ADVERTISEMENT

ರೂಪಾಂತರ ವೈರಸ್‌: ಪರೀಕ್ಷೆ ಫಲಿತಾಂಶದಲ್ಲೂ ಏರುಪೇರು

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 19:30 IST
Last Updated 20 ಜನವರಿ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರೂಪಾಂತರಗೊಂಡ ಕೊರೊನಾ ವೈರಸ್‌ ಸೋಂಕಿನಿಂದ ಬಳಲುವ ವ್ಯಕ್ತಿಗಳ ಪಿಸಿಆರ್‌ ಪರೀಕ್ಷೆಯ ಫಲಿತಾಂಶದಲ್ಲಿ ನಿಖರತೆ ಇಲ್ಲವೇ? ಕೋವಿಡ್‌ ಇದ್ದರೂ ನೆಗೆಟಿವ್‌ ಎಂದು ತೋರಿಸುತ್ತಿದೆಯೇ? ಹೌದು ಎನ್ನುತ್ತಾರೆ ಅಮೆರಿಕದ ಎಫ್‌ಡಿಎ (ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಶನ್‌) ಅಧಿಕಾರಿಗಳು. ಬ್ರಿಟನ್‌ನಲ್ಲಿ ಕಂಡು ಬಂದ ಸಾರ್ಸ್‌ ಕೋವ್‌–2 ವೈರಸ್‌ನ ರೂಪಾಂತರ ವೈರಸ್‌ ಬಿ.1.1.7 ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಪರೀಕ್ಷೆಯ ಫಲಿತಾಂಶದಲ್ಲೂ ಏರುಪೇರಾಗುತ್ತಿರುವುದು ಆತಂಕ ಸೃಷ್ಟಿಸಿದೆ.

ಕೋವಿಡ್‌–19 ಪರೀಕ್ಷೆಯಲ್ಲಿ ಪಿಸಿಆರ್‌ ಅಥವಾ ಕಣ ಪರೀಕ್ಷೆ ಸದ್ಯ ಅತ್ಯಂತ ನಿಖರವಾದ ಫಲಿತಾಂಶ ನೀಡುತ್ತದೆ ಎಂಬುದು ಗೊತ್ತಿರುವ ವಿಷಯ. ಈ ಪರೀಕ್ಷೆಯಲ್ಲಿ ವೈರಸ್‌ನ ಅನುವಂಶಿಕ (ಜೆನೆಟಿಕ್‌) ಕಣವನ್ನು ಗುರುತಿಸಿ ಸೋಂಕನ್ನು ಖಚಿತಪಡಿಸಲಾಗುತ್ತದೆ. ಆದರೆ ರೂಪಾಂತರ ವೈರಸ್‌ನಲ್ಲಿ ಈ ಕಣ ವಿಭಿನ್ನವಾಗಿರುವುದರಿಂದ ಫಲಿತಾಂಶ ಏರುಪೇರಾಗಬಹುದು ಎಂಬುದು ವೈದ್ಯರು ಮತ್ತು ವಿಜ್ಞಾನಿಗಳ ಅಭಿಪ್ರಾಯ.

ಪಿಸಿಆರ್‌ ಪರೀಕ್ಷೆಯಲ್ಲಿ ವೈರಸ್‌ನ ವಿವಿಧ ಭಾಗಗಳನ್ನು ಗುರುತಿಸಲಾಗುತ್ತದೆ. ವೈರಸ್‌ನಲ್ಲಿರುವ ಜೀನೋಮ್‌ ರೂಪಾಂತರಗೊಳ್ಳಲು ಬೇಕಾದ ಎಲ್ಲಾ ಮಾಹಿತಿಯನ್ನು ಹಾಗೂ ಪ್ರೊಟೀನ್‌ ಕವಚವನ್ನು ಹೊಂದಿರುತ್ತದೆ. ರೂಪಾಂತರ ವೈರಸ್‌ನಲ್ಲಿ ಎರಡು ಬಗೆಯ ಅಮಿನೊ ಆಮ್ಲ ಮಾಯವಾಗಿದೆ. ಹೀಗಾಗಿ ಪಿಸಿಆರ್‌ ಪರೀಕ್ಷೆಯನ್ನು ರೂಪಾಂತರ ವೈರಸ್‌ ಮೇಲೆ ನಡೆಸುವಾಗ ಫಲಿತಾಂಶ ತಪ್ಪಾಗಿ ನೆಗೆಟಿವ್‌ ಬರುವ ಸಾಧ್ಯತೆ ಅಧಿಕ ಎಂದು ಅಮೆರಿಕದ ಇಮಾನಿಸ್‌ ಲೈಫ್‌ ಸೈನ್ಸಸ್‌ನ ಸಿಇಒ ಸ್ಟೀಫನ್‌ ರಸೆಲ್‌ ವರದಿಯೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಕೊರೊನಾ ವೈರಸ್‌ನಲ್ಲಿ 30 ಸಾವಿರಕ್ಕೂ ಅಧಿಕ ‘ಬೇಸ್‌’ ಇರುತ್ತವೆ. ಪಿಸಿಆರ್‌ನಲ್ಲಿ ವೈರಸ್‌ನ ಜೆನೆಟಿಕ್‌ ಮಾಹಿತಿಯನ್ನು ಕಲೆ ಹಾಕುವಾಗ ವಿವಿಧ ‘ಬೇಸ್‌’ ಅನ್ನು ಅವಲಂಬಿಸಲಾಗುತ್ತದೆ. ಹೀಗಾಗಿ ಪಿಸಿಆರ್ ಪರೀಕ್ಷೆ ನಂಬಲರ್ಹವಾಗಿದ್ದರೂ ರೂಪಾಂತರ ವೈರಸ್‌ ಪರೀಕ್ಷೆ ನಡೆಸುವಾಗ ಹೆಚ್ಚು ‘ಬೇಸ್‌’ ಮೇಲೆ ಗುರಿ ಇಟ್ಟುಕೊಂಡು ನಡೆಸುವುದು ಸೂಕ್ತ ಎಂದು ಸ್ಟೀಫನ್‌ ವರದಿಯಲ್ಲಿ ತಿಳಿಸಿದ್ದಾರೆ.

ಹಾಗೆಯೇ ಪರೀಕ್ಷೆಯ ಫಲಿತಾಂಶವು ಸ್ವ್ಯಾಬ್‌ ಮಾದರಿ ಸಂಗ್ರಹಿಸುವ ರೀತಿ, ಮಾದರಿಯ ಗಾತ್ರ ಹಾಗೂ ಮಾದರಿಯನ್ನು ಯಾವ ರೀತಿ ಪ್ರಯೋಗಾಲಯದಲ್ಲಿ ಇಡಲಾಗುವುದು ಎಂಬುದನ್ನು ಅವಲಂಬಿಸಿದೆ. ಹೀಗಾಗಿ ಫಲಿತಾಂಶ ಕೆಲವೊಮ್ಮೆ ಸುಳ್ಳಾಗುವ ಸಾಧ್ಯತೆ ಇರುತ್ತದೆ ಎಂದು ಎಫ್‌ಡಿಎ ಹೇಳಿದೆ.

ಕೋವಿಡ್‌–19 ಬಂದಿದೆ ಎಂಬ ಸಂಶಯ ನಿಮಗಿದ್ದರೆ ಪರೀಕ್ಷಿಸಿಕೊಳ್ಳಿ. ನೆಗೆಟಿವ್‌ ಬಂದರೂ ಕೂಡ 14 ದಿನಗಳ ಕಾಲ ಕ್ವಾರಂಟೈನ್‌ ಆಗಿ. ಇದು ಅತ್ಯಂತ ಮುಖ್ಯ ಎಂದು ಎಫ್‌ಡಿಎ ಹೇಳಿದೆ. ಒಂದು ವೇಳೆ ಪರೀಕ್ಷೆ ಫಲಿತಾಂಶ ಸುಳ್ಳಿದ್ದರೆ ತಮಗೆ ಕೋವಿಡ್‌ ಇಲ್ಲ ಎಂದುಕೊಂಡು ಓಡಾಡುವ ಜನ ಬೇರೆಯವರಿಗೆ ಸೋಂಕು ಹರಡುವುದಕ್ಕಿಂತ ಕ್ವಾರಂಟೈನ್‌ ಆಗುವುದು ಉತ್ತಮ. ಹಾಗೆಯೇ ಪದೇ ಪದೇ ಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕಿಂತ ಸಂಶಯವಿದ್ದವರು ಆ್ಯಂಟಿಬಾಡಿ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದೂ ಎಫ್‌ಡಿಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.