
ಚಿತ್ರ ಕೃಪೆ:ಗೆಟ್ಟಿ
‘ನಮ್ಮಲ್ಲಿ ಎಷ್ಟು ಇದೆ ಎಂಬುದು ಸಂತೋಷವನ್ನುಂಟುಮಾಡುವುದಿಲ್ಲ. ಆದರೆ ನಾವು ಅದನ್ನು ಎಷ್ಟು ಅನುಭವಿಸಬಲ್ಲೆವು ಎಂಬುದು ನಮ್ಮ ಆನಂದವನ್ನು, ಖಷಿಯನ್ನು ನಿರ್ಧರಿಸುತ್ತದೆ’ - ಬ್ರಿಟನ್‌ನ ಮಾಜಿ ಸಚಿವರೂ ಆಗಿದ್ದ ಖ್ಯಾತ ಬರಹಗಾರ ಚಾರ್ಲ್ಸ್ ಸ್ಪರ್ಜನ್ ರ ಜನಪ್ರಿಯ ಹೇಳಿಕೆ ಇದು.
ಎಷ್ಟು ನಿಜವಲ್ಲವೇ? ನನ್ನ ಬಳಿ ಅಷ್ಟಿದೆ, ಇಷ್ಟಿದೆ ಎಂಬೆಲ್ಲ ಗರ್ವಕ್ಕೆ ಮುನ್ನ ಕೇಳಕೊಳ್ಳಬೇಕಾದ ಪ್ರಶ್ನೆ ಏನೆಂದರೆ, ಅವನ್ನೆಲ್ಲ ಅನುಭವಿಸಲು ನಮ್ಮ ದೇಹ ಕೂಡ ಸದೃಢವಾಗಿದೆಯೇ? ಎಲ್ಲವೂ ಇದ್ದು ಅನುಭವಿಸಲು ಆರೋಗ್ಯವೇ ಇಲ್ಲದೇ ಹೋದರೆ ಎಷ್ಟಿದ್ದು ಏನು ಪ್ರಯೋಜನ?
ಇವತ್ಯಾಕೆ ಈ ಪ್ರಸ್ತಾಪ ಎನ್ನುತ್ತೀರಾ? ಅದನ್ನು ಹೇಳೋಕಿಂತ ಮುಂಚೆ...
ಹೊಸ ವರ್ಷದ ಹೊಸ್ತಿಲಲ್ಲಿ ಇದ್ದೇವೆ… ಹೊಸ ಕನಸುಗಳು, ಹೊಸ ಗುರಿಗಳು, ಹೊಸ ಹಾದಿಗಳು—ಎಲ್ಲವೂ ನಮ್ಮ ಮುಂದೆ ತೆರೆದುಕೊಳ್ಳುತ್ತಿವೆ. ಮುಂದಿನ ಒಂದು ವರ್ಷ ಕಾಲ ನಾವು ನಡೆಯುವ ಹಾದಿಯ ತುಂಬೆಲ್ಲ ಹೂವೇ ಹಾಸಿರಲಿ. ಅಲ್ಲಿ ಮುಳ್ಳು–ಕಲ್ಲುಗಳೇ ಇಲ್ಲದಿರಲಿ. ಅಂಥ ಮೃದು ಮಧುರ ಪಯಣದಲ್ಲಿ ನಮ್ಮ ದೇಹ–ಮನಸುಗಳೆರಡೂ ಬೆಸೆದುಕೊಂಡು ಯುಗಳ ಗೀತೆಯನ್ನು ಹಾಡುತ್ತ ಬದುಕು ಸಾಗಲಿ...
ಅಂಥ ಸುಂದರ ಬದುಕಿನ ಪಯಣ ನಮ್ಮದಾಗಬೇಕಿದ್ದರೆ ನಾವೇನು ಮಾಡಬೇಕೆಂಬುದನ್ನು ನೆನಪಿಸುವ ದಿನವೇ ಜನವರಿ 3 – ಅಂತರರಾಷ್ಟ್ರೀಯ ವೆಲ್‌ನೆಸ್ ಡೇ (International Mind-Body Wellness Day). ಈಗ ಮತ್ತೊಮ್ಮೆ ಲೇಖನದ ಮೇಲ್ಭಾಗಕ್ಕೆ ಹೋಗಿ ಚಾರ್ಲ್ಸ್ ಸ್ಪರ್ಜನ್‌ರ ಮಾತನ್ನು ಓದಿಕೊಳ್ಳಿ.
ನಿಜ ಎನಿಸುತ್ತದೆಯಲ್ಲವೇ? ಜೀವನದಲ್ಲಿ ಎಲ್ಲವನ್ನೂ ಗಳಿಸಬಹುದು. ಒಂದೊಮ್ಮೆ ಹಾಗೆ ಗಳಿಸಿದ್ದೆಲ್ಲವನ್ನೂ ಕಳೆದುಕೊಂಡುಬಿಟ್ಟೆವು ಎನ್ನಿ, ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ಮತ್ತೆ ಮತ್ತೆ ಸಂಪಾದಿಸಿಕೊಳ್ಳಬಹುದು. ಆದರೆ ಆರೋಗ್ಯ… ?
ಒಮ್ಮೆ ಕಳೆದುಕೊಂಡರೆ ಜೀವನದಲ್ಲಿ ಮತ್ತೆ ಸಂಪೂರ್ಣವಾಗಿ ಮೊದಲಿನಂತಾಗುವುದು ಸುಲಭವಲ್ಲ. ಹೀಗಾಗಿ ದೇಹವನ್ನು ಸುಂದರವಾಗಿಟ್ಟುಕೊಂಡು, ಸದೃಢ ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದು ಬಹಳ ಮುಖ್ಯ. ಅದಕ್ಕೇನು ಮಾಡಬೇಕು? ಅದನ್ನು ಯೋಚಿಸಲಿಕ್ಕಾಗಿ ಇರುವುದೇ ವೆಲ್‌ನೆಸ್ ಡೇ. ಅಷ್ಟಕ್ಕೂ ಇವತ್ತೇ (ಜ. 3) ಏಕೆ ಈ ದಿನ? ಪ್ರಶ್ನೆ ಸಹಜ. ಉತ್ತರವೂ ಸರಳ. ಬಹುತೇಕರು ವರ್ಷದ ಆರಂಭದಲ್ಲಿ ಒಂದಷ್ಟು ಗುರಿಯನ್ನು ಸಾಧನೆಗಾಗಿ ಹಾಕಿಕೊಳ್ಳುತ್ತಾರೆ. ರೆಸಲ್ಯೂಷನ್ ಕೈಗೊಳ್ಳುತ್ತಾರೆ. ಅದರಲ್ಲಿ ಬೊಜ್ಜು ಕರಗಿಸುವುದು, ವ್ಯಾಯಾಮ, ಜಿಮ್, ಯೋಗ, ವಾಕಿಂಗ್...ಹೀಗೆ ಇವೆಲ್ಲವೂ ಸೇರಿಕೊಂಡಿರುತ್ತವೆ. ಅಂಥ ಹೊಸ ವರ್ಷದ ನಿರ್ಣಯಕ್ಕೆ ಪೂರಕವಾಗಿಯೇ ವರ್ಷಾರಂಭದಲ್ಲಿಯೇ ವೆಲ್‌ನೆಸ್ ಡೇಯನ್ನು ನಿಗದಿಗೊಳಿಸಲಾಗಿದೆ. ಹೊಸ ವರ್ಷದ ಮೊದಲ ವಾರದಲ್ಲೇ ನಾವು ಮಹತ್ತರ ಬದಲಾವಣೆಗೆ ನಿರ್ಧರಿಸಿದಲ್ಲಿ ನಮ್ಮ ಮನೆ–ದೇಹ–ಮನಸ್ಸು; ಈ ಪರಸ್ಪರ ಬೆಸೆದುಕೊಂಡಿರುವ ಸಂಗತಿಗಳ ಸಮತೋಲನ ಸುಲಭ.
ಹಾಗಾದರೆ ಈ ವರ್ಷ ದೊಡ್ಡ ಬದಲಾವಣೆ ನಮ್ಮ ದೇಹ–ಮನಸುಗಳಲ್ಲಿ ತರುವುದು ಹೇಗೆ? ’ಅದಕ್ಕಾಗಿ ಎಂಥಾ ಬೆಲೆಯನ್ನಾದರೂ ತೆರಲು ನಾನು ಸಿದ್ಧ‘ ಎಂತಲೇ ಬಹತೇಕರು ಹೇಳುತ್ತಾರೆ. ಅದಕ್ಕೆ ಬೇಕಿರುವುದು ತೀರಾ ಚಿಕ್ಕ ಪ್ರಯತ್ನವಷ್ಟೇ.
ಸಣ್ಣ ಪ್ರಯತ್ನ— ಈ ವರ್ಷ ಕೊಟ್ಟೀತು ಬಹು ದೊಡ್ಡ ಫಲ. ಎಲ್ಲಕ್ಕಿಂತ ಮೊದಲು ನಾವು ನಮ್ಮ ಯೋಚನೆಗಳನ್ನು ಬದಲಿಸಿಕೊಳ್ಳಬೇಕಿದೆ. ಫಿಟ್‌ನೆಸ್; ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಬೇಕಾದ ಒಂದು ಅಪ್ಪುಗೆ. ನಮ್ಮ ದೇಹ ನಮ್ಮನ್ನು ಪ್ರತಿದಿನ ಬೆಳಗೆದ್ದ ತಕ್ಷಣ ಎತ್ತಿ ನಿಲ್ಲಿಸುತ್ತದೆ, ನಡೆಸುತ್ತದೆ, ಕೆಲಸ ಮಾಡಿಸುತ್ತದೆ, ಓಡಿಸುತ್ತದೆ, ಕೊನೆಗೆ ರಾತ್ರಿ ತಂದು ಮಲಗಿಸಿ ಸಂತೈಸುತ್ತದೆ. ಹಾಗೆಯೇ ನಮ್ಮ ಮನಸ್ಸು—ನಮಗೆ ಎಲ್ಲ ಇಚ್ಛಾ ಶಕ್ತಿಯನ್ನು ಕೊಡುವ ಮೂಲ. ಆಸೆಯನ್ನು ಪಡಿಮೂಡಿಸಿ ’ಆಹಾ ಈ ಬದುಕು ಎಂಥಾ ಸುಂದರ‘ ಎನಿಸುವಂತೆ ಮಾಡುವುದೇ ಮನಸು.
ನಮಗೆ ಇಷ್ಟೆಲ್ಲ ಉಪಕಾರ ಮಾಡುವ ನಮ್ಮ ದೇಹ-ಮನಸ್ಸಿನ ಜೋಡಿಯನ್ನು ನಾವು ಕನಿಷ್ಠ ಒಂದು ಬಾರಿಯಾದರೂ ಕೃತಜ್ಞತಾ ಭಾವದಿಂದ ನೋಡಿದ್ದೇವಾ? ನನಗೆ ಇಷ್ಟೆಲ್ಲ ಸುಂದರ ಬದುಕನ್ನು ಕಟ್ಟಿ ಕೊಟ್ಟ ದೇಹ–ಮನಸುಗಳನ್ನೂ ನಾನು ಚೆಂದವಾಗಿ ನೋಡಿಕೊಳ್ಳಬೇಕು, ಅವಕ್ಕೆ ನೋವಾಗದಂತೆ ಎಚ್ಚರ ವಹಿಬೇಕು ಎಂದು ಯಾವತ್ತಾದರೂ ಯೋಚಿಸಿದ್ದೇವಾ?
ಒಮ್ಮೆ ನಿಂತು ಯೋಚಿಸಿ…
ನಮ್ಮ ದೇಹಕ್ಕೆ ಥ್ಯಾಂಕ್ಸ್ ಹೇಳಿದ ದಿನವೇನಾದರೂ ನಿಮಗೆ ನೆನಪಿನಲ್ಲಿದೆಯೇ? ನಮ್ಮ ಮನಸ್ಸನ್ನು ಮೃದುವಾಗಿ ಸಮಾಧಾನಪಡಿಸಿದ, ಪ್ಯಾಂಪರ್ ಮಾಡಿದ ಕ್ಷಣ ಇದೆಯಾ?
ವೆಲ್‌ನೆಸ್ ಡೇ ನಮಗೆ ಈ ಪ್ರಶ್ನೆಯನ್ನು ಕೇಳಿಕೊಳ್ಳಲು ಇರುವ ಸುವರ್ಣಾವಕಾಶ. ಈಗಲೇ, ಈ ಕ್ಷಣ ಕೇಳಿಕೊಳ್ಳಿ
’ನನ್ನನ್ನು ನಾನು ಎಷ್ಟರ ಮಟ್ಟಿಗೆ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದೇನೆ?”
ಆರೋಗ್ಯ ಕಾಳಜಿ ಎಂಬುದು ಕೇವಲ ಬೋಧನೆಯಲ್ಲ. ಜೀವನದ ಮೂಲಭೂತ ಅಗತ್ಯ. ಏಕೆಂದರೆ ದೇಹ–ಮನಸುಗಳು ನಮಗೆ ಜೀವನದ ಪ್ರತಿ ಕ್ಷಣದಲ್ಲಿ ಒಂದು ಮೌನ ಪಾಠವನ್ನು ಹೇಳುತ್ತಲೇ ಇರುತ್ತವೆ. ಆದರೆ ಇಂದಿನ ಯಾಂತ್ರಿಕ ಜೀವನ ಶೈಲಿ, ನಿದ್ದೆ–ವಿಶ್ರಾಂತಿಗಳಿಲ್ಲದ ದುಡಿಮೆ, ಹಗಲಿರುಳೆನ್ನದ ಗೆಯ್ಮೆ, ಒತ್ತಡ, ಚಿಂತೆ... ಇವೆಲ್ಲವೂ ನಮ್ಮ ದೇಹದ ಮನಸ್ಸಿನ ಮೇಲೆ ಇನ್ನಿಲ್ಲದ ಘಾಸಿಯನ್ನು ಮಾಡುತ್ತಲೇ ಬರುತ್ತಿವೆ. ಅದನ್ನು ಒಂದಲ್ಲಾ ಒಂದು ರೀತಿಯಲ್ಲಿ ದೇಹ–ಮನಸುಗಳು ಅಭಿವ್ಯಕ್ತಿಗೊಳಿಸುತ್ತಲೇ ಬಂದಿರುತ್ತವೆ. ಅದನ್ನು ಗಮನಿಸಿ, ಅರ್ಥೈಸಿಕೊಳ್ಳುವ ಅರಿವು ನಮ್ಮಲ್ಲಿಲ್ಲ, ಅಷ್ಟೆ.
ಹಾಗಾದರೆ ಇದಕ್ಕೇನು ಪರಿಹಾರ? ಮೊದಲೇ ಹೇಳಿದೆನಲ್ಲಾ... ಒಂದೇ ದಿನದಲ್ಲಿ ದೊಡ್ಡ ಬದಲಾವಣೆಯ ಅಗತ್ಯವಿಲ್ಲ; ಅದರ ಅಗತ್ಯವೂ ಇಲ್ಲ. ಹಾಗೊಮ್ಮೆ ಮಾಡ ಹೊರಟರೆ ನೀವು ನಿಮ್ಮ ಪ್ರಯತ್ನವನ್ನು ಅರ್ಧಕ್ಕೆ ನಿಲ್ಲಿಸುತ್ತೀರಿ; ಇಷ್ಟು ವರ್ಷಗಳಂತೆಯೇ!
ಅದರ ಬದಲು ಒಂದು ಸಣ್ಣ ಹೆಜ್ಜೆ…ಕತ್ತಲನ್ನು ಓಡಿಸುವ ಸಣ್ಣ ಹಣತೆಯಂತೆ.
ಕೆಲವು ಸರಳ ಟಿಪ್ಸ್
ಸ್ವಂತಕ್ಕಾಗಿ ಸಮಯ: ಅವು ನಿಮಗಾಗಿ ಮಾತ್ರ ಮೀಸಲಿಡುವ ಕ್ಷಣಗಳು. ಪ್ರತಿ ದಿನ 20 ನಿಮಿಷ ನಡಿಗೆ, ಶುದ್ಧ ಗಾಳಿಯ ಸೇವನೆಯ ಸಿಹಿ ಸ್ಪರ್ಶ, ಹಕ್ಕಿಗಳ ಚಿಲಿಪಿಲಿಯ ನಡುವಿನ ವಿಹಾರ, ಇವೆಲ್ಲವೂ ನಿಮ್ಮ ದೇಹ–ಆತ್ಮಕ್ಕೆ ಔಷಧ.
ದೇಹಕ್ಕೆ ಪ್ರೀತಿಯ ಸೇಸೆ: ನೀರು, ಹಣ್ಣು, ತರಕಾರಿಯ ಸಿಂಚನ. ಜಂಕ್‌ಫುಡ್, ಏರೇಟೆಡ್ ಪಾನೀಯಗಳು ನೀಡುವ ತಾತ್ಕಾಲಿಕ ಉಲ್ಲಾಸಕ್ಕಿಂತ, ಒಂದು ಸೇಬು, ಒಂದು ಕಿತ್ತಳೆ, ಒಂದಷ್ಟು ಮೊಳಕೆ ಕಾಳು, ಹಸಿ ತರಕಾರಿಯ ಕೋಸಂಬರಿಗಳು ದೇಹಕ್ಕೆ ಹೇಳುತ್ತವಲ್ಲ, ‘ನಿನ್ನ ಸುಖಕ್ಕಾಗಿ ನಾನು ಇದ್ದೇನೆ’ ಎಂಬ ಆ ಮಾತುಗಳನ್ನೊಮ್ಮೆ ಕೇಳಿಸಿಕೊಳ್ಳಿ. ಹೇರಳ ನೀರು ಕುಡಿದು ನಿರಾಳರಾಗಿ.
ನಿದ್ರೆಯ ತಬ್ಬುಗೆ: ಇದು ಮಾತಾಡದೇ ಎಲ್ಲವನ್ನೂ ರಿಪೇರಿ ಮಾಡುವ ಮೌನ ಚಿಕಿತ್ಸಕ. ರಾತ್ರಿ ಯಾವ ಚಿಂತೆ ಇಲ್ಲದೇ ಮಲಗಿ ಸಾಕಷ್ಟು ನಿದ್ದೆ ಮಾಡುವುದು ದೇಹಕ್ಕೆ ನಾವು ತೋರುವ ಅತ್ಯಂತ ಮೂಲಭೂತ ಕಾಳಜಿ. ಈಗಿನ ದಿನಗಳಲ್ಲಿ ಹೇಳಲೇಬೇಕಿರುವುದು ಮಲಗುವ ಒಂದೆರಡು ಗಂಟೆ ಮುನ್ನ ಮೊಬೈಲ್ ಅನ್ನು ದೂರವಿಟ್ಟು, ನಿಮ್ಮ ಮನಸ್ಸಿಗೆ ಶಾಂತಿಯ ಒಲವು ನೀಡಿ.
ಧ್ಯಾನದ ಸಂತೈಕೆ: ಒಮ್ಮೆ ಹೃದಯದ ನಾದ ಕೇಳಿಸಿಕೊಳ್ಳುವ ಅನುಭೂತಿ. ದಿನದ 10 ನಿಮಿಷ ಮಾತ್ರ ಕಣ್ಣು ಮುಚ್ಚಿ ಉಸಿರಾಡಿ. ಮನಸ್ಸು ತದೇಕ ಚಿತ್ತದಿಂದ ನಿಮ್ಮನ್ನೇ ಧೇನಿಸಲಿ. ನಿಮಗೆ ಸಾಂತ್ವನ ನೀಡುವ ಯಾವುದೇ ಸಂಗತಿಗಳನ್ನು ಕದಲದೇ ನೆನೆಯಿರಿ. ಅದು ದೇವರೇ ಆಗಬೇಕೆಂದೇನಿಲ್ಲ. ವಿಶಾಲ ಸಾಗರ, ವಿಸ್ತಾರ ಆಗಸ... ಸುಂದರ ಪ್ರಕೃತಿ. ಪ್ರಖರ ಬೆಳಕು... ಹೀಗೆ ಇವೆಲ್ಲವೂ ನಿಮ್ಮೊಳಗಿನ ಆತಂಕ, ದುಃಖ, ನೋವು–ಎಲ್ಲವನ್ನೂ ನಿಧಾನವಾಗಿ ಕರಗಿಸಿಬಿಡಬಲ್ಲವು. ಸಕಾರಾತ್ಮಕ ಯೋಚನೆಗಳನ್ನು ಮೊಳೆಸಬಲ್ಲವು.
ಸಂಬಂಧದ ಬಂಧುರ: ನಕ್ಕು ಹಗುರಾಗಿ, ಮನ ಬಿಚ್ಚಿ ಮಾತನಾಡಿ. ಒಟ್ಟಾರೆ ಬದುಕಿಗೆ ಬೇಕಿರುವ, ನಾವು ಬಯಸುವ ಸಂಬಂಧಗಳನ್ನು ಬೆಳೆಸಿಕೊಳ್ಳಿ. ಮನುಷ್ಯ ಹೃದಯಕ್ಕೆ ಬೇಕಾಗಿರುವುದು ಕೇವಲ ವ್ಯಾಯಾಮ ಮತ್ತು ಆಹಾರವಲ್ಲ. ಒಂದು ಹಿಡಿ ಪ್ರೀತಿ, ಒಬ್ಬರ ಹೃದ್ಯ ಅಪ್ಪುಗೆ, ಒಂದು ಜತೆ ತೋಳಿನ ಸಾಂತ್ವನ, ಸಹಾನುಭೂತಿಯ ಒಂದಷ್ಟು ಮಾತು. ಇದು ಮನಸ್ಸಿಗೆ ಚಿಕಿತ್ಸೆಯಂತೆ.
ಮುಗಿಸುವ ಮುನ್ನ:
ವೆಲ್‌ನೆಸ್ ಎಂಬುದು ಬದುಕನ್ನು ನವೀಕರಿಸುವ ಕಲೆ. ನಮಗಾಗಿಯೇ ಬಂದಿರುವ ವೆಲ್‌ನೆಸ್ ಡೇಯಂದು ನಮ್ಮನ್ನು ನಾವು ಕೇಳಿಕೊಳ್ಳೋಣ ‘ನಿನ್ನ ಜೀವನದಲ್ಲಿ ನಿನಗೇ ಇರುವ ಸ್ಥಾನ ಎಲ್ಲಿ?’
ಜೀವನದಲ್ಲಿ ಹಣ, ಗೌರವ, ಕೆಲಸ, ಕನಸು—ಎಲ್ಲವೂ ಮುಖ್ಯ. ಆದರೆ ಆರೋಗ್ಯವಿಲ್ಲದೆ ಅವ್ಯಾವುದಕ್ಕೂ ಬೆಲೆಯಿಲ್ಲ. ಅದರಲ್ಲಿ ಹುರುಳಿಲ್ಲ. ಹೀಗಾಗಿ ಆರೋಗ್ಯ ಉಳಿಸಿಕೊಳ್ಳುವುದು ನಮ್ಮದೇ ಆದ್ಯತೆಯಾಗಬೇಕು. ನಮಗಾಗಿ ಬೇರಾರೋ ಆರೋಗ್ಯವನ್ನು ಕಟ್ಟಿಕೊಡುವುದಿಲ್ಲ. ಅದು ನಮ್ಮ ಮೇಲಿನ ಜವಾಬ್ದಾರಿಯಲ್ಲ–ನಮ್ಮ ಮೇಲೆ ನಮಗಿರಬೇಕಿರುವ ಪ್ರೀತಿ.
ಈ ವರ್ಷ ನಿಮ್ಮನ್ನು ನೀವೇ ಅಪ್ಪಿಕೊಳ್ಳುವ ವರ್ಷವಾಗಲಿ. ನಿಮ್ಮ ದೇಹ ಹಾಗೂ ಮನಸುಗಳು ’ಹಗುರಾಗಲಿ‘.
ಮನಸ್ಸಿಗೆ ಸಲ್ಲದ ಆತಂಕ, ಚಿಂತೆಗಳನ್ನು ತುಂಬುವ ಬದಲು ಸಕಾರಾತ್ಮಕ ಚಿಂತನೆಯನ್ನು ತುಂಬಿ. ಜೀವನಕ್ಕೆ ನಿರ್ಲಕ್ಷ್ಯದ ಬದಲು ಕಾಳಜಿಯನ್ನು ನೀಡಿ.
ಜನವರಿ 3 ಮಾತ್ರವಲ್ಲ; ಪ್ರತಿ ದಿನ ನಿಮ್ಮ ಆರೋಗ್ಯದ ದಿನವಾಗಿರಲಿ.
ನಿಮ್ಮ ದೇಹ ನಿಮಗೆ ಧನ್ಯವಾದ ಹೇಳುವಂತೆ,
ನಿಮ್ಮ ಮನಸ್ಸು ನಗುವಂತೆ,
ನಿಮ್ಮ ಜೀವನ ಸುಂದರವಾಗುವಂತೆ,
ಸಣ್ಣ ಹೆಜ್ಜೆಯಿಂದ ಆರಂಭಿಸಿ..
ನಿಮ್ಮತ್ತಲೇ ಒಂದು ಹೊಸ ಪ್ರಯಾಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.