ADVERTISEMENT

ದೈಹಿಕ ಕಾಯಿಲೆಯೇ? ಮಾನಸಿಕ ಸ್ವಾಸ್ಥ್ಯ ಬೆಳೆಸಿಕೊಳ್ಳಿ

ಮಾನಸಿಕ ಸ್ವಾಸ್ಥ್ಯ ಬೆಳೆಸಿಕೊಳ್ಳಿ

ಡಾ.ಬ್ರಹ್ಮಾನಂದ ನಾಯಕ
Published 18 ಜುಲೈ 2020, 3:42 IST
Last Updated 18 ಜುಲೈ 2020, 3:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮನಸ್ಸು ಖುಷಿಯಾಗಿರಲು, ನೆಮ್ಮದಿಯಾಗಿರಲು ಏನು ಮಾಡಬೇಕು? ಇದು ಬಹುತೇಕರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ. ಇದು ಹಣ ಕೊಟ್ಟರೆ ಸಿಗುವಂತಹದ್ದಲ್ಲ, ನಿಮ್ಮ ಮನಸ್ಸು ದೃಢವಾಗಿರಬೇಕು. ಸಕಾರಾತ್ಮಕ ಭಾವನೆ ಮೂಡಿಸಿಕೊಳ್ಳುವಂತಹ ಶಕ್ತಿ ಇರಬೇಕು.

ಮಾನಸಿಕ ಸ್ವಾಸ್ಥ್ಯಕ್ಕೆ ಇಚ್ಛಾಶಕ್ತಿ ಬೇಕು, ಗುಣಮುಖರಾಗುತ್ತೇವೆ ಎಂಬ ನಂಬುಗೆಯೂ ಬೇಕು. ಕಾಯಿಲೆಯಿಂದ ಬಳಲುತ್ತಿರುವವರು ಅದರಿಂದ ಸುಧಾರಿಸಿಕೊಳ್ಳಬೇಕಾದರೆ ತಮ್ಮನ್ನು ತಾವೇ ಒಂದು ಆರೋಗ್ಯಕರ ಪರಿಸರದಲ್ಲಿರುವ ಭಾವನೆಯನ್ನು ಮೂಡಿಸಿಕೊಳ್ಳ
ಬೇಕಾಗುತ್ತದೆ. ದೈಹಿಕವಾಗಿ ಕುಗ್ಗಿದರೂ ಸಹ ಮಾನಸಿಕವಾಗಿ ಸಕಾರಾತ್ಮಕವಾಗಿ ಆಲೋಚಿಸಬೇಕಾಗುತ್ತದೆ. ಅದು ಹೇಗೆನ್ನುತ್ತೀರಾ? ಇಲ್ಲಿವೆ ಕೆಲವು ಸಲಹೆಗಳು..

ಕಾಯಿಲೆ ಮನಸ್ಸನ್ನು ತಲುಪದಿರಲಿ

ADVERTISEMENT

ಅಂದರೆ ದೈಹಿಕ ಸಮಸ್ಯೆ ಮಾನಸಿಕ ಸ್ವಾಸ್ಥ್ಯದ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಿ. ಕಾಯಿಲೆಯ ಬಗ್ಗೆ ಹೆಚ್ಚು ಆಲೋಚನೆ ಮಾಡಿದಷ್ಟೂ ಅದು ಇನ್ನಷ್ಟು ಉಲ್ಬಣಿಸುತ್ತದೆ. ನಿಮಗೆ ದೈಹಿಕವಾಗಿ ನೋವಿರಬಹುದು. ಆದರೆ ‘ನಾನು ಅಸಹಾಯಕ’ ಎಂಬ ಭಾವನೆ ಅದು ಹೆಚ್ಚಾಗುವಂತೆ ಮಾಡಲು ಬಿಡಬೇಡಿ.

ಮನಸ್ಸಿಗೆ ಹಿತ ಎನಿಸುವಂತಹ ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಸಿನಿಮಾ ನೋಡಿ, ಪುಸ್ತಕ ಓದಿ, ಯಾವುದಾದರೂ ಕರಕುಶಲ ವಸ್ತು ತಯಾರಿಕೆಯಲ್ಲಿ ತೊಡಗಿಸಿಕೊಳ್ಳಿ, ಚಿತ್ರಕಲೆಯಲ್ಲಿ ಆಸಕ್ತಿ ಇದ್ದರೆ ಮಾಡಿ. ನಿಮ್ಮ ದೇಹ ಸಹಕರಿಸುವಂತಹ ಕೆಲಸದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಿ.

ಪಂಚೇಂದ್ರಿಯಗಳತ್ತ ಗಮನ ಕೊಡಿ

ದೃಷ್ಟಿ, ಶ್ರವಣ, ವಾಸನೆ, ಸ್ಪರ್ಶ ಮೊದಲಾದವುಗಳು ದೈಹಿಕ ಕಾಯಿಲೆಯಿದ್ದಾಗ ಹೆಚ್ಚು ಸೂಕ್ಷ್ಮವಾಗುತ್ತವೆ. ಬೇಗ ಗುಣಮುಖರಾಗಬೇಕು ಎಂಬುದರ ಮೇಲೆಯೇ ನಿಮ್ಮ ಶಕ್ತಿ ಹೆಚ್ಚು ವ್ಯಯವಾಗುತ್ತದೆ. ಹೀಗಾಗಿ ಸ್ವಚ್ಛವಾದ ಪರಿಸರ, ಸುವಾಸನೆಯಿಂದ ಹಾಗೂ ಶಾಂತಿಯಿಂದ ಕೂಡಿದ ಸ್ಥಳ ಹೆಚ್ಚು ಮುಖ್ಯ. ನೋಡಲು ಕೂಡ ಆಹ್ಲಾದವಾಗಿರಬೇಕು. ಗದ್ದಲಕ್ಕೆ ಎಡೆಮಾಡಿಕೊಡದ ಜಾಗ ಸೂಕ್ತ. ಟಿವಿ ವೀಕ್ಷಣೆ ಸಮಯಕ್ಕೂ ಮಿತಿ ಇರಲಿ. ಮೆದುಳಿಗೆ ಹಾಗೂ ಕಣ್ಣಿಗೆ ಆಯಾಸವೆನಿಸುವ ಧಾರಾವಾಹಿ ವೀಕ್ಷಣೆ ಕಡಿಮೆ ಮಾಡಿ. ಹೆಚ್ಚು ಮಾತನಾಡುವುದೂ ಸಲ್ಲದು. ವಿಶ್ರಾಂತಿಯತ್ತ ಗಮನವಿರಲಿ.

ಒಳ್ಳೆಯ ಆಹಾರ, ದ್ರವ ಪದಾರ್ಥ ಸೇವಿಸಿ

ಆರೋಗ್ಯಕರ ಆಹಾರ ಸೇವನೆಯು ಕಾಯಿಲೆಯಿಂದ ಮುಕ್ತರಾಗಲು ಹಾಗೂ ಮಾನಸಿಕವಾಗಿ ಚೇತರಿಸಿಕೊಳ್ಳಲು ಸೂಕ್ತ. ‘ಯಾವ ಆಹಾರ ಸೇವಿಸಬೇಕು?’ ಎಂದು ರೋಗಿಗಳು ಪ್ರಶ್ನಿಸುವುದು ಸಾಮಾನ್ಯ. ನಿಮಗೆ ಇಷ್ಟವಾದ ಆದರೆ ಚೆನ್ನಾಗಿ ಜೀರ್ಣವಾಗುವ ಹಗುರ ಆಹಾರ ಸೇವಿಸಿ. ದೇಹವು ಚೇತರಿಕೆಯ ಹಾದಿಯಲ್ಲಿರುವಾಗ ಜೀರ್ಣಾಂಗ ವ್ಯೂಹದ ಮೇಲೆ ಭಾರ ಹಾಕಬಾರದು.

ಹೆಚ್ಚು ದ್ರವಾಹಾರ ಸೇವಿಸಿ. ಅದು ನೀರು, ಹಣ್ಣಿನ ರಸ ಅಥವಾ ಎಲೆಕ್ಟ್ರೋಲೈಟ್‌ ಯಾವುದೇ ಇರಲಿ, ನಿರ್ಜಲೀಕರಣವಾಗದಿದ್ದರೆ ದೇಹವು ವಿಷಕಾರಿ ಅಂಶವನ್ನು ಮೂತ್ರದ ಮೂಲಕ ಹೊರ ಹಾಕುತ್ತಿರುತ್ತದೆ.

ಸುಂದರವಾದ ವಸ್ತುಗಳತ್ತ ಗಮನಹರಿಸಿ

ನಿಮ್ಮ ಸುತ್ತಮುತ್ತ ಇರುವ ಸೌಂದರ್ಯದಲ್ಲಿ ಬದುಕಿನ ಖುಷಿ ಅಡಗಿದೆ. ಚೆಂದನೆಯ ಯಾವುದೇ ವಸ್ತು ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಹೀಗಾಗಿ ರೋಗಿಗಳನ್ನು ನೋಡಲು ಹೋಗುವವರು ಹೂವುಗಳನ್ನು ಒಯ್ಯುವುದು ರೂಢಿ. ಹೂವಿನ ಅಂದ ಹಾಗೂ ಪರಿಮಳ ಚೇತರಿಕೆಗೆ ನೆರವಾಗುತ್ತದೆ. ಹಳೆಯ ಫೋಟೊ ಆಲ್ಬಂ ನೋಡುವುದು, ಕಳೆದ ಸಿಹಿಯಾದ ಕ್ಷಣಗಳನ್ನು ನೆನಪಿಸಿಕೊಳ್ಳುವುದು, ಸ್ನೇಹಿತರ ಜೊತೆ ಹರಟೆ ನಿಮ್ಮ ಮಾನಸಿಕ ಶಕ್ತಿಯನ್ನು ಗಟ್ಟಿಗೊಳಿಸುತ್ತವೆ.

ನಿತ್ಯ ಸ್ನಾನ ಮಾಡಿ

ಸಾಮಾನ್ಯವಾಗಿ ಕಾಯಿಲೆ ಬಿದ್ದಾಗ ಬಹುತೇಕರು ಸ್ನಾನ ಮಾಡುವುದಿಲ್ಲ. ಆದರೆ ನಿತ್ಯ ಒಂದು ಸಲ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ದೇಹಕ್ಕೆ ತಾಜಾ ಹಾಗೂ ಹಗುರವೆನಿಸುತ್ತದೆ. ಇದು ನೋವು ಹಾಗೂ ಉರಿಯೂತವನ್ನು ಕೂಡ ಕಡಿಮೆ ಮಾಡುತ್ತದೆ. ಒತ್ತಡ, ಖಿನ್ನತೆ, ಆತಂಕ, ನಕಾರಾತ್ಮಕ ಭಾವನೆಯನ್ನು ಕಡಿಮೆ ಮಾಡಿ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ. ಇದು ಏಕಾಂತ, ಶಾಂತಿ ಹಾಗೂ ಆರಾಮದ ಜೊತೆ ಸೃಜನಶೀಲ ಚಿಂತನೆಯನ್ನು ಹೆಚ್ಚಿಸುತ್ತದೆ. ಸ್ನಾನ ಮಾಡಲು ಕಷ್ಟವಾದರೆ ಸ್ಪಾಂಜ್‌ ಸ್ನಾನ ಮಾಡಿ.

ಉಡುಪು ಬದಲಾಯಿಸಿ

ಕಾಯಿಲೆಪೀಡಿತರು ಹಳೆಯ, ಕೊಳೆಯಾದ ಉಡುಪಿನಲ್ಲಿ, ಕೆದರಿದ ಕೂದಲಿನಲ್ಲಿ, ಸ್ವಚ್ಛತೆಯಿಲ್ಲದ ಹಾಸಿಗೆ ಹೊದಿಕೆಯಲ್ಲಿ ದಿನ ಕಳೆಯುವುದು ಸಾಮಾನ್ಯ. ಕೊಠಡಿಯೂ ನೀಟಾಗಿರುವುದಿಲ್ಲ. ಇದು ಮನಸ್ಸಿಗೆ ಪಿಚ್ಚೆನಿಸಿ ಕಾಯಿಲೆಯಿಂದ ಬೇಗ ಚೇತರಿಸಿಕೊಳ್ಳಲು ಕಷ್ಟವಾಗುತ್ತದೆ.

ಉಡುಪು ಬದಲಾಯಿಸುವುದು, ಹೊದಿಕೆ ತೊಳೆದು ಹಾಕುವುದು ಸ್ವಚ್ಛತೆಯ ದೃಷ್ಟಿಯಿಂದ ಬಹು ಮುಖ್ಯ. ಇದು ಮನಸ್ಸಿಗೂ ಆಹ್ಲಾದ ನೀಡುತ್ತದೆ. ಹಗುರವಾದ ಆರಾಮದಾಯಕ ಉಡುಪು ಧರಿಸಿ.

ಆತ್ಮೀಯರು ಪಕ್ಕದಲ್ಲಿರಲಿ

ಪಕ್ಕದಲ್ಲಿ ಆತ್ಮೀಯರು ಇರುವಂತೆ ನೋಡಿಕೊಳ್ಳಿ. ಒಂಟಿಯಾಗಿ ಮಲಗಿಕೊಳ್ಳುವುದರಿಂದ ಬೇಡದ ಆಲೋಚನೆ ಬಂದು ಮನಸ್ಸಿಗೆ ಘಾಸಿಯಾಗುತ್ತದೆ. ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ. ಜೋಕ್‌ ಹೇಳಿಕೊಂಡು ನೋವಿನಿಂದ ಮರೆಯಬಹುದು. ನೀವು ಸರಿಯಾದ ಸಮಯಕ್ಕೆ ತಿಂದು, ಕುಡಿದು ಮಾಡುತ್ತೀರಾ ಎಂಬುದನ್ನು ಅವರು ನೋಡಿಕೊಳ್ಳುತ್ತಾರೆ.

ಚೆನ್ನಾಗಿ ಅತ್ತುಬಿಡಿ

ಬಹುತೇಕರು ಅಳಬೇಡಿ ಎಂದೇ ಹೇಳಬಹುದು. ಆದರೆ ಚೆನ್ನಾಗಿ ಅತ್ತು ಹಗುರಾಗಿ. ಅಳುವುದರಿಂದ ಮನಸ್ಸಿನೊಳಗಿರುವ ಒತ್ತಡ, ಭಾವನೆ ಹೊರಬಂದು ಮನಸ್ಸು ಹಗುರಾಗುತ್ತದೆ. ಭಾವನಾತ್ಮಕ ಆಘಾತವನ್ನು ಇದು ತಡೆಯುತ್ತದೆ. ಒತ್ತಡ ಹಾಗೂ ನೋವಿನಿಂದ ಮುಕ್ತಿ ನೀಡುತ್ತದೆ. ಗಾಬರಿ, ಆತಂಕ, ಖಿನ್ನತೆ, ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.

ಸಂಗೀತ

ಒಂಟಿಯಾಗಿದ್ದಾಗ, ಎದ್ದು ಓಡಾಡಲು, ಹೊರಗೆ ಹೋಗಲು ಸಾಧ್ಯವಿಲ್ಲದಿದ್ದಾಗಲೂ ಮಧುರವಾದ ಸಂಗೀತ ಕೇಳಿ. ಈ ಸಂಗೀತ ಚಿಕಿತ್ಸೆಯು ಮನಸ್ಸನ್ನು ಉಲ್ಲಸಿತಗೊಳಿಸಿ ಕಾಯಿಲೆಯಿಂದ ಚೇತರಿಸಿಕೊಳ್ಳಲು ಸಹಾಯಕ.

ಧ್ಯಾನ ಮಾಡಿ

ನಿತ್ಯ ಬೆಳಿಗ್ಗೆ ಧ್ಯಾನ ಮಾಡುವ ಮೂಲಕ ನಿಮ್ಮಲ್ಲಿರುವ ಶಕ್ತಿ, ಚೈತನ್ಯವನ್ನು ಹಿಡಿದಿಟ್ಟುಕೊಳ್ಳಬಹುದು. ಒತ್ತಡದ ವಿರುದ್ಧ ನಿಮ್ಮ ದೇಹ ಹಾಗೂ ಮನಸ್ಸನ್ನು ರಕ್ಷಿಸಿಕೊಳ್ಳುವ ವಿಧಾನವಿದು. ಇದು ಸಕಾರಾತ್ಮಕ ಭಾವನೆಯನ್ನು ಹಾಗೂ ಉತ್ಸಾಹವನ್ನು ಹೆಚ್ಚಿಸುತ್ತದೆ. ಹಾಗೆಯೇ ದೇಹವು ಕಾಯಿಲೆಯಿಂದ ಚೇತರಿಸಿಕೊಳ್ಳುವ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಪ್ರಾರ್ಥನೆ, ಸುಷುಪ್ತಿಯಲ್ಲಿ ಸುಮ್ಮನೆ ಕೂರುವುದು ಕೂಡ ಚೇತರಿಕೆಯ ವಿಧಾನಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.