ADVERTISEMENT

ಸ್ಪಂದನ: ಗರ್ಭಜಲ ಹೆಚ್ಚಾಗಿದೆಯೇ?

ಡಾ.ವೀಣಾ ಎಸ್‌ ಭಟ್ಟ‌
Published 8 ನವೆಂಬರ್ 2025, 0:30 IST
Last Updated 8 ನವೆಂಬರ್ 2025, 0:30 IST
<div class="paragraphs"><p>(ಐಸ್ಟೋಕ್ ಚಿತ್ರ)</p></div>

(ಐಸ್ಟೋಕ್ ಚಿತ್ರ)

   

-ವರ್ಣಶ್ರೀ, ಮೈಸೂರು

ನನಗೆ 32 ವರ್ಷ, ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌. ಮದುವೆಯಾಗಿ ಮೂರನೇ ವರ್ಷ. ಮೊದಲ ಬಾರಿ ಗರ್ಭ ಧರಿಸಿದ್ದು, 7ನೇ ತಿಂಗಳು ನಡೆಯುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳುತ್ತಿರುವೆ. ನನಗೆ ಆಗಾಗ ಹೊಟ್ಟೆನೋವು ಬರುತ್ತಿದ್ದರಿಂದ ಕಳೆದ ವಾರ ಮತ್ತೊಮ್ಮೆ ಸ್ಕ್ಯಾನ್‌ ಮಾಡಿದರು. ಗರ್ಭಜಲ (ನೆತ್ತಿನೀರು)/ ಆಮ್ನಿಯೋಟಿಕ್ ದ್ರವ ಹೆಚ್ಚಾಗಿದೆ, ಮಗು ಬೇಗ ಬೆಳೆಯುತ್ತಿದೆ, ಸಿಹಿ ತಿನ್ನಬೇಡಿ, ಡಯಾಬಿಟಿಸ್ ಬರಬಹುದು ಎಂದಿದ್ದಾರೆ. ಗಾಬರಿಯಾಗುತ್ತಿದೆ, ಏನು ಮಾಡಲಿ?

ADVERTISEMENT

ಗರ್ಭಜಲ ಎಂದರೆ ಬರೀ ನೀರಲ್ಲ. ಗರ್ಭಾವಸ್ಥೆಯಲ್ಲಿ ಶಿಶುವನ್ನು ಸುತ್ತುವರಿದಿರುವ ಒಂದು ಜೀವಜಲ ಎನ್ನಬಹುದು. ಇದರ ಉತ್ಪಾದನೆಯಲ್ಲಿ ತಾಯಿ– ಮಗು ಇಬ್ಬರ ಪಾತ್ರವೂ ಇರುತ್ತದೆ. ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಮೂರು ತಿಂಗಳವರೆಗೆ ಗರ್ಭಜಲ ತಾಯಿಯ ರಕ್ತದಿಂದಲೇ ಉತ್ಪತ್ತಿಯಾಗುತ್ತದೆ. ನಂತರದ ದಿನಗಳಲ್ಲಿ ಮಗುವೇ ಈ ಗರ್ಭಜಲದ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿನ ಮೂತ್ರಪಿಂಡ ಕಾರ್ಯನಿರ್ವಹಿಸಲು ಆರಂಭಿಸಿದ ಮೇಲೆ ಅದರ ಮೂತ್ರ ವಿಸರ್ಜನೆಯು ಆಮ್ನಿಯೋಟಿಕ್ ದ್ರವದ ಪ್ರಮುಖ ಮೂಲವಾಗುತ್ತದೆ. ಮಗುವಿನ ಶ್ವಾಸಕೋಶ ಕೂಡ ಈ ಗರ್ಭಜಲಕ್ಕೆ ದ್ರವವನ್ನು ಸ್ರವಿಸಿ ಹೀರಿಕೊಳ್ಳುತ್ತದೆ. ಪ್ಲಾಸೆಂಟಾ ಸಹ ಇದರ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಸಕ್ಕರೆ, ಲವಣ, ಸಸಾರಜನಕ, ಪ್ರೋಸ್ಟ್‌ಗ್ಲಾಂಡಿನ್‍ನಂತಹ ರಸದೂತಗಳು, ಶಿಶುವಿನ ತ್ಯಕ್ತ ಜೀವಕೋಶಗಳಂತಹವು ಇರುತ್ತವೆ. ಇದರ ಪ್ರಮಾಣ 20 ವಾರಗಳಲ್ಲಿ 50 ಮಿಲಿ ಲೀಟರ್ ಇದ್ದು, 36 ವಾರಗಳಲ್ಲಿ ಒಂದು ಲೀಟರ್‌ನಷ್ಟು ಆಗುತ್ತದೆ. ನಂತರ ಇದರ ಪ್ರಮಾಣ ಸ್ವಲ್ಪ ಕಡಿಮೆಯಾಗುತ್ತಾ ಬರುತ್ತದೆ. ಈ ದ್ರವವು ಗರ್ಭಸ್ಥ ಶಿಶುವನ್ನು ಆಘಾತಗಳಿಂದ ರಕ್ಷಿಸುವುದಲ್ಲದೆ, ಮಗುವಿನ ಚಲನೆಗೆ ಅವಕಾಶ ನೀಡಿ ಸ್ನಾಯು ಮತ್ತು ಮೂಳೆಗಳ ಬೆಳವಣಿಗೆ, ಉಸಿರಾಟದ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಈ ದ್ರವದ ಪ್ರಮಾಣವನ್ನು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸಹಾಯದಿಂದ ಪರೀಕ್ಷಿಸಿ ಅದರ ಸೂಚ್ಯಂಕವನ್ನು ಗುರುತಿಸುತ್ತಾರೆ. ಅದು 8ರಿಂದ 18ರಷ್ಟು ಇದ್ದರೆ ಸಾಮಾನ್ಯ ಎಂದಾಗುತ್ತದೆ. 24ಕ್ಕಿಂತ ಹೆಚ್ಚಾದಾಗ ಅದನ್ನು ಜಲಗರ್ಭ (ಪಾಲಿಹೈಡ್ರಾಮ್ನಿಯಾಸ್) ಎನ್ನುತ್ತಾರೆ.

ಇದಕ್ಕೆ ಕಾರಣಗಳು ಹಲವು. ಮಗುವಿಗೆ ಅನ್ನನಾಳದ ಸಮಸ್ಯೆ ಇದ್ದಾಗ, ಶ್ವಾಸನಾಳ ಹಾಗೂ ಅನ್ನನಾಳದ ಫಿಸ್ಟುಲಾ ಇದ್ದಾಗ ನರಮಂಡಲವು ಅಸಹಜವಾಗಿ ಇದ್ದಾಗ, ಆ್ಯನ್‌ಎನ್‌ಸೆಫಲಿ, ಸ್ಪೈನಾ ಬೈಫಿಡಾದಂತಹ ಕಾರಣಗಳಿದ್ದಾಗ, ವರ್ಣತಂತುವಿನ ಸಮಸ್ಯೆ, ಹೃದಯದ ಸಮಸ್ಯೆ ಇದ್ದಾಗಲೂ ಗರ್ಭಜಲ ಹೆಚ್ಚಾಗಬಹುದು. ಅವಳಿ ಗರ್ಭದಲ್ಲಿ, ರಕ್ತದ ಗುಂಪಿನಲ್ಲಿ ಸಾಮರಸ್ಯ ಇಲ್ಲದಿದ್ದಾಗ, ತಾಯಿಗೆ ಕೆಲವು ಸೋಂಕುಗಳಿದ್ದಾಗಲೂ ಈ ಆಮ್ನಿಯಾಟಿಕ್ ದ್ರವವು ಹೆಚ್ಚಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ಗರ್ಭಧಾರಣೆಯಲ್ಲಿ ಮಧುಮೇಹ ಉಂಟಾಗುವುದು ಹೆಚ್ಚುತ್ತಿದೆ. ಇದರಿಂದ ಮಗುವಿಗೆ ಹೆಚ್ಚು ಮೂತ್ರ ಉತ್ಪಾದಿಸುವಂತೆ ಪ್ರಚೋದನೆಯಾಗಿ ಗರ್ಭಜಲ ಹೆಚ್ಚಳಕ್ಕೆ ಕಾರಣವಾಗುತ್ತಿದೆ.  ಗರ್ಭಧಾರಣೆ ಖಚಿತವಾದ ತಕ್ಷಣ ಮತ್ತು ನಂತರ 24ರಿಂದ 28 ವಾರಗಳೊಳಗೆ ಒಜಿಸಿಟಿ ಪರೀಕ್ಷೆ– 75 ಗ್ರಾಮ್ ಗ್ಲೂಕೋಸ್‌ ಕುಡಿಸಿ ಪರೀಕ್ಷೆ– ಮಾಡಿಸಿದಾಗ ಇದರ ಬಗ್ಗೆ ಮಾಹಿತಿ ಸಿಗುತ್ತದೆ.

ಪ್ರತಿ ಗರ್ಭಿಣಿಗೂ ಮಧುಮೇಹ ಬರದ ಹಾಗೆ ಮುಂಜಾಗ್ರತೆ ವಹಿಸಲು ವೈದ್ಯರು ತಿಳಿಸುತ್ತಾರೆ. ಹೆಚ್ಚು ನಾರಿನಾಂಶ ಇರುವ ಹಸಿರುಸೊಪ್ಪು, ತರಕಾರಿಗಳು, ಪ್ರೋಟೀನ್ ಅಂಶವಿರುವ ಬೇಳೆಕಾಳುಗಳು, ಮೊಟ್ಟೆ, ಒಮೇಗಾ-3 ಅಂಶವುಳ್ಳ ಒಣ ಬಾದಾಮಿ, ವಾಲ್ನಟ್‌ನಂತಹವುಗಳನ್ನು ಸೇವಿಸಬೇಕು. ಸಾಧ್ಯವಾದಷ್ಟೂ ದೈಹಿಕ ಚಟುವಟಿಕೆಗೆ ಪ್ರಾಮುಖ್ಯ ಕೊಡಬೇಕು. ಸಿಹಿ ಪದಾರ್ಥ, ಜಂಕ್‍ಫುಡ್ ಸೇವನೆ ಬಿಡಬೇಕು. ಇನ್ನು ಈ ಗರ್ಭಜಲ ಹೆಚ್ಚಾದಾಗ ಗರ್ಭಿಣಿಯರಿಗೆ ಆಗಾಗ ಹೊಟ್ಟೆನೋವು ಬಂದಹಾಗೆ ಆಗುವುದು, ಓಡಾಡಿದಾಗ ಏದುಸಿರು ಉಂಟಾಗಿ ನಡೆದಾಡುವುದು ಕಷ್ಟವಾಗಬಹುದು. ಬೆನ್ನುನೋವು, ಕಾಲು ಊತ, ಕೆಲವೊಮ್ಮೆ ಅಕಾಲಿಕವಾಗಿ ಗರ್ಭಜಲ ಸೋರಿಕೆಯಾಗಬಹುದು. ಆಗ ಹೆರಿಗೆ ನೋವು ಆರಂಭವಾಗಿ ಅಕಾಲಿಕ ಹೆರಿಗೆಗೂ ಕಾರಣವಾಗಬಹುದು. ಅಕಾಲಿಕವಾಗಿ ಕಸ ಬಿಟ್ಟುಕೊಳ್ಳುವುದು, ಹೊಕ್ಕಳುಬಳ್ಳಿ ಜಾರುವಂತಹ ಅವಘಡಗಳು ಆಗಬಹುದು. ಹಾಗಾಗಿ, ಸೂಕ್ತ ಸಮಯದಲ್ಲಿ ವೈದ್ಯರ ತಪಾಸಣೆಗೆ ಒಳಗಾಗಿ ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು. ಗಾಬರಿಯಾಗಬೇಡಿ, ಮುಂಜಾಗ್ರತೆ ವಹಿಸಿ. ಅಷ್ಟಕ್ಕೂ ಶೇಕಡ 60ಕ್ಕಿಂತ ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಜಲ ಹೆಚ್ಚಳಕ್ಕೆ ಕಾರಣ ಇನ್ನೂ ಅಸ್ಪಷ್ಟವೇ ಆಗಿದೆ ಮತ್ತು ಗರ್ಭಜಲ ಸ್ವಲ್ಪ ಹೆಚ್ಚಾದಾಗ ಏನೂ ತೊಂದರೆ ಆಗುವುದಿಲ್ಲ. ನೀವು ಧೈರ್ಯವಾಗಿ ಇರುವುದು ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.