ADVERTISEMENT

ಸ್ಪಂದನ: ಗರ್ಭಿಣಿಯರಿಗೆ ಪ್ರಯಾಣ ಸುರಕ್ಷಿತವೇ?

ವೀಣಾ ಭಟ್
Published 21 ಏಪ್ರಿಲ್ 2023, 20:42 IST
Last Updated 21 ಏಪ್ರಿಲ್ 2023, 20:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

1. ಮದುವೆಯಾಗಿ ಮೂರು ವರ್ಷವಾಗಿದೆ. ಚೊಚ್ಚಲ ಬಸುರಿ. ಆರು ತಿಂಗಳು ತುಂಬಿದೆ. ರಾಯಚೂರು ನನ್ನ ತವರು. ಅಲ್ಲಿಗೆ ಹೋಗಬೇಕು. ಪ್ರಯಾಣ ಮಾಡಬಹುದೇ? ಮನೆಯಲ್ಲಿ ಎಲ್ಲರೂ ಬೇಡವೆನ್ನುತ್ತಿದ್ದಾರೆ. ಏನು ಮಾಡಲಿ?

–ಲಾವಣ್ಯ, ಊರು ತಿಳಿಸಿಲ್ಲ.

ಉತ್ತರ: ಲಾವಣ್ಯರವರೇ ನೀವು ಹೇಗೆ ಪ್ರಯಾಣ ಮಾಡುತ್ತಿದ್ದೀರಿ ಎಂದು ತಿಳಿಸಿಲ್ಲ. ಸಾಮಾನ್ಯವಾಗಿ ಗರ್ಭಿಣಿಯರು ಪ್ರಯಾಣಿಸಲು ಎರಡನೇ ತ್ರೈಮಾಸಿಕ(4ರಿಂದ 7ತಿಂಗಳು) ಸೂಕ್ತ ಸಮಯ. ಪ್ರಯಾಣಕ್ಕೆ ರೈಲು ಅಥವಾ ವಿಮಾನ ಸೂಕ್ತ(ಆರ್ಥಿಕ ಅನುಕೂಲತೆ ಹಾಗೂ ಈ ಸಾರಿಗೆ ಸಂಚಾರದ ಸೌಲಭ್ಯವಿದ್ದರೆ ಮಾತ್ರ). ಇದಲ್ಲದೇ, ಬಸ್ಸು ಅಥವಾ ಕಾರಿನಲ್ಲಿಯೂ ಪ್ರಯಾಣಿಸಬಹುದು. ಆದರೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು.

ADVERTISEMENT

ಕಾರಿನಲ್ಲಿ ಪ್ರಯಾಣಿಸಬೇಕಾದಾಗ ದಯವಿಟ್ಟು ಸೀಟ್‌ಬೆಲ್ಟ್ ಹಾಕಿಕೊಳ್ಳಿ. ಬಸ್‌ ಪ್ರಯಾಣದಲ್ಲಾದರೆ ಮಧ್ಯಭಾಗದ ಸೀಟ್‌ನಲ್ಲಿ ಕುಳಿತುಕೊಳ್ಳಿ. ಪ್ರಯಾಣದಲ್ಲಿ ಸಾಕಷ್ಟು ನೀರು ಕುಡಿಯಿರಿ. ದೀರ್ಘಾವಧಿ ಪ್ರಯಾಣ ಮಾಡಬೇಕಾ ದಲ್ಲಿ ಮಧ್ಯ ಮಧ್ಯ ಸ್ವಲ್ಪ ಇಳಿದು ವಿಶ್ರಾಂತಿ ಪಡೆದುಕೊಳ್ಳಿ. ಕಾರು ಅಥವಾ ಬಸ್ಸಿನಲ್ಲಿ ಕಾಲುಗಳನ್ನು ಆಗಾಗ್ಗೆ ಉಸಿರಿನೊಂದಿಗೆ ಮೇಲೆ ಕೆಳಗೆ ಚಾಚುವ ಸೂಕ್ಷ್ಮ ವ್ಯಾಯಾಮಗಳನ್ನು ಮಾಡುತ್ತಿರಿ. ಪ್ರಯಾಣ ಮಾಡುವಾಗ ಸಡಿಲವಾದ ಹತ್ತಿ ಉಡುಪು ಧರಿಸಿ. ಸೂಕ್ತ ಆಹಾರವನ್ನು ಸೇವಿಸುತ್ತಿರಿ. ನಿಮಗೆ ವಾಂತಿ ಅನುಭವವಾದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಬಹುದು.

ಬಹುಮುಖ್ಯವಾಗಿ, ಈ ಹಿಂದೆ ಗರ್ಭಪಾತ ಅಥವಾ ರಕ್ತಸ್ರಾವವಾಗಿದ್ದರೆ, ಕಸಕೆಳಗೆ (ಪ್ಲಾಸೆಂಟಾಪ್ರೀವಿಯಾ) ಇದ್ದ ಸಂದರ್ಭದಲ್ಲಿ ಅಥವಾ ಗರ್ಭದ್ವಾರ ಚಿಕ್ಕದಿದ್ದರೆ, ಗರ್ಭದ್ವಾರಕ್ಕೆ ಹೊಲಿಗೆ ಹಾಕಿದ್ದಲ್ಲಿ ಪ್ರಯಾಣ ಮುಂದೂಡುವುದು ಒಳ್ಳೆಯದು. ಗರ್ಭಧಾರಣೆಯಲ್ಲಿ ಏರುರಕ್ತದೊತ್ತಡ ಇದ್ದಲ್ಲಿ, ನೆತ್ತಿನೀರು ಸ್ರಾವವಾಗು ತ್ತಿದ್ದಲ್ಲಿ ಮೊದಲು ವೈದ್ಯರನ್ನ ಸಂಪರ್ಕಿಸಿ, ನಂತರ ಪ್ರಯಾಣದ ಬಗ್ಗೆ ಯೋಚಿಸಬಹುದು. ಒಟ್ಟಿನಲ್ಲಿ ಅವಶ್ಯವಿದ್ದಾಗ ಸೂಕ್ತ ಮುಂಜಾಗ್ರತೆ ತೆಗೆದುಕೊಂಡು ಪ್ರಯಾಣಿಸಬಹುದು.

2. ನನಗೀಗ 50 ವರ್ಷ. ಮುಟ್ಟು ನಿಲ್ಲುವ ಸಮಸ್ಯೆ ಕಾಣಿಸುತ್ತಿದೆ. ಎರಡೂವರೆ ತಿಂಗಳಿಗೆ ಮುಟ್ಟಾಗಿತ್ತು. ಈಗ ಮತ್ತೆ 15 ದಿನಕ್ಕೆ ಆಗಿದೆ. ವೈದ್ಯರಲ್ಲಿ ತೋರಿಸಿದೆ ಸಮಸ್ಯೆಯಿಲ್ಲ ಎಂದಿದ್ದಾರೆ. ಗರ್ಭಕೋಶದ ಒಳಪದರ ದಪ್ಪ 19 ರಿಂದ 20 ಎಂ.ಎ ಎಂದು ಸ್ಕ್ಯಾನಿಂಗ್‌ನಲ್ಲಿ ಇದೆ. ಇದು ಮುಂದೆ ಸಮಸ್ಯೆ ಆಗಬಹುದಾ? ಮಗನ ಮನೆ ಅಮೇರಿಕಕ್ಕೆ ಹೊರಟಿದ್ದೇನೆ. ಮಿರೇನಾ ಉಪಕರಣ ಅಳವಡಿಸಲು ಸಮಯ ಸಾಲದು ಎಂದು ವೈದ್ಯರು ಹೇಳಿದ್ದಾರೆ. ಬೇರೆ ಏನಾದರೂ ಪರಿಹಾರವಿದೆಯೇ? ಏನಾದರು ಸಮಸ್ಯೆ ಆಗಬಹುದಾ? ದಯವಿಟ್ಟು ತಿಳಿಸಿ.

–ಹೆಸರು, ಊರು ತಿಳಿಸಿಲ್ಲ.

ಉತ್ತರ: ಹಿಂದಿನ ಸಂಚಿಕೆಯಲ್ಲೇ ಮುಟ್ಟಾಗುವ ಪ್ರಕ್ರಿಯೆಯ ಬಗ್ಗೆ ಹಾಗೂ ಋತುಸ್ರಾವ ಹೆಚ್ಚಿದ್ದಾಗ ಗರ್ಭಕೋಶದೊಳಗೆ ಅಳವಡಿಸುವಂತಹ ಎಲ್.ಎನ್.ಜಿ, ಐ.ಯು.ಎಸ್. (ಮಿರೇನಾ ಅಂತಹದ್ದೇ ಒಂದು ಉಪಕರಣ) ಬಗೆಗೆ ವಿವರವಾಗಿ ತಿಳಿಸಿರುತ್ತೇನೆ. ನಿಮಗೆ ಆಗಿರುವ ತೊಂದರೆ ಎಂದರೆ ಗರ್ಭಕೋಶದ ಒಳಪದರವು ಅತಿಯಾಗಿ ಬೆಳೆದಿರುವುದು(ಎಂಡೋಮೆಟ್ರಿಯಲ್ ಹೈಪೈರ್‌ಪ್ಲೇಸಿಯಾ). ಇದಕ್ಕೆ ಕಾರಣ ಹಾರ್ಮೋನಿನ ಅಸಮತೋಲನ. ಹೆಣ್ತನದ ಹಾರ್ಮೋನಾದ ಈಸ್ಟ್ರೋಜನ್‌ ಹೆಚ್ಚಾಗಿದ್ದು ಅದಕ್ಕೆ ತಕ್ಕ ಪ್ರೊಜೆಸ್ಟ್ರೋಜನ್‌ ಹಾರ್ಮೋನು ಇರದೇ ಈ ರೀತಿಯಾಗಿ ಗರ್ಭಕೋಶದ ಪದರ ಬೆಳೆದಿದೆ. ಮಿರೇನಾ ಅಂದರೆ ಪ್ರೊಜೆಸ್ಟ್ರೋಜನ್‌ ಹಾರ್ಮೋನು ಅಡಕವಾಗಿರುವ ಉಪಕರಣ. ಇದನ್ನ ಗರ್ಭಾಶಯಕ್ಕೆ ಅಳವಡಿಸಿದಾಗ ಎರಡರಿಂದ ಮೂರು ತಿಂಗಳು ಅದು ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ನಿಮಗೆ 6 ತಿಂಗಳೊಳಗೆ ಅಮೆರಿಕಕ್ಕೆ ಹೋದಾಗ ಯಾವಾಗ ಬೇಕಾದರೂ ಅತಿರಕ್ತಸ್ರಾವ ಕಾಣಿಸಿಕೊಂಡು ತೊಂದರೆಯಾಗಬಹುದು. ಆದ್ದರಿಂದ ಅಂತಹ ಸ್ರಾವವನ್ನು ತಡೆಗಟ್ಟಲು ತಜ್ಞವೈದ್ಯರಿಂದ ಸಲಹೆ ತೆಗೆದುಕೊಂಡು ಸೂಕ್ತ ಪ್ರೊಜೆಸ್ಟ್ರಾನ್‌ ಮಾತ್ರೆಗಳನ್ನಾದರೂ ನಿಮ್ಮೊಡನೆ ತೆಗೆದುಕೊಂಡು ಹೋಗಿ. ಭಯ ಬೇಡ.

ಸ್ಪಂದನ
ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.