ADVERTISEMENT

PV Web Exclusive: ಹುಳುಕು ಹಲ್ಲು; ಸಮಸ್ಯೆಗಳ ಸೊಲ್ಲು

ಸ್ಮಿತಾ ಶಿರೂರ
Published 8 ಡಿಸೆಂಬರ್ 2020, 7:41 IST
Last Updated 8 ಡಿಸೆಂಬರ್ 2020, 7:41 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   
""

‘ನನ್ನ ಮಗಳು ಅಕ್ಷರಾಳಿಗೆ ಮುಂದಿನ ಎರಡು ಹಲ್ಲುಗಳ ಎರಡೂ ಬದಿಗಳಲ್ಲಿ ಗ್ಯಾಪ್‌ ಕಾಣಿಸುತ್ತಿದೆ. ಮೊದಲು ಇರಲಿಲ್ಲ. ಹಲ್ಲು ಬೀಳುವ ಮೊದಲು ಹೀಗಾಗುತ್ತದೆಯೇ?’ ಎಂದು ಅದಿತಿ ಸ್ನೇಹಿತೆಗೆ ಫೋನಾಯಿಸಿದ್ದಳು. ಗೆಳತಿಯಿಂದ ಸಮಾಧಾನಕರ ಉತ್ತರ ದೊರಕದ ಕಾರಣ, ಹಳ್ಳಿಯಲ್ಲಿದ್ದ ಅತ್ತೆಗೆ ದೂರವಾಣಿ ಮಾಡಿ ವಿಚಾರಿಸಿದಳು.

‘ಎಷ್ಟೊಂದು ಮಕ್ಕಳ ಬಾಲ್ಯ ಕಂಡಿದ್ದೇನೆ. ಈಗಾಗಲೇ ಒಂದು ಹಲ್ಲು ಬಿದ್ದಷ್ಟು ಗ್ಯಾಪ್‌ ಕಾಣಿಸುತ್ತಿದೆಯಲ್ಲ. 6 ವರ್ಷ ತುಂಬಲು ಇನ್ನೂ ಒಂದೆರಡು ತಿಂಗಳು ಬಾಕಿ ಇದೆ. ನಾನಂತೂ ಈ ರೀತಿ ನೋಡಿಲ್ಲ’ ಎಂದರು ಅತ್ತೆ. ಈಗ ಅದಿತಿ ಮನಸ್ಸಿನಲ್ಲಿ ಒಂದಿಷ್ಟು ಆತಂಕ ತುಂಬಿತು. ದಂತ ವೈದ್ಯರ ಬಳಿ ಕರೆದೊಯ್ಯಲೇ? ಹಲ್ಲುಗಳ ಸಮಸ್ಯೆಯಾಗುವುದೋ ಏನೋ? ಸುಮ್ಮನೆ ಆತಂಕ ಪಡುತ್ತಿದ್ದೀನೋ ಏನೋ? ಎಂಬ ದ್ವಂದ್ವವೂ ಹುಟ್ಟಿತು. ಪತಿಯ ಬಳಿ ಚರ್ಚಿಸಿ ದಂತ ವೈದ್ಯರ ಬಳಿ ಸಲಹೆ ಪಡೆಯುವುದೇ ಉತ್ತಮ ಎಂದು ಹೊರಟಳು.

5 ತಿಂಗಳ ಪುಟ್ಟ ಮಗು ಸಾನ್ವಿಯ ಬಾಯಲ್ಲಿ ಆಗಲೇ ಹಲ್ಲುಗಳು ಮೂಡಿದ್ದವು. 6 ತಿಂಗಳ ನಂತರ ಹಲ್ಲುಗಳು ಬರಲು ಶುರುವಾಗುತ್ತದೆ ಎಂದು ಓದಿದ್ದ ಅವರಮ್ಮ ಭಾನುವಿಗೆ ಇದರಿಂದ ಅಚ್ಚರಿ. ಬೇಗನೇ ಹಲ್ಲು ಬಂದಿರುವ ಬಗ್ಗೆ ಸಂಬಂಧಿಕರು, ಸ್ನೇಹಿತೆಯರಲ್ಲಿ ಹೇಳಿಕೊಂಡಿದ್ದೇ ಹೇಳಿಕೊಂಡಿದ್ದು.

ADVERTISEMENT

4 ವರ್ಷದ ಗೌರಿಯ ಪುಟ್ಟ ಪುಟ್ಟ ಹಲ್ಲುಗಳು ಕಪ್ಪಾಗಿ ಹುಳುಕಾಗಿದ್ದು ಕಂಡು ಅವರಮ್ಮ, ‘ಅಷ್ಟೊಂದು ಚಾಕೊಲೆಟ್, ಸ್ವೀಟ್‌ ತಿಂದರೆ ಇನ್ನೇನಾಗುತ್ತದೆ. ಹೊಸ ಹಲ್ಲುಗಳು ಬಂದಾಗ ನೋಡೋಣ ಬಿಡು’ ಎಂದು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಮಗಳು ಆಗಾಗ ಹಲ್ಲು ನೋವು ಎಂದು ಬಂದಾಗ ಒಂದಿಷ್ಟು ಎಣ್ಣೆ ಸವರಿ ಬಿಡುತ್ತಿದ್ದರು.

3 ವರ್ಷದ ಹಟಮಾರಿ ತನ್ಮಯ್‌ಗೆ ಹಲ್ಲು ಉಜ್ಜಿಸುವುದು ಅವರ ಅಮ್ಮ ಹಾಗೂ ಅಪ್ಪನಿಗೆ ಬೆಳಗಿನ ಒಂದು ದೊಡ್ಡ ಸಾಹಸವಾಗಿತ್ತು. ಒಬ್ಬರು ಅವನನ್ನು ಗಟ್ಟಿಯಾಗಿ ಹಿಡಿದುಕೊಂಡರೆ ಇನ್ನೊಬ್ಬರು ಅವನ ಹಲ್ಲು ತಿಕ್ಕಿ ತೊಳೆಸುವುದು ನಿತ್ಯದ ರಂಪವಾಗಿತ್ತು. ಆದರೂ ಅವರಿಬ್ಬರೂ ಹಲ್ಲು ತಿಕ್ಕಿಸುವುದನ್ನು ಒಂದು ದಿನವೂ ಬಿಡಲಿಲ್ಲ.

ರಾತ್ರಿ ಮಲಗಿದಾಗ ಕಟಕಟನೆ ಹಲ್ಲು ಕಡಿಯುವುದು, ಹಾಲು ಹಲ್ಲುಗಳು 6 ವರ್ಷಕ್ಕಿಂತ ಮುಂಚೆಯೇ ಬಿದ್ದು ಹೋಗುವುದು, ಹೊಸ ಹಲ್ಲುಗಳು ಮೂಡಿದಾಗ ಅವುಗಳ ಮಧ್ಯೆ ಗ್ಯಾಪ್‌ ಕಂಡು ಬರುವುದು, ಹಾಲು ಹಲ್ಲುಗಳು ಬೀಳದ ಸಂದರ್ಭದಲ್ಲಿ ಅಲ್ಲಿ ಬರಬೇಕಾದ ಹಲ್ಲುಗಳು ವಕ್ರವಾಗಿ ಬೇರೆಡೆ ಬರುವುದು, ಹಲ್ಲುಗಳು ಹಳದಿಯಾಗುವುದು, ಬಾಯಿಂದ ದುರ್ವಾಸನೆ ಬರುವುದು, ಬಿಸಿ ಅಥವಾ ತಣ್ಣನೆಯ ಪೇಯಗಳು ತಾಗಿದರೆ ನೋವಾಗುವುದು, ಉಬ್ಬು ಹಲ್ಲುಗಳು, ವಕ್ರ ದಂತಗಳು, ಮೇಲಿನ ಹಾಗೂ ಕೆಳಗಿನ ಹಲ್ಲುಗಳ ಜೋಡಣೆ ಸರಿ ಇರದೇ ಇರುವುದು.... ಹೀಗೆ ಮಕ್ಕಳಲ್ಲಿ ಕಂಡುಬರುವ ಹಲ್ಲಿನ ಸಮಸ್ಯೆಗಳು ಹಲವು.

ಇವುಗಳ ಬಗ್ಗೆ ಅಜ್ಞಾನವಿದ್ದರೆ ತಂದೆ–ತಾಯಂದಿರಲ್ಲಿ ಆತಂಕ ಶುರುವಾಗುವುದು ಸಹಜ. ಪೋಷಕರು ಮೊದಲು ಮಗುವಿನ ಆರೋಗ್ಯದ ಬಗ್ಗೆ ಪೂರ್ಣ ಮಾಹಿತಿ ಪಡೆದಿರಬೇಕು. ಹಿರಿಯರು, ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಇವುಗಳ ಬಗ್ಗೆ ಆಗಾಗ ಚರ್ಚೆ ನಡೆಸುತ್ತಿದ್ದರೆ, ಗೊತ್ತಿರದ ಎಷ್ಟೋ ಸಂಗತಿಗಳ ಬಗ್ಗೆ ಮಾಹಿತಿ ಲಭಿಸುತ್ತದೆ. ಸಮಸ್ಯೆ ಗಂಭೀರವಾಗಿದೆ ಎನಿಸಿದರೆ ನೇರ ವೈದ್ಯರ ಬಳಿಯೇ ಸಲಹೆ ಪಡೆಯಲು ಹೋಗುವುದು ಉತ್ತಮ.

ವೈದ್ಯರು ಹೇಳುವುದೇನು?

‘ಪ್ರತಿ ತಂದೆ–ತಾಯಂದಿರು ಮಕ್ಕಳ ದಂತ ಆರೋಗ್ಯ ರಕ್ಷಣೆ ಹೇಗೆಂಬ ಬಗ್ಗೆ ತಿಳಿದುಕೊಂಡಿರಬೇಕು. ಯಾವಾಗ ಹಾಲು ಹಲ್ಲುಗಳು ಮೂಡುತ್ತವೆ. ಅವು ಬೀಳುವುದು ಯಾವಾಗ, ಅವುಗಳ ಸ್ವಚ್ಛತೆಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಮಾಹಿತಿ ಪಡೆಯಬೇಕು’ ಎನ್ನುತ್ತಾರೆ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಹಿರಿಯ ದಂತ ತಜ್ಞ ವೈದ್ಯಾಧಿಕಾರಿ ಡಾ. ಸಿದ್ದರಾಮೇಶ್ವರ ಟಿ.ಎಸ್‌.

‘6 ತಿಂಗಳ ಮಗುವಿಗೆ ಸಹ ಹೊಸದಾಗಿ ಮೂಡಿದ ಹಲ್ಲುಗಳನ್ನು ಸ್ವಚ್ಛವಾದ ಹತ್ತಿಯನ್ನು ತೆಗೆದುಕೊಂಡು ಒದ್ದೆ ಮಾಡಿ ಆಗಾಗ ಸ್ವಚ್ಛಗೊಳಿಸುತ್ತಿರಬೇಕು.7ರಿಂದ 8ತಿಂಗಳಿಗೆ ಮಗುವಿನ ಬಾಯಲ್ಲಿ ಮೇಲೆರಡು– ಕೆಳಗೆರಡು ಹಲ್ಲುಗಳು ಮೂಡಿದ ಕೂಡಲೇ ಬೇಬಿ ಬ್ರಶ್‌ ಬಳಸಲು ಶುರು ಮಾಡಬೇಕು. ಎರಡು – ಎರಡೂವರೆ ವರ್ಷದ ಹೊತ್ತಿಗೆ ಬಹುತೇಕ ಹಾಲು ಹಲ್ಲುಗಳು ಬಂದಿರುತ್ತವೆ. ಆಗ ಬೇಬಿ ಬ್ರಶ್‌ ಬಳಸಿ ಉಜ್ಜಿ ಸ್ವಚ್ಛಗೊಳಿಸಬೇಕಾಗುತ್ತದೆ. ಮಕ್ಕಳು ದೊಡ್ಡವರಾಗತೊಡಗಿದಂತೆ ಬೆಳಿಗ್ಗೆ, ರಾತ್ರಿ ಎರಡು ಬಾರಿ ಪೇಸ್ಟ್‌ ಬಳಸಿ ಬ್ರಶ್‌ ಮಾಡಿಸುವುದನ್ನು ರೂಢಿಸಬೇಕು’.

ಡಾ. ಸಿದ್ದರಾಮೇಶ್ವರ

‘ಹಾಲು ಹಲ್ಲುಗಳ ನಡುವೆ ಗ್ಯಾಪ್‌ಗಳಿದ್ದರೆ ತೊಂದರೆಯೇನಿಲ್ಲ. ಹೊಸ ಹಲ್ಲುಗಳು ಬರಲು ಇದರಿಂದ ಸುಲಭವೇ ಆಗುತ್ತದೆ. ಸರಿಯಾಗಿ ಹಲ್ಲು ಉಜ್ಜದಿದ್ದರೆ ರ‍್ಯಾಂಪ್‌ ಅಂಡ್‌ ಕೆರ್ರಿಸ್‌ ಸಮಸ್ಯೆ ಉಂಟಾಗುತ್ತದೆ. ಇದರಿಂದ ಹಲ್ಲುಗಳು ಹುಳುಕಾಗಿ ಕರ್ರಗಾಗುತ್ತವೆ. ಇನ್ನೊಂದು ನರ್ಸಿಂಗ್‌ ಬಾಟಲ್‌ ಕೆರ್ರಿಸ್‌ ಸಹ ಉಂಟಾಗುತ್ತದೆ. ಬಾಟಲ್‌ ಹಾಲು ಕುಡಿಯುವ ಮಕ್ಕಳಲ್ಲಿ ಇದು ಕಂಡುಬರಬಹುದು. ವಿಪರೀತ ಚಾಕೊಲೆಟ್‌, ಅಂಟಾದ ಸಿಹಿ ಪದಾರ್ಥಗಳನ್ನು ತಿಂದ ನಂತರ ಬಾಯಿ ತೊಳೆದುಕೊಳ್ಳದಿದ್ದರೆ, ಹಲ್ಲುಗಳು ಹುಳುಕಾಗುತ್ತವೆ. ಇಷ್ಟೇ ಅಲ್ಲದೇ ಅವರ ಆಹಾರದಲ್ಲಿ ಸರಿಯಾದ ಪೌಷ್ಟಿಕಾಂಶಗಳು ಸಿಗದಿದ್ದರೂ, ನೀರಿನಲ್ಲಿ ಅಗತ್ಯ ಪ್ರಮಾಣದಲ್ಲಿ ಫ್ಲೋರೈಡ್‌ ಅಂಶ ಇಲ್ಲದಿದ್ದರೂ ಕೆಲವೊಮ್ಮೆ ಹಲ್ಲುಗಳು ಹುಳುಕಾಗುತ್ತವೆ. ಹಲ್ಲುಗಳು ಹುಳುಕಾಗಿ ಉದುರುತ್ತಿದ್ದರೆ ವೈದ್ಯರ ಬಳಿ ತೋರಿಸುವುದೇ ಸೂಕ್ತ’ ಎಂದು ಅವರು ತಿಳಿಸಿದರು.

‘ಮಕ್ಕಳು ಹಲ್ಲು ಉಜ್ಜತೊಡಗಿದ ನಂತರ ಅವರಷ್ಟಕ್ಕೇ ಬಿಡುವುದು ಸರಿಯಲ್ಲ. ಆಗಾಗ ಅವರ ಹಲ್ಲುಗಳನ್ನು ಗಮನಿಸುತ್ತಿರಬೇಕು. ಹಾಲು ಹಲ್ಲುಗಳನ್ನು ಸಹ ಸ್ವಚ್ಛವಾಗಿಡುವುದು ಅಗತ್ಯ. ಹೊಸ ಹಲ್ಲುಗಳು ಬಂದಿರುವುದನ್ನೂ ನೋಡುತ್ತಿರಬೇಕಾಗುತ್ತದೆ. 14ನೇ ವರ್ಷದವರೆಗೂ ಮಕ್ಕಳ ಹಲ್ಲುಗಳ ಬಗ್ಗೆ ಪೋಷಕರೇ ಗಮನ ಹರಿಸುತ್ತಿರಬೇಕು. 12ನೇ ವರ್ಷಕ್ಕೆ ಹೊಸ ಕೋರೆ ಹಲ್ಲುಗಳು ಹುಟ್ಟಿದಾಗಲೇ ಪೂರ್ಣ ಪ್ರಮಾಣದಲ್ಲಿ ಹಲ್ಲುಗಳ ಸ್ಥಿತಿ ಹೇಗಿದೆ ಎಂದು ತಿಳಿದುಬರುತ್ತದೆ. ಹೊಸ ಹಲ್ಲುಗಳು ಬಂದ ನಂತರ ಅವುಗಳ ನಡುವೆ ಗ್ಯಾಪ್ ಇದ್ದರೆ, ಉಬ್ಬು ಹಲ್ಲುಗಳಾದರೆ 17–18ನೇ ವಯಸ್ಸಿನಲ್ಲಿ ಹಲ್ಲುಗಳಿಗೆ ಕ್ಲಿಪ್‌ ಹಾಕಲು ವೈದ್ಯರ ಸಲಹೆ ಪಡೆಯಬಹುದು. ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಆತಂಕ ಪಡುವ ಅಗತ್ಯವಿಲ್ಲ. ಆದರೆ ಸೂಕ್ತ ಸಂದರ್ಭಗಳಲ್ಲಿ ವೈದ್ಯರಿಗೆ ತೋರಿಸಬೇಕಾಗುತ್ತದೆ’ ಎಂದು ಡಾ. ಸಿದ್ದರಾಮೇಶ್ವರ ಹೇಳುತ್ತಾರೆ.

‘ಕ್ಲಿಪ್‌ ಹಾಕುವುದು ಹಾಲು ಹಲ್ಲುಗಳು ಬಿದ್ದು ಹೊಸ ಹಲ್ಲುಗಳು ಬಂದ ನಂತರವೇ. ಕೆಲವೊಬ್ಬರಿಗೆ ಸ್ಕೆಲಿಟಲ್‌ ಡಿಫಾಲ್ಟ್‌ನಿಂದಾಗಿ ಹಲ್ಲುಗಳ ಜೋಡಣೆ ಸರಿಯಾಗಿರುವುದಿಲ್ಲ. ಅಂಥವರಿಗೆ 12 ವರ್ಷದಿಂದಲೇ ಟ್ರೀಟ್‌ಮೆಂಟ್‌ ಶುರುವಾಗುತ್ತದೆ. ಆದರೆ ಉಳಿದವರಿಗೆ 16–17ನೇ ವರ್ಷದ ನಂತರವೇ ಕ್ಲಿಪ್ ಹಾಕಲು ಸಲಹೆ ನೀಡಲಾಗುತ್ತದೆ’ ಎಂದು ಅವರು ವಿವರಿಸಿದರು.

ಹುಳುಕು ಹಲ್ಲುಗಳ ಸಮಸ್ಯೆ ಹೆಚ್ಚು

ಜಗತ್ತಿನಲ್ಲಿ 350 ಕೋಟಿ ಜನರಿಗೆ ಹಲ್ಲುಗಳ ಸಮಸ್ಯೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ. ಇವುಗಳಲ್ಲಿ ದಂತ ಕೊಳೆಯುವ ಅಥವಾ ಹಲ್ಲು ಕಪ್ಪಾಗಿ ಹುಳುಕಾಗುವ ಸಮಸ್ಯೆಯ ಪ್ರಮಾಣ ಹೆಚ್ಚು. 53 ಕೋಟಿ ಮಕ್ಕಳಲ್ಲಿ ಹಾಲುಹಲ್ಲುಗಳು ಹುಳುಕಾಗುವ ಸಮಸ್ಯೆ ಕಂಡುಬಂದಿದೆ. ಶೇ 10ರಷ್ಟು ಜನರಿಗೆ ಒಸಡಿನ ಸಮಸ್ಯೆಗಳು ಕಂಡುಬಂದಿವೆ.

‘ಬೋರ್ಗನ್‌ ಪ್ರಾಜೆಕ್ಟ್‌.ಆರ್ಗ್‌’ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಶೇ 85ರಿಂದ ಶೇ 90ರಷ್ಟು ಜನರಲ್ಲಿ ದಂತ ಕೊಳೆಯುವ ಸಮಸ್ಯೆ ಇದೆ. ಶೇ 60ರಿಂದ ಶೇ 80ರಷ್ಟು ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಶೇ 30ರಷ್ಟು ಮಕ್ಕಳಲ್ಲಿ ದವಡೆ ಹಾಗೂ ಹಲ್ಲುಗಳ ಅಸಮರ್ಪಕ ಜೋಡಣೆಯ ತೊಂದರೆಯಿದೆ.

ಹಲ್ಲುಗಳ ಆರೋಗ್ಯ ಕಾಪಾಡಲು ವೈದ್ಯ ಅಥವಾ ತಜ್ಞರ ಸಲಹೆಗಳನ್ನು ಪಡೆಯಲು ಮುಂದಾಗುವವರು ಶೇ 50ರಷ್ಟು ಜನರು ಮಾತ್ರ. ಶೇ 51ರಷ್ಟು ಮಂದಿ ಹಲ್ಲು ಉಜ್ಜಲು ಪೇಸ್ಟ್‌ ಹಾಗೂ ಬ್ರಶ್‌ ಬಳಸುತ್ತಾರೆ. 28 ಪ್ರತಿಶತ ಜನರು ಮಾತ್ರ ದಿನಕ್ಕೆ 2 ಬಾರಿ ಬ್ರಶ್‌ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.