ಪ್ರಾತಿನಿಧಿಕ ಚಿತ್ರ
ಏಕಾಗ್ರತೆಯಿಂದ ಓದಬೇಕೆಂಬ ಮಾತು ಕೇಳಿದ್ದೇವೆ. ಆದರೆ ಓದುವುದರಿಂದ ಏಕಾಗ್ರತೆಯೂ ಹೆಚ್ಚುತ್ತದೆ ಎಂದರೆ ಆಶ್ಚರ್ಯವಾಗಬಹುದು. ಇಂದಿನ ಯುಗದಲ್ಲಿ ಏಕಾಗ್ರತೆಯು ಅಮೂಲ್ಯವಾದ ಕೌಶಲ. ಯಾವುದೇ ವಿದ್ಯೆ, ವೃತ್ತಿ, ಕ್ಷೇತ್ರ - ಒಟ್ಟಿನಲ್ಲಿ ಇಡೀ ಬದುಕಿಗೆ ಬೇಕಾದ್ದು ಏಕಾಗ್ರತೆ. ಇಂದಿನ ಮೊಬೈಲ್, ಸೋಶಿಯಲ್ ಮೀಡಿಯಾ, ಮತ್ತು ನಿರಂತರವಾದ ಮಾಹಿತಿ ಹರಿವಿನ ಸಮಯದಲ್ಲಿ, ಒಂದು ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಸವಾಲಾಗಿದೆ. ಆದರೆ, ಈ ಸವಾಲನ್ನು ಗೆಲ್ಲಲು ಓದುವುದು ಒಂದು ಸರಳವಾದ ಮತ್ತು ಪ್ರಭಾವಿ ಸಾಧನವಾಗಿದೆ. ಓದು ಕೇವಲ ಜ್ಞಾನವನ್ನು ಹೆಚ್ಚಿಸುವುದಿಲ್ಲ, ಅದು ಮನಸ್ಸಿನ ಏಕಾಗ್ರತೆ ಮತ್ತು ಸ್ಥಿರತೆಗಳನ್ನೂ ಬೆಳೆಸುತ್ತದೆ.
ಅಕ್ಷರಪ್ರೇಮ: ಓದುವುದು ಒಂದು ಸಕ್ರಿಯ ಮಾನಸಿಕ ಪ್ರಕ್ರಿಯೆ. ಪುಸ್ತಕದ ಪುಟಗಳ ಮೂಲಕ ಸಾಗುವಾಗ ಮನಸ್ಸು ಪಾತ್ರಗಳು, ಸನ್ನಿವೇಶಗಳು ಮತ್ತು ವಿಚಾರಗಳೊಂದಿಗೆ ಸಂವಹನ ನಡೆಸುತ್ತದೆ. ಇದು ತಾನಾಗಿಯೇ ಗಮನವನ್ನು ಒಂದೇ ದಿಕ್ಕಿನಲ್ಲಿ ಕೇಂದ್ರೀಕರಿಸುವಂತೆ ಪ್ರೇರೇಪಿಸುತ್ತದೆ.
ಮನಸ್ಸಿಗೆ ತರಬೇತಿ: ಓದುವಾಗ ನಾವು ಅಕ್ಷರಗಳು, ಅರ್ಥ, ಮತ್ತು ಸಂದರ್ಭಗಳ ನಡುವೆ ಸಂಬಂಧ ಕಲ್ಪಿಸುತ್ತೇವೆ. ಇದು ಮಿದುಳಿನ ‘ಡಿಎಂಎನ್’ (‘ಡಿಫಾಲ್ಟ್ ಮೋಡ್ ನೆಟ್ವರ್ಕ್’) ಅನ್ನು ನಿಷ್ಕ್ರಿಯಗೊಳಿಸಿ, ಗಮನವನ್ನು ಪ್ರಸ್ತುತ ಕಾರ್ಯದತ್ತ ಹರಿಸುತ್ತದೆ. ಅಂದರೆ, ಮನಸ್ಸು ತನ್ನ ಮೂಲಸ್ವರೂಪವಾದ ಅತ್ತಿತ್ತ ಹರಿಯುವುದನ್ನು ಬಿಟ್ಟು ವಿಷಯದ ಜೊತೆ ಸಂಬಂಧವನ್ನು ಗಟ್ಟಿಗೊಳಿಸಿ ಅದರಲ್ಲಿ ಮುಳುಗುತ್ತದೆ. ಇದರಿಂದ ಏಕಾಗ್ರತೆ ವೃದ್ಧಿಸುತ್ತದೆ. ಓದುವಾಗ, ಮಿದುಳಿನ ಮುಂಭಾಗ, ‘ಪ್ರಿಫ್ರಂಟಲ್ ಕಾರ್ಟೆಕ್ಸ್’ ಎಂಬ ಭಾಗ ಜಾಗೃತವಾಗುತ್ತದೆ. ಇದು ಗಮನದ ಗೂಡು. ಪ್ರತಿದಿನದ ಓದು ಇಲ್ಲಿ ಹೊಸ ‘ನ್ಯೂರಲ್’ ಹಾದಿಗಳನ್ನು ರಚಿಸುತ್ತದೆ. ಕ್ರಮೇಣ, ಈ ಹಾದಿಗಳು ಅಳಿವಿನ ಬದಲು ಹವಳದ ಗೋಡೆಗಳಂತೆ ಬೆಳೆಯುತ್ತವೆ. ಫಲಿತಾಂಶ? ಪರೀಕ್ಷಾ ಹಾಲ್‌ನಿಂದ ಕಚೇರಿಯವರೆಗೆ–ಏಕಾಗ್ರತೆ ಎಂಬ ಆಯುಧ ಹರಿತವಾಗುತ್ತದೆ.
ಸ್ಥಿರತೆಯ ನಿರ್ಮಾಣ: ಹೆಚ್ಚೆಚ್ಚು ಕಾಲ ಓದುವ ಅಭ್ಯಾಸವು ಮನಸ್ಸನ್ನು ದೀರ್ಘಾವಧಿ ಕೇಂದ್ರೀಕರಿಸಲು ತರಬೇತು ನೀಡುತ್ತದೆ. ಏಕಾಗ್ರತೆಯನ್ನು ಸಾಧಿಸಲು ಅಭ್ಯಾಸ ಬೇಕು. ಒಂದು ಕ್ರಿಯೆಯನ್ನು ಬಿಡದೆ ಸತತವಾಗಿ, ನಿಯತವಾಗಿ ಮುಂದುವರಿಸುವುದೇ ಅಭ್ಯಾಸ. ದಿನವಹಿ ಓದಿನಿಂದ ವೇಗವೂ ಹೆಚ್ಚುತ್ತದೆ ಮತ್ತು ಏಕಾಗ್ರತೆಯೂ ವೃದ್ಧಿಸುತ್ತದೆ.
ವಿಶ್ರಾಂತಿ: ಓದು ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸಿ, ಆಳವಾದ ಶಾಂತಸ್ಥಿತಿಗೆ ತರುತ್ತದೆ. ಇದು ಗಮನದ ಸಾಮರ್ಥ್ಯವನ್ನು ಹೆಚ್ಚಿಸುವ ‘ಮೈಂಡ್‌ಫುಲ್‌ನೆಸ್’ ಅಭ್ಯಾಸಕ್ಕೆ ಸಮಾನವಾಗಿದೆ. ಮನಸ್ಸಿಗೆ ಮುದ ನೀಡುವ ವ್ಯಾಯಾಮವೇ ಓದು. ಓದಿನಲ್ಲಿ ಮುಳುಗುವುದೂ ಒಂದು ಬಗೆಯ ಧ್ಯಾನವೇ. ಓದುವಿಕೆಯಿಂದ ಉಲ್ಲಾಸ, ಶಾಂತಿ ಮತ್ತು ಸಮಾಧಾನಗಳನ್ನು ಅನುಭವಿಸುತ್ತೇವೆ.
ಹೇಗೆ ಅಳವಡಿಸಿಕೊಳ್ಳುವುದು?
ಸಮಯ ನಿಗದಿ: ಪ್ರತಿದಿನ ನಿಗದಿತ ಸಮಯವನ್ನು ಓದಿಗಾಗಿ ಮೀಸಲಾಗಿಡಿ.
ಸೂಕ್ತ ಪರಿಸರ: ಗದ್ದಲವಿಲ್ಲದ, ಬೆಳಕಿನ ಮತ್ತು ಆರಾಮದಾಯಕ ಸ್ಥಳವನ್ನು ಆಯ್ಕೆಮಾಡಿ.
ಸಣ್ಣ ಗುರಿಗಳು: ಕಿರುಕಥೆಗಳು ಅಥವಾ ಲೇಖನಗಳಿಂದ ಪ್ರಾರಂಭಿಸಿ; ನಂತರ ಪುಸ್ತಕಗಳತ್ತ ಕೈ ಚಾಚಿ.
ಡಿಜಿಟಲ್ ಡಿಟಾಕ್ಸ್: ಓದುವಾಗ ಮೊಬೈಲ್ ಅನ್ನು ನಿಶ್ಶಬ್ದಸ್ಥಿತಿಯಲ್ಲಿಡಿ.
ಸವಾಲುಗಳು–ಪರಿಹಾರಗಳು
ಮನಸ್ಸಿನ ಅಲೆಮಾರಿತನ: ಪದಗಳನ್ನು ಓದುತ್ತಿದ್ದರೂ ಮನಸ್ಸು ಬೇರೆಡೆ ಹೋಗಬಹುದು. ಇದಕ್ಕೆ ಪರಿಹಾರವಾಗಿ, ಪ್ರತಿ ಪ್ಯಾರಾಗ್ರಾಫ್ ನಂತರ ಸಂಕ್ಷಿಪ್ತವಾಗಿ ಸಾರಾಂಶವನ್ನು ಯೋಚಿಸಿ. ಪದೇ ಪದೇ ಮನಸ್ಸನ್ನು ಕಟ್ಟಿಹಾಕಿದಾಗ ಅದು ತಹಬಂದಿಗೆ ಬರುತ್ತದೆ. ಒಮ್ಮೆ ಓದಿನ ರುಚಿ ಹತ್ತಿದ ಬಳಿಕ ಈ ಸಮಸ್ಯೆ ಇರುವುದಿಲ್ಲ.
ಸಮಯದ ಅಭಾವ: ದಿನದ ಬಿಡುವಿನ ಸಮಯಗಳನ್ನು ಬಳಸಿ (ಉದಾ: ಬಸ್/ಮೆಟ್ರೊ ಪ್ರಯಾಣ, ಊಟದ ವಿರಾಮ).
ಆಸಕ್ತಿಯ ಕೊರತೆ: ನಿಮಗೆ ಇಷ್ಟವಾದ ವಿಷಯಗಳನ್ನು ಆಯ್ಕೆಮಾಡಿಕೊಳ್ಳಿ. ಕ್ರೀಡೆ, ವಿಜ್ಞಾನ, ಅಥವಾ ಕಥೆ-ಕಾದಂಬರಿಗಳು – ಹೀಗೆ ಮನಸ್ಸಿಗೆ ಒಗ್ಗುವ ವಿಷಯದ ಮೇಲೆ ಓದಲು ಆರಂಭಿಸಿ. ಆಸಕ್ತಿಯು ಏಕಾಗ್ರತೆಯನ್ನು ಸ್ವಾಭಾವಿಕವಾಗಿ ರೂಪಿಸುತ್ತದೆ.
ಮುದ್ರಿತ ಪುಸ್ತಕವೋ ಡಿಜಿಟಲ್ ಪುಟಗಳೋ
ಸ್ಕ್ರೀನ್ ಪ್ರೇಮಿಗಳು ಡಿಜಿಟಲ್ ಪುಸ್ತಕಗಳನ್ನು ಓದಬಹುದು. ಪುಸ್ತಕಗಳನ್ನು ಜೋಡಿಸುವ, ದೂಳು ಹೊಡೆಯುವ, ಕಾಪಾಡುವ ಕೆಲಸದಿಂದ ಅದು ನಿಮ್ಮನ್ನು ಮುಕ್ತಗೊಳಿಸಬಹುದು. ಆದರೆ ಮುದ್ರಿತ ಪುಸ್ತಕಗಳು ಜೀವನ ಸಂಗಾತಿಗಳು. ಅವುಗಳ ಪುಟಗಳ ಹರಹು, ಕಾಗದದ ಪರಿಮಳ, ಬರೆಯುವ ಮಾರ್ಜಿನ್‌ನಲ್ಲಿ ನಮ್ಮ ಟಿಪ್ಪಣಿಗಳು — ಇವೆಲ್ಲವೂ ನಮ್ಮೊಂದಿಗೆ ಸಂವಾದಿಸುತ್ತವೆ. ಮುದ್ರಿತ ಪುಸ್ತಕಗಳು ನಮ್ಮ ಮಿದುಳಿನಲ್ಲಿ ಆಳವಾದ ನೆನಪನ್ನು ಮೂಡಿಸುತ್ತವೆಯಂತೆ. ದೀರ್ಘಕಾಲದ ಡಿಜಿಟಲ್ ಓದುವಿಕೆಯಿಂದ, ಸ್ಕ್ರೀನ್‌ನ ಬೆಳಕು ಕಣ್ಣನ್ನು ಕುಕ್ಕುತ್ತದೆ; ಪುಸ್ತಕದ ಮೃದು ಪುಟಗಳು ಮನಸ್ಸನ್ನು ಸವರುತ್ತವೆ. ಆದರೆ ಆಯ್ಕೆ ನಮಗೆ ಬಿಟ್ಟಿದ್ದು. ಹೇಗಾದರೂ ಸರಿ, ಒಟ್ಟಿನಲ್ಲಿ ಓದುವುದು ಮುಖ್ಯ.
ಓದು ಎಂಬುದು ಮನಸ್ಸಿನ ಯೋಗಾಭ್ಯಾಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.