ಸ್ಪಂದನ ಅಂಕಣ
ಐದು ತಿಂಗಳ ಗರ್ಭಿಣಿಯಾಗಿದ್ದು, ಕಚೇರಿಯೊಂದರಲ್ಲಿ ಗುಮಾಸ್ತೆಯಾಗಿದ್ದೇನೆ. ಚೆನ್ನಾಗಿಯೇ ನೀರು ಕುಡಿಯುತ್ತಿದ್ದೇನೆ. ಆದರೂ ಈಗೀಗ ಮಲವಿಸರ್ಜನೆ ಮಾಡುವಾಗ ತುಂಬಾ ನೋವು, ಉರಿ ಉಂಟಾಗುತ್ತದೆ. ಗರ್ಭಿಣಿಯಾಗುವುದಕ್ಕೂ ಮೊದಲು ಮಲಬದ್ಧತೆ ಉಂಟಾದಾಗ ಡುಲ್‌ಕೊಲಾಕ್ಸ್ ಮಾತ್ರೆ ಸೇವಿಸುತ್ತಿದ್ದೆ. ಈಗ ಇದಕ್ಕೆ ಪರಿಹಾರವೇನು?
–ಮಾಲಾ, ತುಮಕೂರು
ಗರ್ಭಿಣಿಯರಲ್ಲಿ ಶೇ 40ರಷ್ಟು ಮಂದಿಗೆ ಮಲಬದ್ಧತೆ ಸಾಮಾನ್ಯ ಸಮಸ್ಯೆ. ಗರ್ಭ ಧರಿಸಿದ ಹಂತದಲ್ಲಿ ಪ್ರೊಜೆಸ್ಟಿರಾನ್ ಹಾರ್ಮೋನ್‌ನ ಮಟ್ಟ ಹೆಚ್ಚಳಗೊಂಡು, ಗರ್ಭವನ್ನು ಕಾಪಾಡಲು ನೆರವಾಗುತ್ತದೆ. ಆದರೆ, ಈ ಹಾರ್ಮೋನ್‌ನಿಂದ ಕರುಳಿನ ಚಲನೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿ, ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಜತೆಗೆ ಗರ್ಭದೊಳಗೆ ಶಿಶು ಬೆಳೆಯುತ್ತಾ ಹೋದಂತೆ ಗರ್ಭಕೋಶ ಹಿಗ್ಗುತ್ತದೆ. ಇದು ಕೂಡ ಕರುಳಿನ ಮೇಲೆ ಒತ್ತಡ ಬೀಳುವಂತೆ ಮಾಡಿ, ಕರುಳಿನ ಚಲನೆಗೆ ಅಡ್ಡಿಯುಂಟುಮಾಡುತ್ತದೆ. ಹೀಗಾದಾಗಲೂ ಮಲಬದ್ಧತೆ ಉಂಟಾಗುತ್ತದೆ.
ದೈಹಿಕ ಶ್ರಮ ಕಡಿಮೆಯಾದಾಗಲೂ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಕೆಲವೊಮ್ಮೆ ಥೈರಾಯ್ಡ್ ಹಾರ್ಮೋನ್ ಕಡಿಮೆಯಾದಾಗ, ನಾರಿನಂಶ ಇರುವ ಆಹಾರ ಪದಾರ್ಥಗಳ ಸೇವನೆ ಕಡಿಮೆಯಾದಾಗಲೂ ಮಲ ವಿಸರ್ಜನೆ ಕಷ್ಟವಾಗಬಹುದು.
ಬಯಕೆ ಎಂದು ಕರಿದ, ಹುರಿದ ಆಹಾರ, ಜಂಕ್‌ಫುಡ್ ಸೇವಿಸುವುದು ಹೆಚ್ಚಾದಾಗ, ರಕ್ತಹೀನತೆ ಕಡಿಮೆಯಾಗಲು ತೆಗೆದುಕೊಳ್ಳುವ ಕಬ್ಬಿಣಾಂಶದ ಮಾತ್ರೆಗಳಿಂದಲೂ ಮಲಬದ್ಧತೆ ಉಂಟಾಗುತ್ತದೆ. ಮಲಬದ್ಧತೆ ಹೆಚ್ಚಾಗಿ, ಕೆಲವೊಮ್ಮೆ ರಕ್ತನಾಳಗಳು ಗುದದ್ವಾರದಿಂದ ಹೊರಮುಖವಾಗಿ ಬಂದು ಮೂಲವ್ಯಾಧಿ ಸಮಸ್ಯೆ ಉಂಟಾಗಬಹುದು. ಮಲದ ಜತೆಗೆ ರಕ್ತಸ್ರಾವ ಉಂಟಾಗಬಹುದು. ಇನ್ನು ಕೆಲವರಲ್ಲಿ ಮಲ ಗಟ್ಟಿಯಾಗಿ, ಅದು ಗುದದ್ವಾರದ ಮೂಲಕ ಹೊರಗೆ ಹೋಗುವಾಗ ಗಾಯ ಉಂಟು ಮಾಡಿ (ಫಿಷರ್) ರಕ್ತಸ್ರಾವ ಆಗಬಹುದು. ಗರ್ಭಿಣಿಯರಲ್ಲಿ ಮೂಲವ್ಯಾಧಿ ಸಮಸ್ಯೆ ಉಂಟಾದರೆ ರಕ್ತಹೀನತೆ ಹೆಚ್ಚಾಗಬಹುದು. ಇಂಥ ಪರಿಸ್ಥಿತಿಯಲ್ಲಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಮುಂದುವರಿಸಬೇಕು.
ಪರಿಹಾರಕ್ಕೆ ಹೀಗೆ ಮಾಡಿ: ಪ್ರತಿದಿನ ಎಂಟರಿಂದ ಹತ್ತು ಲೋಟಗಳಷ್ಟು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಊಟ ತಿಂಡಿ ಸೇವನೆಗೆ 40 ನಿಮಿಷ ಮೊದಲು ಅಥವಾ ಆಹಾರ ಸೇವಿಸಿ ಒಂದೂವರೆ ಗಂಟೆಯಾದ ನಂತರ ಕುಡಿಯಿರಿ.
ಹಸಿರುಸೊಪ್ಪು, ತರಕಾರಿಗಳು, ಸೀಬೆಹಣ್ಣು, ದ್ರಾಕ್ಷಿ, ಬಾಳೆಹಣ್ಣು, ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಕಡ್ಡಾಯವಾಗಿ ಸೇವಿಸಿ. ಆಹಾರವು ಲಾವಾರಸದಲ್ಲಿ ಬೆರೆಯುವಷ್ಟು ಚೆನ್ನಾಗಿ ಅಗಿದು ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಮಲವಿಸರ್ಜನೆಗೂ ತೊಡಕಾಗುವುದಿಲ್ಲ.
ಆಹಾರವನ್ನು ದಿನಕ್ಕೆ ನಾಲ್ಕರಿಂದ ಐದು ಬಾರಿ ಇಷ್ಟಿಷ್ಟೇ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ತಾಜಾ ಆಹಾರವನ್ನಷ್ಟೇ ಸೇವಿಸಿ. ಬೆಣ್ಣೆ ತೆಗೆದ ಮಜ್ಜಿಗೆಯನ್ನು ಮಧ್ಯಾಹ್ನ ಊಟದ ನಂತರ ಒಂದು ಗಂಟೆ ಬಿಟ್ಟು ಕುಡಿಯಿರಿ. ಇದೂ ಜೀರ್ಣಕ್ರಿಯೆಗೆ ಸಹಾಯಕ. ಕಬ್ಬಿಣಾಂಶದ ಮಾತ್ರೆ ಸೇವಿಸಬೇಕಾದಾಗ ಡಾಕ್ಯುಟ್‌ಸೇಟ್‌ಸೋಡಿಯಂ ಅಂಶ ಇರುವುದನ್ನು ಸೇವಿಸಿ.
ಭಾರತೀಯ ಪದ್ಧತಿಯ ಶೌಚಾಲಯ ಬಳಸಿ. ಇಷ್ಟೆಲ್ಲ ಮುಂಜಾಗ್ರತೆ ವಹಿಸಿದರೂ ಪರಿಹಾರ ಸಿಗದೇ ಇದ್ದರೆ ವೈದ್ಯರ ಸಲಹೆ ಮೇರೆಗೆ ಸೂಕ್ತ ಔಷಧ ಬಳಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.