ADVERTISEMENT

ಭಾರತದಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ನೀಡಿದಲ್ಲಿ ಸಾವು ಪ್ರಕರಣ ಇಳಿಕೆ: ವರದಿ

ಪಿಟಿಐ
Published 16 ಜನವರಿ 2025, 14:41 IST
Last Updated 16 ಜನವರಿ 2025, 14:41 IST
   

ನವದೆಹಲಿ: ಕ್ಷಯರೋಗದಿಂದ ಬಳಲುತ್ತಿರುವ ವ್ಯಕ್ತಿಗಳಿರುವ ಕುಟುಂಬಗಳಿಗೆ ಪೋಷಕಾಂಶಯುಕ್ತ ಆಹಾರ ನೀಡಿದಲ್ಲಿ ಈಗಿರುವ ಶೇ 4.5ರಷ್ಟಿರುವ ಮರಣ ಪ್ರಮಾಣವನ್ನು ಶೇ 2.2ಕ್ಕೆ ಇಳಿಸಲು ಸಾಧ್ಯ ಎಂದು ಲ್ಯಾನ್ಸೆಂಟ್‌ ಸಂಸ್ಥೆ ನಡೆಸಿದ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

ಪೌಷ್ಟಿಕ ಆಹಾರ ಸೇವನೆಯಿಂದ ಈಗಿರುವ 8.8 ಲಕ್ಷ ಕ್ಷಯ ರೋಗಿಗಳ ಸಾವನ್ನು 3.6 ಲಕ್ಷಕ್ಕೆ ತಗ್ಗಿಸಬಹುದಾಗಿದೆ. ಇದಕ್ಕಾಗಿ ಸರಾಸರಿ 24 ಮನೆಗಳಲ್ಲಿ ಕ್ಷಯರೋಗಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಿದಲ್ಲಿ ಒಂದು ಸಾವನ್ನು ತಡೆಗಟ್ಟಬಹುದು. ಹತ್ತು ಕ್ಷಯರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಿದಲ್ಲಿ ಒಂದು ಸಾವನ್ನು ತಡೆಗಟ್ಟಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಈ ತಂಡದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ರಾಷ್ಟ್ರೀಯ ಕ್ಷಯ ರೋಗ ಸಂಶೋಧನಾ ಸಂಸ್ಥೆಯ ತಜ್ಞರು ಇದ್ದಾರೆ.

ಪೌಷ್ಟಿಕ ಆಹಾರ ನೀಡಲು ₹12 ಸಾವಿರ ಕೋಟಿ ಹೆಚ್ಚುವರಿ ಹೊರೆ

ಕ್ಷಯರೋಗಿಗಳ ಆರೈಕೆಗೆ ನೀಡಬಹುದಾದ ಪೌಷ್ಟಿಕ ಆಹಾರಕ್ಕೆ ಆರೋಗ್ಯ ಇಲಾಖೆ ಮೇಲೆ ಸುಮಾರು ₹12 ಸಾವಿರ ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ಇದಕ್ಕೆ ಪ್ರತಿಯಾಗಿ ವ್ಯಕ್ತಿ ಬದುಕುಳಿದಲ್ಲಿ ಅವರ ಜೀವಿತಾವಧಿಯವರೆಗೂ ವಾರ್ಷಿಕ ₹15 ಸಾವಿರ ಗಳಿಕೆ ರೂಪದಲ್ಲಿ ಸಿಗಲಿದೆ ಎಂದು ಈ ಸಮೀಕ್ಷೆಯು ಅಂದಾಜಿಸಿದೆ.

ADVERTISEMENT

ಜಗತ್ತಿನಲ್ಲಿರುವ ಒಟ್ಟು ಕ್ಷಯ ರೋಗಿಗಳಲ್ಲಿ ಐದನೇ ಒಂದರಷ್ಟು ಜನರು ಪೋಷಕಾಂಶ ಕೊರತೆಯನ್ನು ಎದುರಿಸುತ್ತಿದ್ದಾರೆ. ಈ ಅನುಪಾತವು ಭಾರತದಲ್ಲಿ ಇನ್ನೂ ಹೆಚ್ಚು ಇದ್ದು, ಪ್ರತಿ ಮೂವರಲ್ಲಿ ಒಬ್ಬರಿಗೆ ಇದೆ. ಇದನ್ನು ಅಂದಾಜಿಸಲು 2,800 ಕ್ಷಯರೋಗಿಗಳನ್ನು ಪ್ರಯೋಗಕ್ಕೆ ಒಳಪಡಿಸಲಾಯಿತು. ಇವರಿಗೆ ನಿತ್ಯ ಆಹಾರ ಮೂಲಕ 1,200 ಕ್ಯಾಲೊರಿ (52 ಗ್ರಾಂ ಪ್ರೊಟೀನ್‌ ಹಾಗೂ ಇತರ ಸೂಕ್ಷ್ಮಪೋಷಕಾಂಶ) ನೀಡಲಾಯಿತು. ಇವರ ಕುಟುಂಬದವರಿಗೆ 750 ಕ್ಯಾಲೊರಿ (23 ಗ್ರಾಂ ಪ್ರೊಟೀನ್ ಹಾಗೂ ಇತರ ಸೂಕ್ಷ್ಮ ಪೋಷಕಾಂಶ) ನೀಡಲಾಯಿತು.

‘ಇದೇ ರೀತಿ ಎರಡು ವರ್ಷಗಳ ಕಾಲ ಆಹಾರ ನೀಡಲಾಯಿತು. ಇದರಿಂದ ಕ್ಷಯರೋಗ ಪ್ರಮಾಣವು ಶೇ 39ರಿಂದ 48ರಷ್ಟು ಕಡಿಮೆಯಾಗಿದೆ. ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಇರುವ ಇವರ ಕುಟುಂಬದವರ ಆರೋಗ್ಯವೂ ಉತ್ತಮವಾಗಿತ್ತು. ಹೀಗೆ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಶೇ 50ರಷ್ಟು ಮನೆಗಳಿಗೆ ಭಾರತವು ಸೂಕ್ತ ಪೋಷಕಾಂಶ ನೀಡಿದಲ್ಲಿ, 9 ಲಕ್ಷ ಜನರನ್ನು ಈ ರೋಗದಿಂದ ಪಾರು ಮಾಡಬಹುದು. ರೋಗದಿಂದ 4 ಲಕ್ಷ ಸಾವುಗಳನ್ನು ತಪ್ಪಿಸಲು ಸಾಧ್ಯವಿದೆ’ ಎಂದು ಈ ವರದಿ ಶಿಫಾರಸು ಮಾಡಿದೆ.

ಈ ಕ್ರಮದಿಂದಾಗಿ 2040ರವರೆಗೂ 6.2 ಕೋಟಿ ಜನರನ್ನು ಕ್ಷಯರೋಗಕ್ಕೆ ತುತ್ತಾಗುವುದರಿಂದ ಹಾಗೂ 80 ಲಕ್ಷ ರೋಗಿಗಳ ಜೀವವನ್ನು ಉಳಿಸಲು ಸಾಧ್ಯವಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಪೋಷಕಾಂಶಯುಕ್ತ ಆಹಾರ ನೀಡಿದಲ್ಲಿ ಶೇ 90ರಷ್ಟು ಕಾಯಿಲೆಗಳು ಕಡಿಮೆಯಾಗಿ, ರೋಗದ ಮೇಲೆ ಖರ್ಚು ಮಾಡುತ್ತಿರುವ ಹಣದಲ್ಲಿ ಶೇ 75ರಿಂದ 90ರಷ್ಟು ಕಡಿತವಾಗಲಿದೆ. ಇದರಿಂದ ಸ್ಥೂಲ ಆರ್ಥಿಕತೆಯ ಹೊರೆಯು 120 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಕಡಿಮೆಯಾಗಲಿದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.