ADVERTISEMENT

ಕ್ಷೀಣಿಸುತ್ತಿದೆ ಯುವಜನರ ಶ್ವಾಸಕೋಶ; ದೇಶದ ಭವಿಷ್ಯಕ್ಕೆ ಮಾರಕ: ತಜ್ಞರ ಎಚ್ಚರಿಕೆ

ಪಿಟಿಐ
Published 8 ಸೆಪ್ಟೆಂಬರ್ 2025, 10:53 IST
Last Updated 8 ಸೆಪ್ಟೆಂಬರ್ 2025, 10:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಭಾರತದ ಯುವಜನತೆಯ ಪುಪ್ಪಸದ ಆರೋಗ್ಯ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಪ್ರತಿ ವರ್ಷ 81,700 ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ದೇಶದಲ್ಲಿ ಪತ್ತೆಯಾಗುತ್ತಿವೆ’ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇಳಿವಯಸ್ಸಿನವರ ಕಾಯಿಲೆ ಎಂದೇ ಒಂದು ಕಾಲದಲ್ಲಿ ಹೇಳಲಾಗುತ್ತಿದ್ದ ಶ್ವಾಸಕೋಶ ಸಂಬಂಧಿತ COPD ಮತ್ತು ಕ್ಷಯ ಈಗ ಯುವಜನರಲ್ಲೂ ವ್ಯಾಪಕವಾಗಿದೆ. ಇದು ದೇಶದ ಭವಿಷ್ಯದ ಜನಸಂಖ್ಯೆ ಮತ್ತು ಆರ್ಥಿಕ ಅಸ್ಥಿರತೆಯ ಮೇಲೂ ಕರಿಛಾಯೆ ಮೂಡುವಂತೆ ಮಾಡಿದೆ.

‘ಮುಂಜಾನೆಯ ಹೊಂಜಿನಲ್ಲಿ ಓಡುವ ಯುವಕರು, ಹೊಗೆ ತುಂಬಿದ ಟ್ರಾಫಿಕ್‌ನಲ್ಲಿ ದಿನದ ಬಹುಪಾಲು ಕಳೆಯುವ ಯುವ ಉದ್ಯೋಗಿಗಳು ಮತ್ತು ಮಾಲಿನ್ಯದಿಂದ ತುಂಬಿದ ತರಗತಿಯಲ್ಲಿ ಕುಳಿತ ವಿದ್ಯಾರ್ಥಿಗಳು ನಿತ್ಯ ವಿಷಕಾರಿ ಗಾಳಿಯನ್ನು ಶ್ವಾಸಕೋಶದೊಳಗೆ ಎಳೆದುಕೊಳ್ಳುತ್ತಿದ್ದಾರೆ. ಇದರಿಂದ ದೇಶದ ಬೆಳವಣಿಗೆಗೆ ತೀವ್ರವಾಗಿ ಅಗತ್ಯವಿರುವ ಅತ್ಯಂತ ಉತ್ಪಾದಕ ವರ್ಷಗಳನ್ನು ಈ ಯುವಜನತೆ ಕಳೆದುಕೊಳ್ಳುತ್ತಿದ್ದಾರೆ’ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ಶ್ವಾಸಕೋಶ ಚಿಕಿತ್ಸೆ, ಇಂಟರ್‌ವೆಂನ್ಶನಲ್ ಪಲ್ಮನಾಲಜಿ ಮತ್ತು ನಿದ್ರಾಹೀನತೆ ಎಂಬ ವಿಷಯ ಕುರಿತ 8ನೇ ರಾಷ್ಟ್ರೀಯ ಸಮ್ಮೇಳನ RESPICON 2025ರಲ್ಲಿ ನಡೆದ ಚರ್ಚೆಯಲ್ಲಿ ತಜ್ಞರು ದೇಶದ ಯುವಜನರ ಶ್ವಾಸಕೋಶ ಸಂಬಂಧಿತ ಸಮಸ್ಯೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಇದು ಹೊರಗಿನ ಮಾಲಿನ್ಯದಿಂದಾಗಿ ಮಾತ್ರ ಆಗುತ್ತಿದೆ ಎಂಬುದಷ್ಟೇ ಅಲ್ಲ. ಅಡುಗೆಕೋಣೆ ಹೊಗೆಯೂ ಶ್ವಾಸಕೋಶ ಕ್ಯಾನ್ಸರ್‌ನ ಅಪಾಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಇದರಿಂದಾಗಿ ಧೂಮಪಾನ ಮಾಡದ ಮಹಿಳೆಯರಲ್ಲೂ ಕ್ಯಾನ್ಸರ್‌ ಪ್ರಮಾಣ ಹೆಚ್ಚಳವಾಗಿದೆ. ಆದರೆ ಈ ಅಪಾಯಗಳನ್ನು ವ್ಯಾಪಕವಾಗಿ ಕಡೆಗಣಿಸಲಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ತಾವು ಮಾಡದ ತಪ್ಪಿಗೆ ಮಕ್ಕಳೂ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದ 5 ವರ್ಷದ ಮಕ್ಕಳ ಸಾವಿನ ಪ್ರಮಾಣ ಶೇ 14ರಷ್ಟಿದೆ ಎಂಬುದು ಇನ್ನಷ್ಟು ಆಘಾತಕಾರಿ ಅಂಶವಾಗಿದೆ. ನಿರಂತರ ಸೋಂಕಿಗೆ ತುತ್ತಾಗುವುದಕ್ಕೆ ಕಲುಷಿತ ಗಾಳಿಯಿಂದಾಗಿ ಕ್ಷೀಣಿಸುವ ದೇಹದ ರೋಗನಿರೋಧಕ ಶಕ್ತಿಯೂ ಸಾಕಷ್ಟು ಕೊಡುಗೆ ನೀಡುತ್ತಿದೆ.

ಈ ಸಮ್ಮೇಳನವನ್ನು ಆರೋಗ್ಯ ಸೇವೆಗಳ ಮಹಾನಿರ್ದೇಶಕಿ ಡಾ. ವತ್ಸಲಾ ಅಗರವಾಲ್ ಉದ್ಘಾಟಿಸಿದರು. ಉಸಿರಾಟದ ಆರೋಗ್ಯ ಕುರಿತು ಕೇಂದ್ರ ಸರ್ಕಾರವು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

‘ಶುದ್ಧ ಗಾಳಿ ಎಂಬುದು ವಿಲಾಸಿ ವಸ್ತುವಲ್ಲ. ಅದು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಯುವಜನತೆಯ ಶ್ವಾಸಕೋಶವನ್ನು ಆರೋಗ್ಯವಾಗಿಟ್ಟಲ್ಲಿ ಅದು ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನೂ ಉತ್ತಮವಾಗಿಟ್ಟಂತೆ. ನಮ್ಮ ವರ್ತಮಾನ ಮತ್ತು ಭವಿಷ್ಯವನ್ನು ವಿಷಕಾರಿ ಗಾಳಿಯು ಕಸಿದುಕೊಳ್ಳಲು ನಾವು ಬಿಡುವುದಿಲ್ಲ’ ಎಂದರು.

ಸಮ್ಮೇಳನದ ಅಧ್ಯಕ್ಷ ಡಾ. ರಾಕೇಶ್ ಕೆ. ಚಾವ್ಲಾ ಮಾತನಾಡಿ, ‘ನಾವು ಸೂಕ್ಷ್ಮಕಣಗಳ ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದನ್ನು ಅರ್ಧದಷ್ಟು ಕಡಿಮೆ ಮಾಡಿದರೆ ಮತ್ತು ಅಸ್ತಮಾ, ಕ್ಷಯ ಹಾಗೂ ಇನ್ನಿತರ ಶ್ವಾಸಕೋಶ ಸಂಬಂಧಿತ ಮಾರ್ಗಸೂಚಿಗಳನ್ನು ಅನುಸರಿಸಿದರೆ ಪ್ರತಿ ವರ್ಷ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಬಹುದು. ಇದರಿಂದ ಜನರೂ ಸಹಜ ಜೀವನ ನಡೆಸಲು ಸಾಧ್ಯ. ಇದು ಕೇವಲ ಆಸ್ಪತ್ರೆ ಅಥವಾ ರೋಗಿಗಳ ವಿಷಯವಲ್ಲ. ಇದು ಒಂದು ತಲೆಮಾರಿನ ಆರೋಗ್ಯ ಮತ್ತು ಸಾಮರ್ಥ್ಯವನ್ನು ರಕ್ಷಿಸುವ ವಿಷಯವಾಗಿದೆ. ಈ ಕುರಿತು ತುರ್ತು ಕ್ರಮ ಕೈಗೊಳ್ಳದಿದ್ದರೆ ಏದುಸಿರು ಬಿಡುತ್ತಿರುವ ಯುವಜನತೆಯ ಆರೋಗ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದರು.

ಸಂಘಟನಾ ಕಾರ್ಯದರ್ಶಿ ಡಾ. ಕೆ.ಆದಿತ್ಯ ಮಾತನಾಡಿ, ‘ಉಸಿರಾಟದ ಆರೋಗ್ಯ ಎಂಬುದು ಭಾರತದ ಹವಾಮಾನದ ಕಥೆ, ಕ್ಯಾನ್ಸರ್ ಕಥೆ ಮತ್ತು ಮಕ್ಕಳನ್ನು ಉಳಿಸಿಕೊಳ್ಳುವುದರ ಕಥೆ. ಹಿಂದೆ ಯಾವುದು ಎಚ್ಚರಿಕೆಯಾಗಿತ್ತೋ ಇಂದು ಅದು ವಾಸ್ತವ ರೂಪ ತಾಳಿದೆ. ವಿಷಕಾರಿ ಗಾಳಿಯು ತನ್ನ ಕರಾಳ ರೂಪವನ್ನು ತೋರಿಸುತ್ತಿದೆ. ಭಾರತೀಯ ಯುವಜನತೆ ಇಂದು ಸರಾಗವಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ, ದೇಶದ ಭವಿಷ್ಯ ಏದುಸಿರು ಬಿಡುವ ಅಪಾಯವೂ ಇದೆ’ ಎಂದರು.

ಈ ಸಮ್ಮೇಳನವನ್ನು ಜೈಪುರ ಗೋಲ್ಡನ್ ಆಸ್ಪತ್ರೆ ಮತ್ತು ಸರೋಜ್ ಆಸ್ಪತ್ರೆ ಸಮೂಹ ಆಯೋಜಿಸಿದ್ದವು. 1200ಕ್ಕೂ ಹೆಚ್ಚು ತಜ್ಞರು ಇದರಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.