ಕೂದಲು
ಹೆರಿಗೆಯಾಗಿ ಮೂರು ತಿಂಗಳಾಗಿದೆ. ಅತಿಯಾಗಿ ಕೂದಲು ಉದುರುತ್ತದೆ. ತಲೆಗೆ ಬಾಚಣಿಗೆ ಹಾಕಿದರೆ ಸಾಕು ಇಡಿ ಇಡಿಯಾಗಿಯೇ ಕೂದಲು ಬುಡದಿಂದ ಹೊರಬರುತ್ತದೆ. ತಲೆಬೋಳಾಗುವ ಆತಂಕ ಎದುರಾಗಿದೆ. ಬಾಣಂತನದಲ್ಲಿ ಕೂದಲು ಉದುರುವುದು ಸಹಜವೇ? ಇದಕ್ಕೆ ಪರಿಹಾರವೇನು?
–ಗಾಯತ್ರಿ, ಸೀಗೆಬಾಗಿ
ಉತ್ತರ: ಹೆರಿಗೆಯಲ್ಲಿ ಹೆಚ್ಚಿನ ರಕ್ತಸ್ರಾವದಿಂದ ತಾಯಂದಿರಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ. ಎದೆಹಾಲುಣಿಸುವುದು, ನಿದ್ರೆಗೆಡುವುದು, ಪಥ್ಯ ಮಾಡುತ್ತಾ ಸರಿಯಾದ ಪೌಷ್ಟಿಕ ಆಹಾರ ಸೇವನೆ ಮಾಡದೇ ಇರುವುದು, ಥೈರಾಯ್ಡ್ ಹಾರ್ಮೋನ್‌ನಲ್ಲಿನ ವ್ಯತ್ಯಯ, ವಿಟಮಿನ್ ಡಿ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಕೂದಲು ಉದುರುತ್ತದೆ.
ಹೆರಿಗೆಯ ನಂತರ ಪ್ರತಿದಿನ 50ರಿಂದ 100 ಕೂದಲು ಉದುರಿದರೆ ಅದು ಸಾಮಾನ್ಯ. ಇನ್ನೂರರಿಂದ ಮುನ್ನೂರು ಕೂದಲು ಉದುರಿದರೆ ಆಗ ಚಿಂತಿಸಬೇಕು. ರಕ್ತಹೀನತೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳಿ. ಬಾಣಂತಿಯೆಂದು ಸದಾ ಮಲಗಿಕೊಂಡೇ ಇರಬೇಡಿ. ಗಾಳಿ ಹೋಗಬಾರದೆಂದು ತಲೆಗೆ ಬಿಗಿಯಾದ ಮಫ್ಲರ್ ಕಟ್ಟಿಕೊಂಡು ಬೆವರಿರುತ್ತೀರಿ, ಕೆಲವೊಮ್ಮೆ ತುಂಬಾ ಸೆಕೆ ಇರುತ್ತದೆ. ವಾರದಲ್ಲಿ ಎರಡು ಬಾರಿಯಾದರೂ ತಲೆಸ್ನಾನ ಮಾಡದೇ ಇರಬಾರದು. ಹೆರಿಗೆಯಾಗಿ ಆರು ವಾರಗಳಾದ ಮೇಲೆ, ಸುಲಭವಾಗಿ ಜೀರ್ಣವಾಗುವ ಪೌಷ್ಟಿಕ ಆಹಾರ ಸೇವನೆ ಮಾಡಬೇಕು.
ಶುದ್ಧ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ವಾರಕ್ಕೆ ಎರಡು, ಮೂರು ಬಾರಿ ಹಾಕಿ ತಲೆಗೆ ಮಸಾಜ್ ಮಾಡಿಕೊಳ್ಳಿ. ಸೀಗೆಕಾಯಿ ಅಥವಾ ಸಲ್ಫೇಟ್‌ರಹಿತ ಶ್ಯಾಂಪೂ ಬಳಸಿ ತಲೆಸ್ನಾನ ಮಾಡಿ. ಕೂದಲನ್ನು ಒರಟಾಗಿ ಒರೆಸಬೇಡಿ. ಗಟ್ಟಿಯಾಗಿ ಜಡೆ ಹಾಕಿಕೊಳ್ಳಬೇಡಿ. ಹೆಚ್ಚು ಹಸಿರುಸೊಪ್ಪು, ತರಕಾರಿಗಳನ್ನು ಸೇವಿಸಿ. ಒಣಹಣ್ಣುಗಳನ್ನು ಹಾಕಿ ಮಾಡುವ ಅಂಟುಂಡೆಯನ್ನು ನಿಯಮಿತವಾಗಿ ಸೇವಿಸಿ.
ಪ್ರೋಟೀನ್‌ಯುಕ್ತ ಆಹಾರ, ಒಮೆಗಾ– 3 ಇರುವ ಆಹಾರದ ಜತೆಗೆ ದಿನಕ್ಕೆ ಕನಿಷ್ಠ ಮೂರರಿಂದ ಮೂರೂವರೆ ಲೀಟರ್ ನೀರು ಕುಡಿಯುವುದು ಅಗತ್ಯ. ಸರಳವಾದ ವ್ಯಾಯಾಮವನ್ನು ನಿಯಮಿತವಾಗಿ ಮಾಡಬೇಕು. ವೈದ್ಯರು ಕೊಡುವ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶದ ಮಾತ್ರೆಗಳನ್ನು ಕನಿಷ್ಠ 6 ತಿಂಗಳವರೆಗೆ ಸೇವಿಸಲೇಬೇಕು. ಜೊತೆಗೆ ಜಿಂಕ್ (ಸತು) ಇರುವ ಮಾತ್ರೆಗಳು, ವಿಟಮಿನ್ ಡಿ ಮಾತ್ರೆಗಳನ್ನು ಸೇವಿಸುವುದನ್ನು ಮರೆಯಬೇಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.