ADVERTISEMENT

ಮಕ್ಕಳ ಬೊಜ್ಜುತನಕ್ಕೆ ಮನೆಮದ್ದು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 19:30 IST
Last Updated 29 ಮಾರ್ಚ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬದಲಾಗುತ್ತಿರುವ ಜೀವನಶೈಲಿಯೂ ಮಕ್ಕಳಲ್ಲಿಬೊಜ್ಜುತನಕ್ಕೆರಹದಾರಿ ತೋರುತ್ತಿದೆ. ದಿನದ ಹೆಚ್ಚಿನಂಶ ಮಕ್ಕಳು ಕುಳಿತೇ ಕಳೆಯುತ್ತಾರೆ. ಆಟಗಳೆಲ್ಲಾ ಈಗ ಅಪರೂಪವಾಗಿಬಿಟ್ಟಿವೆ! ಕೂರುವ ಭಂಗಿಯು ಸಹಬೊಜ್ಜುತನಕ್ಕೆಕಾರಣವೆಂದರೆ ಆಶ್ಚರ್ಯವಾಗುತ್ತದೆ. ಮನೆಯಲ್ಲಿ ಮಾಡುವ ತಿಂಡಿಗಿಂತ ಹೊರಗೆ ಸಿಗುವ ತಿಂಡಿಯನ್ನು ತಿನ್ನುವ ಜನ ಹೆಚ್ಚಾಗಿದ್ದಾರೆ. ಸಾಮಾನ್ಯವಾಗಿ ಹೆಚ್ಚಿನ ಮಕ್ಕಳು ಬೊಜ್ಜುತನದ ಸಮಸ್ಯೆಗೆ ಒಳಗಾಗುವವರು 7-15 ವಯಸ್ಸಿನ ಮಕ್ಕಳು. ಅವರಿಗೆ ಖಂಡಿತ ಅದರ ಆಗುಹೋಗುಗಳ ಅರಿವಿರುವುದಿಲ್ಲ. ಪೋಷಕರಾದವರು ಮಕ್ಕಳಿಗೆ ತಿಳಿ ಹೇಳಿ ಅವರ ಜೀವನಶೈಲಿಯನ್ನು ಬದಲಿಸಬೇಕಾಗುತ್ತದೆ.

ಬೊಜ್ಜುತನವನ್ನು ತಡೆಗಟ್ಟುವುದು ಹೇಗೆ?

1. ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ನಿತ್ಯಜೀವನದಲ್ಲಿ ದೈಹಿಕ ಚಟುವಟಿಕೆಗಳು ಇರಬೇಕು. ಆರೋಗ್ಯಕರ ಆಹಾರಪದ್ಧತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು; ಹೆಚ್ಚಾಗಿ ಹಣ್ಣು ಹಾಗೂ ತರಕಾರಿಗಳ ಸೇವನೆ.

ADVERTISEMENT

2.ಕುಟುಂಬದಲ್ಲಿ ಎಲ್ಲರೂ ದೈಹಿಕ ಚಟುವಟಿಕೆಯನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು.ಮಕ್ಕಳಜೊತೆ ಪೋಷಕರೂ ವ್ಯಾಯಾಮ ಹಾಗೂ ಆಟೋಟಗಳಲ್ಲಿ ತೊಡಗಿಕೊಂಡಾಗ ಮಕ್ಕಳಿಗೆ ಒಂಟಿತನ ಕಾಡುವುದಿಲ್ಲ.

3.ಮೊಬೈಲ್ ಫೋನ್, ದೂರದರ್ಶನ, ವಿಡಿಯೊ ಗೇಮ್‌ಗಳಿಂದ ಮೊದಲು ಮಕ್ಕಳನ್ನು ದೂರವಿಡಬೇಕು. ದಿನದಲ್ಲಿ ನಿಯಮಿತ ವೇಳೆಯನ್ನು ಗೊತ್ತುಮಾಡಿ, ಅಷ್ಟು ಸಮಯ ಮಾತ್ರ ಅವರು ಕುಳಿತು ಆಟವಾಡಿಯೋ ಅಥವಾ ಟಿವಿ ನೋಡಿಯೋ ಕಾಲ ಕಳೆಯುವಂತೆ ನೋಡಿಕೊಳ್ಳಬೇಕು.

4.ಜಿಡ್ಡುಪದಾರ್ಥದ ಆಹಾರಗಳು, ಸಕ್ಕರೆ ಮತ್ತು ಸೋಡಾಭರಿತ ಪೇಯಗಳು ಹಾಗೂ ಪ್ಯಾಕ್ಡ್ ಫುಡ್‌ಗಳಿಂದ ದೂರವಿರುವುದು ಒಳ್ಳೆಯದು.

5.ಬೆಳಗಿನ ಉಪಹಾರಕ್ಕೆ ಮೊದಲ ಆದ್ಯತೆ ಕೊಡಿ. ಲಘು ಉಪಹಾರ ಲಘುವಾಗಿರಲಿ, ಹೆಚ್ಚಾದರೆ ಭೋಜನವಾಗುತ್ತದೆ.

6.ಬೊಜ್ಜು ಇರುವ ಮಕ್ಕಳಿಗೆ ಅವರ ವಯಸ್ಸಿಗೆ ಯೋಗ್ಯವಾದಷ್ಟು ಪಾಲಿನ ಆಹಾರವನ್ನು ಮಾತ್ರ ಕೊಡಿ. ಈ ರೀತಿಯ ಮಕ್ಕಳಿಗೆ ತಿನ್ನುವ ವಿಷಯದಲ್ಲಿ ಹಿಡಿತವಿರುವುದಿಲ್ಲ. ಇದನ್ನು ಪೋಷಕರು ಅರಿಯಬೇಕು. ಇಲ್ಲಿ ಭಾವುಕತೆಗೆ ಅವಕಾಶವನ್ನು ನೀಡಬಾರದು.

7.ಸಕ್ಕರೆಯ ಅಂಶವುಳ್ಳ ಪದಾರ್ಥಗಳನ್ನು ಪೂರ್ಣವಾಗಿ ಸ್ಥಗಿತಗೊಳಿಸಬಾರದು. ಹೀಗೆ ಮಾಡುವುದರಿಂದ ಬೇರೆ ಪದಾರ್ಥಗಳನ್ನು ಹೆಚ್ಚೆಚ್ಚು ತಿನ್ನಲು ಶುರುಮಾಡುತ್ತಾರೆ.

8.ದೈಹಿಕ ಚಟುವಟಿಕೆಗಳನ್ನು ಶಿಕ್ಷೆಯ ರೂಪದಲ್ಲಿ ಕೊಡಬೇಡಿ.

9.ಮಕ್ಕಳಿಗೆ ಇಷ್ಟವೆಂದು ಯಾವುದೇ ಕಾರಣಕ್ಕೂ ಅವರು ಮಾಡಿದ ಒಳ್ಳೆಯ ಕೆಲಸಕ್ಕೆ ಬಹುಮಾನ ಅಥವಾ ಪುರಸ್ಕಾರವನ್ನು ಆಹಾರದ ಹೆಸರಿನಲ್ಲಿ ಕೊಡಬೇಡಿ.

10. ದಿನದಲ್ಲಿ ಒಮ್ಮೆಯಾದರೂ ಕುಟುಂಬದ ಸದಸ್ಯರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡಿ.

ಒಮ್ಮೆಲೇ ಎಲ್ಲವೂ ಸರಿಹೋಗುವುದಿಲ್ಲ. ಮಕ್ಕಳಿಗೆ ತಿಳಿ ಹೇಳುವ ತಾಳ್ಮೆ ಪೋಷಕರಲ್ಲಿ ಇರಬೇಕು. ಒಳ್ಳೆಯ ಮಾತಿನಲ್ಲಿ ಹೇಳಿದರೆ ತಿಳಿದುಕೊಳ್ಳುವ ಆಸಕ್ತಿ ಮಕ್ಕಳಲ್ಲೂ ಬರುತ್ತದೆ. ಬೊಜ್ಜುತನದಿಂದಾಗುವ ಸಾಧಕ–ಬಾಧಕಗಳ ಬಗ್ಗೆ ಮಕ್ಕಳಲ್ಲಿ ತಿಳಿವನ್ನು ಮೂಡಿಸಬೇಕು.

ಮನೆಯೆ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು; ಇದು ಎಲ್ಲರಿಗೂ ತಿಳಿದಿರುವ ನಿತ್ಯಸತ್ಯ. ಹೆಚ್ಚುಕಾಲ ಸ್ತನ್ಯಪಾನ ಮಾಡಿದ ಮಕ್ಕಳಿಗೆ ಸ್ಥೂಲಕಾಯ ಬರುವ ಸಾಧ್ಯತೆಗಳು ಕಡಿಮೆ. ತಾಯಂದಿರು ಇದನ್ನರಿತು ಎಳವೆಯಿಂದಲೇಮಕ್ಕಳಬಗ್ಗೆ ಜಾಗೃತರಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.