ADVERTISEMENT

PV Web Exclusive ನಿಮ್ಮ ಕೋಪ ಹೃದ್ರೋಗಕ್ಕೆ ಮೂಲವಾಗಬಹುದು..!

ಸುಧಾ ಹೆಗಡೆ
Published 29 ಸೆಪ್ಟೆಂಬರ್ 2020, 5:50 IST
Last Updated 29 ಸೆಪ್ಟೆಂಬರ್ 2020, 5:50 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

‘ನೀನೇಕೆ ನನ್ನ ಕಾಲು ತುಳಿದಿದ್ದು?’ ಮೆಟ್ರೋದಲ್ಲಿ ಮಹಿಳೆಯೊಬ್ಬಳು ಯುವತಿಯನ್ನು ಕೇಳಿದಾಗ ಆಕೆ ಕೂಲಾಗಿ ‘ನನ್ನ ಪಾದಕ್ಕೆ ಕಣ್ಣಿಲ್ಲ’ ಎನ್ನಬೇಕೆ? ಅಷ್ಟಕ್ಕೇ ಸುಮ್ಮನಾಗದ ಆಕೆ, ‘ಮೈಕೈ ತಾಗಿಸಬಾರದು ಎಂದಿದ್ದರೆ ಟ್ಯಾಕ್ಸಿಯಲ್ಲಿ ಹೋಗಬೇಕಪ್ಪ...’ ಎಂದು ಗೊಣಗಿಕೊಂಡಾಗ ಮಹಿಳೆಗೆ ಒಮ್ಮೆಲೇ ಕೋಪವೇರಿ ಬಾಯಿಗೆ ಬಂದಂತೆ ಕೂಗಾಡತೊಡಗಿದಳು. ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಯಿತೆಂದರೆ ಮುಖ ಕೆಂಪಾಗಿ, ಬಾಯಿ ಒಣಗಿದಂತಾಗಿ ನಿಂತುಕೊಂಡಿದ್ದವಳು ಮೆಟ್ರೊ ಫ್ಲೋರ್‌ ಮೇಲೇ ದೊಪ್ಪನೆ ಕುಸಿದು ಕುಳಿತಳು. ಸುತ್ತಮುತ್ತ ಇದ್ದವರು ನೀರು ಕೊಟ್ಟು ಉಪಚರಿಸುತ್ತ ‘ಬಿಪಿ ಏರಿರಬೇಕು..’ ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಂಡರು.

ಕೋಪದಿಂದ ಕೂಗಾಡುವ ಇಂತಹ ಘಟನೆಗಳನ್ನು ಬಹುತೇಕ ಮಂದಿ ನೋಡಿಯೇ ನೋಡಿರುತ್ತಾರೆ. ಇದು ಸಾಮಾನ್ಯ ಕೂಡ. ಸಣ್ಣಪುಟ್ಟ ಘಟನೆಗಳಿಗೆ, ಮಾತಿಗೆ ತೀವ್ರವಾಗಿ ಸಿಟ್ಟೇರಿಸಿಕೊಂಡು ಬುಸುಗುಡುವುದು, ತಾಸುಗಟ್ಟಲೆ ಕೂಗಾಡುವುದು, ನಂತರ ಆಯಾಸವಾಗಿ ಸಂಕಟಪಡುವುದು..

ಈ ಸಿಟ್ಟು ಎನ್ನುವುದು ಇದೆಯಲ್ಲ, ಮುಷ್ಠಿ ಬಿಗಿದು, ಹಲ್ಲು ಕಡಿಯುತ್ತ, ಎದುರಿಗಿರುವ ವ್ಯಕ್ತಿಯ ಮೇಲೆ ಬೈಗಳ ಮಳೆ ಸುರಿಸುವಲ್ಲಿ ಮುಕ್ತಾಯವಾಗುತ್ತದೆ. ಸಮಾಧಾನವಾದ ನಂತರ ಬಹುತೇಕ ಮಂದಿ ‘ನಾನೇಕೆ ಕೂಗಾಡಿದೆ? ಇಷ್ಟು ಸಣ್ಣ ವಿಷಯಕ್ಕೆಲ್ಲ ಅಷ್ಟು ಸಿಟ್ಟು ಮಾಡಬೇಕಿತ್ತೇ? ಛೇ, ಬೈಯಿಸಿಕೊಂಡವರು ಎಷ್ಟು ಬೇಸರ ಮಾಡಿಕೊಂಡಿದ್ದಾರೋ’ ಎಂದು ಪಶ್ಚಾತ್ತಾಪ ಪಡುವುದು ಕೂಡ ಸಾಮಾನ್ಯ ದೃಶ್ಯವೇ.

ADVERTISEMENT

ಆದರೆ ಈ ಕೋಪ ಎನ್ನುವುದು ನಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಗೊತ್ತೇ? ದೈಹಿಕವಾಗಿ, ಮಾನಸಿಕವಾಗಿ ಇನ್ನಿಲ್ಲದ ಗಂಭೀರ ಪರಿಣಾಮ ಬೀರಬಹುದು. ಎಲ್ಲೋ ಮಾರುಕಟ್ಟೆಯಲ್ಲಿ ತರಕಾರಿಯವನ ಜೊತೆ ಕೂಗಾಡುವುದು, ಆಟೋದವನು ಚಿಲ್ಲರೆ ಕೊಟ್ಟಿಲ್ಲ ಎಂದು ಸಿಟ್ಟಿನಿಂದ ಬೈಯುವುದು, ಪುಟ್ಟ ಮಗು ಹಟ ಮಾಡಿದರೆ ರಸ್ತೆಯಲ್ಲೇ ನಿಂತು ರೇಗಾಡುವುದು, ಫೋನ್ ಮಾಡಿ ಸಾಲ ಬೇಕೆ ಎಂದು ಕೇಳಿದರೂ ತಾರಾಮಾರು ಕಿರಿಚುವುದು.. ಕ್ಷಣಮಾತ್ರದಲ್ಲಿ ಮುಗಿದು ಹೋಗಬಹುದು. ಆದರೆ ಅದು ನಿಮ್ಮ ಮೇಲೆ ಬೀರುವ ದುಷ್ಪರಿಣಾಮ ಮಾತ್ರ ದೀರ್ಘಕಾಲ ಇರುವಂತಹದ್ದು.

ಈ ನಿಯಂತ್ರಣವಿಲ್ಲದ ಕೋಪ ಹೃದ್ರೋಗಕ್ಕೆ ಪ್ರಮುಖ ಕಾರಣ. ಈ ಕುದಿಯುವ ಕೋಪ ಹೃದಯದಲ್ಲಿ ರಕ್ತವನ್ನು ವೇಗವಾಗಿ ಪಂಪ್ ಆಗುವಂತೆ ಮಾಡುತ್ತದೆ. ಇದರಿಂದ ಎದೆ ವೇಗವಾಗಿ ಬಡಿದುಕೊಂಡು, ಕೆಲವೊಮ್ಮೆ ಎದೆ ಬಡಿತ ತಪ್ಪಬಹುದು. ಗಂಭೀರ ಸಮಸ್ಯೆಗಳಾದ ಪಾರ್ಶ್ವವಾಯು ಅಥವಾ ಹೃದಯಾಘಾತವೂ ಸಂಭವಿಸಬಹುದು.

ಆದರೆ ಇವೆಲ್ಲ ತೀವ್ರ ಕೋಪ ಬಂದಾಗ ಆಗಬಹುದಾದ ತೊಂದರೆಗಳು ಎನ್ನುತ್ತಾರೆ ತಜ್ಞರು. ಸಣ್ಣಪುಟ್ಟ ಕೋಪಕ್ಕೆಲ್ಲ ಅಂತಹ ಅನಾಹುತವೇನೂ ಆಗದು. ಹಾಗಂತ ಕೋಪವನ್ನು ಒಳಗೊಳಗೇ ನುಂಗಿಕೊಂಡರೂ ಕಷ್ಟವೇ. ಕೊರೊನರಿ ಹೃದ್ರೋಗ ಬರಬಹುದು ಎಂದು ಎಚ್ಚರಿಸುತ್ತಾರೆ ವೈದ್ಯರು.

ಸನ್ನಿವೇಶಕ್ಕೆ ತಕ್ಕಂತೆ ಕೋಪ ಬರುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಈ ಸಿಟ್ಟು ಬಂದಾಗ ಪ್ರತಿಕ್ರಿಯಿಸುವುದು ಇದೆಯಲ್ಲ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒಮ್ಮೆಲೇ ಕೂಗಾಡುವುದು, ಎದುರಿನ ವ್ಯಕ್ತಿ ಕಕ್ಕಾವಿಕ್ಕಿಯಾಗುವಂತೆ ರೇಗುವುದು ಹೃದಯದ ಮೇಲೆ ಪರಿಣಾಮ ಬೀರಬಹುದು. ಇದಕ್ಕೆ ಸಿಟ್ಟು ಸ್ಫೋಟಗೊಳ್ಳುವುದು ಎನ್ನಬಹುದು. ಇದರಿಂದ ಕೊರೊನರಿ ಹೃದ್ರೋಗ ಅಥವಾ ಕೆಲವೊಮ್ಮೆ ಹೃದಯಾಘಾತವೂ ಆಗಬಹುದು.

‘ಸಿಟ್ಟು ಬಂದಾಗ ರಕ್ತನಾಳಗಳಲ್ಲಿ ಒಮ್ಮೆಲೇ ರಕ್ತವು ನುಗ್ಗುತ್ತದೆ. ಇದಕ್ಕೆ ಕಾರಣ ಹೃದಯದಲ್ಲಿ ವೇಗವಾಗಿ ರಕ್ತ ಪಂಪ್ ಆಗುವುದು. ಈ ರಕ್ತನಾಳಗಳು ಮೆದುಳಿಗೆ ರಕ್ತವನ್ನು ಒಯ್ಯುವಂತಹವು. ರಕ್ತನಾಳದ ಮೇಲೆ ತೀವ್ರತರದ ಒತ್ತಡ ಬಿದ್ದಾಗ ರಕ್ತದೊತ್ತಡ ಒಮ್ಮೆಲೇ ಏರುತ್ತದೆ. ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಮಧ್ಯದಲ್ಲಿ ಬಡಿತದಲ್ಲಿ ಏರುಪೇರಾಗಬಹುದು. ಬೆವರು ಹೆಚ್ಚಾಗಿ, ಉಸಿರಾಟ ಕಷ್ಟವಾಗಬಹುದು’ ಎನ್ನುತ್ತಾರೆ ಹೃದ್ರೋಗ ತಜ್ಞ ಡಾ.ವಿವೇಕ್‌ ಹೆಗಡೆ.

ಯಾವುದೇ ಕಾಯಿಲೆಯಿಲ್ಲದೇ ಆರಾಮವಾಗಿರುವವರಲ್ಲಿ ಈ ಸಿಟ್ಟು ಕಾಡಿದರೆ ಹೃದ್ರೋಗಗಳು ಬರುವ ಸಾಧ್ಯತೆ ಹೆಚ್ಚು. ಹಾಗೆಯೇ ಈ ಕೋಪ ಎನ್ನುವುದು ಖಿನ್ನತೆ, ಹಿಂಸೆ, ಸಂಬಂಧದಲ್ಲಿ ಬಿರುಕಿಗೆ ಕಾರಣವಾಗಬಹುದು. ಸಿಟ್ಟು ಬಹುತೇಕ ಸಂದರ್ಭದಲ್ಲಿ ವ್ಯಸನಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುತ್ತಾರೆ ಸಂಶೋಧಕರು.

ಇದಕ್ಕೆ ಲಿಂಗ ಭೇದವಿಲ್ಲ. ಪುರುಷ– ಮಹಿಳೆ ಇಬ್ಬರಲ್ಲೂ ಸಿಟ್ಟು ಕಾಡುತ್ತದೆ. ಹಾಗೆಯೇ ಈ ರಕ್ತದೊತ್ತಡ ಹೆಚ್ಚಾಗುವ ಪ್ರಕ್ರಿಯೆ ಇಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ. ಸಿಟ್ಟು ಎನ್ನುವುದು ವ್ಯಕ್ತಿಯಲ್ಲಿ ಹೃದಯಾಘಾತದ ಸಾಧ್ಯತೆಯನ್ನು ಐದು ಪಟ್ಟು ಜಾಸ್ತಿ ಮಾಡುತ್ತದೆ.

ಹಾಗಾದರೆ ಕೋಪ ನಿಯಂತ್ರಿಸುವುದು ಹೇಗೆ?

ಸಿಟ್ಟನ್ನು ನಿಯಂತ್ರಿಸುವುದು ಎಂದರೆ ಇದರ ನಿರ್ವಹಣೆ ಮಾಡುವುದು. ಯಾವುದೇ ಘಟನೆಗೆ, ಮಾತಿಗೆ ಪ್ರತಿಕ್ರಿಯೆ ತೋರಿಸುವಾಗ ಅದರ ಬಗ್ಗೆ ಅರಿವು ಹೊಂದಿರಬೇಕು. ಹಾಗೆಯೇ ಶಿಸ್ತಿನ ಬದುಕು ಎಂಬುದು ಈ ಸಿಟ್ಟಿಗೆ ತಿಲಾಂಜಲಿ ಹಾಡುತ್ತದೆ.

ನಿತ್ಯ ಧ್ಯಾನ ಮಾಡುವುದು, ಯೋಗ ಹಾಗೂ ಪ್ರಾಣಾಯಾಮ, ವ್ಯಾಯಾಮ ಮಾಡುವುದು ಸಿಟ್ಟು ನಿಯಂತ್ರಣಕ್ಕೆ ತರುವಲ್ಲಿ ಸಹಕಾರಿ. ಸೇವಿಸುವ ಸಂಬಾರು ಪದಾರ್ಥಗಳು ಹಾಗೂ ಖಾರದ ತಿನಿಸುಗಳ ಮೇಲೆ ನಿಯಂತ್ರಣವಿರಲಿ. ಮದ್ಯ, ಮಾದಕದ್ರವ್ಯ, ಕೆಫಿನ್‌ ಕೂಡಾ ಒಳ್ಳೆಯದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.