ADVERTISEMENT

ಇರುವುದೆಲ್ಲವ ಬಿಟ್ಟು ಹುಡುಕುವುದೇನನ್ನು?

ನಡಹಳ್ಳಿ ವಂಸತ್‌
Published 27 ಮೇ 2022, 19:30 IST
Last Updated 27 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾನು 24 ವರ್ಷದ ಯವತಿ. ಸರ್ಕಾರಿಉದ್ಯೋಗದಲ್ಲಿದ್ದೇನೆ. ತರಬೇತಿಯಲ್ಲಿದ್ದಾಗ ಪರಿಚಯವಾದ ವಿವಾಹಿತನೊಬ್ಬನನ್ನು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ಮದುವೆಯಾಗುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರೂ ನಾನು ಸ್ವಚ್ಛ ಮನಸ್ಸಿನಿಂದ ಅವರನ್ನು ಇಷ್ಟಪಡುತ್ತಿದ್ದೇನೆ. ಅವರ ಮನೆಯಲ್ಲಿ ವಿಷಯ ತಿಳಿದು ಅವರು ನನ್ನನ್ನು ತಪ್ಪಿಸುತ್ತಿದ್ದಾರೆ. ಜೀವನವನ್ನೆಲ್ಲಾ ಅವರ ನೆನಪಿನಲ್ಲಿ ಕಳೆಯಲು ಸಿದ್ಧಳಿದ್ದೇನೆ. ನಮ್ಮ ಮನೆಯಲ್ಲಿ ಮದುವೆಯ ಪ್ರಸ್ತಾಪ ಮಾಡುತ್ತಿದ್ದಾರೆ. ನನಗೆ ಒಪ್ಪಿಕೊಳ್ಳಲಾಗುತ್ತಿಲ್ಲ. ನಾನೇ ಮನೆಗೆ ದೊಡ್ಡ ಮಗಳಾಗಿದ್ದು, ಮನೆಗೆ ಆಧಾರವಾಗಿರುವುದರಿಂದ ಸಾಯಲೂ ಆಗುತ್ತಿಲ್ಲ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ದೀರ್ಘವಾದ ಪತ್ರ ನಿಮ್ಮ ಮಾನಸಿಕ ನೋವು, ಗೊಂದಲ, ಹೋರಾಟಗಳನ್ನು ನಿಚ್ಚಳವಾಗಿ ಹೇಳುತ್ತಿದೆ. ಸ್ವಲ್ಪ ನಿಂತು ಯೋಚಿಸಿ. ನಾನು ಹುಡುಕುತ್ತಿರುವುದು ಏನನ್ನು? ವ್ಯಕ್ತಿಯನ್ನೋ ಅಥವಾ ವ್ಯಕ್ತಿಯೊಬ್ಬನಿಂದ ದೊರೆಯಬಹುದಾದ ಪ್ರೀತಿಯನ್ನೋ? ಪ್ರೀತಿಯ ಭಾವನಾತ್ಮಕ ಅಗತ್ಯ ನಮಗೆಲ್ಲರಿಗೂ ಇರುವುದು ಸಹಜ. ಅಂತಹ ಪ್ರೀತಿ ಒಬ್ಬ ವ್ಯಕ್ತಿಯಿಂದ ದೊರೆತಾಗ ಅವನು ಪ್ರೀತಿಯ ಸಂಕೇತವಾಗುತ್ತಾನೆ. ಹಾಗಾಗಿ ವ್ಯಕ್ತಿಗೆ ಅಂಟಿಕೊಳ್ಳುತ್ತೇವೆ. ದುರಾದೃಷ್ಟವೋ ಏನೋ ನಿಮ್ಮ ಪ್ರೀತಿಯ ಅಗತ್ಯವನ್ನು ಪೂರೈಸಿದ ವ್ಯಕ್ತಿ ದೀರ್ಘಕಾಲದ ಸಂಬಂಧಕ್ಕೆ ಸೂಕ್ತವಾಗಿಲ್ಲ. ಇದು ಗೊತ್ತಿದ್ದರೂ ಅವನಿಂದ ದೂರ ಹೋಗಲಾಗದೆ ಕೊರಗುತ್ತಿದ್ದೀರಲ್ಲವೇ?

ADVERTISEMENT

ಈಗ ಯೋಚಿಸಿ. ಹೀಗೆ ಅಂಟಿಕೊಳ್ಳುವ ಸ್ವಭಾವವನ್ನು ನಾನು ಹೇಗೆ ಬೆಳೆಸಿಕೊಂಡೆ? ಇದರ ಬೇರುಗಳು ನಿಮ್ಮ ಬಾಲ್ಯದ ಅನುಭವಗಳಲ್ಲಿರುತ್ತವೆ. ಕಳೆದುಕೊಳ್ಳುವ ಭಯ ಮತ್ತು ಹೊಸದನ್ನು ಹುಡುಕಿಕೊಳ್ಳಲಾರೆನೇನೋ ಎನ್ನುವ ಹಿಂಜರಿಕೆ ನಿಮ್ಮನ್ನು ಅವಾಸ್ತವಿಕ ಪ್ರೀತಿಯ ಪಂಜರದಲ್ಲಿ ಬಂಧಿಸಿದೆ. ಕಳೆದುಕೊಳ್ಳುವುದಕ್ಕೆ ಸಿದ್ಧರಾಗದಿದ್ದರೆ ಹೊಸದೇನೂ ಸಿಗುವುದಿಲ್ಲ. ಕಳೆದುಕೊಂಡಿರುವುದರ ದುಃಖ ಅಸಹಾಯಕತೆಗಳನ್ನು ತೀವ್ರವಾಗಿ ಅನುಭವಿಸಿ ಹೊರಹಾಕಿ. ನೋವು ಅಸಹಾಯಕತೆಗಳನ್ನು ಒಪ್ಪಿಕೊಳ್ಳುತ್ತಲೇ ನಿಮ್ಮೊಳಗೆ ಹುದುಗಿ ಕುಳಿತಿರುವ ಪ್ರೀತಿಗಾಗಿ ಕಾತರಿಸುತ್ತಿರುವ ಒಬ್ಬ ಗೌರವಯುತ ಯುವತಿಯನ್ನು ಗುರುತಿಸಿ. ಅವಳನ್ನು ಗೌರವಿಸಿ. ನಂತರ ನಿಧಾನವಾಗಿ ನಾನು ಆ ವ್ಯಕ್ತಿಯಲ್ಲಿ ಆಕರ್ಷಕ ಎನ್ನಿಸುವಂಥದ್ದೇನನ್ನು ಕಂಡೆ ಎಂದು ಯೋಚಿಸಿ. ಅಂತಹ ಸಾವಿರಾರು ವ್ಯಕ್ತಿಗಳು ನಿಮ್ಮ ಸುತ್ತಲೂ ಇದ್ದಾರೆ. ನಿಮ್ಮ ಆತ್ಮಗೌರವವನ್ನು ಬಿಟ್ಟುಕೊಡದೆ ಅಂತವರನ್ನು ಹುಡುಕಿ. ಹತ್ತಿರದಲ್ಲಿ ಮನೋಚಿಕಿತ್ಸಕರಿದ್ದರೆ ಸಹಾಯ ಪಡೆಯಿರಿ.

ನಾನು 28 ವರ್ಷದ ಯುವಕ. ಸಣ್ಣ ಹುದ್ದೆಯಲ್ಲಿದ್ದು ಉನ್ನತ ಹುದ್ದೆ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಓದುವುದನ್ನು ಬಿಟ್ಟರೆ ನನಗೆ ಹವ್ಯಾಸಗಳಿಲ್ಲ. ನನಗೆ ಭಯ ಆತಂಕ ಹೆಚ್ಚಾಗಿದೆ. ಜನರ ಜೊತೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಸಾಧ್ಯವಾಗುತ್ತಿಲ್ಲ. ಒಬ್ಬನೇ ಇದ್ದಾಗ ಬೇಸರ, ಉದ್ವೇಗ ಹೆಚ್ಚಾಗಿ ನೀಲಿಚಿತ್ರಗಳ ಮೊರೆಹೋಗುತ್ತೇನೆ. ನನ್ನ ಸಮಸ್ಯೆಗಳಿಗೆ ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ಭಯ, ಆತಂಕ, ಹಿಂಜರಿಕೆಗಳಲ್ಲಾ ನಿಮ್ಮ ಪ್ರತಿಕ್ಷಣದ ಅನುಭವಗಳು. ಇವುಗಳ ಮೂಲ ಎಲ್ಲಿರಬಹುದು? ನೀವು ಏನನ್ನೋ ಹುಡುಕುತ್ತಿದ್ದೀರಲ್ಲವೇ? ಇದನ್ನು ತಿಳಿಯಲು ಒಬ್ಬರೇ ಕುಳಿತು ನಿಮ್ಮ ಅಂತರಂಗಕ್ಕೆ ಹೋಗಿ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಿ. ಹೆಚ್ಚಿನ ಸಂಬಳದ ಹೊರತಾಗಿ ದೊಡ್ಡ ಹುದ್ದೆ ನನಗೆ ಮಾನಸಿಕವಾಗಿ ಏನನ್ನು ಕೊಡುತ್ತದೆ? ಹುದ್ದೆಯನ್ನು ಪಡೆದುಕೊಳ್ಳಲಾಗದಿದ್ದರೆ ನನಗೆ ನನ್ನ ಬಗ್ಗೆ ಏನನ್ನಿಸುತ್ತದೆ? ಹುದ್ದೆಯೊಂದಿಗೆ ನನ್ನ ವ್ಯಕ್ತಿತ್ವದ ಯಾವ ಅಂಶಗಳನ್ನು ಜೋಡಿಸಿಕೊಂಡಿದ್ದೇನೆ? ನಿಧಾನವಾಗಿ ನಿಮಗೆ ಹೊಳೆಯಬಹುದಾದ ಅಂಶವೆಂದರೆ ದೊಡ್ಡ ಹುದ್ದೆಯೇ ನಿಮ್ಮ ಆತ್ಮಗೌರವದ, ಜೀವನದ ಸಾರ್ಥಕತೆಯ ಆಧಾರ ಎಂದು ನೀವಂದುಕೊಂಡಿದ್ದೀರಿ. ಅದನ್ನು ಪಡೆಯಲು ಸಾಧ್ಯವಾಗದಿದ್ದರೆ ಎನ್ನುವ ಅನುಮಾನಗಳೇ ನಿಮ್ಮ ಭಯ ಆತಂಕಗಳ ಮೂಲ. ಈಗ ಯೋಚಿಸಿ. ದೊಡ್ಡ ಹುದ್ದೆಯ ಹೊರತಾಗಿ ನಿಮ್ಮೊಳಗೆ ಒಬ್ಬ ಉತ್ತಮ ವ್ಯಕ್ತಿ ಇರಬೇಕಲ್ಲವೇ? ಒಳ್ಳೆಯ ಸ್ನೇಹಿತ, ಪ್ರೇಮಿ, ಸುಸಂಸ್ಕೃತ ಪ್ರಜೆ, ಪ್ರಾಮಾಣಿಕ ಕೆಲಸಗಾರ ಮುಂತಾದವು. ನಿಮ್ಮೊಳಗಿರುವ ಇಂತಹ ಅಪ್ಪಟ ವ್ಯಕ್ತಿಯನ್ನು ಗುರುತಿಸಿ ಆನಂದಿಸಿ. ಅವನನ್ನು ಹೊರಗೆ ತಂದು ತೋರಿಸಿ. ಹಾಗೆಯೇ ದೊಡ್ಡ ಹುದ್ದೆಯ ಪ್ರಯತ್ನವನ್ನೂ ಮುಂದುವರೆಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.