ADVERTISEMENT

ಸ್ಪಂದನ | ಗರ್ಭಿಣಿಯರಿಗೆ ಮಲಬದ್ಧತೆ ಸಹಜವೇ?

ಡಾ.ವೀಣಾ ಎಸ್‌ ಭಟ್ಟ‌
Published 24 ಮೇ 2025, 0:30 IST
Last Updated 24 ಮೇ 2025, 0:30 IST
<div class="paragraphs"><p>ಗರ್ಭಿಣಿ</p></div>

ಗರ್ಭಿಣಿ

   

(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)

ಸ್ಪಂದನ | ಗರ್ಭಿಣಿಯರಿಗೆ ಮಲಬದ್ಧತೆ ಸಹಜವೇ?

ADVERTISEMENT

ಮೊದಲ ಬಾರಿಗೆ ಗರ್ಭ ಧರಿಸಿದ್ದು, ನಾಲ್ಕು ತಿಂಗಳು ನಡೆಯುತ್ತಿದೆ. ನಿತ್ಯ ಮಲವಿಸರ್ಜನೆ ಸರಿಯಾಗಿ ಆಗುತ್ತಿಲ್ಲ. ಅದಕ್ಕಾಗಿ ತುಂಬಾ ಹೊತ್ತು ತಿಣುಕಾಡುವಂತೆ ಆಗುತ್ತಿದೆ. ದಿನವಿಡೀ ಹೊಟ್ಟೆ ಉಬ್ಬರಿಸಿದ ಹಾಗಿರುತ್ತದೆ. ವೈದ್ಯರು ಇದರ ನಿವಾರಣೆಗಾಗಿ ಔಷಧಿ ನೀಡಿದ್ದಾರೆ. ಆದರೂ ಹೀಗೆ ತಿಣುಕಾಡುವಾಗೆಲ್ಲ ಗರ್ಭಪಾತ ಆಗಿಬಿಡುತ್ತೇನೋ ಎನ್ನುವ ಭಯ. ಏನು ಮಾಡಲಿ?

ಜೀರ್ಣಕ್ರಿಯೆ ಬಾಯಿಯಲ್ಲಿರುವ ಜೊಲ್ಲು ರಸದಿಂದ ಆರಂಭವಾಗುತ್ತದೆ. ಹಾಗಾಗಿ ಆಹಾರವನ್ನು ಸಾಧ್ಯವಾದಷ್ಟು ಬಾಯಿಯಲ್ಲಿಯೇ ಅಗಿದು ಸೇವಿಸಬೇಕು. ಅಲ್ಲಿಂದ ಅದು ಅನ್ನನಾಳದ ಮುಖಾಂತರ ಜಠರಕ್ಕೆ ಹೋಗುತ್ತದೆ. ಅಲ್ಲಿಯ ಜಠರಾಮ್ಲವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜಠರದಿಂದ ಆಹಾರ ಸಣ್ಣಕರುಳಿಗೆ ಹೋಗಿ ಅಲ್ಲಿ ಜೀರ್ಣಕ್ರಿಯೆ ಮುಂದುವರಿದು ಪೋಷಕಾಂಶಗಳ ಹೀರುವಿಕೆಯೂ ಆಗುತ್ತದೆ. ನಂತರ ಆಹಾರವು ದೊಡ್ಡಕರುಳಿಗೆ ಹೋಗಿ ಅಲ್ಲಿ ಆಹಾರದಲ್ಲಿರುವ ನೀರಿನಂಶವೆಲ್ಲ ಹೀರಲ್ಪಟ್ಟು ಮಲವಾಗಿ ಪರಿವರ್ತನೆ ಆಗುತ್ತದೆ. ಇದು ಮಲಕೋಶಕ್ಕೆ ಬಂದು ನಂತರ ಗುದದ್ವಾರದಿಂದ ನಿಯಮಿತವಾಗಿ ಹೊರಹಾಕಲಾಗುತ್ತದೆ. ಈ ಪ್ರಕ್ರಿಯೆಗೆ ನಿಯಮಿತವಾದ ಕರುಳಿನ ಪೆರಿಸ್ಟಾಲಿಸಿಸ್ ಕಂಪನ ಅಗತ್ಯ. ದಿನನಿತ್ಯ ನಾವು ತಿಂದ ಆಹಾರ ಸರಿಯಾಗಿ ಪಚನವಾಗಿ ಮಲವಿಸರ್ಜನೆಯು ಸಲೀಸಾಗಿ ಆಗಲು ಸಾಕಷ್ಟು ನಾರಿನಂಶ ಹಾಗೂ ನೀರಿನಂಶ ಅತ್ಯಗತ್ಯ. ತಪ್ಪು ಆಹಾರ ಪದ್ಧತಿಯಿಂದಾಗಿ ಮಲಬದ್ಧತೆ ಹೆಚ್ಚುತ್ತದೆ. 

 ಗರ್ಭಿಣಿಯರಲ್ಲಿ ಜನಸಾಮಾನ್ಯರಿಗಿಂತ ಮಲಬದ್ಧತೆ ಇನ್ನೂ ಹೆಚ್ಚಾಗಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಪ್ರೊಜೆಸ್ಟಿರಾನ್‌ ಹಾರ್ಮೋನ್‌ ಹೆಚ್ಚಾಗುವುದರಿಂದ ಕರುಳಿನ ಸ್ನಾಯುಗಳ ಚಲನೆ ಕಡಿಮೆಯಾಗುತ್ತವೆ. ಜೀರ್ಣಕ್ರಿಯೆ ಮತ್ತು ಕರುಳಿನ ಕಂಪನಗಳು ಕಡಿಮೆಯಾಗುವುದರಿಂದ ಮಲಬದ್ಧತೆ ಹೆಚ್ಚುತ್ತದೆ. ಗರ್ಭದಲ್ಲಿರುವ ಮಗುವಿನಿಂದಾಗಿ ಕರುಳಿನ ಮೇಲೆ ಒತ್ತಡ ಉಂಟಾಗಿ, ಮಲವಿಸರ್ಜನೆ ಕಷ್ಟವಾಗಬಹುದು.  

 ಕಬ್ಬಿಣಾಂಶ ಮಾತ್ರೆಗಳ ಸೇವನೆಯಿಂದಲೂ ಕೆಲವೊಮ್ಮೆ ಮಲಬದ್ಧತೆ ಉಂಟಾಗಬಹುದು.  ಚಟುವಟಿಕೆ ಕಡಿಮೆ ಆಗುವುದರಿಂದ ಮಲಬದ್ಧತೆ ಉಂಟಾಗಿ, ಮೂಲವ್ಯಾಧಿ ಸಮಸ್ಯೆಯಾಗಬಹುದು. ಇದರ ಜತೆಗೆ ಪದೇ ಪದೇ ಬಾಯಿಹುಣ್ಣು, ಖಿನ್ನತೆ, ನಿರುತ್ಸಾಹ ಕಾಣಿಸಿಕೊಳ್ಳಬಹುದು.  

ಹೆರಿಗೆಯ ನಂತರ ಈ ಸಮಸ್ಯೆ ನಿವಾರಣೆಯಾದರೂ ಕೆಲವೊಮ್ಮೆ ಬಾಣಂತನದಲ್ಲೂ ಮರುಕಳಿಸಬಹುದು. ನಿತ್ಯ ಬೆಳಿಗ್ಗೆ 6ರಿಂದ ಸಂಜೆ 6ರ ಒಳಗೆ 3 ಲೀಟರ್‌ ನೀರನ್ನು ಸೇವಿಸಿ. ಕರಗಬಲ್ಲ ನಾರಿನಂಶವನ್ನು ಕನಿಷ್ಠ 30 ಗ್ರಾಂ ಪ್ರತಿದಿನ ಸೇವಿಸಲೇಬೇಕು. ಸವತೆಕಾಯಿ, ಹೀರೇಕಾಯಿ, ಕ್ಯಾರೆಟ್, ಮೂಲಂಗಿ, ಸೋರೆಕಾಯಿ, ಬೆಂಡೆಕಾಯಿ, ಬಸಳೆ, ಪಾಲಕ್ ಹೇರಳವಾಗಿ ಬಳಸಿ. ಪೇರಳೆಹಣ್ಣು, ಸೇಬುಹಣ್ಣು, ಬಾಳೆಹಣ್ಣು, ಅಂಜೂರ, ಒಣದ್ರಾಕ್ಷಿ ಬಳಸಿ.

ಅತಿಯಾಗಿ ಕರಿದ, ಹುರಿದ ಸಂಸ್ಕರಿಸಿದ ಆಹಾರಗಳ ಬಳಕೆ ಬೇಡ. ಕೆಫಿನ್‌ ಸೇವನೆ ಅತಿಯಾಗಿ ಬೇಡ. ಆಹಾರವನ್ನು ನಿಧಾನವಾಗಿ ಅಗಿದು ಸೇವಿಸಿ. ಮಾನಸಿಕ ಒತ್ತಡವಿರುವಾಗ ಆಹಾರ ಸೇವನೆ ಬೇಡ. ಒಂದು ಚಮಚ ಮೆಂತ್ಯ, ಒಂದು ಚಮಚ ಅಗಸೆ ಬೀಜ,  ಒಂದು ಚಮಚ ಎಳ್ಳನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅದನ್ನ ಜ್ಯೂಸ್ ತರಹ ಮಾಡಿ ಸೇವಿಸಬಹುದು. ಒಂದು ಗಂಟೆಯಾದರೂ ಸಾಧಾರಣ ಶ್ರಮದ ಚಟುವಟಿಕೆ ಮಾಡಿ. ದೀರ್ಘ ಉಸಿರಾಟ, ನಾಡಿಶೋಧನ ಪ್ರಾಣಾಯಾಮಗಳಿಂದ ವಪೇಯ (ಡಯಾಪ್ರಾಮ್) ಕಾರ್ಯಕ್ಷಮತೆ ಹೆಚ್ಚುತ್ತದೆ.

ಜೀರ್ಣಕ್ರಿಯೆ ಸರಾಗವಾಗಿ ಆಗಿ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ. ಯೋಗಾಸನದಲ್ಲಿ ಮಲಾಸನ, ಮಾರ್ಜರಿ ಆಸನ, ಭಾರದ್ವಾಜಾಸನ, ಪವನಮುಕ್ತಾಸನಗಳು ಮಲಬದ್ಧತೆ ನಿವಾರಣೆಗೆ ಸಹಕಾರಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.