ADVERTISEMENT

ಆ. 5ರಿಂದ ತೆರೆಯಲಿವೆ ಜಿಮ್‌ಗಳು: ಕೋವಿಡ್‌ ಕಾಲದಲ್ಲಿ ವ್ಯಾಯಾಮ ಶಾಲೆ ಸುರಕ್ಷಿತವೇ?

ಪಿಟಿಐ
Published 30 ಜುಲೈ 2020, 7:35 IST
Last Updated 30 ಜುಲೈ 2020, 7:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೊರೊನಾ ವೈರಸ್‌ ಸಾಂಕ್ರಾಮಿಕಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಜಿಮ್‌ಗೆ ಹೋಗುವುದು ಸುರಕ್ಷಿತವೇ? ಇದು ನೀವು ಎಲ್ಲಿ ವಾಸಿಸುತ್ತಿದ್ದೀರಿ ಮತ್ತು ನಿಮ್ಮ ಜಿಮ್ ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ.

ಭಾರತಕ್ಕೆ ಕೋವಿಡ್‌ ಕಾಲಿಟ್ಟ ನಂತರ ಜಾರಿಗೆ ಬಂದ ಎಲ್ಲ ಲಾಕ್‌ಡೌನ್‌ಗಳಲ್ಲಿಯೂ ಜಿಮ್‌ಗಳನ್ನು ನಿರ್ಬಂಧಿಸಲಾಗಿದೆ. ಮೊದಲ ಲಾಕ್‌ಡೌನ್‌ನಿಂದ ಹಿಡಿದು ಇಲ್ಲಿಯವರೆಗೆ ಜಿಮ್‌ಗಳು ದೇಶದಲ್ಲಿ ತೆರೆದಿಲ್ಲ. ಈ ಮಧ್ಯೆ ಜಿಮ್‌ ತೆರೆಯುವುದು, ವ್ಯಾಯಾಮ ಶಾಲೆಗೆ ಹೋಗುವುದು ಸುರಕ್ಷಿತವೇ ಎಂಬುದರ ಬಗ್ಗೆ ವಾಷಿಂಗ್ಟನ್‌ನ ತಜ್ಞರು ತಮ್ಮದೇ ಅಭಿಪ್ರಾಯ ಮಂಡಿಸಿದ್ದಾರೆ.

ಒಂದು ವೇಳೆ ನೀವು ವಾಸಿಸುವ ಸ್ಥಳದಲ್ಲಿ ಕೋವಿಡ್‌ 19 ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸದಿದ್ದರೆ, ಜಿಮ್‌ನಿಂದ ದೂರವಿರುವುದು ಒಳಿತು ಎನ್ನುತ್ತಾರೆ ತಜ್ಞರು. ಆದರೆ ಸೋಂಕು ಹರಡುವಿಕೆಯನ್ನು ಸಮರ್ಥವಾಗಿ ನಿಗ್ರಹಿಸಿದ ಪ್ರದೇಶದಲ್ಲಿ ನೀವಿದ್ದರೆ, ತಾಲೀಮಿಗೆ ಹೋಗುವಾಗ ಅಪಾಯಗಳು ಕಡಿಮೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಜಿಮ್‌ಗೆ ಬರುವ ಪ್ರತಿಯೊಬ್ಬರೂ ಕನಿಷ್ಟ 6 ಅಡಿ ಅಂತರ ಕಾಪಾಡುವುದನ್ನು ಖಾತ್ರಿಪಡಿಸಿಕೊಳ್ಳಲು ಜಿಮ್‌ ಮಾಲೀಕರು ಯಂತ್ರಗಳನ್ನು ದೂರ ಸರಿಸುವುದು, ಜಿಮ್‌ ಆವರಣದಲ್ಲಿ ತಡೆಗಳನ್ನು ನಿರ್ಮಿಸುವುದು, ಸೀಮಿತ ಸಂಖ್ಯೆಯಲ್ಲಿ ಮಾತ್ರ ಜನರಿಗೆ ಅವಕಾಶ ನೀಡುವುದೂ ಸೇರಿದಂತೆ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಮೋರಿ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಸಹಾಯಕ ಪ್ರಾಧ್ಯಾಪಕರಾದ ಡಾ. ಮೇರಿಬೆತ್ ಸೆಕ್ಸ್‌ಟನ್‌ ಸಲಹೆ ನೀಡಿದ್ದಾರೆ.

ಎಲ್ಲರೂ ಗುಂಪುಗೂಡುವುದನ್ನು ತಪ್ಪಿಸಲು ಸ್ವತಃ ನೀವೇ ನೀರಿನ ಬಾಟಲ್‌ಗಳನ್ನು ಒಯ್ಯಿರಿ. ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಬಳಸುತ್ತಿದ್ದರೆ ಅಪಾಯದ ಸಾಧ್ಯತೆಗಳು ಕಡಿಮೆ ಇರುತ್ತವೆ. ನಿರಂತರವಾಗಿ ಬಳಕೆಯಾಗುವ ಯಂತ್ರಗಳನ್ನು ಜಿಮ್ ಸಿಬ್ಬಂದಿಯೂ ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಯಂತ್ರಗಳನ್ನು ಸ್ಪರ್ಶಿಸುವ ಜಾಗಗಳನ್ನು ವೈರಸ್‌ ಕೊಲ್ಲುವ ಉತ್ಪನ್ನಗಳಿಂದ ಒರೆಸುತ್ತಿರಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ಅಗತ್ಯ ಎನಿಸಿದಾಗೆಲ್ಲ ಜಿಮ್‌ನಲ್ಲಿ ಮಾಸ್ಕ್‌ ಧರಿಸಬೇಕು. ವ್ಯಾಯಾಮ ಮಾಡುವಾಗ ಬೆವರಿನಿಂದಾಗಿ ಮಾಸ್ಕ್‌ ಒದ್ದೆಯಾಗುವ ಸಾಧ್ಯತೆ ಇರುತ್ತದೆ. ಆಗ ಅವುಗಳು ನಿಷ್ಪ್ರಯೋಜವಾಗುತ್ತವೆ. ಆದ್ದರಿಂದ ಮತ್ತೊಂದು ಮಾಸ್ಕ್‌ಗಳನ್ನು ಜೊತೆಗೇ ಒಯ್ಯುವುದು ಒಳಿತು ಎಂದೂ ಅವರು ಹೇಳಿದ್ದಾರೆ.

‘ಎಷ್ಟೇ ಎಚ್ಚರವಾಗಿದ್ದರೂ, ಜಿಮ್‌ಗಳಲ್ಲಿ ಕೊರೊನಾ ವೈರಸ್‌ ಹರಡಲು ಪೂರಕವಾದ ವಾತಾವರಣ ಇದೆ. ಹೀಗಾಗಿ ಜಿಮ್‌ಗೆ ಹೋಗದೆಯೇ ಮಾಡಬಹುದಾದ ಕಸರತ್ತಿನ ಕಡೆಗೆ ಜನ ದೃಷ್ಟಿ ಹರಿಸುವುದು ಉತ್ತಮ. ಸ್ವಚ್ಛಂದವಾದ ಪ್ರದೇಶದಲ್ಲಿ ನೀವೊಬ್ಬರೇ ಕಸರತ್ತು ಮಾಡಲು ಸಾಧ್ಯವಾದರೆ, ಅದು ಜಿಮ್‌ಗಿಂತಲೂ ಉತ್ತಮ ಆಯ್ಕೆ,’ ಎನ್ನುತ್ತಾರೆ ಸೆಕ್ಸ್‌ಟನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.