ಪ್ರಾತಿನಿಧಿಕ ಚಿತ್ರ
ಅಧಿಕ ಮಾಲಿನ್ಯದಿಂದಾಗಿ, ಧೂಮಪಾನ ಮಾಡದವರೂ ಶ್ವಾಸಕೋಶದ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಎಚ್ಚರಿಸಿದ್ದಾರೆ ತಜ್ಞರು. ‘ವಿಶ್ವ ಶ್ವಾಸಕೋಶ ಕ್ಯಾನ್ಸರ್’ ದಿನದ ಅಂಗವಾಗಿ ಸಂಪ್ರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಶನಿವಾರ ಈ ಕುರಿತು ಮಾಹಿತಿ ನೀಡಿದರು.
ಅವರ ಪ್ರಕಾರ, ಈ ಬೆಳವಣಿಗೆಗೆ ಪ್ರಮುಖ ಕಾರಣ, ವಾಹನ, ವಿದ್ಯುತ್ ಸ್ಥಾವರ ಮತ್ತು ಕೈಗಾರಿಕೆಗಳಿಂದ ಹೊರಬರುವ ಹೊಗೆ ಹಾಗೂ ಅನಾರೋಗ್ಯಕರ ಜೀವನಶೈಲಿ.
ಡಾ. ವಿನೋದ್ ಕೆ. ರಮಣಿ, ರಾಧೆಶ್ಯಾಮ್ ನಾಯ್ಕ್, ಡಾ. ವಿಶ್ವಜೀತ್ ಪೈ ಈ ರೋಗದ ವಿವಿಧ ಆಯಾಮಗಳು ಮತ್ತು ಪರಿಹಾರಗಳನ್ನು ವಿವರಿಸಿದರು.
ಉತ್ತಮ ಜೀವನಶೈಲಿ: ದೈಹಿಕ ಚಟುವಟಿಕೆ, ಗುಣಮಟ್ಟದ ಆಹಾರದಿಂದ ಬಹುತೇಕ ರೋಗಗಳಿಂದ ದೂರವಿರಬಹುದು. ಒಳ್ಳೆಯ ನಿದ್ರೆ ಮಾಡಬೇಕು. ಮಾನಸಿಕ ಒತ್ತಡಗಳಿಂದ ಮುಕ್ತರಾಗಬೇಕು.
ಮಾಸ್ಕ್ ಬಳಸಿ: ವಾಯುಮಾಲಿನ್ಯ ಹಾಗೂ ರಾಸಾಯನಿಕ ಮಾಲಿನ್ಯಗಳಿಂದ ಆದಷ್ಟು ದೂರವಿರಬೇಕು. ಹೆಚ್ಚು ವಾಹನದಟ್ಟಣೆ ಇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಬಳಸಬೇಕು.
ಸೈಕಲ್ ಉತ್ತೇಜಿಸಿ: ಮಕ್ಕಳಿಗೆ ಸೈಕಲ್ ಬಳಸಲು ಉತ್ತೇಜನ ನೀಡಬೇಕು, ನಡಿಗೆ ಆದ್ಯತೆಯಾಗಬೇಕು. ಕನಿಷ್ಠ ಮನೆಗೊಂದು ಎಲೆಕ್ಟಿಕ್ ವಾಹನ ಇರಬೇಕು. ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆ ತಗ್ಗಿಸಬೇಕು.
ಗಾಳಿ, ಬೆಳಕು: ಉತ್ತಮ ಸೂರ್ಯನ ಬೆಳಕು, ಸ್ವಚ್ಛ ಗಾಳಿ ಇರುವ ಮನೆಗಳಲ್ಲಿ ವಾಸಿಸಬೇಕು.
ದೇಹದ ತೂಕ: ಎತ್ತರಕ್ಕೆ ಅನುಗುಣವಾಗಿ ದೇಹದ ತೂಕವನ್ನು ಕಾಯ್ದುಕೊಳ್ಳಬೇಕು. ಹೊಟ್ಟೆಯ ಸುತ್ತ ಶೇಖರಣೆಯಾಗುವ ಬೊಜ್ಜು ರೋಗಗಳಿಗೆ ರಹದಾರಿ.
ನಿಯಮಿತ ಪರೀಕ್ಷೆ: ನಿಯಮಿತವಾಗಿ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಮೂರು ವರ್ಷಗಳಿಗೊಮ್ಮೆ ಇಡೀ ದೇಹದ ಎಂಆರ್‌ಐ ಸ್ಕ್ಯಾನ್ ಮಾಡಿಸಿಕೊಳ್ಳುವುದು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.