
ಔಷಧ
ಮುಂಬೈ: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಸ್ಥಿರ, ದೀರ್ಘಕಾಲೀನ ಔಷಧ ವ್ಯಾಪಾರವನ್ನು ಸಕ್ರಿಯಗೊಳಿಸುತ್ತದೆ ಎಂದು ಭಾರತೀಯ ಔಷಧ ರಫ್ತು ಉತ್ತೇಜನಾ ಮಂಡಳಿ (ಫಾರ್ಮೆಕ್ಸಿಲ್) ಅಧ್ಯಕ್ಷ ನಮಿತ್ ಜೋಶಿ ಹೇಳಿದ್ದಾರೆ.
‘ನಮ್ಮ ದೇಶ (ಭಾರತ) ಉತ್ತಮ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಉತ್ಪಾದನಾ ನೆಲೆಯಿಂದ ಬೆಂಬಲಿತವಾಗಿದೆ. ಸುರಕ್ಷತೆ, ಕೈಗೆಟುಕುವಿಕೆ, ನಿರಂತರತೆ ಮತ್ತು ಪೂರೈಕೆಯ ಮೂಲಕ ಐರೋಪ್ಯ ರಾಷ್ಟ್ರಗಳ ಆರೋಗ್ಯ ವ್ಯವಸ್ಥೆ ಮತ್ತು ಗ್ರಾಹಕರಿಗೆ ನೆರವು ಒದಗಿಸಲಿದೆ’ ಎಂದು ಅವರು ತಿಳಿಸಿದ್ದಾರೆ.
‘ಔಷಧ ವಲಯಕ್ಕೆ ಮುಕ್ತ ವ್ಯಾಪಾರ ಒಪ್ಪಂದವು ರಚನಾತ್ಮಕ ಸ್ಪರ್ಧಾತ್ಮಕತೆಯನ್ನು ನೀಡುತ್ತದೆ. ಭಾರತದಿಂದ ಐರೋಪ್ಯ ರಾಷ್ಟ್ರಗಳಿಗೆ ರಫ್ತಾಗುವ ಶೇಕಡ 93ರಷ್ಟು ಉತ್ಪನ್ನಗಳು ಸುಂಕ ರಹಿತವಾಗಿ ಅಲ್ಲಿನ ಮಾರುಕಟ್ಟೆ ಪ್ರವೇಶಿಸುವುದರಿಂದ ಭಾರತದ ಔಷಧ ಸೂತ್ರೀಕರಣಗಳು, ಎಪಿಐ ಉತ್ಪಾದನೆಯ ಕಾರ್ಯಜಾಲ ಮತ್ತಷ್ಟು ವಿಸ್ತರಣೆಯಾಗಲಿದೆ. ಜತೆಗೆ, ಮೌಲ್ಯವರ್ಧಿತ ಔಷಧಿಗಳ ಸ್ಥಾನವನ್ನು ಗಮನಾರ್ಹವಾಗಿ ಬಲಪಡಿಸುತ್ತದೆ’ ಎಂದು ಜೋಶಿ ವಿವರಿಸಿದ್ದಾರೆ.
‘ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಔಷಧ ಉದ್ಯಮಗಳ ಮೇಲೆ ವಿಶೇಷವಾಗಿ ಪರಿಣಾಮ ಬೀರುತ್ತದೆ. ಅವುಗಳಲ್ಲಿ ಹಲವು ಉದ್ಯಮಗಳು ಉತ್ತಮ ಗುಣಮಟ್ಟದ ಸಾಮರ್ಥ್ಯವನ್ನು ಹೊಂದಿವೆ. ಆದರೆ, ಹೆಚ್ಚು ನಿಯಂತ್ರಿತ ಮಾರುಕಟ್ಟೆಗಳಲ್ಲಿ ವೆಚ್ಚ ಮತ್ತು ಪ್ರವೇಶ ಅಡೆತಡೆಗಳನ್ನು ಎದುರಿಸುತ್ತಿವೆ’ ಎಂದು ಅವರು ತಿಳಿಸಿದ್ದಾರೆ.
ಸುಂಕ ಕಡಿತ ಮತ್ತು ಸುಗಮ ಮಾರುಕಟ್ಟೆ ಪ್ರವೇಶದಿಂದ ರಫ್ತು ಹೆಚ್ಚಳ ಮತ್ತು ಹೂಡಿಕೆಗೆ ಉತ್ತೇಜನ ಸಿಗಲಿದೆ. ಜೆನೆರಿಕ್ಸ್, ಎಪಿಐಗಳು, ಲಸಿಕೆಗಳು ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ವೃದ್ಧಿಯಾಗಲಿದೆ. ಜತೆಗೆ, ಎಂಎಸ್‌ಎಂಇಗಳು ಹಾಗೂ ದೊಡ್ಡ ತಯಾರಕರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.