಣ ‘ಯಾರು ನನ್ನನ್ನು ಬಹಳ ಪ್ರೀತಿಸುತ್ತಾರೋ ಅವರ ಪಾದದ ಧೂಳನ್ನ ತಲೆಗೆ ಸವರಿದರೆ ತಲೆನೋವು ಕಡಿಮೆಯಾಗುತ್ತದೆ’ ಎಂದನಂತೆ. ‘ಏನು ನಮ್ಮ ಪಾದದ ಧೂಳನ್ನು ನಿನ್ನ ತಲೆಗೆ ಹಚ್ಚುವುದೇ? ಸಾಧ್ಯವೇ ಇಲ್ಲ’ ಎಂದು ಪತ್ನಿಯರು ಹೇಳಿದರಂತೆ. ಅರಮನೆಯಲ್ಲಿಯೂ ಯಾರೂ ಇದಕ್ಕೆ ಸಿದ್ಧರಾಗಲಿಲ್ಲ. ಆಗ ಕೃಷ್ಣ ಒಬ್ಬ ಸೇವಕನನ್ನು ಕರೆದು ಗೋಪಿಕೆಯರಿಗೆ ವಿಷಯ ತಿಳಿಸುವಂತೆ ಹೇಳಿದನಂತೆ.

ಸೇವಕ ಸೀದಾ ನದಿ ದಂಡೆಗೆ ಹೋಗಿ ಗೋಪಿಕೆಯರಿಗೆ ವಿಷಯ ತಿಳಿಸಿದ. ‘ಒಂದು ದೊಡ್ಡ ಚೀಲ ತಗೊಳಪಾ, ನಮ್ಮ ಕಾಲಿನ ಧೂಳು ಕೊಡುತ್ತೇವೆ’ ಎಂದು ಗೋಪಿಕೆಯರು ಒಕ್ಕೊರಲಿನಿಂದ ಹೇಳಿದರಂತೆ. ‘ಅಯ್ಯೋ ನಿಮ್ಮ ಕಾಲಿನ ಧೂಳನ್ನು ಕೃಷ್ಣನ ಹಣೆಗೆ ಹಚ್ಚುತ್ತೀರಾ’ ಎಂದು ಸೇವಕ ಕೇಳಿದ್ದಕ್ಕೆ ‘ಮೊದಲು ಕೃಷ್ಣನ ತಲೆ ನೋವು ಕಡಿಮೆಯಾಗಲಿ, ಆ ಮೇಲೆ ಉಳಿದದ್ದು ಆಲೋಚಿಸುವ’ ಎಂದು ಹೇಳಿ ಧೂಳನ್ನು ಕೊಟ್ಟರಂತೆ ಗೋಪಿಕೆಯರು. ನಮ್ಮ ವೈದ್ಯರೂ ಗೋಪಿಕೆಯರ ಮಾರ್ಗವನ್ನೇ ಅನುಸರಿಸಿದರೆ ಚೆನ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.