ADVERTISEMENT

ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರ ಪೋಷಕರ ಕಾಲಾನಂತರ ಮುಂದೇನು? ಇಲ್ಲಿದೆ ಸಲಹೆ

ಡಾ.ಕೆ.ಎಸ್ ಶುಭ್ರತಾ
Published 2 ಸೆಪ್ಟೆಂಬರ್ 2025, 0:16 IST
Last Updated 2 ಸೆಪ್ಟೆಂಬರ್ 2025, 0:16 IST
   
ಮಾನಸಿಕ ಕಾಯಿಲೆಯಿಂದ ಬಳಲುವ ವ್ಯಕ್ತಿಯನ್ನು ಪೋಷಿಸುತ್ತಿದ್ದವರು ಇಲ್ಲವಾದರೆ ಮುಂದೆ ಯಾರು? ಎಂಬ ಪ್ರಶ್ನೆ ಎದುರಾಗುವುದು ಸಹಜ. ಸೂಕ್ತ ತಯಾರಿ ಇದ್ದರೆ ಈ ಸಮಸ್ಯೆಗೂ ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು

ಹರಿಣಿ ಮತ್ತು ತಾಯಿ ಮನೋವೈದ್ಯರಲ್ಲಿ ಚಿಕಿತ್ಸೆಗಾಗಿ ಬರುತ್ತಾ ಸುಮಾರು ಇಪ್ಪತ್ತು ವರ್ಷಗಳೇ ಕಳೆದಿದೆ. ಹದಿನೆಂಟನೇ ವಯಸ್ಸಿನಲ್ಲಿ ಹರಿಣಿಗೆ ಮೊದಲ ಬಾರಿ ಮಾನಸಿಕ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕಾಯಿಲೆಯ ಲಕ್ಷಣಗಳು ಉಲ್ಬಣವಾದಾಗ ಹರಿಣಿಯನ್ನು ತಂದೆತಾಯಿಗಳು ಮನೋವೈದ್ಯರಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದರು. ವೈದ್ಯರು  ಇದು ‘ಸ್ಕಿಜೋಫ್ರೀನಿಯಾ’ ಎಂದು ಗುರುತಿಸಿ, ಚಿಕಿತ್ಸೆಯನ್ನು ಪ್ರಾರಂಭಿಸಿದ್ದರು. ಕೆಲವೇ ದಿನಗಳಲ್ಲಿ ಲಕ್ಷಣಗಳು ಒಂದು ಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತು. ವೈದ್ಯರೇ ಹೇಳಿದಂತೆ ಈ ರೀತಿಯ ಕಾಯಿಲೆಯಲ್ಲಿ ಸುಮಾರು ಶೇ 70ರಷ್ಟು ರೋಗಿಗಳು ಪೂರ್ಣ ಗುಣಮುಖರಾಗುತ್ತಾರೆ. ಇನ್ನುಳಿದ ಶೇ 30ರಷ್ಟು ಮಂದಿಯಲ್ಲಿ ಕೆಲವು ಲಕ್ಷಣಗಳು ಮಾತ್ರೆಗಳಿಗೆ ಸ್ಪಂದಿಸದೆ ಇರಬಹುದು. ಅದರೊಂದಿಗೆ ಜೀವನ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಹರಿಣಿಯ ದುರಾದೃಷ್ಟಕ್ಕೆ ಅವಳು ಶೇ 30ರೊಳಗೇ ಬರಬೇಕೇ? ಇದಾಗಿ ಸುಮಾರು ಇಪ್ಪತ್ತು ವರ್ಷಗಳು ಕಳೆದಿವೆ. ಐದಾರು ಬಾರಿ ಕಾಯಿಲೆ ಉಲ್ಬಣವಾಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಭರ್ತಿಯಾಗಿ ಚಿಕಿತ್ಸೆ ಪಡೆದಿದ್ದಾಳೆ. ಆಗಾಗ ಮಾತ್ರೆಯನ್ನು ಬಿಟ್ಟುಬಿಡುತ್ತಾಳೆ. ಹರಿಣಿ, ತಂದೆ ತಾಯಿಯ ಸಹಾಯದೊಂದಿಗೆ ಜೀವನವನ್ನು ಈ ಇಪ್ಪತ್ತು ವರ್ಷಗಳ ಕಾಲ ನಡೆಸಿದ್ದಾಳೆ. ತಂದೆ ತೀರಿಕೊಂಡು ಈಗಾಗಲೇ ಎರಡು ವರ್ಷಗಳಾಗಿದೆ. ಈ ಎರಡು ವರ್ಷಗಳಲ್ಲಿ ಹರಿಣಿ ತನ್ನ ವಯಸ್ಸಾದ ತಾಯಿಯೊಂದಿಗೆ ಆಸ್ಪತ್ರೆಗೆ ಬರುತ್ತಾಳೆ. ತಾಯಿಗೆ ಈಗ ಎಪ್ಪತ್ತು ವರ್ಷ ವಯಸ್ಸು. ಹರಿಣಿಯನ್ನು ತೋರಿಸಲು ಆಸ್ಪತ್ರೆಗೆ ಬಂದಾಗ ಹರಿಣಿಯೇನೋ ನಡೆದು ಬರುತ್ತಾಳೆ. ಏರಿದ ರಕ್ತದೊತ್ತಡ, ಬೊಜ್ಜು, ಮಂಡಿನೋವು ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವ ತಾಯಿಗೆ ವೀಲ್‌ ಚೇರಿನ ಸಹಾಯ ಬೇಕು. ತನ್ನ ಆರೋಗ್ಯ ಹೀಗಿರುವಾಗ, ತನ್ನ ನಂತರ ಮಗಳ ಗತಿಯೇನು – ಎಂದು ತಾಯಿ ಚಿಂತಿಸಿ ಚಿಂತಿಸಿ ತಾನೇ ಖಿನ್ನತೆಗೆ ಜಾರುತ್ತಿದ್ದಾಳೆ.

ತೀವ್ರತರಹದ ಮಾನಸಿಕ ರೋಗಗಳು

1950ರ ದಶಕದಲ್ಲಿ ಮಾನಸಿಕ ರೋಗದ ಲಕ್ಷಣಗಳಿಗೆ ಮೊದಲ ಮಾತ್ರೆಯನ್ನು ಕಂಡುಹಿಡಿದರು. ಅಂದಿನಿಂದ ಇಲ್ಲಿಯವರೆಗೆ ಸಾಕಷ್ಟು ಬೇರೆ ಬೇರೆ ರೀತಿಯ ಔಷಧಗಳು ಮತ್ತು ವಿಶೇಷ ರೀತಿಯ ಆಪ್ತಸಮಾಲೋಚನಾಕ್ರಮಗಳು ಲಭ್ಯವಾಗಿವೆ. ಬಹಳಷ್ಟು ಮಂದಿ ಪೂರ್ಣ ಗುಣಮುಖರಾಗಿ ಸಹಜ ಜೀವನವನ್ನು ನಡೆಸುತ್ತಾರೆ. ಆದರೂ ತೀವ್ರ ತರಹದ ಮಾನಸಿಕ ರೋಗ ಇರುವಂತಹ ಕೆಲವೇ ಕೆಲವರಲ್ಲಿ ಪೂರ್ಣಮಟ್ಟಿಗೆ ಕಾಯಿಲೆ ಶಮನಗೊಳ್ಳುವುದಿಲ್ಲ. ಕಾಳಜಿ ವಹಿಸುವ ತಂದೆ ತಾಯಿಗಳಿಗೆ ವಯಸ್ಸಾಗುತ್ತದೆ, ತಮ್ಮದೇ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನಾವಿದ್ದಾಗ/ ನಾನಿದ್ದಾಗ ಹೇಗೋ ಪರವಾಗಿಲ್ಲ, ನನ್ನ ಅಥವಾ ನಮ್ಮ ನಂತರ ಇವನ/ಳ ಗತಿಯೇನು ಎಂಬ ಪ್ರಶ್ನೆ ಕಾಡುತ್ತದೆ.

 ತರಬೇತಿ
ಎಷ್ಟೇ ತೀವ್ರ ತರಹದ ಮಾನಸಿಕ ಕಾಯಿಲೆ ಇದ್ದರೂ ಸರಿಯಾದ ಚಿಕಿತ್ಸೆಯಿಂದ ಶೇ 70ರಷ್ಟು ಲಕ್ಷಣಗಳು ಕಡಿಮೆಯಾಗುತ್ತವೆ. ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುವ ಮಟ್ಟಿಗೆ ತಯಾರಾಗುತ್ತಾರೆ. ಆದರೆ ಅವರಿಗೆ ಯಾರದಾದರೂ ಮೇಲ್ವಿಚಾರಣೆ ಬೇಕಾಗಬಹುದು. ಪೋಷಕರು ಮೊದಲು ಮಾಡಬೇಕಾದ ಕಾರ್ಯ, ಈ ವ್ಯಕ್ತಿಗಳಿಗೆ ಸಣ್ಣಪುಟ್ಟ ಅಡುಗೆಯ ಕೆಲಸಗಳನ್ನು ಮಾಡಿಕೊಳ್ಳುವ ತರಬೇತಿಯನ್ನು ನೀಡಬೇಕಾದ್ದು. ಹಾಲು ಕಾಯಿಸುವುದು, ಅನ್ನವನ್ನು ಮಾಡಿಕೊಳ್ಳುವುದು, ಸರಳವಾಗಿ ಸಾರನ್ನು ಮಾಡಿಕೊಳ್ಳುವ ವಿಧಾನ ಇತ್ಯಾದಿ. ಇನ್ನು ಕೆಲವು ಬಾರಿ ಪಕ್ಕದ ಹೋಟೆಲ್/ಕ್ಯಾಂಟೀನ್ನಿಂದ ಅನ್, ಸಾರು, ಚಪಾತಿ, ಪಲ್ಯವನ್ನು ತಂದುಕೊಳ್ಳುವುದನ್ನು ಅಭ್ಯಾಸ ಮಾಡಿಸಬಹುದು. ತಟ್ಟೆ/ ಲೋಟಗಳನ್ನು ತೊಳೆದುಕೊಳ್ಳುವುದು, ತಮ್ಮ ಬಟ್ಟೆಯನ್ನು ಒಗೆದುಕೊಳ್ಳುವುದು ಕಲಿಸಬೇಕು.

ಗಾರ್ಡಿಯನ್‌ ನೇಮಕ
ಕುಟುಂಬದಲ್ಲಿ ಯಾರ ಬಳಿ ಮಗ ಅಥವಾ ಮಗಳ ಜವಾಬ್ದಾರಿಯನ್ನು ಒಪ್ಪಿಸುತ್ತೀರಾ – ಎಂಬುದರ ಬಗ್ಗೆ ಸಮಾಲೋಚಿಸಿ ತೀರ್ಮಾನಕ್ಕೆ ಬರಬೇಕು. ಸಾಮಾನ್ಯವಾಗಿ ರಕ್ತಸಂಬಂಧಿಗಳು ಅಥವಾ ಇತರ ಕುಟುಂಬ ಸ್ನೇಹಿತರಾಗಬಹುದು. ಆ ವ್ಯಕ್ತಿ ನಂಬಿಕೆಗೆ ಅರ್ಹರೇ? ಅವರಿಗೆ ಈ ಜವಾಬ್ದಾರಿಯ ಕುರಿತು ಅರಿವಿದೆಯೇ? ಕಾನೂನಿನ ಪ್ರಕಾರ ಸರಿಯೇ? ಎಲ್ಲವನ್ನು ಕೂಲಂಕುಶವಾಗಿ ಯೋಚಿಸಬೇಕು. ಮಗ ಅಥವಾ ಮಗಳನ್ನು ಭವಿಷ್ಯದಲ್ಲಿ ಇವರು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆಯಡಿ ಈ ವ್ಯಕ್ತಿಯನ್ನು ‘Nominated Representative’ (ನಾಮನಿರ್ದೇಶನ ಮಾಡಲ್ಪಟ್ಟ ಪ್ರತಿನಿಧಿ) ಎಂದು ಕರೆಯುತ್ತಾರೆ. ಈ ಕಾಯ್ದೆಯಡಿ, ಮನೋರೋಗ ಚಿಕಿತ್ಸೆಗೆ ಸಂಬಂಧಪಟ್ಟ ನಿರ್ಧಾರಗಳನ್ನು ರೋಗಿಯಹಿತಾಸಕ್ತಿಯಲ್ಲಿ ಈ ವ್ಯಕ್ತಿಗೆ ತೆಗೆದುಕೊಳ್ಳುವ ಹಕ್ಕಿದೆ.

ಚಿಕಿತ್ಸೆಯ ಅರಿವು
ಹಲವಾರು ಸಂದರ್ಭಗಳಲ್ಲಿ ನಿಯಮಿತವಾಗಿ ಒಂದು ಮನೋರೋಗಿಯ ಕಾಳಜಿಯನ್ನು ವಹಿಸುತ್ತಿದ್ದ ವ್ಯಕ್ತಿಯ ಸಾವಾದಾಗ, ಮನೆಯ ಇತರ ವ್ಯಕ್ತಿಗಳಿಗೆ ರೋಗಿಯ ಕಾಳಜಿ, ಚಿಕಿತ್ಸೆ, ವೈದ್ಯರು, ಮಾತ್ರೆಗಳನ್ನು ಕೊಡುವ ಕ್ರಮ, ಇತ್ಯಾದಿ ವಿವರಗಳ ಬಗ್ಗೆ ಅರಿವೇ ಇರುವುದಿಲ್ಲ. ಅದಕ್ಕಾಗಿಯೇ ಯಾವ ಮನೋವೈದ್ಯರಲ್ಲಿ ಮಗ ಅಥವಾ ಮಗಳನ್ನು ಚಿಕಿತ್ಸೆಗಾಗಿ ಕರೆದೊಯ್ಯುತ್ತಾರೋ ಅವರ ಬಳಿ ಈ ನಿಯೋಜಿತ ವ್ಯಕ್ತಿಯನ್ನು ಅಥವಾ ಗಾರ್ಡಿಯನ್‌ನನ್ನು ಕರೆದುಕೊಂಡು ಹೋಗಿ ಪರಿಚಯಿಸಿ ಚಿಕಿತ್ಸಾಕ್ರಮಗಳ ಬಗ್ಗೆ ತಿಳಿಸುವುದು ಅತ್ಯಂತ ಅವಶ್ಯಕ. 

ಆರ್ಥಿಕ ಸಂಪನ್ಮೂಲ
ವ್ಯಕ್ತಿಗೆ ಈಗಾಗಲೇ ಆರ್ಥಿಕ ಸಂಪನ್ಮೂಲಗಳಿದ್ದರೆ ಅದರ ದುರುಪಯೋಗ ಇತರರು ಮಾಡದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಈ ಕಾರಣಕ್ಕಾಗಿ ತಮ್ಮ ವಕೀಲರೊಂದಿಗೆ ಸಮಾಲೋಚಿಸಿ, ಟ್ರಸ್ಟ್ ರೀತಿಯ ಒಂದು ವ್ಯವಸ್ಥೆಯನ್ನು ಮಾಡಬಹುದು. ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆಯ ಅನ್ವಯ ಮಾನಸಿಕ ರೋಗಿಗಳನ್ನು ನೋಡಿಕೊಳ್ಳುವ ಹೊಣೆ ಸರ್ಕಾರದ್ದು ಎಂಬುದಾಗಿ ಇದೆಯಾದರೂ, ಈ ರೀತಿಯ ಕಾರಣಕ್ಕಾಗಿ ಸರ್ಕಾರಿ ಸಂಸ್ಥೆಗಳು ಅಷ್ಟಾಗಿ ಇಲ್ಲದಿರುವುದು ನಮ್ಮ ದುರದೃಷ್ಟವೇ ಸರಿ.

ಮದುವೆ ಮಾಡಿದರೆ ಹೇಗೆ?
ಮದುವೆ ಇದಕ್ಕೆ ಪರಿಹಾರವೇ ಎಂಬ ಪ್ರಶ್ನೆ ಎಲ್ಲರಿಗೂ ಉದ್ಭವಿಸುತ್ತದೆ. ನಿಜ, ಯಾವುದೇ ವ್ಯಕ್ತಿಗೆ ಕಾಳಜಿ ವಹಿಸುವ ಗಂಡ ಅಥವಾ ಹೆಂಡತಿ ಇದ್ದರೆ ಅದು ಬೆಲೆ ಕಟ್ಟಲಾಗದ ಬಹುದೊಡ್ಡ ಆಸ್ತಿ. ಹಾಗೆಂದು ಆ ಕಾರಣಕ್ಕಾಗಿಯೇ ಮದುವೆಯನ್ನು ಮಾಡುವುದು ಉಚಿತವಲ್ಲ. ಮದುವೆಯಾಗುವ ವ್ಯಕ್ತಿ ವೈವಾಹಿಕ ಜೀವನದ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಿದ್ದರೆ ಮಾತ್ರ ವಿವಾಹ ಯಶಸ್ವಿಯಾಗುತ್ತದೆ.

ಒಟ್ಟಿನಲ್ಲಿ, ತೀವ್ರತರಹದ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಪೋಷಕರು, ‘ನನ್ನ ನಂತರ ಏನು?’ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಖಿನ್ನರಾಗುವ ಅಗತ್ಯವಿಲ್ಲ. ಸರಿಯಾದ ಪೂರ್ವತಯಾರಿ ಇದ್ದರೆ, ಸಮಸ್ಯೆಯಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.