ಪ್ರಾತಿನಿಧಿಕ ಚಿತ್ರ
(ಎ.ಐ ಚಿತ್ರ)
ಮಳೆಗಾಲ ಬೇಸಿಗೆಯ ಸೆಖೆಯಿಂದ ಮುಕ್ತಿಯನ್ನೇನೋ ನೀಡುತ್ತದೆ, ಆದರೆ ಮಳೆಯ ಸೋಂಕು ಹೆಚ್ಚಳಕ್ಕೂ ಕಾರಣವಾಗುತ್ತದೆ. ಈ ಸಮಯದಲ್ಲಿ ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಬಗ್ಗೆ ವಿಶೇಷ ಜಾಗರೂಕತೆ ಅಗತ್ಯ. ಮಳೆಗಾಲ ಬಂದಾಗ ಕೆಲವು ಕಾಯಿಲೆಗಳು ಜನರನ್ನು ಬಾಧಿಸುವುದನ್ನು ವೈದ್ಯರಾಗಿ ನಾವು ಗಮನಿಸುತ್ತೇವೆ. ತಾಯಂದಿರು ಮತ್ತು ಅವರ ಪುಟ್ಟ ಮಕ್ಕಳು ಸಾಮಾನ್ಯವಾಗಿ ಮಳೆಗಾಲದ ಕಾಯಿಲೆಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಇವುಗಳಿಂದ ಬಚಾವಾಗುವಷ್ಟರಲ್ಲಿ ಅವರು ಹೈರಾಣಾಗುತ್ತಾರೆ.
ಗರ್ಭಾವಸ್ಥೆಯಲ್ಲಿ ಬೆಳೆಯುತ್ತಿರುವ ಭ್ರೂಣದ ರಕ್ಷಣೆಗಾಗಿ ಮಹಿಳೆಯ ರೋಗನಿರೋಧಕ ಶಕ್ತಿಯನ್ನು ಸ್ವಾಭಾವಿಕವಾಗಿ ಕಡಿಮೆಯಾಗಿರುತ್ತದೆ. ಇದು ಸಾಮಾನ್ಯ ಶೀತದಿಂದ ಹಿಡಿದು, ತೀವ್ರ ಆರೋಗ್ಯ ಸಮಸ್ಯೆಗಳವರೆಗೆ, ಆಕೆ ಹಲವು ಬಗೆಯ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ನವಜಾತ ಶಿಶುಗಳ ರೋಗನಿರೋಧಕ ವ್ಯವಸ್ಥೆಯೂ ಬೆಳೆದಿರುವುದಿಲ್ಲ. ಶಿಶು ಇನ್ನೂ ತನ್ನ ಸುತ್ತಮುತ್ತಲಿನ ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳುವ ಹಂತದಲ್ಲಿರುತ್ತದೆ. ಹಾಗಾಗಿ ಬಹಳ ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತದೆ.
ತಾಯಿಯಲ್ಲಿರುವ ಸ್ವಲ್ಪ ಸೋಂಕು ಕೂಡ ಮಗುವಿನ ಬೆಳವಣಿಗೆಗೆ ಅಡ್ಡಿಯಾಗಬಹುದು ಅಥವಾ ಹೆರಿಗೆಯ ಸಮಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಶಿಶುಗಳಿಗೆ, ಹೊಟ್ಟೆಯಲ್ಲಿನ ಸಣ್ಣ ದೋಷ ಅಥವಾ ವೈರಲ್ ಜ್ವರ ಕೆಲವೇ ಗಂಟೆಗಳಲ್ಲಿ ವೇಗವಾಗಿ ಉಲ್ಬಣಗೊಳ್ಳಬಹುದು.
ಶೀತ, ಕೆಮ್ಮು, ಗಂಟಲು ಸೋಂಕುಗಳು
ಅತಿಸಾರ, ವಾಂತಿ ಮತ್ತು ಹೊಟ್ಟೆಯ ಇತರ ಸೋಂಕುಗಳು
ಡೆಂಗಿ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ (ಸೊಳ್ಳೆಗಳಿಂದ ಹರಡುತ್ತದೆ)
ಚರ್ಮ ಮತ್ತು ದೇಹದ ಸಂಧುಗಳಲ್ಲಿ ಶಿಲೀಂಧ್ರ ಸೋಂಕು
ಮೂತ್ರನಾಳದ ಸೋಂಕುಗಳು (UTIs), ವಿಶೇಷವಾಗಿ ಗರ್ಭಿಣಿಯರಲ್ಲಿ
ಗರ್ಭಾವಸ್ಥೆಯಲ್ಲಿ ಡೆಂಗಿ ಮತ್ತು ಮಲೇರಿಯಾ ಸೋಂಕಿಗೆ ತುತ್ತಾದಲ್ಲಿ, ಗರ್ಭಪಾತ, ಕಡಿಮೆ ತೂಕದ ಮಗುವಿನ ಜನನ ಅಥವಾ ಅಕಾಲಿಕ ಹೆರಿಗೆಯ ಸಾಧ್ಯತೆಗಳನ್ನು ಹೆಚ್ಚಿಸಬಹುದು.
ಅತಿಸಾರ ಮತ್ತು ವಾಂತಿ ತಾಯಿ ಮತ್ತು ಮಗುವಿನಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು.
ಶಿಲೀಂಧ್ರ ಸೋಂಕುಗಳು ನಿರುಪದ್ರವವಾಗಿ ಕಾಣಿಸಬಹುದು, ಆದರೆ ಅವುಗಳನ್ನು ನಿರ್ಲಕ್ಷಿಸಿದರೆ, ಅವು ಮತ್ತೆ ಮತ್ತೆ ಬಾಧಿಸಬಹುದು.
ಮನೆಯಲ್ಲಿ ನೀವು ಅನುಸರಿಸಬಹುದಾದ ಕೆಲವು ಸುಲಭ ಆದರೆ ಪರಿಣಾಮಕಾರಿ ಮುಂಜಾಗ್ರತಾ ಕ್ರಮಗಳು:
ಕುದಿಸಿದ ಅಥವಾ ಶುದ್ಧೀಕರಿಸಿದ ನೀರನ್ನು ಮಾತ್ರ ಕುಡಿಯಿರಿ
ಹೊರಗಿನ /ಬೀದಿ ಬದಿಯ ಆಹಾರವನ್ನು, ವಿಶೇಷವಾಗಿ ಹಸಿ ಅಥವಾ ಬೇಯಿಸದ ವಸ್ತುಗಳನ್ನು ತಪ್ಪಿಸಿ
ಮಗುವಿಗೆ ಹಾಲುಣಿಸುವ ಅಥವಾ ಊಟ ತಯಾರಿಸುವ ಮೊದಲು, ಕೈಗಳನ್ನು ತೊಳೆದುಕೊಳ್ಳಿ
ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಪರದೆಗಳನ್ನು ಬಳಸಿ. ವಿಶೇಷವಾಗಿ ಸಂಜೆ ಮತ್ತು ಮುಂಜಾನೆ
ಬಟ್ಟೆ ಮತ್ತು ಚರ್ಮ ಒಣಗಿರುವಂತೆ ನೋಡಿಕೊಳ್ಳಿ. ಬಟ್ಟೆ ಒದ್ದೆಯಾದರೆ ತಕ್ಷಣ ಬದಲಾಯಿಸಿ
ಮೊದಲ ಆರು ತಿಂಗಳವರೆಗೆ ಎದೆಹಾಲು ಉಣಿಸುವುದು ಬಹಳ ಮುಖ್ಯ. ಇದು ನಿಮ್ಮ ಮಗುವಿಗೆ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ
ಆರಂಭಿಕ ಹಂತದಲ್ಲೇ ವೈದ್ಯಕೀಯ ಸಹಾಯ ಪಡೆಯಿರಿ. ಪರಿಸ್ಥಿತಿ ಹದಗೆಡುವವರೆಗೆ ಕಾಯಬೇಡಿ.
ಡಾ. ಸಹನಾ ಎಂ ಗೌಡ, ಸಲಹೆಗಾರರು - ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಮದರ್‌ಹುಡ್ ಆಸ್ಪತ್ರೆಗಳು, ಬನಶಂಕರಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.