ADVERTISEMENT

ಮೆನೋಪಾಸ್: ಋತುಬಂಧಕ್ಕೂ ಹೃದಯದ ಆರೋಗ್ಯಕ್ಕೂ ಇದೆ ನಂಟು!

ಡಾ. ನಿಶಾ ಬುಚಾಡೆ ಲೇಖನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 1:31 IST
Last Updated 15 ಫೆಬ್ರುವರಿ 2025, 1:31 IST
<div class="paragraphs"><p>ಮೆನೋಪಾಸ್: ಋತುಬಂಧಕ್ಕೂ ಹೃದಯದ ಆರೋಗ್ಯಕ್ಕೂ ಇದೆ ನಂಟು!</p></div>

ಮೆನೋಪಾಸ್: ಋತುಬಂಧಕ್ಕೂ ಹೃದಯದ ಆರೋಗ್ಯಕ್ಕೂ ಇದೆ ನಂಟು!

   

ಋತುಬಂಧಕ್ಕೆ ಒಳಗಾಗುವುದು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂದರ್ಭ. ಈ ವೇಳೆ ಮಹಿಳೆಯರ ದೇಹದ ಹಾರ್ಮೋನುಗಳಲ್ಲಿ ಅನೇಕ ರೀತಿಯ ಬದಲಾವಣೆ ಕಂಡುಬರುವುದು ತಿಳಿದಿದೆ. ಆದ್ರೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ.

ಋತುಬಂಧ ಅಥವಾ ಮೆನೋಪಾಸ್ ಮಹಿಳೆಯರ ಋತುಚಕ್ರದ ಅಂತ್ಯ ಅಥವಾ ನಿಲ್ಲುವ ಸೂಚನೆ. ಋತುಬಂಧ ಬಂತೆಂದ್ರೆ ಪ್ರತಿ ತಿಂಗಳ ಮುಟ್ಟಿನ ಅವಧಿ ಸಂಪೂರ್ಣವಾಗಿ ನಿಲ್ಲುತ್ತದೆ. ಈ ಪ್ರಕ್ರಿಯೆಯನ್ನು ಮೆನೋಪಾಸ್ ಎಂದು ಕರೆಯಲಾಗುತ್ತದೆ.

ADVERTISEMENT

ಸಾಮಾನ್ಯವಾಗಿ ಈ ಋತುಬಂಧವು 45 ರಿಂದ 55 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಈಸ್ಟ್ರೋಜೆನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನ್ಗಳ ಮಟ್ಟವು ಕಡಿಮೆಯಾಗುವ ಸಾಧ್ಯತೆಯಿರುತ್ತದೆ.

ಈ ವೇಳೆ ಮಹಿಳೆಯರು ವಿವಿಧ ರೀತಿಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ಅದಲ್ಲದೆ ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂದರ್ಭವೂ ಹೆಚ್ಚಿರುತ್ತದೆ. ಹೃದಯ ರಕ್ತನಾಳದ ಕಾಯಿಲೆಯಿಂದಾಗಿ ಮಹಿಳೆಯರು ಸಾವಿಗೂ ತುತ್ತಾಗುವ ಸಾಧ್ಯತೆ ಇರುತ್ತದೆ.

ಈ ವೇಳೆ ಮಹಿಳೆಯರು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಾಗ್ಯೂ ಮಹಿಳೆಯರು ಋತುಬಂಧಕ್ಕೆ ಒಳಗಾದಾಗ ಈಸ್ಟ್ರೊಜೆನ್ ಮಟ್ಟ ಕುಸಿತಗೊಳ್ಳತ್ತದೆ. ಇದು ಹೃದಯ ರಕ್ತನಾಳದ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ, ಅನಾರೋಗ್ಯಕರ ಕೊಬ್ಬಿನ ಶೇಖರಣೆ ಹೆಚ್ಚಾಗುತ್ತದೆ. ಈ ಎಲ್ಲಾ ಅಂಶಗಳು ಹೃದಯದ ಕಾಯಿಲೆಗಳಿಗೆ ಕಾರಣವಾಗಬಹುದು. ಜೊತೆಗೆ ಋತುಬಂಧವು ಇನ್ಸುಲಿನ್ ಪ್ರತಿರೋಧ, ಚಯಾಪಚಯ ಬದಲಾವಣೆಗಳು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು, ಇದು ಹೃದಯ ಸಂಬಂಧಿ ಕಾಯಿಲೆಗಳಿಗೆ ಸಹ ಕಾರಣವಾಗಬಹುದು. ಆದ್ದರಿಂದ ಋತುಬಂಧಕ್ಕೆ ಒಳಗಾಗುವ ಮಹಿಳೆಯರು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಜೀವನಶೈಲಿಗೆ ಹೊಂದಿಕೊಳ್ಳುವುದು ಅತ್ಯಗತ್ಯ.

ಈ ಸಂದರ್ಭದಲ್ಲಿ ಮಹಿಳೆಯರು ಹಣ್ಣು, ತರಕಾರಿ, ಧಾನ್ಯಗಳು, ಕಡಿಮೆ ಕೊಬ್ಬಿನಾಂಶವಿರುವ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನಾಂಶದಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಮೂಲಕವೂ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಾಲ್ಮನ್, ಅಗಸೆಬೀಜ ಮತ್ತು ವಾಲ್ನಟ್ ಗಳಂತಹ ಒಮೆಗಾ-3 ಕೊಬ್ಬಿನಾಂಶ ಅಧಿಕವಾಗಿರುವ ಆಹಾರಗಳು ಉರಿಯೂತವನ್ನು ಕಡಿಮೆ ಮಾಡುವ ಮತ್ತು ಸರಿಯಾದ ರಕ್ತದ ಹರಿವಿಗೆ ನೆರವಾಗುವ ಮೂಲಕ ಹೃದಯವನ್ನು ಆರೋಗ್ಯಕರವಾಗಿ ಇಡುತ್ತವೆ.

ಸಂಸ್ಕರಿಸಿದ ಆಹಾರಗಳು, ಅತಿಯಾದ ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸದಿರುವುದು ಒಳಿತು. ನಿಯಮಿತ ವ್ಯಾಯಾಮದತ್ತ ಗಮನ ಹರಿಸುವ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯ. ಇದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ, ಒತ್ತಡ ಕಡಿಮೆಯಾಗುತ್ತದೆ ಮತ್ತು ಹೃದಯ ರಕ್ತನಾಳದ ಕಾರ್ಯ ಹೆಚ್ಚುತ್ತದೆ. ವಯಸ್ಸಾದಂತೆ ಕಡಿಮೆಯಾಗುವ ಸ್ನಾಯುವಿನ ಬಲ ಮತ್ತು ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಶಕ್ತಿ ತರಬೇತಿ ವ್ಯಾಯಾಮಗಳು ಸಹ ಪ್ರಯೋಜನಕಾರಿ. ಋತುಬಂಧದ ಸಮಯದಲ್ಲಿ ದೈಹಿಕವಾಗಿ ಸಕ್ರಿಯವಾಗಿರುವುದು ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ದೈಹಿಕ ವ್ಯಾಯಾಮದ ಜೊತೆಗೆ ಮಹಿಳೆಯರು ಧ್ಯಾನ, ದೀರ್ಘ ಉಸಿರಾಟ, ಒತ್ತಡ ಕಡಿಮೆ ಮಾಡಿಕೊಳ್ಳಲು ಮತ್ತು ಮನಸನ್ನು ಉಲ್ಲಾಸವಾಗಿಟ್ಟುಕೊಳ್ಳಲು ಸಹಕರಿಸುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ಮಾನಸಿಕವಾಗಿ ಸದೃಢವಾಗಿರುವುದರತ್ತ ಗಮನಹರಿಸಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಉತ್ತಮ ನಿದ್ರೆ ಕೂಡ ಬಹಳ ಅವಶ್ಯಕ. ಇದಷ್ಟೇ ಅಲ್ಲದೆ ಮಹಿಳೆಯರು ನಿಯಮಿತವಾಗಿ ಆರೋಗ್ಯ ತಪಾಸಣೆ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದಲ್ಲಿನ ಸಕ್ಕರೆಯಂತಹ ಹೃದಯ ಸಂಬಂಧಿತ ಅಂಶಗಳನ್ನು ಒಳಗೊಂಡಂತೆ ವಿವಿಧ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸತಕ್ಕದ್ದು. ಈ ಮೂಲಕ ಹೃದಯ ಸಂಬಂಧಿ ಕಾಯಿಲೆಗಳನ್ನು ಮೊದಲೇ ಪತ್ತೆಹಚ್ಚಲು ಮತ್ತು ಅದನ್ನು ತಡೆಗಟ್ಟಲು ಸಹಾಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.