
ನಮಗೆಲ್ಲರಿಗೂ ಗೊತ್ತಿರುವಂತೆ ಜೀವನ ಒಂದು ನಿರಂತರ ಪ್ರಕ್ರಿಯೆ. ಜೀವನ ಯಾರಿಗೂ ಕಾಯುವುದಿಲ್ಲ. ಇಲ್ಲಿ ಯಾರೂ ಚಿರಕಾಲ ಇರದಿದ್ದರೂ ಕೆಲವರು ತಮ್ಮ ವಿಚಾರಧಾರೆಗಳಿಂದ ಅಥವಾ ಮಹಾಕಾರ್ಯಗಳಿಂದ ಎಲ್ಲರ ಮನಗಳಲ್ಲಿ ಶಾಶ್ವತವಾಗಿ ನೆಲೆಮಾಡಿದ್ದಾರೆ. ಹುಲುಮಾನವರಾದ ನಮಗೆ ಇವರಷ್ಟು ಸಾಧನೆ ಮಾಡಲಾಗದಿದ್ದರೂ ನಮ್ಮ ಮನಸ್ಸಿನ ನೆಮ್ಮದಿಗೆ, ಸುತ್ತಮುತ್ತಲಿನವರ ಒಳಿತಿಗೆ ಕೊಂಚವಾದರೂ ಪ್ರಯತ್ನಪಡುವ ಅವಕಾಶ ಇದ್ದೇ ಇದೆ. ಇರುವ ಒಂದು ಜೀವನದಲ್ಲೇ ನಮ್ಮ ಬದುಕನ್ನು, ವಿಚಾರಶೀಲತೆಯನ್ನು ಸ್ವಲ್ಪವಾದರೂ ಮೇಲ್ಮಟ್ಟಕ್ಕೇರಿಸುವ ಮತ್ತು ಅದರಿಂದ ಮನಃಶಾಂತಿಯನ್ನು ಪಡೆಯುವ ಅವಕಾಶವನ್ನು ನಾವು ಕೈಚೆಲ್ಲಬಾರದು. ಇದನ್ನೆಲ್ಲ ಸಾಧಿಸಲು ನಮ್ಮ ಈ ದೇಹವೇ ಸಾಧನ ಹಾಗೂ ಅದರ ಸುಸ್ಥಿತಿಯೇ ನಮ್ಮ ಮೊದಲ ಹೆಜ್ಜೆ.
ಆದ್ದರಿಂದ ನಮ್ಮ ಆರೋಗ್ಯದ ಬಗ್ಗೆಯೂ ಕಾಳಜಿಯನ್ನು ವಹಿಸಿ, ಅದಕ್ಕೂ ಒಂದಿಷ್ಟು ಸಮಯ ಮತ್ತು ಶ್ರದ್ಧೆಯನ್ನು ಮೀಸಲಿಡುವುದು ನಾವು ಮಾಡುವ ಒಂದು ಉತ್ತಮ ಹೂಡಿಕೆಯೇ ಹೌದು. ಇಂದಿನ ಯುಗದಲ್ಲಿ ಇದು ತುಂಬಾ ಅವಶ್ಯ ಕೂಡ. ನಾವು ನಮ್ಮ ಯೌವನದ ಬಹುತೇಕ ಸಮಯವನ್ನು ಧನಾರ್ಜನೆಗೇ ವಿನಿಯೋಗಿಸುತ್ತೇವೆ; ಅದೂ ನಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ! ನಂತರ ವೃದ್ಧಾಪ್ಯದಲ್ಲಿ ಅದೇ ಹಣವನ್ನು ಆರೋಗ್ಯ ಕಾಪಾಡಿಕೊಳ್ಳಲು ಖರ್ಚು ಮಾಡುತ್ತೇವೆ. ನಾವು ಕಷ್ಟಪಟ್ಟು ಗಳಿಸಿದ ಹಣವನ್ನು ನಮಗಾಗಿಯೋ, ಇತರರ ಸಹಾಯಕ್ಕೋ ಅಥವಾ ಸಮಾಜಕ್ಕೆ ದಾನ ಮಾಡುವುದಕ್ಕೂ ಆಗದೇ ಹತಾಶೆ ಅನುಭವಿಸುತ್ತೇವೆ.
ಈಗಿನ ಜೀವನಶೈಲಿಗೆ ನಾವೆಷ್ಟು ಒಗ್ಗಿ ಹೋಗಿದ್ದೇವೆಂದರೆ ನಮ್ಮ ಪ್ರತಿಯೊಂದು ಅವಶ್ಯಕತೆಗಳನ್ನ ಆ್ಯಪ್ ಮೂಲಕ ಹುಡುಕುತ್ತೇವೆ. ಅದಕ್ಕಾಗಿ ನಮ್ಮ ಸ್ಮಾರ್ಟ್‌ಫೋನುಗಳನ್ನು ಸದಾ ಅಪ್‌ಡೇಟ್ ಮಾಡ್ತಾ ಇರುತ್ತೇವೆ. ಫೋನು ಅದೇ ಇದ್ದರೂ ತಂತ್ರಜ್ಞಾನದ ಹೊಸ ಅವತರಣಿಕೆಗಳನ್ನು ಆಗಾಗ ಅಪ್‌ಡೇಟ್ ಮಾಡುತ್ತಲೇ ಇರಬೇಕು, ಇಲ್ಲದಿದ್ದರೆ ನಮ್ಮ ಫೋನು ಅಪ್ರಸ್ತುತವಾಗಿಬಿಡುತ್ತದೆ. ಇದೇ ಸೂತ್ರವನ್ನು ನಾವು ನಮ್ಮ ದೇಹಕ್ಕೂ ಅಳವಡಿಸಿಕೊಳ್ಳಹುದು. ಫೋನ್ ಹಾಳಾದರೆ ಅದನ್ನೆಸೆದು ಹೊಸ ಫೋನೊಂದನ್ನು ಕೊಳ್ಳಬಹುದು. ಆದರೆ ದೇಹದ ವಿಷಯದಲ್ಲಿ ಹಾಗೆ ಮಾಡಲಾಗುವುದಿಲ್ಲ. ಈ ಜನ್ಮಕ್ಕೆ ಇದೊಂದೇ ದೇಹ ಅಲ್ಲವೇ. ಹಾಗಾಗಿ ನಾವು ಉತ್ತಮ ಆರೋಗ್ಯಶೈಲಿಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತ ಈ ದೇಹವೆಂಬ ಸ್ಮಾರ್ಟ್‌ಫೋನನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ‘A sound mind in a sound body’ (ದೃಢವಾದ ದೇಹದಲ್ಲಿ ದೃಢವಾದ ಮನಸ್ಸು) ಎಂಬ ವಿವೇಕವಾಣಿಯಂತೆ ಅರಿಷಡ್ವರ್ಗಗಳೆಂಬ ಬೇಡದಿರುವ ಆ್ಯಪ್‌ಗಳನ್ನು ದೂರವಿಟ್ಟು ಉತ್ತಮ ಯೋಚನೆಗಳು, ಆರೋಗ್ಯಕರ ಹವ್ಯಾಸಗಳು, ಕರುಣೆ–ಸಹಾನುಭೂತಿಗಳೆಂಬ ಆ್ಯಪ್‌ಗಳಿಂದ ನಮ್ಮ ದೇಹವನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು.
ಈಗಿನ ಇಂಟರ್‌ನೆಟ್ ಜಮಾನದಲ್ಲಿ ನೂರೆಂಟು ಹವ್ಯಾಸಗಳ ಜಾಹೀರಾತುಗಳು, ಸಲಹೆ-ಸೂಚನೆಗಳು ನಮ್ಮ ಕಣ್ಣಿಗೆ ದಿನವೂ ಬೀಳುತ್ತವೆ. ಅದು ಜಿಮ್ ಆಗಿರಬಹುದು, ಅಡುಗೆ ರೆಸಿಪಿ ಆಗಿರಬಹುದು ಅಥವಾ ಸ್ಟಾಕ್ ಮಾರ್ಕೆಟ್ಟಿನಲ್ಲಿ ದುಡ್ಡು ಹೂಡುವುದೇ ಇರಬಹುದು. ಅದರ ಜೊತೆ ಈ ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡಿ, ಆ ಫಂಡಿನಲ್ಲಿ ಹೂಡಿಕೆ ಮಾಡಿ ಎಂಬ ಜಾಹೀರಾತುಗಳನ್ನೂ ನಾವು ಕಾಣಬಹುದು. ಈ ಹೂಡಿಕೆಗಳೆಲ್ಲ ಪ್ರಸ್ತುತ ಕಾಲದಲ್ಲಿ ಅವಶ್ಯವಿದ್ದರೂ ಕೂಡ ನಾವು ನಮ್ಮ ಆರೋಗ್ಯರಕ್ಷಣೆಗೂ ಸೂಕ್ತ ಹೂಡಿಕೆ ಮಾಡದಿದ್ದರೆ ಉಳಿದ ಹೂಡಿಕೆಗಳ ಫಲವನ್ನು ಸಂತೋಷದಿಂದ ಅನುಭವಿಸಲು ಸಾಧ್ಯವಿಲ್ಲ.
ಅಷ್ಟಕ್ಕೂ ಆರೋಗ್ಯರಕ್ಷಣೆ ಎಂದರೇನು? ಅದನ್ನು ದುಡ್ಡು ಕೊಟ್ಟು ಪಡೆದುಕೊಳ್ಳಬಹುದೇ ಅಥವಾ ಅದೊಂದು ಜೀವನಶೈಲಿಯ ಭಾಗವೇ? – ಎಂದು ತಿಳಿದುಕೊಳ್ಳುವುದು ಅವಶ್ಯಕ. ನಮ್ಮ ಜೀವನಶೈಲಿಯೇ ನಮ್ಮ ಆರೋಗ್ಯದ ಕನ್ನಡಿ. ನಮ್ಮ ಹವ್ಯಾಸಗಳೇ ನಮ್ಮ ಆರೋಗ್ಯದ ಮುನ್ನುಡಿಯನ್ನು ಬರೆಯುತ್ತವೆ. ಮೇಲೆ ತಿಳಿಸಿದಂತೆ ಹೇಗೆ ನಮ್ಮ ಹಣಕಾಸಿನ ವ್ಯವಹಾರಗಳನ್ನು ವಿವಿಧೆಡೆ ಹೂಡಿಕೆ ಮಾಡುತ್ತೇವೋ ಅದೇ ರೀತಿ ನಮ್ಮ ಆರೋಗ್ಯರಕ್ಷಣೆಗೆ ಕೂಡ ಕೆಲವು ಉತ್ತಮ ಅಭ್ಯಾಸಗಳಲ್ಲಿ ಹೂಡಿಕೆ ಮಾಡಬೇಕು ಹಾಗೂ ಅವುಗಳನ್ನು ಶಿಸ್ತಿನಿಂದ ಪಾಲಿಸಬೇಕು.
ಮುಖ್ಯವಾಗಿ ಆಹಾರದ ವಿಷಯದಲ್ಲಿ ನಾವು ಜಾಗರೂಕತೆ ಮತ್ತು ಸಂಯಮಗಳನ್ನು ತೋರಬೇಕು. ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆಮಾತಿನಂತೆ ಸಮತೋಲಿತ, ತಾಜಾ ಆಹಾರ ನಮ್ಮ ದೇಹವನ್ನು ಸಧೃಡವಾಗಿರಿಸುತ್ತದೆ. ಇದು ಮಾಂಸಖಂಡಗಳ ಕ್ಷಮತೆಯನ್ನು ಹೆಚ್ಚಿಸುವ ಜೊತೆ ರೋಗನಿರೋಧಕ ಶಕ್ತಿಯನ್ನೂ ಬಲಪಡಿಸುತ್ತದೆ. ಸಂಸ್ಕರಿತ ಆಹಾರ ಮತ್ತು ಸಿಹಿಮಿಶ್ರಿತ ಪೇಯಗಳ ಬದಲು ಪ್ರತಿನಿತ್ಯ ತಾಜಾ ತರಕಾರಿ, ಕಾಳು-ಬೇಳೆಯುಕ್ತ ಆಹಾರದ ಜೊತೆ ಸಾಕಷ್ಟು ಹಣ್ಣು-ಹಂಪಲುಗಳ ನಿಯಮಿತ ಸೇವನೆ ಆರೋಗ್ಯದ ದೃಷ್ಟಿಯಿಂದ ಒಂದು ಅತ್ಯುತ್ತಮ ಹೂಡಿಕೆ.
ಪ್ರತಿದಿನ ಪ್ರಾತಃಕಾಲದ ಯೋಗ, ನಡಿಗೆ, ಈಜು ಅಥವಾ ವ್ಯಾಯಾಮದಂತಹ ದೈಹಿಕ ಕಸರತ್ತುಗಳು ದೇಹವನ್ನು ಹುರಿಗೊಳಿಸಿ ಸುಸ್ಥಿತಿಯಲ್ಲಿಡುತ್ತವೆ. ಇಡೀದಿನ ನಮ್ಮನ್ನು ಉಲ್ಲಸಿತರಾಗಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಬೆಳಿಗ್ಗೆಯಾಗದಿದ್ದರೆ ಸಂಜೆಯಾದರೂ ಸ್ವಲ್ಪ ಸಮಯವನ್ನು ನಾವು ಈ ದೈಹಿಕ ಚಟುವಟಿಕೆಗಳಿಗೆ ವಿನಿಯೋಗಿಸಲೇಬೇಕು. ನಮ್ಮ ಮನಸ್ಸಿನ ಪ್ರಸನ್ನತೆಗಾಗಿ ಓದು, ಸಂಗೀತ, ಪ್ರವಾಸ, ಧ್ಯಾನದಂತಹ ಹವ್ಯಾಸಗಳನ್ನ ಬೆಳೆಸಿಕೊಳ್ಳಬೇಕು. ಇವೆಲ್ಲ ಹೆಚ್ಚು ಹಣ ಹೂಡದೇ ಕೇವಲ ಕೆಲ ಸಮಯವನ್ನಷ್ಟೇ ಬೇಡುವ ಹೂಡಿಕೆಗಳು. ಕೆಲಸಕಾರ್ಯಗಳ ಮಧ್ಯೆ ಸಂಬಂಧಗಳು ದೂರವಾಗುತ್ತಿರುವ ಇಂದಿನ ಸಮಾಜದಲ್ಲಿ ಬಂಧು-ಬಾಂಧವರೊಡನೆ, ಸ್ನೇಹಿತರ ಜೊತೆ ಒಡನಾಟ ಮತ್ತು ನಮ್ಮ ಸಹೋದ್ಯೋಗಿಗಳೊಂದಿಗೆ ಈರ್ಷ್ಯೆ ತೊರೆದು ಸಾಮರಸ್ಯದಿಂದಿರುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ ಹೂಡಿಕೆಯೆನ್ನಬಹುದು.
ಮತ್ತೊಂದು ವರ್ಷ ಈಗಾಗಲೇ ನೇಪಥ್ಯಕ್ಕೆ ಸರಿಯುತ್ತಿದೆ. ಹೊಸವರುಷದ ಆಗಮನವನ್ನು ಇಂಥ ಹೊಸ ಹೂಡಿಕೆಗಳಿಂದ ಸ್ವಾಗತಿಸೋಣ. ನಮ್ಮ ಸ್ವಾಸ್ಥ್ಯರಕ್ಷಣೆ ನಮ್ಮ ಕೈಯಲ್ಲೇ ಇದೆ. ಹಾಗಾಗಿ ಆರೋಗ್ಯಕರ ಮನಸ್ಸು ಮತ್ತು ಸುದೃಢ ಶರೀರಕ್ಕಾಗಿ ಇಂದೇ ಹೂಡಿಕೆ ಮಾಡೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.