ADVERTISEMENT

ಶಿರ ಜೋಡಿಸಿ ಬಾಲಕನಿಗೆ ಮರುಜನ್ಮ ನೀಡಿದ ವೈದ್ಯರು: ಧನ್ಯವಾದ ಹೇಳಿದ ಬಾಲಕನ ತಂದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2023, 11:33 IST
Last Updated 14 ಜುಲೈ 2023, 11:33 IST
Hadassah Medical Center ಹದಾಸ್ಸಾ ವೈದ್ಯಕೀಯ ಕೇಂದ್ರ
   Hadassah Medical Center ಹದಾಸ್ಸಾ ವೈದ್ಯಕೀಯ ಕೇಂದ್ರ

ಜೆರುಸಲೆಮ್‌: ರಸ್ತೆ ಅಪಘಾತದಲ್ಲಿ ದೇಹದಿಂದ ಬಹುತೇಕ ಬೇರೆಯಾದ ಬಾಲಕನ ಶಿರವನ್ನು ವೈದ್ಯರ ತಂಡ ಜೋಡಿಸಿದ ಅಪರೂಪದ ಶಸ್ತ್ರಚಿಕಿತ್ಸೆ ಪ್ರಕರಣವನ್ನು ಟೈಮ್ಸ್‌ ಆಫ್ ಇಸ್ರೇಲ್ ವರದಿ ಮಾಡಿದೆ.

ಕಾರು ಅಪಘಾತದಲ್ಲಿ 12 ವರ್ಷದ ಬಾಲಕ ಸುಲೇಮಾನ್‌ ಹಸ್ಸನ್‌ ತೀವ್ರವಾಗಿ ಗಾಯಗೊಂಡು, ‘ಇಂಟರ್ನಲ್ ಡಿಕ್ಯಾಪಿಟೇಷನ್‌ ಸಮಸ್ಯೆ ಎದುರಿಸಿದ. ಆತನ ತಲೆಯು ಬೆನ್ನುಹುರಿಯ ಕಶೇರುಖಂಡದಿಂದ ಬೇರ್ಪಟ್ಟಿತ್ತು. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಬೈಲ್ಯಾಟರಲ್‌ ಅಟ್ಲಾಂಟೊ ಆಖಿಪಿಟ್ಟಲ್‌ ಜಾಯಿಂಟ್ ಡಿಸ್‌ಲೊಕೇಷನ್‌’ ಎಂದು ಕರೆಯಲಾಗುತ್ತದೆ.

ಅಪಘಾತದಲ್ಲಿ ಗಾಯಗೊಂಡ ಬಾಲಕನನ್ನು ತಕ್ಷಣವೇ ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಬಹುತೇಕ ಬೇರ್ಪಟ್ಟಿದ್ದ ಶಿರವನ್ನು ಮರು ಜೋಡಿಸುವಲ್ಲಿ ಯಶಸ್ವಿಯಾದರು.

ADVERTISEMENT

ಶಸ್ತ್ರಚಿಕಿತ್ಸಕ ಡಾ. ಒಹಾದ್ ಈನವ್‌ ಅವರು ಪ್ರತಿಕ್ರಿಯಿಸಿ, ‘ಹಲವು ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ಬಾಲಕನ ಬೆನ್ನುಹುರಿಗೆ ಕೆಲ ಪಟ್ಟಿಗಳನ್ನು ಅಳವಡಿಸಲಾಯಿತು. ಆಧುನಿಕ ತಂತ್ರಜ್ಞಾನ, ಅನುಭವ ಹಾಗೂ ಕಲಿತ ವಿದ್ಯೆ ಇದಕ್ಕೆ ನೆರವಾದವು. ಆತ ಬದುಕುಳಿದಿದ್ದು ಒಂದು ಪವಾಡ ಎಂದರೂ ತಪ್ಪಲ್ಲ’ ಎಂದರು.

‘ಇದು ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲ. ಮಕ್ಕಳ ತಲೆಯ ಶಸ್ತ್ರಚಿಕಿತ್ಸೆ ಎಂದರೆ ವೈದ್ಯರಿಗೆ ಹೆಚ್ಚಿನ ಅನುಭವ ಹಾಗೂ ಜ್ಞಾನದ ಅಗತ್ಯವಿದೆ. ಆತನ ನರವ್ಯೂಹಕ್ಕಾಗಲೀ, ಸಂವೇದನಾ ಸಾಮರ್ಥ್ಯಕ್ಕಾಗಲೀ ಅಥವಾ ದೇಹದ ಭಾಗಗಳ ಚಲನಾ ಶಕ್ತಿಗೆ ಯಾವುದೇ ಧಕ್ಕೆಯಾಗಿಲ್ಲ. ಗುಣಮುಖನಾದ ನಂತರ ಬಾಲಕ ಸ್ವತಂತ್ರ ಓಡಾಡಬಲ್ಲ’ ಎಂದಿದ್ದಾರೆ.

ಈ ಘಟನೆ ನಡೆದು ಒಂದು ತಿಂಗಳಾದರೂ, ಬಾಲಕ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುವವರೆಗೂ ಇದನ್ನು ಆಸ್ಪತ್ರೆ ಗೋಪ್ಯವಾಗಿಟ್ಟಿತ್ತು. ಆತ ಗುಣಮುಖನಾದರೂ ಆತನ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಾದ ದಿನದಿಂದ ಒಂದು ದಿನವೂ ಮಗನಿಂದ ದೂರ ಸರಿಯದ ತಂದೆ, ಹಸ್ಸನ್‌ ಇಂದಿನ ಸ್ಥಿತಿ ಕಂಡು ಇಡೀ ವೈದ್ಯಕೀಯ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ‘ಮಗ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇತ್ತು. ಆದರೆ ಆತನನ್ನು ಉಳಿಸಿದ್ದು, ವೈದ್ಯರ ವೃತ್ತಿಪರತೆ, ತಂತ್ರಜ್ಞಾನ ಹಾಗೂ ಸರಿಯಾದ ಸಮಯದಲ್ಲಿ ತ್ವರಿತವಾಗಿ ತೆಗೆದುಕೊಂಡ ಸರಿಯಾದ ನಿರ್ಧಾರವೇ ಆಗಿತ್ತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.