ನಿರ್ಮಲಳಿಗೆ ಮೊದಲ ಬಾಣಂತನದಲ್ಲಿ ಕಾಡಿದ ಮೂಲವ್ಯಾಧಿಯ ಉಪಟಳ ಬಹುತೇಕ ಮರೆತೇ ಹೋಗಿತ್ತು. ಮೊದಲ ಮಗುವಿಗೆ ಏಳು ವರ್ಷದ ಅನಂತರ ಆಕೆ ಎರಡನೆ ಸಲ ಗರ್ಭವತಿಯಾದಳು. ಆ ಬಾರಿ ನಾಲ್ಕನೆಯ ತಿಂಗಳಿಗೆ ಮೊಳಕೆಗಳು ಹುಟ್ಟಿಕೊಂಡವು. ಪ್ರಸವಪೂರ್ವ ಮತ್ತು ಪ್ರಸವೋತ್ತರ ಅವಧಿಯಲ್ಲಿ ಆಕೆಯನ್ನು ಎಡೆ ಬಿಡದೆ ಕಾಡಿತ್ತು ಮೂಲವ್ಯಾಧಿ. ಹಾ, ಮರೆತೆ; ಆಕೆ ಉದ್ಯೋಗಸ್ಥೆ. ಸದಾ ಕಾಲ ತೊಡೆಯ ಮೇಲಿನ ಕಂಪ್ಯೂಟರ್ ದುಡಿಮೆ. ಮಲಮೂತ್ರದ ವೇಗದ ಕರೆಗೆ ಓಗೊಡಲೂ ಸಮಯವಿಲ್ಲದ ಪಾಳಿಯ ದುಡಿಮೆ.
ಬಹುತೇಕ ದುಡಿಯುವ ಮಹಿಳೆಯರು ಮಾಸಿಕ ಸ್ರಾವದ ಎಂಟು ಹತ್ತು ದಿನದಿಂದ ವಿಚಿತ್ರ ದೈಹಿಕ ಏರಿಳಿತಕ್ಕೆ ಒಳಗಾಗುವ ಹೊಸ ಸಮಸ್ಯೆ ಸುಳಿಗೆ ಸಿಲುಕುವರು. ಇದಕ್ಕೆ ‘ಪ್ರಿ ಮೆನುಸ್ಟ್ರಿಯಲ್ ಸಿಂಡ್ರೋಂ’ ಎಂಬ ಹೆಸರು. ಮುಟ್ಟಾದ ಬಳಿಕ ಕೊಂಚ ನಿರಾಳ. ಅನಂತರ ಮುಂದಿನ ತಿಂಗಳಿಗೆ ಮತ್ತದೇ ಉಪಟಳ. ಮುಟ್ಟು ತೀರುವಳಿಯ ಕಾಲದ ಬವಣೆಗಳ ಸರಮಾಲೆಯಲ್ಲಿ ಮೂಲವ್ಯಾಧಿಯೂ ಸೇರಿಕೊಂಡಿದೆ. ಬಾರದ ಮಲಕ್ಕೆ ತಿಣುಕುವುದೂ ಸಮಂಜಸವಲ್ಲ ಎಂಬ ಎಚ್ಚರಿಕೆ ಮಾತು ನೆನಪಿಡಿ. ಗುದಭಾಗದಲ್ಲಿ ಸಹಸ್ರಾರು ಕೂದಲಿಗಿಂತ ಸಪೂರವಾಗಿರುವ ರಕ್ತನಾಳಗಳ ಜಾಲವಿದೆ. ಅಲ್ಲಿ ರಕ್ತಚಲನೆಯ ಉಬ್ಬರವಿಳಿತದ ದೆಸೆಯಿಂದ ಅಲ್ಲಿ ಮೊಳಕೆಗಳೇಳುವ ಸಂದರ್ಭ. ಗರ್ಭಿಣಿಯರಿಗೂ ಇದು ಸಹಜ. ಗರ್ಭಸ್ಥಶಿಶುವಿನ ಭಾರದ ದೆಸೆಯಿಂದ ಕೆಳ ಉದರ ಭಾಗದಲ್ಲಿ ಒತ್ತಡ ಹೆಚ್ಚುತ್ತದೆ. ಮೊದಲೇ ಕುಳಿತು ಮಾಡುವ ಪಾಳಿಯ ದುಡಿಮೆ. ಕಾಫಿ, ಚಹದಂತಹ ಉತ್ತೇಜಕ ಪಾನೀಯಗಳ ನಿರಂತರ ಸೇವನೆ; ಊಟ, ಉಪಚಾರದಲ್ಲಿ ಮಸಾಲೆ, ಖಾರ, ಬೇಗನೆ ಪಚನವಾಗದ ಗುರುಭೋಜನದಿಂದ – ಕೋಳಿಮಾಂಸ, ಜಿಡ್ಡು, ಕಡಿಮೆ ನೀರು ಸೇವಿಸುವುದು, ಹೆಚ್ಚು ಮೊಸರು ಸೇವನೆಯಿಂದ – ಸರಾಗ ಮಲಪ್ರವೃತ್ತಿಗೆ ಸಂಚಕಾರ. ಗುದಭಾಗದ ಮಾಂಸ ಮತ್ತು ಕೊಬ್ಬಿನ ಶೇಖರಣೆಯ ನಡುವಣ ಸೂಕ್ಷ್ಮ ರಕ್ತನಲಿಕೆಗಳು ಕುಟಿಲವಾಗುತ್ತವೆ, ವಕ್ರವಾಗುತ್ತವೆ. ರಕ್ತಸಂಚಾರದಲ್ಲಿ ಏರುಪೇರು. ಗಂಟುಗಳು ಒಡಮೂಡುತ್ತವೆ. ಕ್ರಮೇಣ ನಾನಾ ಬಗೆಯ ಮೊಳಕೆಯೊಡೆಯುತ್ತವೆ.
ನೆನಪಿಡಿ; ಕ್ಷಣಕ್ಷಣವೂ ಈ ಭಾಗದಲ್ಲಿ ಅಧೋಗಮನವಾಗುವ ವಾಯುವೋ ಮಲವೋ ಸಂಚರಿಸಲೇಬೇಕಲ್ಲ. ಅಂತಹ ಸಂಚಾರಕ್ಕೆ ಅಡ್ಡಿಯಾದೊಡನೇ ದೇಹದ ಸಕಲ ಕಾರ್ಯಗಳಲ್ಲಿ ವ್ಯತ್ಯಯ. ಏಕೆಂದರೆ ಆಹಾರವೆಂಬ ಪೋಷಕವಸ್ತು ಸಾಗುವ ಅತಿ ಉದ್ದನೆಯ ಹೆದ್ದಾರಿಯ ಮೊದಲ ಬಾಗಿಲು ಬಾಯಿ. ಕೊನೆಯ ಹೆಬ್ಬಾಗಿಲು ಗುದ. ಆಯುರ್ವೇದಗ್ರಂಥಗಳೆನ್ನುವಂತೆ ಗುದಭಾಗವು ಮರ್ಮ ಅಥವಾ ಅತಿ ಸೂಕ್ಷ್ಮ ಅವಯವ. ಇಲ್ಲಿ ಸಂವೇದನಶೀಲ ನರಾಗ್ರಗಳ ಜಾಲ ಅತಿ ಹೆಚ್ಚು. ಹಾಗೆಯೇ ರಕ್ತಪರಿಚಲನೆಯ ಸಿರಾಗ್ರಗಳೂ ಅತ್ಯಧಿಕ. ಹಾಗಾಗಿಯೇ ಸುಶ್ರುತರು ಪದೇ ಪದೇ ಈ ಭಾಗದಲ್ಲಿ ಶಸ್ತ್ರಕ್ರಿಯೆ ಸಲ್ಲದು ಎಂಬ ಎಚ್ಚರಿಕೆ ಮಾತನ್ನು ಬರೆದಿರಿಸಿದ್ದಾರೆ.
ಅತಿ ನೋವು, ಮಲಪ್ರವೃತ್ತಿಯಲ್ಲಿ ಅಡಚಣೆ ಮತ್ತು ಮಾರ್ಗ ತಡೆಯುವ ಮೊಳಕೆಗೆ ಘನ ಮಲ ತಡೆದು ಛಿಲ್ಲನೆ ಚಿಮ್ಮುವ ರಕ್ತದ ಮುಖ್ಯ ಲಕ್ಷಣ ಮೂಲವ್ಯಾಧಿಯ ಹೆಗ್ಗುರುತು. ದಿನವೂ ಇಂತಹದೇ ಪ್ರಕ್ರಿಯೆ ನಡೆದರೆ ನೆಮ್ಮದಿಗೇಡು. ಹಾಗಾಗಿಯೇ ದೇಹದೊಳಗಿನ ವೈರಿ ಎಂಬ ಹಣೆಪಟ್ಟಿ. ಬಹುತೇಕವಾಗಿ ಇದು ವಂಶಪಾರಂಪರಿಕ. ಹಾಗಾಗಿ ನಿಮ್ಮ ಹೆತ್ತವರ ಬಳಿ ನಿಸ್ಸಂಕೋಚವಾಗಿ ಈ ಬಗೆಯ ರೋಗದ ಇತಿಹಾಸವನ್ನು ಕೇಳಿ ತಿಳಿಯಿರಿ. ಆಗ ರೋಗತಡೆಯ ಮಾರ್ಗೋಪಾಯದ ನಡೆ ಸಾಧ್ಯ.
ಕಿಶೋರಿಯರು ಎಳವೆಯಲ್ಲಿ ರೂಢಿಸಿಕೊಳ್ಳಬಹುದಾದ ಕ್ರಮವರಿತ ವ್ಯಾಯಾಮದಿಂದ ದೇಹದ ತೂಕ ತಡೆಗೆ ಒತ್ತು ನೀಡಲು ಸಾಧ್ಯ. ಯೋಗ, ಪ್ರಾಣಾಯಾಮದಿಂದ ಲಾಭವಿದೆ. ಬಾಯಿ ಚಪಲದಿಂದ ದೂವಿರುವ ಮತ್ತು ಕುರುಕು ತಿಂಡಿ ಹಾಗೂ ಜಂಕ್ ಫುಡ್‍ಗಳ ಗೊಡವೆ ಬೇಡ. ಮಾಸಿಕ ಸ್ರಾವದ ಸಂದರ್ಭದ ಎಚ್ಚರಿಕೆಯ ಆಹಾರ ಮತ್ತು ಸರಿಯಾದ ವಿಶ್ರಾಂತಿಗಳು ಕ್ಷೇಮ. ಅಪಾನವಾಯು ಎಂಬ ವಾತದ ಒಂದು ಬಗೆಯದು. ಅದರ ಪಾತ್ರವು ಈ ಮೂಲವ್ಯಾಧಿ ಉಂಟಾಗುವಲ್ಲಿ ಅತಿ ಹೆಚ್ಚು. ಹಾಗಾಗಿ ವಾತದ ಉಲ್ಬಣತೆಗೆ ಅವಕಾಶ ಬೇಡವೇ ಬೇಡ.
ಆರಂಭದಲ್ಲಿ ಎದೆಯುರಿ, ಹುಳಿತೇಗು, ಪಚನಕ್ರಿಯೆಯಲ್ಲಿ ವ್ಯತ್ಯಯ ಕಂಡುಬರಬಹುದು. ನಿತ್ಯ ಮಲಬದ್ಧತೆಯಂತಹ ಗ್ಯಾಸ್ಟ್ರಿಕ್ ಪರಿಭಾಷೆಯ ಲಕ್ಷಣಗಳು ಮೂಲವ್ಯಾಧಿಯ ಮುನ್ಸೂಚನೆಗಳು. ನೆನಪಿಡಿ. ಮುಂದೊಂದು ದಿನ ಏಕಾಏಕಿ ಗುದಭಾಗದಲ್ಲಿ ನೆತ್ತರು ಒಸರುವ ಲಕ್ಷಣ ಕಂಡೀತು. ಆಗಲೇ ಎಚ್ಚರದ ನಡೆಯಿಂದ ರೋಗವನ್ನು ತಡೆಯಲಾದೀತು. ಬೆಂಡೆಕಾಯಿ, ಈರುಳ್ಳಿ, ಮಜ್ಜಿಗೆ, ಬಸಳೆ ಸೇರಿದಂತೆ ಬಹುತೇಕ ಸೊಪ್ಪಿನ ಆಹಾರಸೇವನೆಯಿಂದ ಹೆಚ್ಚಿನ ಲಾಭವಿದೆ. ತಡೆ ಮತ್ತು ಚಿಕಿತ್ಸೆಯ ಮೊದಲ ಹೆಜ್ಜೆಗಳಿವು. ಉದ್ದು, ಬಟಾಣಿ, ತೊಗರಿ, ಇತರ ದ್ವಿದಳ ಬೇಳೆಗಿರಲಿ ಕಡಿವಾಣ; ಹೆಸರನ್ನು ಸೇವಿಸಿದರೆ ದೋಷವಿಲ್ಲ. ಸಂಹಿತೆಗಳು ಉದ್ದಗಲಕ್ಕೆ ಮಜ್ಜಿಗೆಯ ಗುಣಗಾನ ಮಾಡಿದ್ದು ಗಮನಾರ್ಹ. ಗುದಭಾಗದ ಮೊಳಕೆಗಳನ್ನು ತಡೆಯಬೇಕೆ? ನಿರಂತರ ಮಜ್ಜಿಗೆಯನ್ನು ಬಳಸಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.