ಗರ್ಭಿಣಿ
(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)
ಸ್ಪಂದನ | ಗರ್ಭಿಣಿಯರಲ್ಲೇಕೆ ಕಾಲುಸೆಳೆತ?
ಮೊದಲ ಬಾರಿ ಗರ್ಭ ಧರಿಸಿದ್ದೇನೆ. ಆರು ತಿಂಗಳು ನಡೆಯುತ್ತಿದೆ. ವಿಪರೀತ ಎನ್ನುವಷ್ಟು ಕಾಲುನೋವು, ಸೆಳೆತ ಇದೆ. ಇದರಿಂದ ರಾತ್ರಿ ನಿದ್ರೆ ಬರುತ್ತಿಲ್ಲ. ವೈದ್ಯರು ಕಬ್ಬಿಣಾಂಶ ಇರುವ ಮಾತ್ರೆಗಳನ್ನು ನೀಡಿದ್ದಾರೆ. ನಡಿಗೆ ಆರಂಭಿಸಿದ್ದೇನೆ. ಆದರೂ ಕಡಿಮೆಯಾಗುತ್ತಿಲ್ಲ. ಏನು ಮಾಡಲಿ?
ಕಾಲುನೋವು, ಸೆಳೆತ ಗರ್ಭಿಣಿಯರಲ್ಲಿ ಸಹಜ. ಹಾರ್ಮೋನುಗಳ ಪ್ರಭಾವದಿಂದ ಶರೀರದ ತೂಕ ಹೆಚ್ಚುತ್ತದೆ. ರಕ್ತದ ಪ್ರಮಾಣವೂ ಹೆಚ್ಚಾಗುತ್ತದೆ. ಇದು ಅಭಿಧಮನಿಗಳು (ಮಲಿನ ರಕ್ತನಾಳ) ಅದರಲ್ಲೂ ಕಾಲಿನ ಅಭಿಧಮನಿಗಳ ಮೇಲೆ ಒತ್ತಡವನ್ನು ಉಂಟುಮಾಡಿ ಊತ, ನೋವಿಗೆ ಕಾರಣವಾಗಬಹುದು. ಗರ್ಭಿಣಿಯರಲ್ಲಿ ರಕ್ತದ ಪರಿಚಲನೆ ನಿಧಾನವಾಗಿರುತ್ತದೆ. ಆಗ ಸ್ನಾಯುಗಳಿಗೆ ರಕ್ತಪೂರೈಕೆ ನಿಧಾನವಾಗಿ, ಸೆಳೆತ ಉಂಟಾಗುತ್ತದೆ.
ಸ್ನಾಯುಗಳಲ್ಲಿ ಲ್ಯಾಕ್ಟಿಕ್ ಆ್ಯಸಿಡ್, ಪೈರೂವಿಕ್ ಆ್ಯಸಿಡ್ ಅಂಶಗಳು ಹೆಚ್ಚಾಗುವುದರಿಂದ ಸ್ನಾಯುಗಳಲ್ಲಿ ನೋವುಂಟಾಗುತ್ತದೆ. ಬೆಳೆಯುತ್ತಿರುವ ಗರ್ಭಕೋಶವು ನರಗಳ ಮೇಲೆ ಒತ್ತಡ ಉಂಟುಮಾಡುವುದರಿಂದಲೂ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ವೆರಿಕೋಸ್ ವೇನ್ಸ್ ಇದ್ದರೂ ಹೀಗಾಗುತ್ತದೆ. ಕಡಿಮೆ ನೀರಿನ ಸೇವನೆಯಿಂದಾಗಿ ನಿರ್ಜಲೀಕರಣ ಉಂಟಾದರೆ ಹೀಗೆ ಸ್ನಾಯುಗಳ ಸೆಳೆತ ಬರಬಹುದು. ಕ್ಯಾಲ್ಸಿಯಂ, ಮೆಗ್ನೀಷಿಯಂ, ಬಿ1 ಮತ್ತು ಬಿ12 ವಿಟಮಿನ್ ಪೂರೈಕೆ ಸರಿಯಾಗಿ ಆಗದಿದ್ದರೆ ಕಾಲು ಜೋಮು ಹಿಡಿದ ಅನುಭವ ಆಗುತ್ತದೆ. ಹಾಗಾಗಿ, ಆದಷ್ಟೂ ನಿತ್ಯ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಿರಿ. ಆಗಾಗ್ಗೆ ಎಳನೀರು ಕುಡಿಯಬಹುದು. ವಿಟಮಿನ್‌ಯುಕ್ತ ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶ ಇರುವ ಆಹಾರವನ್ನು ಸೇವಿಸಿ. ಹಸಿರುಸೊಪ್ಪು, ತರಕಾರಿಗಳು, ಮೊಳಕೆಕಾಳುಗಳು ಒಳ್ಳೆಯದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ ಹಾಗೂ ಮೆಗ್ನೀಷಿಯಂ ಇರುವುದರಿಂದ ನಿತ್ಯ ಸೇವಿಸಿ.
ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ‘ಡಿ’ ಬಹಳ ಮುಖ್ಯ. ಬೆಳಗಿನ ಬಿಸಿಲಿಗೆ 10ರಿಂದ 15 ನಿಮಿಷ ಮೈಯೊಡ್ಡಿ. ವೈದ್ಯರ ಸಲಹೆಯ ಮೇರೆಗೆ ವಿಟಮಿನ್ ಮತ್ತು ಖನಿಜಾಂಶದ ಮಾತ್ರೆಗಳನ್ನು ಸೇವಿಸಿ. ನಿಲ್ಲಬೇಕಾದಾಗ ಎರಡೂ ಕಾಲುಗಳ ಮೇಲೆ ಸಮಭಾರ ಹಾಕಿ. ಕುಳಿತುಕೊಳ್ಳಬೇಕಾದರೆ ಪಾದಗಳನ್ನು ಸ್ವಲ್ಪ ಎತ್ತರದ ಸ್ಟೂಲಿನ ಮೇಲಿಡಿ. ಮಲಗುವಾಗ ಕಾಲನ್ನು ದಿಂಬಿನ ಮೇಲೆ ಎತ್ತರದಲ್ಲಿಡಿ. ಕಾಲ್ಬೆರಳುಗಳು ಮೇಲ್ಮುಖವಾಗಿದ್ದು, ನಿಮ್ಮೆಡೆಗೆ ಚಾಚಿರಲಿ.ಹೀಗಿದ್ದರೂ ಕಾಲುನೋವು ಬರುತ್ತಿದ್ದರೆ, ತುದಿಗಾಲಿನಲ್ಲಿ ಆಗಾಗ್ಗೆ ನಡೆಯಿರಿ. ನೋವಿರುವ ವೆರಿಕೋಸ್ ವೇನ್ಸ್ ಇದ್ದರೆ, ಕಾಲಿನ ಭಾಗ ಕೆಂಪಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.