
ಸಕ್ಕರೆ ಮತ್ತು ಬೆಲ್ಲ
ಭಾರತೀಯರ ಆಹಾರ ಪದ್ಧತಿಯಲ್ಲಿ ಸಿಹಿತಿಂಡಿಗಳಿಗೆ ಪ್ರಾಧಾನ್ಯತೆ ಹೆಚ್ಚು ನಾವು ಪ್ರತಿನಿತ್ಯ ಸೇವಿಸುವ ಚಹಾ/ ಕಾಫಿ, ಪಾಯಸ, ಹೋಳಿಗೆಯಂತಹ ತಿಂಡಿಗಳು, ತಂಪು ಪಾನೀಯಗಳು, ಮಕ್ಕಳಿಗೆ ಪ್ರಿಯಕರವಾದ ಚಾಕೊಲೇಟ್, ಐಸ್ ಕ್ರೀಮ್ ಇತ್ಯಾದಿ ಎಲ್ಲವೂ ಸಿಹಿ ಪದಾರ್ಥಗಳೇ. ಹೆಚ್ಚಿನ ಸಂದರ್ಭಗಳಲ್ಲಿ ಈ ಸಿಹಿ ಪದಾರ್ಥಗಳನ್ನು ಸಕ್ಕರೆಯಿಂದ ಮಾಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅದಕ್ಕೆ ಬೆಲ್ಲವನ್ನೂ ಬಳಸುತ್ತಾರೆ.
ಸಕ್ಕರೆಯನ್ನು ಸಾಮಾನ್ಯವಾಗಿ ಕಬ್ಬಿನಿಂದ ಅಥವಾ ಬೀಟ್ರೂಟ್‌ಗಳಿಂದ ತಯಾರು ಮಾಡಲಾಗುತ್ತದೆ. ಇವುಗಳ ರಸವನ್ನು ಕುದಿಸಿ, ಘನೀಕರಿಸಿ, ಶುದ್ಧೀಕರಿಸಿ ಸಕ್ಕರೆಯನ್ನು ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬಹುತೇಕ ಎಲ್ಲಾ ಖನಿಜಗಳು, ವಿಟಮಿನ್‌ಗಳು ಮತ್ತು ನಾರು ಸೋಸಲ್ಪಡುತ್ತವೆ. ತಯಾರಿಕೆಯ ಹಂತಗಳಲ್ಲಿ ಹಲವಾರು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಸಕ್ಕರೆ ಬಿಳಿ ಬಣ್ಣಕ್ಕೆ ಬರಲು ಸಲ್ಫರ್ ಡೈ ಆಕ್ಸೈಡ್ ಬಳಸಿ ಬ್ಲೀಚಿಂಗ್ ಮಾಡಲಾಗುತ್ತದೆ.
ಸಕ್ಕರೆ
ಕೊಬ್ಬಿನ ಅಂಶ ಹಾಗೂ ಪ್ರೋಟೀನ್ ಅಂಶ ರಹಿತವಾದ ಸಕ್ಕರೆಯಲ್ಲಿ ಶೇಕಡ 99ರಷ್ಟು ಸುಕ್ರೋಸ್ ಮಾತ್ರ ಇರುತ್ತದೆ. ಶರೀರದಲ್ಲಿ ನಡೆಯುವ ಎಲ್ಲ ಕ್ರಿಯೆಗಳಿಗೆ ಹಾಗೂ ದೇಹಕ್ಕೆ ಶಕ್ತಿಯನ್ನು ನೀಡುವ ವಸ್ತುವೇ ಈ ಸುಕ್ರೋಸ್. ಸಕ್ಕರೆಯ ಚಯಾಪಚಯವು ಶೀಘ್ರವಾಗಿ ಆಗುವುದರಿಂದ ತಕ್ಷಣ ಶಕ್ತಿಯನ್ನು, ಉಲ್ಲಾಸವನ್ನು ಕೊಡುವ ಸಾಮರ್ಥ್ಯ ಸಕ್ಕರೆಗಿದೆ. ಆದರೆ ಇದನ್ನು ಹೆಚ್ಚಾಗಿ ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ತ್ವರಿತವಾಗಿ ಏರಿಕೆಯಾಗುತ್ತದೆ. ಇದರ ಪರಿಣಾಮವಾಗಿ ಬೊಜ್ಜು, ಸಕ್ಕರೆ ಕಾಯಿಲೆ, ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಂಡುಬರುವ ಸಾಧ್ಯತೆಗಳು ಇರುತ್ತವೆ.
ಸಕ್ಕರೆಯಂತೆ ಬೆಲ್ಲವನ್ನೂ ಕಬ್ಬಿನ ರಸದಿಂದ ಅಥವಾ ಖರ್ಜೂರದ ರಸದಿಂದ ತಯಾರಿಸಲಾಗುತ್ತದೆ. ಆದರೆ ತಯಾರಿಸುವ ವಿಧಾನದಲ್ಲಿ ಬಹಳ ವ್ಯತ್ಯಾಸಗಳಿದ್ದು, ಸೋಸಿ ಘನೀಕರಿಸುವ ಪ್ರಕ್ರಿಯೆಯಲ್ಲಿ ರಾಸಾಯನಿಕಗಳ ಬಳಕೆ ಇರುವುದಿಲ್ಲ. ಆದರೂ ಇತ್ತೀಚೆಗೆ ಬೆಲ್ಲವನ್ನೂ ಆಕರ್ಷಕವಾಗಿ ವರ್ಣರಹಿತವಾಗಿ ಮಾಡುವ ಉದ್ದೇಶದಿಂದ ಕೆಲವೊಮ್ಮೆ ಬ್ಲೀಚಿಂಗ್ ಮಾಡಲಾಗುತ್ತದೆ. ಸಾಧಾರಣವಾಗಿ ಕಬ್ಬಿನಲ್ಲಿರುವ ಖನಿಜಗಳು, ನಾರುಗಳು ಮತ್ತು ಕೆಲವು ಪೌಷ್ಟಿಕಾಂಶಗಳು ಬೆಲ್ಲದಲ್ಲೂ ಕಂಡುಬರುತ್ತವೆ. ಇದರ ಪರಿಣಾಮವಾಗಿ ಬೆಲ್ಲದ ಸೇವನೆಯಿಂದ ಶಾರೀರಿಕ ಕ್ರಿಯೆಗಳಿಗೆ ಬೇಕಾದ ಶಕ್ತಿ ದೊರಕುವುದರೊಂದಿಗೆ ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ, ಪೊಟ್ಯಾಸಿಯಂ ಮತ್ತು ಕೆಲವು ವಿಟಮಿನ್‌ಗಳೂ ನಮಗೆ ಸಿಗುತ್ತವೆ.
ಬೆಲ್ಲ
ಈ ಕಾರಣದಿಂದಾಗಿ ಸಕ್ಕರೆಯೊಂದಿಗೆ ಹೋಲಿಕೆ ಮಾಡಿದಾಗ ಬೆಲ್ಲವನ್ನು ಉತ್ತಮ ಎಂದು ಪರಿಗಣಿಸಬಹುದಾಗಿದೆ. ನಾರಿನ ಅಂಶವೂ ಇರುವುದರಿಂದ ಬೆಲ್ಲವು ಜೀರ್ಣಕ್ರಿಯೆಗೆ ಸಹಕಾರಿ, ಕರುಳಿನ ಆರೋಗ್ಯವನ್ನು ರಕ್ಷಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣದ ಅಂಶವಿರುವುದರಿಂದ ರಕ್ತಹೀನತೆ ತಡೆಗಟ್ಟಲು ಸಹಾಯಕಾರಿಯಾಗಿದ್ದು, ಯಕೃತ್ತನ್ನು ನಿರ್ವಿಷಗೊಳಿಸಿ, ರಕ್ತದೊತ್ತಡ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಬೆಲ್ಲವು ಸಕ್ಕರೆಯಂತೆ ಬೇಗನೆ ಚಯಾಪಚಯಗೊಳ್ಳದಿರುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶವು ತೀವ್ರವಾಗಿ, ಶೀಘ್ರವಾಗಿ ಹೆಚ್ಚಾಗುವುದಿಲ್ಲ. ಇತ್ತೀಚೆಗಿನ ಸಂಶೋಧನೆಗಳ ಪ್ರಕಾರ ಬೆಲ್ಲದಲ್ಲಿರುವ ಉತ್ಕರ್ಷಣ ನಿರೋಧಕಗಳು ಹಾಗೂ ಖನಿಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಕ್ಕರೆಗಿಂತ ಪರಿಣಾಮಕಾರಿಯಾಗಿವೆ. ಆದರೆ ಎಲ್ಲಾ ಬೆಲ್ಲವೂ ಶುದ್ಧವಾಗಿರಬೇಕೆಂದಿಲ್ಲ. ಸಂಸ್ಕರಿಸಿದ ಅನೇಕ ಬೆಲ್ಲದ ಉತ್ಪನ್ನಗಳಲ್ಲಿ ರಾಸಾಯನಿಕಗಳು ಅಥವಾ ಕಲಬೆರಕೆಗಳು ಇರಬಹುದು. ಹಾಗಾಗಿ ವಿಶ್ವಾಸಾತ್ಮಕ ವಾಣಿಜ್ಯ ಸಂಸ್ಥೆಗಳ ಸಾವಯವ ಬೆಲ್ಲವನ್ನು ಅಥವಾ ನೈಸರ್ಗಿಕವಾಗಿ ಸಂಸ್ಕರಿಸಿದ ಬೆಲ್ಲವನ್ನು ಖರೀದಿಸುವುದೇ ಜಾಣತನ.
ವೈಜ್ಞಾನಿಕವಾಗಿ ನೋಡಿದರೆ, ಸಕ್ಕರೆ ಮತ್ತು ಬೆಲ್ಲ ಎರಡೂ ಕಬ್ಬಿನ ಉತ್ಪನ್ನಗಳೇ ಆಗಿದ್ದರೂ, ಬೆಲ್ಲವು ಸಕ್ಕರೆಗಿಂತ ಅಧಿಕ ಪೌಷ್ಟಿಕಾಂಶ ಹೊಂದಿದೆ. ಬಿಳಿ ಸಕ್ಕರೆಯ ಬದಲು ಬೆಲ್ಲವನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಹಿತಕರ. ಆದರೆ ‘ಅತಿಯಾದರೆ ಅಮೃತವೂ ವಿಷ’ ಎಂಬ ತತ್ವದಂತೆ, ಸಿಹಿ ಪದಾರ್ಥವನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾಗಬಹುದು.
(ಲೇಖಕರು: ಡಾ. ಗೋವಿಂದ ಶರ್ಮಾ ಕೆ. ಪ್ರಾಧ್ಯಾಪಕರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಹಾಸನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.