ADVERTISEMENT

ಏನಿದು ಟೊಮೆಟೊ ಜ್ವರ? ರೋಗ ಲಕ್ಷಣಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ

ಡಾ.ಕೆ.ಬಿ.ರಂಗಸ್ವಾಮಿ
Published 16 ಮೇ 2022, 20:15 IST
Last Updated 16 ಮೇ 2022, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಐದು ವರ್ಷದ ಒಳಗಿನ ಮಕ್ಕಳಲ್ಲಷ್ಟೇ ಕಾಣಿಸಿಕೊಂಡಿರುವ ‘ಟೊಮೆಟೊ ಜ್ವರ’ ಒಂದು ವೈರಾಣುವಿನ‌ ಜ್ವರವೋ ಅಥವಾ ಡೆಂಗಿ ಮತ್ತು ಚಿಕನ್‌ಗುನ್ಯಾ ವೈರಾಣುಗಳ ಜ್ವರದ ಅನಂತರದ ಒಂದು ಸಮಸ್ಯೆಯೋ ಎಂಬುದರ ಕುರಿತು ತಜ್ಞರಲ್ಲೇ ಜಿಜ್ಞಾಸೆ ಉಂಟಾಗಿದೆ.

ಕೊರೊನಾದ ಬೆನ್ನಲ್ಲೇ ಇದೀಗ ಕೇರಳದ ಕೊಲ್ಲಂ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ‘ಟೊಮೆಟೊ ಜ್ವರ’ ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ. ಸುಮಾರು ಎಂಬತ್ತಕ್ಕಿಂತಲೂ ಅಧಿಕ ಮಕ್ಕಳಲ್ಲಿ ಈ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಈ ನಿಟ್ಟಿನಲ್ಲಿ ಕೇರಳಕ್ಕೆ ಲಗತ್ತಾಗಿರುವ ನಮ್ಮ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು ಮುಂತಾದ ಜಿಲ್ಲೆಗಳಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರು ಮತ್ತವರ ಮಕ್ಕಳ ಮೇಲೆ ಕಣ್ಗಾವಲು ಇರಿಸುವಂತೆ ರಾಜ್ಯ ಸರ್ಕಾರ ಸ್ಥಳಿಯ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಏನಿದು ಟೊಮೆಟೊ ಜ್ವರ?

ADVERTISEMENT

ಐದು ವರ್ಷದ ಒಳಗಿನ ಮಕ್ಕಳಲ್ಲಷ್ಟೇ ಕಾಣಿಸಿಕೊಂಡಿರುವ ‘ಟೊಮೆಟೊ ಜ್ವರ’ ಒಂದು ವೈರಾಣುವಿನ‌ ಜ್ವರವೋ ಅಥವಾ ಡೆಂಗಿ ಮತ್ತು ಚಿಕನ್‌ಗುನ್ಯಾ ವೈರಾಣುಗಳ ಜ್ವರದ ಅನಂತರದ ಒಂದು ಸಮಸ್ಯೆಯೋ ಎಂಬುದರ ಕುರಿತು ತಜ್ಞರಲ್ಲೇ ಜಿಜ್ಞಾಸೆ ಉಂಟಾಗಿದೆ. ಆದರೆ ಕೊರೊನಾಕ್ಕೂ ಈ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಟೊಮೆಟೊ ಜ್ವರವನ್ನು ‘ಟೊಮೆಟೊ ಫ್ಲೂ’ ಎಂತಲೂ ಕರೆಯಲಾಗುತ್ತದೆ. ಆದರೆ ಈ ಜ್ವರಕ್ಕೂ ಟೊಮೆಟೊಗೂ ಏನೂ ಸಂಬಂಧವಿಲ್ಲ!

ರೋಗಲಕ್ಷಣಗಳು

ಟೊಮೆಟೊ ಜ್ವರದ ಕೆಲವು ರೋಗಲಕ್ಷಣಗಳೆಂದರೆ ತೀವ್ರ ಸ್ವರೂಪದ ಜ್ವರ, ವಾಕರಿಕೆ, ವಾಂತಿ, ಹಸಿವಿಲ್ಲದಿರುವಿಕೆ, ಮೈ ಕೈ ನೋವು, ಕೀಲು ನೋವು, ಬಳಲಿಕೆ, ಹೊಟ್ಟೆ ನೋವು, ಭೇದಿ, ನಿರ್ಜಲೀಕರಣ ಇತ್ಯಾದಿ. ಇದರ ಪ್ರಮುಖ ರೋಗಲಕ್ಷಣಗಳೆಂದರೆ ಚರ್ಮದ ಮೇಲೆ ಕಾಣಿಸಿಕೊಳ್ಳುವ ದದ್ದುಗಳು ಮತ್ತು ನೀರ್ಗುಳ್ಳೆಗಳು. ಅಂಗೈ, ಮೊಣಕಾಲು, ನಿತಂಬ ಮುಂತಾದ ಭಾಗಗಳಲ್ಲಿ ಕಾಣಿಸಿಕೊಳ್ಳುವ ಈ ದದ್ದುಗಳು ಮತ್ತು ನೀರ್ಗುಳ್ಳೆಗಳು ಟೊಮೆಟೊ ಹಣ್ಣಿನಂತೆ ಕೆಂಬಣ್ಣದಲ್ಲಿರುವುದರಿಂದ ಇದಕ್ಕೆ ‘ಟೊಮೆಟೊ ಜ್ವರ’ ಎನ್ನಲಾಗುತ್ತದೆ.

ಚಿಕಿತ್ಸೆ–ಮುಂಜಾಗ್ರತಾ ಕ್ರಮಗಳು

ಟೊಮೆಟೊ ಜ್ವರದ ರೋಗಲಕ್ಷಣಗಳು ಕಾಣಿಸಿಕೊಂಡ ಮಗುವನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಬೇಕು.‌ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಕೇವಲ ರೋಗಲಕ್ಷಣಗಳನ್ನಾಧರಿಸಿದ ಚಿಕಿತ್ಸೆಯಷ್ಟೇ ಸಾಕಾಗುತ್ತದೆ. ಯಾವುದೇ ಕಾರಣಕ್ಕೂ ಉದಾಸೀನ ಪ್ರವೃತ್ತಿ ತೋರದೆ ಮಗುವನ್ನು ತಕ್ಷಣವೇ ವೈದ್ಯರಿಗೆ ತೋರಿಸಬೇಕು. ಜ್ವರಕ್ಕೆ ಪ್ಯಾರಾಸಿಟಮಾಲ್‌ನಂಥ ಔಷಧವನ್ನು ಸಮರ್ಪಕ ಪ್ರಮಾಣದಲ್ಲಿ ನೀಡಬೇಕು. ಮಗು ನಿರ್ಜಲೀಕರಣಕ್ಕೊಳಗಾಗುವುದರಿಂದ ಹಣ್ಣಿನ ರಸ, ಶರಬತ್ತು, ಎಳನೀರು ಮುಂತಾದ ದ್ರವಪದಾರ್ಥಗಳನ್ನು ಯಥೇಚ್ಛವಾಗಿ ನೀಡಬೇಕು.

ಫಿಟ್ಸ್, ಪ್ರಜ್ಞಾಹೀನತೆ ಮುಂತಾದ ಇತರೆ ರೋಗಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಬೇಕು. ನೀರ್ಗುಳ್ಳೆಗಳು ಸಾಮಾನ್ಯವಾಗಿ ತಾವಾಗಿಯೇ ಒಡೆದು ಬತ್ತಿ ಹೋಗುವುದರಿಂದ ಇವುಗಳನ್ನು ಕೆರೆಯುವುದನ್ನಾಗಲೀ ಹಿಚುಕುವುದನ್ನಾಗಲೀ ಮಾಡಬಾರದು. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಗುವಿನ ನಿಕಟ ಸಂಪರ್ಕದಲ್ಲಿರುವವರ ಬಗ್ಗೆಯೂ ನಿಗಾ ವಹಿಸಬೇಕು. ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.